“ಜಗದ್ಗುರು ಲಿಯೋರವರು: ‘ನಾವು ದೇವರ ಜನರಿಗೆ ನಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿ ಸೇವೆ ಮಾಡಲು ಕರೆಯಲ್ಪಟ್ಟಿದ್ದೇವೆ.’
ವ್ಯಾಟಿಕನ್ ವರದಿ
ಈ ಲೋಕದಲ್ಲಿ, ವಿಶೇಷವಾಗಿ ಕೆಡುಕು ತುಂಬಿರುವ ಸ್ಥಳಗಳಲ್ಲಿ, ಯೇಸು ತನ್ನ ಸಂಪೂರ್ಣ ಅಸ್ತಿತ್ವದಿಂದ ಮತ್ತು ಎಂದೆಂದಿಗೂ ಪ್ರೀತಿಸುತ್ತಾರೆ ಎಂಬುದನ್ನು ಜಗದ್ಗುರು XIVನೇ ಲಿಯೋರವರು ಪವಿತ್ರ ಗುರುವಾರದ ಸಂಜೆ ಸಂತ ಜಾನ್ ಲಾಟೆರನ್ ಪಾಪಲ್ ಬಾಸಿಲಿಕಾದಲ್ಲಿ ನಡೆದ “ಮಸ್ಸಾ ಇನ್ ಕೋಯ್ನಾ ಡೊಮಿನಿ” ಸಂದರ್ಭದಲ್ಲಿ ಸ್ಮರಿಸಿದರು. ಈ ಗಂಭೀರ ಲಿಟರ್ಜಿ ಪ್ರಭುವಿನ ಪಾಡು, ಮರಣ ಮತ್ತು ಪುನರುತ್ಥಾನದ ಪವಿತ್ರ 3 ದಿನಕ್ಕೆ ನಮ್ಮ ಪ್ರವೇಶವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆಯುವ ಘಟನೆಯನ್ನು ನೆನಪಿಸಿಕೊಂಡು, “ಪ್ರೀತಿಯಿಂದ ಪ್ರಭು ನಮ್ಮ ಪ್ರತಿಯೊಬ್ಬರ ಕಾಲುಗಳನ್ನು ತೊಳೆಯಲು ಮೊಣಕಾಲೂರಿಸುತ್ತಾರೆ. ಅವನ ದಿವ್ಯ ವರವು ನಮ್ಮನ್ನು ರೂಪಾಂತರಗೊಳಿಸುತ್ತದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ನೀರು, ಪಾತ್ರೆ ಮತ್ತು ಕೈವಸ್ತ್ರವನ್ನು ತೆಗೆದುಕೊಂಡು ಮಾಡಿದ ಈ ಕ್ರಿಯೆ ಕೇವಲ ನೈತಿಕ ಮಾದರಿಯಲ್ಲ, ಆದರೆ ದೇವರ ಜೀವನಶೈಲಿಯನ್ನೇ ನಮಗೆ ನೀಡುವ ಸಂಕೇತವಾಗಿದೆ.
ಕಾಲು ತೊಳೆಯುವ ಈ ಸೇವೆಯ ಮೂಲಕ ದೇವರ ಪ್ರಕಟನೆ ಸಂಪೂರ್ಣವಾಗಿ ವ್ಯಕ್ತವಾಗುತ್ತದೆ ಎಂದು ಅವರು ಹೇಳಿದರು. ಯೇಸು ಸೇವಕನ ರೂಪವನ್ನು ತಾಳುವುದರಿಂದ, ಲೋಕದ ತಪ್ಪು ಮಾನದಂಡಗಳನ್ನು ತಲೆಕೆಳಗಾಗಿಸಿ, ಪಿತೃವಿನ ಮಹಿಮೆಯನ್ನು ಪ್ರಕಟಿಸುತ್ತಾನೆ. ಈ ಮೂಲಕ ದೇವರ ಮಹಿಮೆ ನಮ್ಮ ಕಲ್ಪನೆಯಿಗಿಂತ ವಿಭಿನ್ನವಾಗಿರುವುದನ್ನು ನಾವು ಕಲಿಯಬೇಕೆಂದು ಜಗದ್ಗುರುಗಳು ನೆನಪಿಸಿದರು.
ಯೇಸು ಪರಮ ಪ್ರಸಾದವನ್ನು ಸ್ಥಾಪನೆಯ ವೇಳೆ ತನ್ನನ್ನೇ ಸಂಪೂರ್ಣವಾಗಿ ಅರ್ಪಿಸಿದಂತೆ, ಯಾಜಕರು ಕೂಡ ತಮ್ಮ ಸಂಪೂರ್ಣ ಜೀವನವನ್ನು ದೇವರ ಜನರ ಸೇವೆಗೆ ಅರ್ಪಿಸಬೇಕೆಂದು ಜಗದ್ಗುರುಗಳು ಹೇಳಿದರು. “ನಾವು ನಮ್ಮ ಸಂಪೂರ್ಣ ಜೀವನದಿಂದ ದೇವರ ಜನರಿಗೆ ಸೇವೆ ಮಾಡಲು ಕರೆಯಲ್ಪಟ್ಟಿದ್ದೇವೆ” ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ದೇವರ ಪ್ರೀತಿ ನಮ್ಮ ಒಳ್ಳೆಯತನಕ್ಕಿಂತ ಮುಂಚಿತವಾಗಿಯೇ ಬರುತ್ತದೆ. ಆತನು ಮೊದಲು ನಮ್ಮನ್ನು ಪ್ರೀತಿಸಿ, ಕ್ಷಮಿಸಿ, ಪುನರುಜ್ಜೀವನಗೊಳಿಸುತ್ತಾನೆ. ಅವನ ಪ್ರೀತಿ ನಮ್ಮ ಅರ್ಹತೆಯ ಪ್ರತಿಫಲವಲ್ಲ ಬದಲಾಗಿ, ಅದೇ ಪ್ರೀತಿ ನಮ್ಮನ್ನು ಶುದ್ಧಗೊಳಿಸಿ, ಅವನಿಗೆ ಪ್ರತಿಕ್ರಿಯಿಸಲು ಶಕ್ತಿಗೊಳಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು
ಇಂದು ಜಗತ್ತಿನಲ್ಲಿ ನಡೆಯುತ್ತಿರುವ ಕ್ರೂರ ಘಟನೆಗಳ ಮಧ್ಯೆ, ನಾವು ಸಹ ಹಿಂಸೆಗೆ ಒಳಗಾದವರ ಜೊತೆ ಮೊಣಕಾಲೂರಿ ನಿಲ್ಲಬೇಕೆಂದು ಜಗದ್ಗುರುಗಳು ಕರೆ ನೀಡಿದರು. ಪವಿತ್ರ ಗುರುವಾರವು ಕೃತಜ್ಞತೆ ಮತ್ತು ಸಹೋದರತ್ವದ ದಿನವಾಗಿದ್ದು, ಯೇಸುವಿನ ವಿನಮ್ರ ಸೇವೆಯನ್ನು ಧ್ಯಾನಿಸಿ ಅದನ್ನು ನಮ್ಮ ಜೀವನದಲ್ಲಿ ಅನುಸರಿಸಲು ಪ್ರೇರೇಪಿಸುವ ಸಮಯವಾಗಿದೆ. ಈ ಪರಂಪರೆಯನ್ನು ಮುಂದುವರಿಸುತ್ತಾ, ಜಗದ್ಗುರು ಲಿಯೋರವರು ಬಲಿ ಪೂಜೆಯ ವೇಳೆ ಹನ್ನೆರಡು ಯಾಜಕರ ಕಾಲುಗಳನ್ನು ತೊಳೆಯುವ ಮೂಲಕ ಕ್ರಿಸ್ತನ ಉದಾಹರಣೆಯನ್ನು ಅನುಸರಿಸಿದರು.
