Il Papa a San Pietro per l'udienza del mercoled�

ಜಗದ್ಗುರು XIVನೇ ಲಿಯೋರವರು ಸಂತ ದ್ವಿತೀಯ ಜಾನ್ ಪಾಲ್ ರವರ ಮೇಲೆ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪ್ರಾರ್ಥಿಸಿದರು.

ಸಾಮಾನ್ಯ ಸಾರ್ವಜನಿಕ ಸಭೆ ಆರಂಭವಾಗುವ ಮೊದಲು, ಜಗದ್ಗುರು XIVನೇ ಲಿಯೋರವರು 1981ರಲ್ಲಿ ತಮ್ಮ ಪೂರ್ವಾಧಿಕಾರಿಯಾದ ಸಂತ ದ್ವಿತೀಯ ಜಾನ್ ಪಾಲ್ ರವರ ಮೇಲೆ ಗುಂಡಿನ ದಾಳಿ ನಡೆದ ಸ್ಥಳದಲ್ಲಿ ನಿಂತು ಪ್ರಾರ್ಥಿಸಿದರು.

ವ್ಯಾಟಿಕನ್ ವರದಿ

ಮೇ 13ರಂದು ನಡೆದ ಸಾಮಾನ್ಯ ಸಾರ್ವಜನಿಕ ಸಭೆ ಆರಂಭವಾಗುವ ಮೊದಲು, ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ವಾಹನದಲ್ಲಿ ಜನರ ಮಧ್ಯೆ ಸಾಗುತ್ತಾ, 1981ರ ಇದೇ ದಿನ ತಮ್ಮ ಪೂರ್ವಾಧಿಕಾರಿಯಾದ ಸಂತ ದ್ವಿತೀಯ ಜಾನ್ ಪಾಲ್ ರವರ ಮೇಲೆ ಹತ್ಯೆ ಯತ್ನ ನಡೆದ ಸ್ಥಳದಲ್ಲಿ ನಿಂತು ಮೊಣಕಾಲೂರಿ ಪ್ರಾರ್ಥಿಸಿದರು.

ಆ ಸಂದರ್ಭದಲ್ಲಿ ಜಗದ್ಗುರುಗಳು ಹೇಳಿದರು: “ಇಂದು ನಾವು ಅವರ್ ಲೇಡಿ ಆಫ್ ಫಾತಿಮಾರವರ ಸ್ಮರಣಾ ಹಬ್ಬವನ್ನು ಆಚರಿಸುತ್ತಿದ್ದೇವೆ. ಇದೇ ದಿನ 45 ವರ್ಷಗಳ ಹಿಂದೆ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಜೀವಕ್ಕೆ ದಾಳಿ ನಡೆಸಲಾಯಿತು. ಆದ್ದರಿಂದ ಇಂದಿನ ನನ್ನ ಪ್ರಭೋಧನೆಯನ್ನು ಧನ್ಯ ಕನ್ಯಾ ಮರಿಯಮ್ಮನವರಿಗೆ ಸಮರ್ಪಿಸಿದ್ದೇನೆ.”

ಗುಂಡಿನ ದಾಳಿ ನಡೆದ ಸ್ಥಳವನ್ನು ಈಗ ಬಿಳಿ ಮರ್ಮರದ ಫಲಕದಿಂದ ಗುರುತಿಸಲಾಗಿದೆ. ಅದರಲ್ಲಿ ಸಂತ  ದ್ವಿತೀಯ ಜಾನ್ ಪಾಲ್ ರವರ ಚಿಹ್ನೆಯನ್ನು ಅಳವಡಿಸಲಾಗಿದೆ. ಆ ದಾಳಿಯ ನಂತರ, ತನ್ನ ಜೀವವನ್ನು ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಯಿಂದ ದೇವರು ಉಳಿಸಿದರು ಎಂಬ ನಂಬಿಕೆಯನ್ನು ದ್ವಿತೀಯ ಜಾನ್ ಪಾಲ್ ರವರು  ಅನೇಕ ಬಾರಿ ವ್ಯಕ್ತಪಡಿಸಿದ್ದರು.

ಪೋರ್ಚುಗೀಸ್ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ಎಲ್ಲರೂ ಫಾತಿಮಾ ಅವರ್ ಲೇಡಿ ದೇವಾಲಯದ  ಕಡೆಗೆ ತಮ್ಮ ದೃಷ್ಟಿಯನ್ನು ಹರಿಸಬೇಕು ಎಂದು ಕರೆ ನೀಡಿದರು. ಅಲ್ಲಿ ಮರಿಯಮ್ಮನವರು ಮೂರು ಕುರುಬ ಮಕ್ಕಳಿಗೆ ಶಾಂತಿಯ ಸಂದೇಶವನ್ನು ನೀಡಿದರು ಎಂದು ಅವರು ನೆನಪಿಸಿದರು. ಜಗತ್ತಿನ ಐದು ಖಂಡಗಳಿಂದ ಆಗಮಿಸಿರುವ ಯಾತ್ರಿಕರ ಉಪಸ್ಥಿತಿ ಇಂದಿನ ಮಾನವಕುಲಕ್ಕೆ ಸಮಾಧಾನ, ಏಕತೆ ಮತ್ತು ಭರವಸೆಯ ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು ಜಗತ್ತಿನಾದ್ಯಂತ ಯುದ್ಧದಿಂದ ಬಳಲುತ್ತಿರುವ ಜನರಿಗಾಗಿ ಶಾಂತಿ ಮತ್ತು ಸೌಹಾರ್ದತೆಯ ಪ್ರಾರ್ಥನೆಯನ್ನು ಮರಿಯಮ್ಮನವರ ನಿರ್ಮಲ ಹೃದಯಕ್ಕೆ ಸಮರ್ಪಿಸೋಣ ಎಂದು ಹೇಳಿದರು. “ಎಲ್ಲರಿಗೂ ನನ್ನ ಆಶೀರ್ವಾದ,” ಎಂದು ಅವರು ಹೇಳಿದರು.

1981ರ ಮೇ 13ರಂದು, ಸಂತ ದ್ವಿತೀಯ ಜಾನ್ ಪಾಲ್ ರವರು ಸಾಮಾನ್ಯ ಸಾರ್ವಜನಿಕ ಸಭೆಗೆ ಮುನ್ನ ತೆರೆದ ಜೀಪಿನಲ್ಲಿ ವಿಶ್ವಾಸಿಗಳನ್ನು ಅಭಿನಂದಿಸುತ್ತಿದ್ದಾಗ, ಸಮೀಪದಿಂದ ಗುಂಡಿನ ದಾಳಿ ನಡೆಯಿತು. ಅವರು ಗಂಭೀರವಾಗಿ ಗಾಯಗೊಂಡು ತಕ್ಷಣವೇ ಜೆಮೆಲ್ಲಿ ಆಸ್ಪತ್ರೆಗೆ ಕರೆದೊಯ್ಯಲ್ಪಟ್ಟರು. ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಮಾತನಾಡಿದ ಅವರು, ತಮ್ಮ ಮೇಲೆ ದಾಳಿ ಮಾಡಿದ ಮೆಹ್ಮೆತ್ ಅಲಿ ಅಗ್ಕಾ ರವರನ್ನು ಕ್ಷಮಿಸಿರುವುದಾಗಿ ಘೋಷಿಸಿದರು ಹಾಗೂ "ಟೋಟಸ್ ಟುಯಸ್ ಅಹಂ ಸಮ್" (“ನಾನು ಸಂಪೂರ್ಣವಾಗಿ ನಿನ್ನವನು”) ಎಂಬ ಪದಗಳ ಮೂಲಕ ಮತ್ತೆ ತಮ್ಮನ್ನು ಮರಿಯಮ್ಮನವರಿಗೆ ಸಮರ್ಪಿಸಿದರು.

13 ಮೇ 2026, 18:36