ದಕ್ಷಿಣ ಲೆಬನಾನ್‌ನ ಮಾರಕೆ ಗ್ರಾಮದಲ್ಲಿ ಇಸ್ರೇಲಿ ಬಾಂಬ್ ದಾಳಿಯಿಂದ ನಾಶವಾದ ಕಟ್ಟಡದ ಅವಶೇಷಗಳು. ದಕ್ಷಿಣ ಲೆಬನಾನ್‌ನ ಮಾರಕೆ ಗ್ರಾಮದಲ್ಲಿ ಇಸ್ರೇಲಿ ಬಾಂಬ್ ದಾಳಿಯಿಂದ ನಾಶವಾದ ಕಟ್ಟಡದ ಅವಶೇಷಗಳು.  (AFP or licensors)

ದಕ್ಷಿಣ ಲೆಬನಾನ್‌ನಲ್ಲಿ ಯುದ್ಧದಿಂದ ಪೀಡಿತ ಕ್ರೈಸ್ತರಿಗೆ ಜಗದ್ಗುರುಗಳು ತಮ್ಮ ಸಮೀಪತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು.

ದಕ್ಷಿಣ ಲೆಬನಾನ್‌ನ ಡೆಬೆಲ್ ಜನರಿಗೆ ಹಾಗೂ ಯುದ್ಧದ ಪರಿಣಾಮಗಳಿಂದ ಬಳಲುತ್ತಿರುವ ಎಲ್ಲರಿಗೂ ಜಗದ್ಗುರು XIVನೇ ಲಿಯೋರವರು ತಮ್ಮ ಸಮೀಪತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಅವರು ಪಾಸ್ಖ ಹಬ್ಬದ ಸಂದೇಶದಲ್ಲಿ, ಆ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಇಸ್ರೇಲಿನ ದಾಳಿಗಳ ಮಧ್ಯೆ ನೀಡಿದರು.

ವ್ಯಾಟಿಕನ್ ವರದಿ

ದಕ್ಷಿಣ ಲೆಬನಾನ್‌ನ ಸಂಘರ್ಷದಿಂದ ಪೀಡಿತ ಡೆಬೆಲ್ ಗ್ರಾಮದ ನಿವಾಸಿಗಳಿಗೆ ಕಳುಹಿಸಿದ ಸಂದೇಶದಲ್ಲಿ, ಜಗದ್ಗುರು XIVನೇ ಲಿಯೋರವರು ಯುದ್ಧದ ನಡುವೆ ಕಷ್ಟ ಅನುಭವಿಸುತ್ತಿರುವ ಜನರಿಗೆ ತಮ್ಮ ಆತ್ಮಿಕ ಸಮೀಪತೆಯನ್ನು ವ್ಯಕ್ತಪಡಿಸಿದರು. ವಿಶೇಷವಾಗಿ, ಅವರು “ದಕ್ಷಿಣ ಲೆಬನಾನ್‌ನ ಎಲ್ಲಾ ಕ್ರೈಸ್ತರಿಗೆ” ತಮ್ಮ ಸಾಂತ್ವನವನ್ನು ವಿಸ್ತರಿಸಿದರು.

ಈ ಸಂದೇಶವನ್ನು ದೇಶದ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ಪೌಲೊ ಬೋರ್ಜಿಯಾ ರವರು ಪಾಸ್ಖ ಹಬ್ಬದ ದಿನ ಲೆಬನಾನ್‌ನಲ್ಲಿ ಹಂಚಿಕೊಂಡರು. ಅವರು ಜಗದ್ಗುರುಗಳ “ಸಮೀಪತೆ ಮತ್ತು ಪಿತೃತ್ವದ ಸೌಮ್ಯತೆ”ಯನ್ನು ಯುದ್ಧದಿಂದ ಪೀಡಿತ ಸಮುದಾಯಗಳಿಗೆ ತಲುಪಿಸಿದರು. ಈ ಸಂದೇಶವನ್ನು ಕಾರ್ಡಿನಲ್ ಪಿಯೆತ್ರೋ ಪಾರೋಲಿನ್ ರವರು ಜಗದ್ಗುರುಗಳ ಪರವಾಗಿ ಸಹಿ ಮಾಡಿದ್ದರು.

ಮೂಲತಃ ಈ ಸಂದೇಶವನ್ನು ಡೆಬೆಲ್ ಗ್ರಾಮಕ್ಕೆ ನೇರವಾಗಿ ಭೇಟಿ ನೀಡುವ ಸಂದರ್ಭದಲ್ಲಿ ನೀಡಲು ಯೋಜಿಸಲಾಗಿತ್ತು. ಮಾನವೀಯ ಸಹಾಯ ಸಾಗಿಸುವ ವಾಹನಗಳೊಂದಿಗೆ ರಾಯಭಾರಿಗಳು ಪ್ರಯಾಣಿಸಬೇಕಾಗಿತ್ತು. ಆದರೆ ಆ ಪ್ರದೇಶದಲ್ಲಿ ನಡೆಯುತ್ತಿರುವ ಇಸ್ರೇಲಿನ ದಾಳಿಗಳ ಕಾರಣದಿಂದ ಈ ಪ್ರಯಾಣವನ್ನು ನಿಲ್ಲಿಸಲಾಯಿತು.

ಈ ಕಾರಣದಿಂದ, ಆರ್ಚ್‌ಬಿಷಪ್ ಬೋರ್ಜಿಯಾ ರವರು ಡಿಯರ್ ಕಿಫಾದಲ್ಲಿರುವ ಯುಎನ್‌ಐಎಫ್‌ಐಎಲ್ ನೆಲೆಯಲ್ಲಿ ಉಳಿದುಕೊಂಡು, ಲೆಬನಾನ್ ದೂರದರ್ಶನದ ಮೂಲಕ ಈ ಸಂದೇಶವನ್ನು ಓದಿ, ಡೆಬೆಲ್ ಹಾಗೂ ದಕ್ಷಿಣ ಭಾಗದ ಇತರ ಪೀಡಿತ ಜನರನ್ನು ನೇರವಾಗಿ ಉದ್ದೇಶಿಸಿದರು.

ಪಾಸ್ಖ ಹಬ್ಬದ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು  ಯುದ್ಧದ ನಡುವೆ ಕಷ್ಟ ಅನುಭವಿಸುತ್ತಿರುವವರಿಗೆ ಭರವಸೆಯ ಸಂದೇಶ ನೀಡಿದರು. ಯೇಸು ಮರಣದ ಮೇಲೆ ಜಯ ಸಾಧಿಸಿದ್ದಾನೆ ಈ ಸಂತೋಷವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ದುಃಖ, ಆತಂಕ ಮತ್ತು ನೋವಿನ ನಡುವೆಯೂ ದೇವರಲ್ಲಿ ಆಳವಾದ ಸಂತೋಷವನ್ನು ಕಂಡುಕೊಳ್ಳುವಂತೆ ಅವರು ಕರೆ ನೀಡಿದರು.

ಅಂತಿಮವಾಗಿ, ಜಗದ್ಗುರುಗಳು ನಂಬಿಕಸ್ಥರಿಗೆ ಧೈರ್ಯ ಕಳೆದುಕೊಳ್ಳಬಾರದೆಂದು ಮನವಿ ಮಾಡಿದರು. ಅವರ ಪ್ರಾರ್ಥನೆಗಳು ಮತ್ತು ಒಗ್ಗಟ್ಟಿನ ಕಾರ್ಯಗಳು ವ್ಯರ್ಥವಾಗುವುದಿಲ್ಲ ಎಂದು ಹೇಳಿದರು. ಲೆಬನಾನ್ ತಾಯಿಯ ಮಧ್ಯಸ್ಥಿಕೆಗೆ ಎಲ್ಲರನ್ನು ಒಪ್ಪಿಸಿ, ದೇವರ ಆಶೀರ್ವಾದವನ್ನು ಎಲ್ಲರ ಮೇಲೂ ಕೋರಿದರು.

07 ಏಪ್ರಿಲ್ 2026, 21:33