ಪೆಂಟೆಕೋಸ್ಟ್ ದಿನದಂದು ರೂಮಿ ಕ್ರೂಜ್ ಗ್ರಾಮದ ಮಹಿಳೆಯರೊಂದಿಗೆ. ಫೋಟೋ: ಮಿರಿಯಮ್ ಪಿನಾಟ್ಟಿ, ಪೆಂಟೆಕೋಸ್ಟ್ ದಿನದಂದು ರೂಮಿ ಕ್ರೂಜ್ ಗ್ರಾಮದ ಮಹಿಳೆಯರೊಂದಿಗೆ. ಫೋಟೋ: ಮಿರಿಯಮ್ ಪಿನಾಟ್ಟಿ,  (© Miriam Pinatti, MD)

ಅರ್ಜೆಂಟಿನಾದ ಪರ್ವತ ಪ್ರದೇಶಗಳಲ್ಲಿ ಧರ್ಮಸೇವೆ ಮತ್ತು ನಂಬಿಕೆಯನ್ನು ಜೀವಂತವಾಗಿಟ್ಟುಕೊಂಡಿರುವ ಧಾರ್ಮಿಕ ಸಹೋದರಿಯರು.

ಉತ್ತರ ಅರ್ಜೆಂಟಿನಾದಲ್ಲಿ, ಡಯೋಸಿಸನ್ ಮಿಷನರೀಸ್ ಸಿಸ್ಟರ್ಸ್ ಆಫ್ ಮೇರಿ ಮದರ್ ಆಫ್ ದಿ ಚರ್ಚ್ ಸಂಘದ ಧಾರ್ಮಿಕ ಸಹೋದರಿಯರು ಅಲ್ಲಿನ ಮೂಲನಿವಾಸಿ ಜನರ ನಡುವೆ ವಾಸಿಸುತ್ತಾ, ಅವರ ಸಂಸ್ಕೃತಿಯನ್ನು ಹಂಚಿಕೊಳ್ಳುತ್ತಾ, ಆತ್ಮೀಯ ಸೇವೆಯನ್ನು ನೀಡುತ್ತಾ ಹಾಗೂ ಅವರ ಪ್ರದೇಶದ ಸವಾಲುಗಳೊಂದಿಗೆ ಸಹಜೀವನ ನಡೆಸುತ್ತಾ, ಸೀನೋಡಲ್ ಮತ್ತು ಮಿಷನರಿ ಧರ್ಮ ಸಭೆ ಎಂಬ ಕನಸನ್ನು ವಾಸ್ತವವಾಗಿಸುತ್ತಿದ್ದಾರೆ.

ವ್ಯಾಟಿಕನ್ ವರದಿ

ಅರ್ಜೆಂಟಿನಾದ ಉತ್ತರ ಭಾಗದ ಜುಜುಯ್ ಪ್ರಾಂತ್ಯದ ಎತ್ತರದ ಪರ್ವತ ಪ್ರದೇಶಗಳಲ್ಲಿ ಸಾವಿರಾರು ವರ್ಷಗಳಿಂದ ಕೊಲ್ಲಾ ಮೂಲನಿವಾಸಿ ಜನರು ವಾಸಿಸುತ್ತಿದ್ದಾರೆ. ಸಮುದ್ರಮಟ್ಟದಿಂದ ಸುಮಾರು 3,500 ರಿಂದ 5,800 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಕಠಿಣ ಹವಾಮಾನ, ಬಲವಾದ ಗಾಳಿಗಳು, ತೀವ್ರ ಚಳಿ ಮತ್ತು ದೂರ ದೂರದಲ್ಲಿರುವ ಹಳ್ಳಿಗಳಿಗಾಗಿ ಪ್ರಸಿದ್ಧವಾಗಿದೆ. ಈ ಸವಾಲಿನ ನಡುವೆಯೂ ಅಲ್ಲಿನ ಜನರು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸುತ್ತಿದ್ದು, ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರೀತಿಯಿಂದ ಉಳಿಸಿಕೊಂಡಿದ್ದಾರೆ.

ಲಗುನಿಲ್ಲಾಸ್ ಡೆಲ್ ಫರಲ್ಲೋನ್ ಗ್ರಾಮದ ಸ್ಥಳೀಯ ಕಥೋಲಿಕ ಸಮುದಾಯದ ನಾಯಕ ಸರ್ಜಿಯೋ, “ನಗರಗಳಲ್ಲಿ ಎಲ್ಲವೂ ಹಣದ ಸುತ್ತ ತಿರುಗುತ್ತದೆ. ಆದರೆ ಇಲ್ಲಿ ಭೂಮಿ, ಪಶುಸಂಗೋಪನೆ ಮತ್ತು ಸರಳ ಜೀವನವೇ ಮುಖ್ಯ. ಈ ಮೌಲ್ಯಗಳನ್ನು ನನ್ನ ಪುತ್ರಿಯರಿಗೂ ಕಲಿಸಿದ್ದೇನೆ,” ಎಂದು ಹೇಳುತ್ತಾರೆ. ಅಲ್ಲಿನ ಜನರು ಸರಳತೆಯಲ್ಲೇ ಸಂತೋಷ ಕಂಡುಕೊಳ್ಳುತ್ತಾ, ಕಷ್ಟಗಳ ನಡುವೆಯೂ ತಮ್ಮ ನೆಲದೊಂದಿಗೆ ಗಾಢ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ.

ಕೊಲ್ಲಾ ಜನರು ತಮ್ಮ ಆಂಡಿಯನ್ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಹಲವು ವರ್ಷಗಳ ಹೋರಾಟ ನಡೆಸಬೇಕಾಯಿತು. ಅವರ ಹಕ್ಕುಗಳಿಗೆ ಅರ್ಜೆಂಟಿನಾ ಸಂವಿಧಾನದಲ್ಲಿ ಮಾನ್ಯತೆ ದೊರಕಿದ್ದು 1994ರಲ್ಲಿ. ಈ ಗುರುತಿನ ಹಿಂದೆ ಅನೇಕ ಬಾರಿ ಅವರು ಅನುಭವಿಸಿದ ಭೇದಭಾವ ಮತ್ತು ನಿರ್ಲಕ್ಷ್ಯದ ನೋವು ಅಡಗಿದೆ. ಆದರೂ ಅವರು ತಮ್ಮ ಮೂಲ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಬದುಕುತ್ತಿದ್ದಾರೆ.

2012ರಿಂದ ಡಯೋಸಿಸನ್ ಮಿಷನರೀಸ್ ಸಿಸ್ಟರ್ಸ್ ಆಫ್ ಮೇರಿ ಮದರ್ ಆಫ್ ದಿ ಚರ್ಚ್ ಸಂಘದ ಧಾರ್ಮಿಕ ಸಹೋದರಿಯರು ಈ ಪ್ರದೇಶದ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಜನರೊಂದಿಗೆ ಬದುಕುತ್ತಾ, ಅವರ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುತ್ತಾ, ಆತ್ಮೀಯ ಸೇವೆ ಮತ್ತು ಸಮುದಾಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. “ಈ ಜನರ ಜೀವನಶೈಲಿ ಮತ್ತು ಲೋಕದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ವರ್ಷಗಳೇ ಬೇಕಾಯಿತು,” ಎಂದು ಸಹೋದರಿ ಆಂಡ್ರಿಯಾ ಲಾಂಡೆಟ್ಚೆವೆರಿ ಹೇಳುತ್ತಾರೆ.

ಇಂದು ಈ ಧಾರ್ಮಿಕ ಸಹೋದರಿಯರು ಯಾಜಕರಿಲ್ಲದ ಸುಮಾರು 50 ಹಳ್ಳಿಗಳ ಎರಡು ಗ್ರಾಮೀಣ ಧರ್ಮ ಕೇಂದ್ರಗಳ ಧರ್ಮಾಧ್ಯಕ್ಷೀಯ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಜನರ ಅಗತ್ಯಗಳನ್ನು ಆಲಿಸಿ, ಅವರೊಂದಿಗೆ ನಡೆದು, ಮಹಿಳೆಯರ ಕೊಡುಗೆಯ ಮೂಲಕ ಧರ್ಮ ಸಭೆಯನ್ನು ಇನ್ನಷ್ಟು ಜನಪರ ಮತ್ತು ಮೂಲನಿವಾಸಿಗಳೊಂದಿಗೆ ಹತ್ತಿರವಾಗಿಸುವ ಕಾರ್ಯದಲ್ಲಿ ಅವರು ನಿರಂತರ ತೊಡಗಿಸಿಕೊಂಡಿದ್ದಾರೆ.

ಜಗದ್ಗುರು XIVನೇ ಲಿಯೋರವರು ತಮ್ಮ ಮೊದಲ ಪ್ರೇಷಿತರ ಪ್ರಬೋಧನೆ ಡಿಲೆಕ್ಸಿ ತೆಯಲ್ಲಿ ಬಡವರು ಕಷ್ಟಕರ ಪರಿಸ್ಥಿತಿಗಳಲ್ಲಿ ಬದುಕುತ್ತಾ ಪರಸ್ಪರ ಸಹಾಯ ಮಾಡುವ ಮೂಲಕ ಅಮೂಲ್ಯ ಜೀವನ ಪಾಠಗಳನ್ನು ಕಲಿತಿದ್ದಾರೆ ಎಂದು ಹೇಳಿದ್ದಾರೆ. ಇದೇ ಆತ್ಮವನ್ನು ಪ್ರತಿಬಿಂಬಿಸುವಂತೆ, ಮೇರಿ ಮದರ್ ಆಫ್ ದ ಚರ್ಚ್ ಸಂಘದ ಮಿಷನರಿ ಸಹೋದರಿಯರು ಸೀನೋಡಲ್ ಧರ್ಮ ಸಭೆಯ ಜೀವಂತ ಸಾಕ್ಷಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.        

15 ಮೇ 2026, 13:18