Pope Leo XIV leaves after the weekly general audience in St. Peter's Square at the Vatican

ಸಾರ್ವಜನಿಕ ಭೇಟಿಯಲ್ಲಿ ಜಗದ್ಗುರುಗಳು: ಪವಿತ್ರ ಆರಾಧನೆ ಧರ್ಮ ಸಭೆಯನ್ನು ಪೋಷಿಸುತ್ತದೆ ಮತ್ತು ಅದರ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ.

ಬುಧವಾರದ ಸಾರ್ವಜನಿಕ ಸಭೆಯ ವೇಳೆ, ಜಗದ್ಗುರು XIVನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಪವಿತ್ರ ಆರಾಧನೆ ಕುರಿತ ಡೋಗ್ಮಾಟಿಕ್ ಸಂವಿಧಾನವಾದ ‘ಸಾಕ್ರೋಸಾಂಕ್ಟುಮ್ ಕಾಂಸಿಲಿಯಮ್’ ಕುರಿತು ಚಿಂತನೆ ನಡೆಸಿ, “ಪವಿತ್ರ ಆರಾಧನೆಯೇ ವಿಶ್ವಾಸಿಗಳನ್ನು ಪೋಷಿಸುತ್ತದೆ” ಎಂದು ಒತ್ತಿಹೇಳಿದರು. ಜೊತೆಗೆ ಪ್ರತಿಯೊಂದು ದೈವಾರಾಧನ ವಿಧಿಯ ಆಚರಣೆಯೂ “ಪ್ರಾರ್ಥನೆಯಲ್ಲಿ ತೊಡಗಿರುವ ಧರ್ಮ ಸಭೆಯ ನಿಜವಾದ ದೈವಿಕ ಪ್ರಕಾಶ”ವಾಗುತ್ತದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಬುಧವಾರದ ಸಾರ್ವಜನಿಕ ಸಭೆಯಲ್ಲಿ ದ್ವಿತೀಯ ವ್ಯಾಟಿಕನ್ ಮಹಾಸಭೆಯ ಸಾಕ್ರೋಸಾಂಕ್ಟುಮ್ ಕಾಂಸಿಲಿಯಮ್ ಎಂಬ ಪವಿತ್ರ ಆರಾಧನೆ ಕುರಿತ ಸಂವಿಧಾನವನ್ನು ಆಧರಿಸಿ ತಮ್ಮ ಪ್ರಭೋಧನೆಯನ್ನು ಮುಂದುವರಿಸಿದರು. ಅವರು, “ಧಮ೯ಸಭೆಯ ರಹಸ್ಯದ ಆಂತರಿಕ ಮೂಲವೇ ಕ್ರಿಸ್ತನು” ಎಂದು ಹೇಳಿ, ಶಿಲುಬೆಯ ಮೇಲೆ ತನ್ನ ಪಕ್ಕದಿಂದ ಜನಿಸಿದ ದೇವರ ಪರಿಶುದ್ಧ ಜನರಾಗಿ ಧರ್ಮ ಸಭೆ ರೂಪುಗೊಂಡಿದೆ ಎಂದು ವಿವರಿಸಿದರು. ಪವಿತ್ರ ಆರಾಧನೆಯಲ್ಲಿ ಕ್ರಿಸ್ತನು ತನ್ನ ಆತ್ಮದ ಶಕ್ತಿಯಿಂದ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದು, ಧರ್ಮ ಸಭೆಯನ್ನು ಪರಿಶುದ್ಧಗೊಳಿಸಿ ತಂದೆಯ ಬಳಿಗೆ ತನ್ನ ಸಮರ್ಪಣೆಯೊಂದಿಗೆ ಒಂದಾಗಿಸುತ್ತಾನೆ ಎಂದು ಹೇಳಿದರು.

ಜಗದ್ಗುರುಗಳು, ಮಹಾಸಭೆಯ ಪಿತೃಗಳು ಕೇವಲ ಆರಾಧನಾ ವಿಧಿಗಳ ಸುಧಾರಣೆಯನ್ನು ಮಾತ್ರ ಉದ್ದೇಶಿಸದೆ, ಧರ್ಮ ಸಭೆಯನ್ನು ಕ್ರಿಸ್ತನ ರಹಸ್ಯದ ಆಳವಾದ ಅನುಭವದತ್ತ ಕರೆದೊಯ್ಯಲು ಪ್ರಯತ್ನಿಸಿದರು ಎಂದು ತಿಳಿಸಿದರು. ಪವಿತ್ರ ಆರಾಧನೆ ಧರ್ಮ ಸಭೆಯ ಜೀವಾಳವಾಗಿದ್ದು, ಅದರಲ್ಲಿ ಕ್ರಿಸ್ತನಿಂದ ಧರ್ಮ ಸಭೆ ತನ್ನ ಜೀವವನ್ನು ಸ್ವೀಕರಿಸುತ್ತದೆ. ಯೇಸುವಿನ ಪಾಡು, ಮರಣ, ಪುನರುತ್ಥಾನ ಮತ್ತು ಮಹಿಮಾಪೂರ್ಣ ಘಟನೆಯಾದ ಪಾಸ್ಕ ರಹಸ್ಯವು ಆರಾಧನೆಯಲ್ಲಿ ಸಂಸ್ಕಾರವಾಗಿ ನಮಗೆ ಸನ್ನಿಹಿತವಾಗುತ್ತದೆ ಎಂದು ಅವರು ನೆನಪಿಸಿದರು.

ಪ್ರತಿಯೊಂದು ದೈವಾರಾಧನೆ ವಿಧಿಯ ಆಚರಣೆಯಲ್ಲಿಯೂ ಕ್ರಿಸ್ತನು ವಾಕ್ಯದಲ್ಲಿ, ಸಂಸ್ಕಾರಗಳಲ್ಲಿ, ಆರಾಧನೆಯನ್ನು ನೆರವೇರಿಸುವ ಗುರುಗಳಲ್ಲಿ ಹಾಗೂ ವಿಶ್ವಾಸಿಗಳ ಸಮುದಾಯದಲ್ಲಿ ಜೀವಂತವಾಗಿ ಹಾಜರಿರುವರು ಎಂದು ಜಗದ್ಗುರುಗಳು ಹೇಳಿದರು. ವಿಶೇಷವಾಗಿ ದೈವಾರಾಧನೆ ವಿಧಿಯಲ್ಲಿ ಕ್ರಿಸ್ತನ ಸಾನ್ನಿಧ್ಯ ಅತ್ಯುನ್ನತ ರೀತಿಯಲ್ಲಿ ವ್ಯಕ್ತವಾಗುತ್ತದೆ. ಸಂತ ಆಗಸ್ಟಿನ್ ಹೇಳಿದಂತೆ, ಧರ್ಮ ಸಭೆ “ಕ್ರಿಸ್ತನ ದೇಹವನ್ನು ಸ್ವೀಕರಿಸಿ ತಾನೇ ಕ್ರಿಸ್ತನ ದೇಹವಾಗುತ್ತದೆ” ಎಂದು ಅವರು ವಿವರಿಸಿದರು.

ಪವಿತ್ರ ಆರಾಧನೆಯ ಮೂಲಕ ಧರ್ಮ ಸಭೆಯ ನಂಬಿಕೆ ವ್ಯಕ್ತವಾಗುತ್ತದೆ ಮತ್ತು ವಿಶ್ವಾಸಿಗಳ ಜೀವನ ರೂಪುಗೊಳ್ಳುತ್ತದೆ ಎಂದು ಜಗದ್ಗುರು ಲಿಯೋರವರು ಹೇಳಿದರು. ವಾಕ್ಯದ ಘೋಷಣೆ, ಸಂಸ್ಕಾರಗಳ ಆಚರಣೆ, ಮೌನ, ಸಂಕೇತಗಳು ಮತ್ತು ಪ್ರಾರ್ಥನೆ ಎಲ್ಲವೂ ಇವುಗಳ ಮೂಲಕ ದೇವರ ಜನರು ಒಂದಾಗಿ ಕ್ರಿಸ್ತನ ದೇಹವಾಗಿ ರೂಪುಗೊಳ್ಳುತ್ತಾರೆ. ಆದ್ದರಿಂದ ಪ್ರತಿಯೊಂದು ಆರಾಧನೆಯೂ “ಪ್ರಾರ್ಥನೆಯಲ್ಲಿ ಇರುವ ಧರ್ಮ ಸಭೆಯ ನಿಜವಾದ ದೈವಿಕ ಪ್ರಕಟನೆ” ಆಗುತ್ತದೆ ಎಂದು ಅವರು ಹೇಳಿದರು.

ಜಗದ್ಗುರುಗಳು, ಪವಿತ್ರ ಆರಾಧನೆಯೇ ಧರ್ಮ ಸಭೆಯ ಎಲ್ಲಾ ಕಾರ್ಯಗಳ ಶಿಖರವೂ ಮತ್ತು ಶಕ್ತಿಯ ಮೂಲವೂ ಆಗಿದೆ ಎಂದು ಒತ್ತಿಹೇಳಿದರು. ಬಡವರ ಸೇವೆ, ಸುವಾರ್ತಾ ಪ್ರಚಾರ ಮತ್ತು ಮಾನವೀಯ ಸೇವೆಗಳೆಲ್ಲವೂ ಕೊನೆಯಲ್ಲಿ ಈ ಆರಾಧನೆಯತ್ತ ಕರೆದೊಯ್ಯುತ್ತವೆ. ಅದೇ ಸಮಯದಲ್ಲಿ ಆರಾಧನೆ ವಿಶ್ವಾಸಿಗಳನ್ನು ನಂಬಿಕೆಯಲ್ಲಿ ಬಲಪಡಿಸಿ, ಅವರ ಜೀವನವನ್ನು ಕ್ರಿಸ್ತನ ಮಾರ್ಗದಲ್ಲಿ ನವೀಕರಿಸುತ್ತದೆ ಎಂದು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ವಿಶ್ವಾಸಿಗಳನ್ನು ಪವಿತ್ರಾತ್ಮದ ಮಾರ್ಗದರ್ಶನಕ್ಕೆ ತಮ್ಮನ್ನು ತೆರೆದಿಡುವಂತೆ ಆಹ್ವಾನಿಸಿದರು. ಪವಿತ್ರ ಆರಾಧನೆ ನಮ್ಮನ್ನು ಕ್ರಿಸ್ತನ ಜೀವನದಲ್ಲಿ ಭಾಗಿಗಳನ್ನಾಗಿ ಮಾಡುತ್ತದೆ ಮತ್ತು ಸಮಸ್ತ ಮಾನವಕುಲದ ಏಕತೆಯ ಸಂಕೇತವಾಗುತ್ತದೆ ಎಂದು ಹೇಳಿದರು. ಪವಿತ್ರಾತ್ಮರ ಹಬ್ಬದ ಸಿದ್ಧತೆಯಲ್ಲಿ, ಪವಿತ್ರಾತ್ಮನು ಮಾನವರ ಮನಸ್ಸನ್ನು ಅನ್ಯಾಯ, ಹಿಂಸೆ ಮತ್ತು ಯುದ್ಧದಿಂದ ದೂರಮಾಡಿ ಭೂಮಿಯನ್ನು ನವೀಕರಿಸಲಿ ಎಂದು ಅವರು ಪ್ರಾರ್ಥಿಸಿದರು.

20 ಮೇ 2026, 16:55