ಜಗದ್ಗುರು XIVನೇ ಲಿಯೋರವರು ಜಿನೋವಾ ಆರ್ಚ್‌ಡಯೋಸಿಸ್‌ನ ಯುವ ಕಥೊಲಿಕರನ್ನು ಸ್ವಾಗತಿಸಿದರು. ಜಗದ್ಗುರು XIVನೇ ಲಿಯೋರವರು ಜಿನೋವಾ ಆರ್ಚ್‌ಡಯೋಸಿಸ್‌ನ ಯುವ ಕಥೊಲಿಕರನ್ನು ಸ್ವಾಗತಿಸಿದರು.  (ANSA)

ದೃಢೀಕರಣ ಸಂಸ್ಕಾರದಲ್ಲಿ ದೊರೆಯುವ ಪವಿತ್ರಾತ್ಮನು ಯೇಸುವನ್ನು ಅನುಸರಿಸಲು ನಮಗೆ ಶಕ್ತಿಯನ್ನು ನೀಡುತ್ತಾನೆ ಎಂದು ಜಗದ್ಗುರುಗಳು ಹೇಳಿದರು.

ದೃಢೀಕರಣ ಸಂಸ್ಕಾರವನ್ನು ಸ್ವೀಕರಿಸಿದ ಬಳಿಕವೂ ಕ್ರಿಸ್ತನಿಗೆ ಹೊಂದಿರುವ ತಮ್ಮ ಉತ್ಸಾಹ ಮತ್ತು ಬದ್ಧತೆಯನ್ನು ಕಾಪಾಡಿಕೊಳ್ಳುವಂತೆ ಜಗದ್ಗುರು XIVನೇ ಲಿಯೋರವರು ಇಟಲಿಯ ಜೆನೋವಾ ಮಹಾಧರ್ಮಪ್ರಾಂತ್ಯದ ಯುವಜನರನ್ನು ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಉತ್ತರ ಇಟಲಿಯ ಜೆನೋವಾ ಮಹಾಧರ್ಮಪ್ರಾಂತ್ಯದ ಸುಮಾರು 1,000 ಯುವ ಕಥೋಲಿಕರು ರೋಮಿಗೆ ತೀರ್ಥಯಾತ್ರೆ ಕೈಗೊಂಡ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಶನಿವಾರ ಅವರನ್ನು ಭೇಟಿಯಾಗಿ, ಕ್ರಿಸ್ತನನ್ನು ಅನುಸರಿಸುವ ಅವರ ಆಸೆಯನ್ನು ಉತ್ತೇಜಿಸಿದರು.

ಈ ಯುವಕರು ಕ್ರೈಸ್ತ ಪ್ರವೇಶ ಸಂಸ್ಕಾರಗಳನ್ನು ಪೂರ್ಣಗೊಳಿಸುವ ದೃಢೀಕರಣ ಸಂಸ್ಕಾರವನ್ನು ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರು. ಈ ಸಂಸ್ಕಾರವು ದೀಕ್ಷಾಸ್ನಾನ ಪಡೆದ ವ್ಯಕ್ತಿಯನ್ನು ಪವಿತ್ರಾತ್ಮನ ವರದಿಂದ ಮುದ್ರಿಸುತ್ತದೆ.

ತಮ್ಮ ಸ್ವತಃಸ್ಫೂರ್ತ ಮಾತುಗಳಲ್ಲಿ ಜಗದ್ಗುರು ಲಿಯೋರವರು, ಪ್ರತಿಯೊಬ್ಬ ಧರ್ಮಾಧ್ಯಕ್ಷನಿಗೂ ಅತ್ಯಂತ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ ದೃಢೀಕರಣ ಸಂಸ್ಕಾರವನ್ನು ಆಚರಿಸುವುದು ಎಂದು ಹೇಳಿದರು, ಏಕೆಂದರೆ ಅದು “ನಿಜವಾಗಿಯೂ ಪವಿತ್ರಾತ್ಮನ ವರ” ಆಗಿದೆ.

“ಈ ಸಂಸ್ಕಾರವನ್ನು ಸ್ವೀಕರಿಸುವುದು ಅತ್ಯಂತ ಸುಂದರವಾದ ಅನುಭವ,” ಎಂದು ಅವರು ಹೇಳಿದರು. “ಪವಿತ್ರಾತ್ಮನ ಪರಿಪೂರ್ಣತೆ ನಮಗೆ ಉತ್ಸಾಹ, ಶಕ್ತಿ ಮತ್ತು ಯೇಸು ಕ್ರಿಸ್ತನನ್ನು ಅನುಸರಿಸುವ ಸಾಮರ್ಥ್ಯವನ್ನು ನೀಡುತ್ತದೆ. ಅದು ನಮಗೆ ಯಾವಾಗಲೂ ಪ್ರಭುವಿಗೆ ‘ಹೌದು’ ಎಂದು ಹೇಳಲು, ಧೈರ್ಯದಿಂದ ಆತನನ್ನು ಅನುಸರಿಸಲು ಮತ್ತು ಅನೇಕ ಬಾರಿ ಯೇಸುವಿನಿಂದ ದೂರ ಕೊಂಡೊಯ್ಯಲು ಪ್ರಯತ್ನಿಸುವ ಈ ಜಗತ್ತಿನಲ್ಲಿ ನಂಬಿಕೆಯನ್ನು ಬದುಕಲು ನೆರವಾಗುತ್ತದೆ.”

ಮುಂದಿನ ಭಾನುವಾರ, ಮೇ 24ರಂದು ಪವಿತ್ರಾತ್ಮರ ಭಾನುವಾರವಾಗಿದ್ದು, ಆ ದಿನ ಧರ್ಮ ಸಭೆಯ ಮೊದಲ ಶಿಷ್ಯರು ಪವಿತ್ರಾತ್ಮನನ್ನು ಸ್ವೀಕರಿಸಿ ದೇವರ ಪ್ರೀತಿಯನ್ನು ಸಾರಲು ಆರಂಭಿಸಿದ ಅನುಭವವನ್ನು ಸ್ಮರಿಸುತ್ತದೆ ಎಂದು ಜಗದ್ಗುರುಗಳು ನೆನಪಿಸಿದರು.

ದೃಢೀಕರಣ ಸಂಸ್ಕಾರ ಸ್ವೀಕರಿಸುವ ಪ್ರತಿಯೊಬ್ಬ ಯುವಕರೂ ಧರ್ಮ ಸಭೆಯ ಧ್ಯೇಯಕಾರ್ಯದಲ್ಲಿ ಪಾಲ್ಗೊಳ್ಳಲು ಕರೆಯಲ್ಪಟ್ಟವರಾಗಿದ್ದು, “ನಮ್ಮೊಳಗೆ ವಾಸಿಸುವ ಆತ್ಮನ” ಸಾಕ್ಷಿಯನ್ನು ತಮ್ಮ ಸ್ನೇಹಿತರು ಮತ್ತು ಕುಟುಂಬದವರ ನಡುವೆ ನೀಡಲು ಕಳುಹಿಸಲ್ಪಟ್ಟಿದ್ದಾರೆ ಎಂದು ಜಗದ್ಗುರುಗಳು ಹೇಳಿದರು.

ದೃಢೀಕರಣ ಸಂಸ್ಕಾರವು ಧರ್ಮಾಧ್ಯಕ್ಷರಿಗೆ ಮಹಾ ಸಂತೋಷವನ್ನು ನೀಡಿದರೂ, ಕೆಲವೊಮ್ಮೆ ಅದು ದುಃಖವನ್ನೂ ಉಂಟುಮಾಡುತ್ತದೆ ಎಂದು ಅವರು ಹೇಳಿದರು, ಏಕೆಂದರೆ ಅನೇಕ ಯುವಕರು ನಂತರ ಮತ್ತೆ ಧರ್ಮ ಸಭೆಗೆ ಕಾಲಿಡದೇ ತಮ್ಮ ಧರ್ಮಪ್ರಾಂತ್ಯಗಳಿಂದ ದೂರವಾಗುತ್ತಾರೆ.

ಆದ್ದರಿಂದ, ಯುವ ಕಥೋಲಿಕರು ಪವಿತ್ರಾತ್ಮನಿಂದ ದೊರೆಯುವ “ಸ್ಥೈರ್ಯದ ವರ”ಕ್ಕೆ ವಿಶೇಷ ಗಮನ ನೀಡಬೇಕು ಎಂದು ಜಗದ್ಗುರುಗಳು ಮನವಿ ಮಾಡಿದರು, ಅವರು ತಮ್ಮ ನಂಬಿಕೆಯನ್ನು ಒಟ್ಟಾಗಿ ಬದುಕಲು ಸಾಧ್ಯವಾಗಲಿ.

“ಈ ಸಮಯದಲ್ಲಿ ನೀವು ಅನುಭವಿಸಿದುದನ್ನು ಮರೆಯಬೇಡಿ,” ಎಂದು ಅವರು ಹೇಳಿದರು. “ರೋಮಿಗೆ ಬಂದು ಒಟ್ಟಾಗಿ ಆಚರಿಸಿದ ಮತ್ತು ಪ್ರಾರ್ಥಿಸಿದ ಸಂತೋಷ ನಿಮ್ಮ ಹೃದಯಗಳಲ್ಲಿ ಜೀವಂತವಾಗಿರಲಿ. ಯೇಸು ಕ್ರಿಸ್ತನಿಗೆ ನಿಷ್ಠಾವಂತ ಶಿಷ್ಯರಾಗಿಯೇ ಉಳಿದು, ನಂಬಿಕೆಯಲ್ಲಿ ಸ್ಥಿರವಾಗಿರಿ.”

ತಮ್ಮ ತಮ್ಮ ಧರ್ಮಪ್ರಾಂತ್ಯಗಳಿಗೆ ಮರಳಿದ ಬಳಿಕ, ಸಮುದಾಯ ಜೀವನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ವಿವಿಧ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಜಗದ್ಗುರುಗಳು ಯುವಕರನ್ನು ಆಹ್ವಾನಿಸಿದರು.

“ನಾವು ನಂಬಿಕೆಯಲ್ಲಿ ಒಬ್ಬರೇ ಬದುಕುವುದಿಲ್ಲ; ನಾವು  ಒಟ್ಟಾಗಿ ಬದುಕುತ್ತೇವೆ,” ಎಂದು ಅವರು ಹೇಳಿದರು. “ಸ್ನೇಹ ಮತ್ತು ಸಮುದಾಯದ ಸಂಬಂಧಗಳನ್ನು ಬೆಳೆಸುವುದು ಯೇಸುವಿನ ಶಿಷ್ಯರಾಗಿ ಸ್ಥಿರವಾಗಿರುವ ಒಂದು ಮಾರ್ಗವಾಗಿದೆ.”

ಕೊನೆಯಲ್ಲಿ, ಜೆನೋವಾದ ಯುವ ದೃಢೀಕರಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು ಲಿಯೋರವರು, ಪವಿತ್ರಾತ್ಮನ ಪರಿಪೂರ್ಣತೆಯನ್ನು ಸ್ವೀಕರಿಸುವ ಈ ಕೃಪೆಯ ಕ್ಷಣವನ್ನು ಆನಂದಿಸಿ, ಅದನ್ನು ಜೀವನಪೂರ್ತಿ ಉಳಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

“ನಿಮ್ಮಲ್ಲಿ ಪ್ರತಿಯೊಬ್ಬರೂ ಪ್ರಭುವಿಗೆ ಈ ಬದ್ಧತೆಯನ್ನು ಮತ್ತು ವಾಗ್ದಾನವನ್ನು ಮಾಡುವುದು ಬಹಳ ಮುಖ್ಯ,” ಎಂದು ಅವರು ಹೇಳಿದರು. “ಅಂದರೆ, ನೀವು ನಿಜವಾಗಿಯೂ ಆತನ ಸ್ನೇಹಿತರಾಗಿ, ಶಿಷ್ಯರಾಗಿ, ಧರ್ಮಪ್ರಚಾರಕರಾಗಿ ಮುಂದುವರಿಯಲು ಹಾಗೂ ನಂಬಿಕೆಯಲ್ಲಿ ಸ್ಥಿರವಾಗಿರಲು ಬಯಸುತ್ತೀರಿ ಎಂಬುದಾಗಿದೆ.”

16 ಮೇ 2026, 08:51