Il Papa a Piazza San Pietro per l'udienza generale

ಜಗದ್ಗುರುಗಳು: ಸಂಪೂರ್ಣ ಇರಾನ್ ಜನರ ವಿರುದ್ಧದ ಬೆದರಿಕೆ ಅಸ್ವೀಕಾರಾರ್ಹವಾಗಿದೆ.

ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು “ಎಲ್ಲಾ ಸದ್ಭಾವನೆಯ ಜನರು ಸದಾ ಶಾಂತಿಯನ್ನು ಹುಡುಕಬೇಕು ಮತ್ತು ಯುದ್ಧವನ್ನು ತಿರಸ್ಕರಿಸಬೇಕು” ಎಂದು ಮನವಿ ಮಾಡಿದರು. ಅವರು ಶಾಂತಿಯುತ ಪರಿಹಾರಗಳನ್ನು ಕಂಡುಹಿಡಿಯಲು ಮತ್ತೆ ಮಾತುಕತೆಗಳ ಮೇಜಿನತ್ತ ಮರಳುವಂತೆ ಕರೆ ನೀಡಿದರು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆಯುವ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿವೆ ಎಂದು ಸೂಚಿಸಿದರು.

ವ್ಯಾಟಿಕನ್ ವರದಿ

“ಯಾವಾಗಲೂ ಶಾಂತಿಯನ್ನು ಹುಡುಕಿ ಮತ್ತು ಯುದ್ಧವನ್ನು ತಿರಸ್ಕರಿಸಿ.”

ಮಂಗಳವಾರ ಸಂಜೆ ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿರುವ ಜಗದ್ಗುರುಗಳ ನಿವಾಸವಾದ ವಿಲ್ಲಾ ಬಾರ್ಬೆರಿನಿಯ ಹೊರಗೆ ಕಾಯುತ್ತಿದ್ದ ಪತ್ರಕರ್ತರ ಗುಂಪಿಗೆ ನೀಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ಜಗದ್ಗುರು XIVನೇ ಲಿಯೋರವರು ಈ ಶಾಂತಿಯ ಮನವಿಯನ್ನು ಪುನರುಚ್ಚರಿಸಿದರು.

ಅಮೇರಿಕಾ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿಯೂ, ಹಾಗೂ ವೈಟ್ ಹೌಸ್ ನಿಗದಿಪಡಿಸಿದ ಗಡುವಿನೊಳಗೆ ಒಪ್ಪಂದಕ್ಕೆ ಬರದಿದ್ದರೆ ಇರಾನ್‌ನ ಸಂಪೂರ್ಣ ನಾಗರಿಕತೆಯನ್ನು ನಾಶಮಾಡುವೆವು ಎಂಬ ಅಮೇರಿಕಾ ಅಧ್ಯಕ್ಷರ ಬೆದರಿಕೆಯ ನಡುವೆ, ಜಗದ್ಗುರುಗಳು ಭಾನುವಾರದ ತಮ್ಮ ‘ಉರ್ಬಿ ಎಟ್ ಒರ್ಬಿ’ ಸಂದೇಶದಲ್ಲಿ ಹೇಳಿದ ಮಾತುಗಳನ್ನು ಮತ್ತೆ ನೆನಪಿಸಿಕೊಂಡರು. ಎಲ್ಲಾ ಸದ್ಭಾವನೆಯ ಜನರು ಸದಾ ಶಾಂತಿಯನ್ನು ಹುಡುಕಬೇಕು, ಹಿಂಸೆಯನ್ನು ತಿರಸ್ಕರಿಸಬೇಕು, ಯುದ್ಧವನ್ನು ನಿರಾಕರಿಸಬೇಕು ವಿಶೇಷವಾಗಿ ಅನ್ಯಾಯಕರವಾಗಿದ್ದು, ಹೆಚ್ಚುತ್ತಲೇ ಇರುವ ಮತ್ತು ಯಾವುದೇ ಪರಿಹಾರ ನೀಡದ ಯುದ್ಧವನ್ನು ಎಂದು ಅವರು ಮನವಿ ಮಾಡಿದರು.

ಇಟಾಲಿಯನ್ ಭಾಷೆಯಲ್ಲಿ ಮಾತನಾಡಿದ ಅವರು, ಇಂದು, ನಾವು ಎಲ್ಲರೂ ತಿಳಿದಿರುವಂತೆ, ಸಂಪೂರ್ಣ ಇರಾನ್ ಜನರ ವಿರುದ್ಧವೂ ಒಂದು ಬೆದರಿಕೆ ವ್ಯಕ್ತವಾಗಿದೆ. ಇದು ನಿಜವಾಗಿಯೂ ಅಸ್ವೀಕಾರಾರ್ಹವಾಗಿದೆ ಇಲ್ಲಿ ಅಂತರರಾಷ್ಟ್ರೀಯ ಕಾನೂನಿನ ಪ್ರಶ್ನೆಗಳಿವೆ, ಆದರೆ ಅದಕ್ಕಿಂತ ಮುಖ್ಯವಾಗಿ, ಜನರ ಸಮಗ್ರ ಹಿತಾಸಕ್ತಿಗೆ ಸಂಬಂಧಿಸಿದ ನೈತಿಕ ಪ್ರಶ್ನೆಯಾಗಿದೆ ಎಂದು ಹೇಳಿದರು.

ಜಗದ್ಗುರುಗಳು ಈ ಸಂಘರ್ಷದ ವ್ಯಾಪಕ ಪರಿಣಾಮಗಳನ್ನೂ ಒತ್ತಿ ಹೇಳಿದರು. “ನಾವು ಜಾಗತಿಕ ಆರ್ಥಿಕ ಸಂಕಷ್ಟ, ಇಂಧನ ಸಂಕಷ್ಟ ಮತ್ತು ಮಧ್ಯಪೂರ್ವದಲ್ಲಿ ತೀವ್ರ ಅಸ್ಥಿರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಇದು ವಿಶ್ವದಾದ್ಯಂತ ಇನ್ನಷ್ಟು ದ್ವೇಷವನ್ನು ಉಂಟುಮಾಡುತ್ತಿದೆ ಎಂದು ಅವರು ಹೇಳಿದರು.

ಆದ್ದರಿಂದ, ಜಗದ್ಗುರು ಲಿಯೋರವರು, ಮತ್ತೆ ಮಾತುಕತೆಗಳ ಮೇಜಿನತ್ತ ಮರಳಿ ಬನ್ನಿ. ನಾವು ಮಾತನಾಡೋಣ. ಶಾಂತಿಯುತ ಮಾರ್ಗಗಳಲ್ಲಿ ಪರಿಹಾರಗಳನ್ನು ಹುಡುಕೋಣ ಎಂದು ಕರೆ ನೀಡಿದರು.

ಯುದ್ಧದಲ್ಲಿ ಅನ್ಯಾಯವಾಗಿ ಹಾನಿಗೊಳಗಾಗುತ್ತಿರುವವರನ್ನು ಅವರು ವಿಶೇಷವಾಗಿ ನೆನಪಿಸಿಕೊಂಡರು. ನಾವು ವಿಶೇಷವಾಗಿ ನಿರಪರಾಧಿಗಳನ್ನು ಮಕ್ಕಳು, ವೃದ್ಧರು, ರೋಗಿಗಳು—ಅನೇಕ ಜನರನ್ನು ನೆನಪಿಸಿಕೊಳ್ಳೋಣ. ಅವರು ಈಗಾಗಲೇ ಅಥವಾ ಮುಂದುವರಿಯುತ್ತಿರುವ ಈ ಯುದ್ಧದ ಬಲಿಯಾಗುತ್ತಿದ್ದಾರೆ. ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದ್ದು, ಅದು ಮಾನವನು ತೋರಿಸುವ ದ್ವೇಷ, ವಿಭಜನೆ ಮತ್ತು ನಾಶದ ಸಂಕೇತವಾಗಿದೆ ಎಂದು ಹೇಳಿದರು.

ಜಗದ್ಗುರುಗಳು “ನಾವು ಎಲ್ಲರೂ ಶಾಂತಿಗಾಗಿ ಕೆಲಸ ಮಾಡಲು ಬಯಸುತ್ತೇವೆ ಜನರು ಶಾಂತಿಯನ್ನು ಬಯಸುತ್ತಾರೆ” ಎಂದು ಪುನರುಚ್ಚರಿಸಿ, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.

ಕೊನೆಯಲ್ಲಿ, ಈ ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲಾ ದೇಶಗಳ ನಾಗರಿಕರು ತಮ್ಮ ಅಧಿಕಾರಿಗಳನ್ನು—ರಾಜಕೀಯ ನಾಯಕರನ್ನು, ಸಂಸದರನ್ನು—ಸಂಪರ್ಕಿಸಿ, ಶಾಂತಿಗಾಗಿ ಕೆಲಸ ಮಾಡಲು ಮತ್ತು ಯುದ್ಧ ಹಾಗೂ ಹಿಂಸೆಯನ್ನು ತಿರಸ್ಕರಿಸಲು ಒತ್ತಾಯಿಸಬೇಕು ಎಂದು ಜಗದ್ಗುರು ಲಿಯೋರವರು ಮನವಿ ಮಾಡಿ, “ಧನ್ಯವಾದಗಳು” ಎಂದು ಹೇಳಿದರು.

07 ಏಪ್ರಿಲ್ 2026, 21:39