ಜಗದ್ಗುರುಗಳು ಲೆಜಿಯನರೀಸ್ ಆಫ್ ಕ್ರೈಸ್ಟ್ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಧಾರ್ಮಿಕ ಅಧಿಕಾರವು ಆಧಿಪತ್ಯವಲ್ಲ, ಸೇವೆಯಾಗಿದೆ ಎಂದು ಹೇಳಿದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಮೆಕ್ಸಿಕೊದಲ್ಲಿ 1941ರಲ್ಲಿ ಸ್ಥಾಪಿತವಾದ ಲೆಜಿಯನರೀಸ್ ಆಫ್ ಕ್ರೈಸ್ಟ್ ಸಂಘದ ಜನರಲ್ ಚಾಪ್ಟರ್ ಸಭೆಯಲ್ಲಿ ಭಾಗವಹಿಸಿದವರನ್ನು ಗುರುವಾರ ಭೇಟಿ ಮಾಡಿದರು. ತಮ್ಮ ಭಾಷಣದಲ್ಲಿ, ಜನರಲ್ ಚಾಪ್ಟರ್ ಸಭೆಗಳು ಧಾರ್ಮಿಕ ಸಂಘಗಳಿಗೆ ಪವಿತ್ರಾತ್ಮನನ್ನು ಆಲಿಸಲು ಮತ್ತು ಸಮೂಹಿಕ ವಿವೇಕವನ್ನು ಅಭ್ಯಾಸ ಮಾಡಲು ಅವಕಾಶ ನೀಡುತ್ತವೆ ಇದರಿಂದ ಸಮುದಾಯವನ್ನು ಭವಿಷ್ಯದತ್ತ ಮಾರ್ಗದರ್ಶನ ಮಾಡಬಹುದು ಎಂದು ಹೇಳಿದರು.
ಸಂಘದ ಇತಿಹಾಸದಲ್ಲಿ ನೋವು ಮತ್ತು ಸಂಕಷ್ಟಗಳಿಗೆ ಕಾರಣವಾದ ಘಟನೆಗಳು ಮತ್ತು ವಿವಾದಗಳು ಇದ್ದರೂ, ಈ ಸಂಘವು ಧರ್ಮ ಸಭೆಯೊಳಗೆ ಒಂದು ವಿಶಿಷ್ಟ ವರವನ್ನು ಹೊಂದಿದೆ ಎಂದು ಜಗದ್ಗುರುಗಳು ಹೇಳಿದರು. ಸುವಾರ್ತೆಗೆ ನಿಷ್ಠರಾಗಿರಲು ತಮ್ಮ ಇತಿಹಾಸವನ್ನು ಸ್ಮರಿಸಿ, ನಿರಂತರ ನವೀಕರಣವನ್ನು ಹುಡುಕುವಂತೆ ಅವರು ಸದಸ್ಯರನ್ನು ಪ್ರೋತ್ಸಾಹಿಸಿದರು. ಅವರ ವರದಾನವು ಧರ್ಮ ಸಭೆ ಹಾಗೂ ಸಾಮಾನ್ಯ ಕ್ರೈಸ್ತ ಸಮುದಾಯವಾದ ರೆಗ್ನಮ್ ಕ್ರಿಸ್ಟಿ ಆತ್ಮೀಯ ಕುಟುಂಬಕ್ಕೂ ಅಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.
ವರದಾನವು ಪವಿತ್ರಾತ್ಮನಿಂದ ದೊರಕುವ ವರವಾಗಿದೆ, ಎಂದು ಜಗದ್ಗುರುಗಳು ವಿವರಿಸಿದರು. ಪ್ರತಿಯೊಂದು ಧಾರ್ಮಿಕ ಸಂಸ್ಥೆಯೂ ಹಾಗೂ ಅದರ ಪ್ರತಿಯೊಬ್ಬ ಸದಸ್ಯರೂ ತಮ್ಮ ವೈಯಕ್ತಿಕ ಮತ್ತು ಸಮೂಹಿಕ ಜೀವನದಲ್ಲಿ ಈ ವರವನ್ನು ಜೀವಂತವಾಗಿಟ್ಟುಕೊಳ್ಳಬೇಕು. ಈ ಪ್ರಕ್ರಿಯೆ ಅವರ ಗುರುತನ್ನು ಆಳವಾಗಿ ಅರಿಯುವ ಮತ್ತು ಧರ್ಮ ಸಭೆ ಹಾಗೂ ಸಮಾಜದೊಳಗೆ ತಮ್ಮ ಸ್ಥಾನವನ್ನು ಸ್ಪಷ್ಟಪಡಿಸುವ ನಿರಂತರ ಪ್ರಯಾಣವಾಗಿದೆ.
ಧಾರ್ಮಿಕ ಜೀವನದಲ್ಲಿ ಅಧಿಕಾರವು ಆಧಿಪತ್ಯ ಸಾಧಿಸಲು ಅಲ್ಲ, ಆದರೆ ಸಾಮೂಹಿಕ ಜೀವನಕ್ಕೆ ಸೇವೆ ಸಲ್ಲಿಸಲು ಮತ್ತು ಸದಸ್ಯರನ್ನು ಕ್ರಿಸ್ತನ ಮೇಲೆ ಕೇಂದ್ರೀಕರಿಸಲು ಇರಬೇಕು ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. ಮಾನವ ಗೌರವ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ರೀತಿಯಲ್ಲಿ ಸಹಯಾತ್ರೆಯ ಕಲೆಯನ್ನು ಅನುಸರಿಸಿ ಅಧಿಕಾರವನ್ನು ಬಳಸಬೇಕು ಎಂದರು. ಪರಸ್ಪರ ಆಲಿಕೆ, ಸಹಜವಾಬ್ದಾರಿ, ಪಾರದರ್ಶಕತೆ ಮತ್ತು ಸಹೋದರತ್ವದ ಮನೋಭಾವವು ಉತ್ತಮ ಆಡಳಿತದ ಲಕ್ಷಣಗಳೆಂದು ಅವರು ಹೇಳಿದರು.
ಧರ್ಮ ಪ್ರಚಾರದ ಏಕತೆ ಎಂದರೆ ಏಕರೂಪತೆ ಅಲ್ಲ ಬದಲಾಗಿ ವೈವಿಧ್ಯತೆಯನ್ನು ಸಮನ್ವಯಗೊಳಿಸುವುದು ಎಂದು ಜಗದ್ಗುರುಗಳು ಹೇಳಿದರು. ಇದಕ್ಕಾಗಿ ವಿನಯದಿಂದ ಆಲಿಸುವ ಮನಸ್ಸು, ಸತ್ಯವಾಗಿ ಮಾತನಾಡುವ ಆಂತರಿಕ ಸ್ವಾತಂತ್ರ್ಯ ಮತ್ತು ಸಾಮೂಹಿಕ ವಿವೇಕವನ್ನು ಸ್ವೀಕರಿಸುವ ಮನೋಭಾವ ಅಗತ್ಯವಿದೆ. ಸಮುದಾಯದಲ್ಲಿ ಬದುಕುವ ಪ್ರತಿಯೊಂದು ಕರೆಯಲ್ಲಿಯೂ ಈ ಗುಣಗಳು ಅವಿಭಾಜ್ಯವಾಗಿವೆ ಎಂದರು.
ಕೊನೆಯಲ್ಲಿ, ಜಗದ್ಗುರುಗಳು ಲೆಜಿಯನರಿಗಳಿಗೆ ಪ್ರಾದೇಶಿಕ ಅಥವಾ ವೈಯಕ್ತಿಕ ಹಿತಾಸಕ್ತಿಗಳನ್ನು ಬಿಟ್ಟು ಆಂತರಿಕ ಸ್ವಾತಂತ್ರ್ಯದಲ್ಲಿ ಸಂಘವನ್ನು ಮುನ್ನಡೆಸುವಂತೆ ಕರೆ ನೀಡಿದರು. ಈ ಅಧಿವೇಶನವು ಭರವಸೆಯ ಸಮಯವನ್ನು ತೆರೆದಿಡಲಿ ದೇವರು ಇನ್ನೂ ಕರೆಯುತ್ತಾರೆ, ಕಳುಹಿಸುತ್ತಾರೆ, ಗುಣಪಡಿಸುತ್ತಾರೆ ಮತ್ತು ಶುದ್ಧೀಕರಿಸುತ್ತಾರೆ. ದೇವರು ನಿಮ್ಮ ಕೈಗಳಲ್ಲಿ ಇಟ್ಟಿರುವ ಇಂದಿನ ಸಂದರ್ಭಕ್ಕೆ ನಿಷ್ಠೆಯಿಂದ ಪ್ರತಿಕ್ರಿಯಿಸುವುದು ನಿಮ್ಮ ಕರ್ತವ್ಯ ಎಂದು ಅವರು ಸಮಾರೋಪದಲ್ಲಿ ಹೇಳಿದರು.
