Vatican Pope Audience

ಸಾಮಾನ್ಯ ಸಭೆಯಲ್ಲಿ ಜಗದ್ಗುರುಗಳು: “ಪವಿತ್ರತೆ ಕೆಲವರಿಗಷ್ಟೇ ಸೀಮಿತವಾದ ವಿಶೇಷಾಧಿಕಾರವಲ್ಲ.”

ಜಗದ್ಗುರು XIVನೇ ಲಿಯೋರವರು ‘ಲುಮೆನ್ ಜೆಂಟಿಯಂ’ ಎಂಬ ಧರ್ಮಶಾಸ್ತ್ರೀಯ ಸಂವಿಧಾನದ ಕುರಿತು ತಮ್ಮ ಕತೇಖಿಸಿಸ್ ಸರಣಿಯನ್ನು ಮುಂದುವರಿಸುತ್ತಾ, ಪವಿತ್ರತೆ ಕೆಲವರಿಗಷ್ಟೇ ಸೀಮಿತವಾದ ವಿಶೇಷಾಧಿಕಾರವಲ್ಲ ಅದು ಎಲ್ಲಾ ದೀಕ್ಷಿತರಿಗೂ ಸಲ್ಲುತ್ತದೆ ಎಂದು ನೆನಪಿಸಿದರು. ಹಾಗೆಯೇ, ನಾವು ಅದನ್ನು ಸಂತೋಷದಿಂದ ಸ್ವೀಕರಿಸಿ ದೇವರಿಗೆ ಪ್ರತಿಕ್ರಿಯಿಸುವ ಪ್ರತಿದಿನದ ಜೀವನದಲ್ಲಿ ಅದು ವ್ಯಕ್ತವಾಗುತ್ತದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ನಡೆದ ವಾರದ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ಪವಿತ್ರತೆ ಕೆಲವರಿಗಷ್ಟೇ ಸೀಮಿತವಾದ ವಿಶೇಷಾಧಿಕಾರವಲ್ಲ, ಆದರೆ ಪ್ರತಿಯೊಬ್ಬ ದೀಕ್ಷಿತನಿಗೂ ದೊರೆತ ದೇವರ ವರ ಎಂದು ಹೇಳಿದರು. ಈ ವರವು ಪ್ರತಿಯೊಬ್ಬನನ್ನೂ ಪ್ರೀತಿ ಮತ್ತು ದಯೆಯ ಪರಿಪೂರ್ಣತೆಯತ್ತ ಅಂದರೆ ದೇವರಿಗೂ ನೆರೆಹೊರೆಯವರಿಗೂ ಸಂಪೂರ್ಣ ಪ್ರೀತಿಯತ್ತ ಹೆಜ್ಜೆ ಹಾಕುವಂತೆ ಕರೆಯುತ್ತದೆ ಎಂದು ಅವರು ವಿವರಿಸಿದರು.

‘ಲುಮೆನ್ ಜೆಂಟಿಯಂ’ ಧರ್ಮಶಾಸ್ತ್ರೀಯ ಸಂವಿಧಾನದ ಬೆಳಕಿನಲ್ಲಿ ಮಾತನಾಡಿದ ಜಗದ್ಗುರುಗಳು, ಎಲ್ಲಾ ವಿಶ್ವಾಸಿಗಳು ಪವಿತ್ರತೆಯತ್ತ ಕರೆಯಲ್ಪಟ್ಟಿದ್ದಾರೆ ಎಂದು ನೆನಪಿಸಿದರು. ದೇವರ ಕೃಪೆಯಲ್ಲಿ ಬದುಕುವುದು, ಸದ್ಗುಣಗಳನ್ನು ಅಭ್ಯಾಸಿಸುವುದು ಮತ್ತು ಕ್ರಿಸ್ತನನ್ನು ಅನುಸರಿಸುವುದು ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯ ಎಂದು ಅವರು ಹೇಳಿದರು. ಪ್ರಾರಂಭಿಕ ಧರ್ಮ ಸಭೆಯ ಕಾಲದಂತೆ, ತ್ಯಾಗ ಮತ್ತು ಬಲಿದಾನ ಹುತಾತ್ಮತೆ ಕೂಡ  ಪವಿತ್ರತೆಯ ಅತ್ಯುನ್ನತ ಸಾಕ್ಷಿ ಎಂದು ಅವರು ಸೂಚಿಸಿದರು.

ಜಗದ್ಗುರುಗಳು ಎಲ್ಲಾ ಸಂಸ್ಕಾರಗಳು, ವಿಶೇಷವಾಗಿ ಯುಕರಿಸ್ಟ್, ಪವಿತ್ರ ಜೀವನವನ್ನು ಬೆಳೆಸುವ ಆತ್ಮಿಕ ಆಹಾರವಾಗಿವೆ ಎಂದು ಹೇಳಿದರು. ಪವಿತ್ರತೆ ದೇವರ ಕೊಡುಗೆಯಾಗಿದ್ದು, ನಾವು ಅದನ್ನು ಸಂತೋಷದಿಂದ ಸ್ವೀಕರಿಸಿ ನಮ್ಮ ದೈನಂದಿನ ಜೀವನದಲ್ಲಿ ದೇವರಿಗೆ ಪ್ರತಿಕ್ರಿಯಿಸಿದಾಗ ಅದು ವ್ಯಕ್ತವಾಗುತ್ತದೆ ಎಂದು ಅವರು ವಿವರಿಸಿದರು.

ಧರ್ಮ ಸಭೆ ಪವಿತ್ರವಾಗಿದೆ ಎಂಬುದು ಅದರ ಮೂಲ ಗುಣಗಳಲ್ಲಿ ಒಂದಾದರೂ, ಅದು ಪೂರ್ಣತೆಯಲ್ಲಿ ಈಗಾಗಲೇ ಸಾಧಿತವಾಗಿದೆ ಎಂದರ್ಥವಲ್ಲ ಎಂದು ಜಗದ್ಗುರುಗಳು ಹೇಳಿದರು. ಲೋಕದ ಕಷ್ಟಗಳು ಮತ್ತು ದೇವರ ಸಾಂತ್ವನಗಳ ನಡುವೆ ಸಾಗುವ ಧರ್ಮ ಸಭೆ ತನ್ನ ಯಾತ್ರೆಯಲ್ಲಿ ಈ ಪವಿತ್ರತೆಯನ್ನು ದೃಢಪಡಿಸಬೇಕಾಗಿದೆ. ಪಾಪದ ವಾಸ್ತವಿಕತೆ ನಮ್ಮೆಲ್ಲರನ್ನೂ ಜೀವನದಲ್ಲಿ ಆಳವಾದ ಪರಿವರ್ತನೆಗೆ ಕರೆಕೊಡುತ್ತದೆ ಎಂದು ಅವರು ತಿಳಿಸಿದರು.

ಜಗದ್ಗುರು XIVನೇ ಲಿಯೋರವರು ಬಡತನ, ಶುದ್ಧತೆ ಮತ್ತು ವಿಧೇಯತೆ ಎಂಬ ಸುವಾರ್ತಾ ಸಲಹೆಗಳನ್ನು ಅನುಸರಿಸಿ ದೇವರಿಗೆ ತಮ್ಮ ಜೀವನವನ್ನು ಸಮರ್ಪಿಸುವವರನ್ನು ವಿಶೇಷವಾಗಿ ನೆನಪಿಸಿಕೊಂಡರು. ಈ ಗುಣಗಳು ಬಂಧನಗಳಲ್ಲ, ಬದಲಾಗಿ ಸ್ವಾತಂತ್ರ್ಯವನ್ನು ನೀಡುವ ಪವಿತ್ರಾತ್ಮನ ವರಗಳು ಎಂದು ಹೇಳಿದರು. ಇವು ದೇವರ ಮೇಲೆ ಸಂಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸುತ್ತವೆ ಮತ್ತು ಕ್ರಿಸ್ತನ ಮಾದರಿಯಲ್ಲಿ ಜೀವನ ನಡೆಸಲು ಸಹಾಯ ಮಾಡುತ್ತವೆ.

ಕೊನೆಯಲ್ಲಿ, ದೇವರು ಯಾವುದೇ ಮಾನವೀಯ ಅನುಭವವನ್ನು ಬಿಡುವುದಿಲ್ಲ ದುಃಖವೂ ಸಹ ದೇವರೊಂದಿಗೆ ಒಂದಾಗಿ ಅನುಭವಿಸಿದಾಗ ಪವಿತ್ರತೆಯ ಮಾರ್ಗವಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು. ಜೀವನವನ್ನು ಪರಿವರ್ತಿಸುವ ದೇವರ ಕೃಪೆ ಪ್ರತಿಯೊಂದು ಪರೀಕ್ಷೆಯಲ್ಲಿ ನಮ್ಮನ್ನು ಬಲಪಡಿಸುತ್ತದೆ. ಪವಿತ್ರ ತಾಯಿ ಮರಿಯಮ್ಮನವಲ ಮಧ್ಯಸ್ಥಿಕೆಗೆ ನಮ್ಮ ಯಾತ್ರೆಯನ್ನು ಒಪ್ಪಿಸಿ, ಸದಾ ದೇವರ ಕಡೆಗೆ ನಡೆದುಹೋಗುವಂತೆ ಜಗದ್ಗುರುಗಳು ಪ್ರಾರ್ಥಿಸಿದರು.

08 ಏಪ್ರಿಲ್ 2026, 18:22