ಜಗದ್ಗುರು ಲಿಯೋರವರು: ಪಾಸ್ಖ ಹಬ್ಬ ಎಂದಿಗೂ ವಿಫಲವಾಗದ ನಿರೀಕ್ಷೆಯತ್ತ ನಮ್ಮನ್ನು ತೆರೆಯುತ್ತದೆ
ವ್ಯಾಟಿಕನ್ ವರದಿ
ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಕೂಡಿಕೊಂಡಿದ್ದ ಸಂತ ಪೇತ್ರರ ಚೌಕದಲ್ಲಿ ಪಾಸ್ಖ ಹಬ್ಬ ಭಾನುವಾರದ ಬಲಿಪೂಜೆಯ ಅಧ್ಯಕ್ಷತೆ ವಹಿಸಿದ ಜಗದ್ಗುರು XIVನೇ ಲಿಯೋರವರು, ಇಂದು ಸೃಷ್ಟಿಯೆಲ್ಲವೂ “ಹೊಸ ಬೆಳಕಿನಿಂದ ಕಂಗೊಳಿಸುತ್ತಿದೆ” ಎಂದು ವಿವರಿಸಿದರು. “ಭೂಮಿಯಿಂದ ಸ್ತುತಿಯ ಗಾನ ಏಳುತ್ತದೆ ಕ್ರಿಸ್ತನು ಮರಣದಿಂದ ಪುನರುತ್ಥಾನಗೊಂಡಿದ್ದಾರೆ ಅವರೊಂದಿಗೆ ನಾವು ಸಹ ಹೊಸ ಜೀವನಕ್ಕೆ ಏಳುತ್ತೇವೆ ಎಂದು ಅವರು ಸಂತೋಷದಿಂದ ಹೇಳಿದರು.
ಜಗದ್ಗುರುಗಳು ವಿವರಿಸಿದಂತೆ, ಪಾಸ್ಕ ಹಬ್ಬದ ಘೋಷಣೆ ನಮ್ಮ ಜೀವನದ ರಹಸ್ಯವನ್ನೂ ಮತ್ತು ಇತಿಹಾಸದ ಗಮ್ಯತೆಯನ್ನೂ ಒಳಗೊಂಡಿದೆ. ಮರಣದ ಆಳಗಳಲ್ಲಿಯೂ ನಾವು ನಿರಾಶೆಯಾಗುವಾಗಲೂ ಇದು ಎಂದಿಗೂ ವಿಫಲವಾಗದ ನಿರೀಕ್ಷೆಗೆ, ಎಂದಿಗೂ ಮಂಕಾಗದ ಬೆಳಕಿಗೆ, ಯಾವುದೂ ಕಸಿದುಕೊಳ್ಳಲಾಗದ ಸಂಪೂರ್ಣ ಆನಂದಕ್ಕೆ ನಮ್ಮನ್ನು ತೆರೆಯುತ್ತದೆ. ಏಕೆಂದರೆ ಮರಣವನ್ನು ಶಾಶ್ವತವಾಗಿ ಜಯಿಸಲಾಗಿದೆ ಮತ್ತು ಅದು ಇನ್ನು ನಮ್ಮ ಮೇಲೆ ಅಧಿಕಾರ ತೋರುವುದಿಲ್ಲ.
ಪಾಸ್ಖ ಹಬ್ಬದ ಆಚರಣೆ ವೇಳೆ ಚೌಕವನ್ನು 65,000 ಕ್ಕೂ ಹೆಚ್ಚು ಟ್ಯುಲಿಪ್ ಹೂವು, ಡಾಫೋಡಿಲ್ ಹೂವು ಮತ್ತು ಹೈಸಿಂತ್ ಹೂಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ 7,800ಕ್ಕೂ ಹೆಚ್ಚು ವಿವಿಧ ಹೂಗಳು ಮತ್ತು 1,200ಕ್ಕೂ ಹೆಚ್ಚು ಅಲಂಕಾರಿಕ ಕೊಂಬೆಗಳು ಬಳಸಲಾಗಿತ್ತು. ಈ ವರ್ಷ ನೆದರ್ಲ್ಯಾಂಡ್ಸ್ ದೇಶವು ಈ ಹೂವಿನ ಕಾಣಿಕೆಯನ್ನು ನೀಡುತ್ತಿರುವ 40ನೇ ವರ್ಷದ ಸಂಭ್ರಮವಾಗಿತ್ತು.
ತಮ್ಮ ಪ್ರಭೋಧನೆಯನ್ನು ಮುಂದುವರಿಸಿದ ಜಗದ್ಗುರುಗಳು, ಭರವಸೆ ಮತ್ತು ಬೆಳಕಿನ ಪಾಸ್ಖ ಹಬ್ಬದ ಸಂದೇಶವನ್ನು ಸ್ವೀಕರಿಸುವುದು ಸದಾ ಸುಲಭವಲ್ಲ ಎಂದು ಒಪ್ಪಿಕೊಂಡರು, ಏಕೆಂದರೆ ಮರಣದ ಶಕ್ತಿ ನಮ್ಮ ಒಳಗಿನ ಹಾಗೂ ಹೊರಗಿನ ಜೀವನದಲ್ಲಿ ನಿರಂತರವಾಗಿ ಬೆದರಿಕೆ ಉಂಟುಮಾಡುತ್ತದೆ. ನಮ್ಮ ಪಾಪಗಳ ಭಾರವು ಕೆಲವೊಮ್ಮೆ ನಮ್ಮ ರೆಕ್ಕೆಗಳನ್ನು ಚಾಚಿ ಹಾರುವುದನ್ನು ತಡೆಯುತ್ತದೆ ನೋವು ಮತ್ತು ಕಷ್ಟಗಳು ನಿರಾಶೆಯೊಳಗೆ ನಮ್ಮನ್ನು ತಳ್ಳಬಹುದು.
ಹೊರಗಿನ ಜಗತ್ತಿನಲ್ಲಿ, ಮರಣವು ಅನ್ಯಾಯಗಳಲ್ಲಿ, ಸ್ವಾರ್ಥಪೂರ್ಣ ರಾಜಕೀಯದಲ್ಲಿ, ಬಡವರ ಮೇಲೆ ನಡೆಯುವ ಹಿಂಸೆಯಲ್ಲಿ ಮತ್ತು ದುರ್ಬಲರ ಕಡೆಗಣನೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಅವರು ಹೇಳಿದರು. ಯುದ್ಧದ ಹಿಂಸಾಚಾರ ಮತ್ತು ಅದರ ಗಾಯಗಳು ಎಲ್ಲೆಡೆ ಗೋಚರಿಸುತ್ತವೆ ದುರ್ಬಲರನ್ನು ನಾಶಮಾಡುವ ಅನ್ಯಾಯ, ಲಾಭದಾಸೆಯ ಕಾರಣದಿಂದ ಭೂಮಿಯ ಸಂಪತ್ತಿನ ದುರ್ಬಳಕೆ ಇವೆಲ್ಲವೂ ನೋವಿನ ಕಿರುಚಾಟವನ್ನು ಹುಟ್ಟಿಸುತ್ತವೆ.
ಆದರೆ ಪಾಸ್ಖ ಹಬ್ಬವು ನಮ್ಮನ್ನು ನಮ್ಮ ದೃಷ್ಟಿಯನ್ನು ಮೇಲಕ್ಕೆತ್ತಲು ಮತ್ತು ನಮ್ಮ ಹೃದಯಗಳನ್ನು ತೆರೆಯಲು ಕರೆಯುತ್ತದೆ, ಏಕೆಂದರೆ ಪ್ರಭು ಜೀವಂತನಾಗಿದ್ದು ನಮ್ಮೊಂದಿಗೆ ಉಳಿದಿದ್ದಾರೆ. ಪುನರುತ್ಥಾನದ ಬೆಳಕು ಕತ್ತಲೆಯ ಮಧ್ಯೆ ಹೊಳೆಯುತ್ತಾ, ನಮ್ಮನ್ನು ಧೈರ್ಯಗೊಳಿಸುವ ನಿರೀಕ್ಷೆಯನ್ನು ನಮ್ಮ ಹೃದಯಗಳಲ್ಲಿ ನೆಡುತ್ತದೆ.
ಮರಣದ ಶಕ್ತಿಯೇ ನಮ್ಮ ಜೀವನದ ಅಂತಿಮ ಗಮ್ಯತೆಯಲ್ಲ,” ಎಂದು ಜಗದ್ಗುರುಗಳು ಹೇಳಿದರು. ಕ್ರಿಸ್ತನಲ್ಲಿ ನಾವು ಸಹ ಪುನರುತ್ಥಾನಗೊಂಡಿರುವುದರಿಂದ, ನಾವು ಎಲ್ಲರೂ ಪರಿಪೂರ್ಣತೆಯ ಮಾರ್ಗದತ್ತ ನಡೆಸಲ್ಪಡುತ್ತಿದ್ದೇವೆ.
ಜಗದ್ಗುರು ಫ್ರಾನ್ಸಿಸ್ ರವರ ಇವಾಂಜೆಲಿ ಗೌಡಿಯಮ್ ಕೃತಿಯಿಂದ ಉಲ್ಲೇಖಿಸಿ, ಜಗದ್ಗುರು ಲಿಯೋರವರು ಹೇಳಿದರು ಕ್ರಿಸ್ತನ ಪುನರುತ್ಥಾನವು ಭೂತಕಾಲದ ಘಟನೆ ಮಾತ್ರವಲ್ಲ ಅದು ಈ ಲೋಕವನ್ನು ಆವರಿಸಿರುವ ಜೀವಂತ ಶಕ್ತಿಯಾಗಿದೆ. ಎಲ್ಲವೂ ಸತ್ತಂತಿದ್ದರೂ, ಪುನರುತ್ಥಾನದ ಲಕ್ಷಣಗಳು ಅಕಸ್ಮಾತ್ ಉದ್ಭವಿಸುತ್ತವೆ ಕತ್ತಲೆಯ ಮಧ್ಯೆ ಹೊಸ ಜೀವನವು ಸದಾ ಮೂಡಿ ಬರುತ್ತದೆ.
ಕೊನೆಗೆ, ಪುನರುತ್ಥಾನಗೊಂಡ ಕ್ರಿಸ್ತನು ನಮಗೆ ಖಚಿತವಾದ ನಿರೀಕ್ಷೆಯನ್ನು ನೀಡುತ್ತಾನೆ. ಮರಣಕ್ಕಿಂತ ಬಲವಾದ ಹೊಸ ಜೀವನವು ಮಾನವಕುಲಕ್ಕೆ ಉದಯಿಸುತ್ತಿದೆ ಎಂದು ಪುನರುತ್ಥಾನ ಘೋಷಿಸುತ್ತದೆ. ಪಾಸ್ಖ ಹಬ್ಬ ಹೊಸ ಸೃಷ್ಟಿ, ಹೊಸ ಆರಂಭ, ದೇವರ ಜಯದಿಂದ ದೊರಕಿದ ನಿತ್ಯಜೀವನವಾಗಿದೆ.
ಈ ಭರವಸೆಯ ಗಾನವು ಇಂದು ನಮಗೆ ಅತ್ಯಾವಶ್ಯಕವಾಗಿದೆ, ಎಂದು ಅವರು ಹೇಳಿದರು. ನಾವು ಕ್ರಿಸ್ತನೊಂದಿಗೆ ಪುನರುತ್ಥಾನಗೊಂಡವರಾಗಿ, ಅವನನ್ನು ಜಗತ್ತಿನ ಬೀದಿಗಳಲ್ಲಿ ಕೊಂಡೊಯ್ಯಬೇಕು. ಮರಿಯ ಮಗ್ಧಲೇನರಂತೆ ಓಡಿ, ಎಲ್ಲರಿಗೂ ಈ ಸಂತೋಷದ ಸುದ್ದಿಯನ್ನು ಪ್ರಕಟಿಸೋಣ ಮರಣದ ನೆರಳು ಉಳಿದಿರುವ ಎಲ್ಲೆಡೆ ಜೀವದ ಬೆಳಕು ಹೊಳೆಯುವಂತೆ ಮಾಡೋಣ ಎಂದು ಜಗದ್ಗುರುಗಳು ಹೇಳಿದರು.
