ಕಾರ್ಡಿನಲ್ ಬ್ಲೇಸ್ ಕ್ಯುಪಿಚ್. ಕಾರ್ಡಿನಲ್ ಬ್ಲೇಸ್ ಕ್ಯುಪಿಚ್. 

ಕಾರ್ಡಿನಲ್ ಬ್ಲೇಸ್ ಕುಪಿಚ್ ರವರ ಪ್ರಕಾರ, ಜಗದ್ಗುರುಗಳ ಎನ್ಸಿಕ್ಲಿಕಲ್ ಪತ್ರಿಕೆ ಧರ್ಮ ಸಭೆಯ ಸಾಮಾಜಿಕ ಬೋಧನೆಗಳನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವ “ಹೊಸ ಕಣ್ಣಜ್ಜಿಯಾಗಿದೆ.”

ಬ್ಲೇಸ್ ಕುಪಿಚ್ ರವರು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸಿಕ್ಲಿಕಲ್ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಕುರಿತು ಮಾತನಾಡುತ್ತಾ, “ಹೊಸ ತಂತ್ರಜ್ಞಾನವು ಅದನ್ನು ನಿಯಂತ್ರಿಸುವ ನಮ್ಮ ಸಾಮರ್ಥ್ಯವನ್ನೇ ಮೀರಿಹೋಗುವ ಸಾಧ್ಯತೆಯನ್ನು ಹೊಂದಿದೆ ಎಂಬುದನ್ನು ಈ ಪತ್ರಿಕೆ ಗುರುತಿಸುತ್ತದೆ, ಮತ್ತು ಈ ಮಹತ್ವದ ಕ್ಷಣವನ್ನು ತುರ್ತಾಗಿ ಬಳಸಿಕೊಳ್ಳಬೇಕೆಂದು ಜಗದ್ಗುರುಗಳು ನಮಗೆ ಎಚ್ಚರಿಕೆಯ ಕರೆ ನೀಡುತ್ತಿದ್ದಾರೆ” ಎಂದು ಹೇಳಿದರು.

ವ್ಯಾಟಿಕನ್ ವರದಿ

“ಈ ದಸ್ತಾವೇಜು ಧರ್ಮ ಸಭೆಯ ಸಂಪೂರ್ಣ ಸಾಮಾಜಿಕ ಬೋಧನೆಯನ್ನು ಓದಲು ನಮಗೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ.”

ಚಿಕಾಗೋ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಬ್ಲೇಸ್ ಕುಪಿಚ್ ರವರು ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ರಕ್ಷಣೆಯ ಕುರಿತು ಜಗದ್ಗುರು XIVನೇ ಲಿಯೋರವರು ಮೊದಲ ಎನ್ಸಿಕ್ಲಿಕಲ್ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಕಾರ್ಡಿನಲ್ ರವರು ತಂತ್ರಜ್ಞಾನಾಧಾರಿತ ಸ್ವಯಂಪೂರ್ಣತೆಯ ವಿರುದ್ಧ ಜಗದ್ಗುರುಗಳು ನೀಡಿರುವ ಎಚ್ಚರಿಕೆ, ಕೃತಕ ಬುದ್ಧಿಮತ್ತೆಯ ಸಾಮಾಜಿಕ ಪರಿಣಾಮಗಳು ಹಾಗೂ ಡಿಜಿಟಲ್ ಯುಗದಲ್ಲಿ ಕಥೋಲಿಕ ಸಾಮಾಜಿಕ ಬೋಧನೆಯ ಪ್ರಸ್ತುತತೆಯ ಕುರಿತು ಮಾತನಾಡಿದರು.

ಕಾರ್ಡಿನಲ್ ಕುಪಿಚ್, ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸಿಕ್ಲಿಕಲ್  ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ನ ಮಹತ್ವವನ್ನು ನೀವು ಹೇಗೆ ನೋಡುತ್ತೀರಿ?

ಈ ದಸ್ತಾವೇಜಿನ ಪ್ರಮುಖ ಕೊಡುಗೆ ಎಂದರೆ, ಪವಿತ್ರ ತಂದೆಯವರು ಮಾನವಕುಲದ ಮುಂದಿಟ್ಟಿರುವ ಸವಾಲು “ಹೊಸ ಜೆರೂಸಲೇಮನ್ನು ನಿರ್ಮಿಸಬೇಕೋ ಅಥವಾ ಮತ್ತೊಂದು ಬಾಬೇಲಿನ ಗೋಪುರವೋ” ಎಂಬ ಆಯ್ಕೆ.

ಮೊದಲ ಚಿತ್ರಣವು ಪ್ರವಾದಿ ನೆಹೆಮಿಯ ರವರ ಕಥೆಯಲ್ಲಿ ಆಧಾರಿತವಾಗಿದೆ. ನಿರ್ವಾಸಿತ ಜೀವನದ ನಂತರ ಅವರು ಕುಟುಂಬಗಳನ್ನು ಮತ್ತೆ ಒಂದಾಗಿಸುತ್ತಾರೆ. ಜಗದ್ಗುರುಗಳು ಬರೆಯುವಂತೆ, ನೆಹೆಮಿಯ “ಪ್ರತಿಯೊಬ್ಬರಿಗೂ ಗೋಡೆಯ ಒಂದು ಭಾಗವನ್ನು ಪುನರ್‌ನಿರ್ಮಿಸಲು ಹೊಣೆ ನೀಡಿದರು, ಅವರ ಚಿಂತೆಗಳನ್ನು ಆಲಿಸಿದರು, ಅವರ ಪ್ರಯತ್ನಗಳನ್ನು ಸಂಯೋಜಿಸಿದರು, ಮತ್ತು ಯಾವುದೇ ವಿರೋಧವನ್ನು ಎದುರಿಸಿದರು.”

ಈ ನಗರವು ಒಬ್ಬ ಪ್ರಭಾವಶಾಲಿ ವ್ಯಕ್ತಿಯ ಮುಂದಾಳತ್ವದಿಂದ ಹುಟ್ಟುವುದಿಲ್ಲ,ಬದಲಾಗಿ “ಎಲ್ಲರ ಸಹಭಾಗಿತ್ವ ಮತ್ತು ಹಂಚಿಕೊಂಡ ಜವಾಬ್ದಾರಿಯಿಂದ ನಿರ್ಮಾಣವಾಗುತ್ತದೆ. ಪುರುಷರು, ಮಹಿಳೆಯರು, ಯಾಜಕರು, ಕೈಗಾರಿಕೋದ್ಯಮಿಗಳು, ಕುಟುಂಬದ ಮುಖ್ಯಸ್ಥರು ಹಾಗೂ ಯುವಕರು  ಎಲ್ಲರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ದೇವರನ್ನು ಕೇಂದ್ರದಲ್ಲಿಟ್ಟುಕೊಂಡ ಈ ಕಾರ್ಯವು, ಕಲ್ಲುಗಳಿಂದ ಕಟ್ಟುವ ಮೊದಲು ಸಂಬಂಧಗಳನ್ನು ಪುನರ್‌ನಿರ್ಮಿಸುತ್ತದೆ.”

ಜನರು ತಮ್ಮ ಯೋಗ್ಯ ಪಾತ್ರವನ್ನು ಸ್ವೀಕರಿಸಿ, ತಮ್ಮ ಶಕ್ತಿ ಪ್ರಭುವಿನಿಂದ ಬರುತ್ತದೆ ಎಂಬುದನ್ನು ಅರಿತಾಗ ಇಂತಹ ಸೌಹಾರ್ದತೆ ಮೂಡುತ್ತದೆ.

ಇನ್ನೊಂದೆಡೆ, ಬಾಬೇಲಿನ ಗೋಪುರವು ದೇವರ ಆಶೀರ್ವಾದವಿಲ್ಲದೆ ಸ್ವರ್ಗವನ್ನು ತಲುಪಲು ಯತ್ನಿಸುವ ನಗರವನ್ನು ಪ್ರತಿನಿಧಿಸುತ್ತದೆ. ಅಹಂಕಾರ ಮತ್ತು ಸ್ವಯಂಪೂರ್ಣತೆಯ ಭಾವನೆಯ ಮೇಲೆ ನಿರ್ಮಿತವಾಗಿರುವ ಈ ವ್ಯವಸ್ಥೆಯಲ್ಲಿ ಸಂವಹನ ಕುಸಿದು ಬೀಳುತ್ತದೆ,ಜನರು ಪರಸ್ಪರವನ್ನು ಅರ್ಥಮಾಡಿಕೊಳ್ಳುವುದನ್ನೇ ನಿಲ್ಲಿಸುತ್ತಾರೆ.

ವ್ಯಾಪಾರ, ತಂತ್ರಜ್ಞಾನ, ನವೀನತೆ ಮತ್ತು ಕೈಗಾರಿಕೆಯ ಜಾಗತಿಕ ಕೇಂದ್ರವೆಂದು ಪ್ರಸಿದ್ಧವಾದ ಚಿಕಾಗೋದಲ್ಲಿ, ತಂತ್ರಜ್ಞಾನ ಲೋಕದೊಂದಿಗೆ ಸಂವಾದ ನಡೆಸುತ್ತಾ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವತೆಯ ರಕ್ಷಣೆಗೆ ಕರೆ ನೀಡುವ ಈ ದಸ್ತಾವೇಜಿಗೆ ಯಾವ ರೀತಿಯ ಪ್ರತಿಕ್ರಿಯೆ ಕಾಣಿಸುತ್ತಿದೆ?

ಚಿಕಾಗೋದಲ್ಲಿ ಮೊದಲ ಸುದ್ದಿವಿವರಣೆಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳ ಮೇಲೆ ಕೇಂದ್ರೀಕರಿಸಿದ್ದವು. ನಾವು ಅವರನ್ನು ಗಮನದಿಂದ ಆಲಿಸಬೇಕಾಗಿದೆ, ಏಕೆಂದರೆ ಈ ಹೊಸ ತಂತ್ರಜ್ಞಾನವು ಅವರ ಭವಿಷ್ಯದ ಮೇಲೆ ಆಳವಾದ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.

ಸಂದರ್ಶನ ನೀಡಿದ ವಿದ್ಯಾರ್ಥಿಗಳು ಜಗದ್ಗುರುಗಳನ್ನು ಬಹಳವಾಗಿ ಪ್ರಶಂಸಿಸಿದರು ಮತ್ತು ಈ ದಸ್ತಾವೇಜನ್ನು ಓದಲು ತೀವ್ರ ಆಸಕ್ತಿ ವ್ಯಕ್ತಪಡಿಸಿದರು.

ಜಗದ್ಗುರು ಲಿಯೋರವರ ಈ ದಸ್ತಾವೇಜಿನ ಯಾವ ಚಿಂತನೆ ನಿಮ್ಮ ಮನಸ್ಸಿಗೆ ಅತ್ಯಂತ ಸ್ಪರ್ಶಿಸಿದೆ? ನಿಮ್ಮ ಮಹಾಧರ್ಮಪ್ರಾಂತ್ಯದ ಜನರು ಇದರಿಂದ ಯಾವ ಸಂದೇಶವನ್ನು ಪಡೆದುಕೊಳ್ಳಬೇಕು ಎಂದು ನೀವು ಬಯಸುತ್ತೀರಿ?

ಈ ದಸ್ತಾವೇಜು ಧರ್ಮ ಸಭೆಯ ಸಂಪೂರ್ಣ ಸಾಮಾಜಿಕ ಬೋಧನೆಯನ್ನು ಓದಲು ನಮಗೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ. ಮೊದಲ ಅಧ್ಯಾಯದಲ್ಲಿಯೇ ಜಗದ್ಗುರುಗಳು,XIIIನೇ ಲಿಯೋರವರಿಂದ ಆರಂಭವಾದ ಜಗದ್ಗುರುಗಳ ಉಪಕ್ರಮಗಳ ಅದ್ಭುತ ವಿಮರ್ಶೆಯನ್ನು ನೀಡುವ ಮೂಲಕ ಇದನ್ನು ಸ್ಪಷ್ಟಪಡಿಸುತ್ತಾರೆ.

ಜಗದ್ಗುರು XIVನೇ ಲಿಯೋರವರು ಸ್ಪಷ್ಟವಾಗಿ ಹೇಳುತ್ತಾರೆ  ಇದು ಕೇವಲ ಕಥೋಲಿಕರು ಬೇಕಾದರೆ ಸ್ವೀಕರಿಸಿ, ಬೇಡವೆಂದರೆ ನಿರ್ಲಕ್ಷಿಸಬಹುದಾದ ಬೋಧನೆಗಳ ಸಮೂಹವಲ್ಲ ಇದು ಧರ್ಮ ಸಭೆಯ ಅಧಿಕೃತ ಬೋಧನೆಯಾಗಿದೆ.

ಜಗದ್ಗುರು XIIIನೇ ಲಿಯೋರವರ ರೆರಮ್ ನೊವರಮ್ ಪತ್ರಿಕೆಯನ್ನು ಪರಿಗಣಿಸಿದರೆ, ಜಗದ್ಗುರು XIVನೇ ಲಿಯೋರವರು ಅನೇಕ ಬಾರಿ ಉಲ್ಲೇಖಿಸುವ ಈ ದಸ್ತಾವೇಜಿನ ಹಿನ್ನೆಲೆಯಲ್ಲಿಯೇ, ಡಿಜಿಟಲ್ ಕ್ರಾಂತಿಯನ್ನು ಅದರ ವ್ಯಾಪ್ತಿ ಮತ್ತು ಪರಿಣಾಮದ ದೃಷ್ಟಿಯಿಂದ ಕೈಗಾರಿಕಾ ಕ್ರಾಂತಿಯೊಂದಿಗೆ ಹೋಲಿಸಬಹುದೇ?

ಕೆಲವು ಸಾಮ್ಯತೆಗಳಿವೆ ಆದರೆ ಗಮನಾರ್ಹ ಭಿನ್ನತೆಗಳೂ ಇವೆ.

ಈ ಹೊಸ ತಂತ್ರಜ್ಞಾನವು ಅದನ್ನು ನಿಯಂತ್ರಿಸುವ ನಮ್ಮ ಸಾಮರ್ಥ್ಯವನ್ನೇ ಮೀರಿಹೋಗುವ ಸಾಧ್ಯತೆಯನ್ನು ಹೊಂದಿದೆ. ಈ ಮಹತ್ವದ ಕ್ಷಣವನ್ನು ತುರ್ತಾಗಿ ಬಳಸಿಕೊಳ್ಳಬೇಕೆಂದು ಜಗದ್ಗುರುಗಳು ನಮಗೆ ಎಚ್ಚರಿಕೆಯ ಕರೆ ನೀಡುತ್ತಿದ್ದಾರೆ.

28 ಮೇ 2026, 17:51