ಜಗದ್ಗುರು ಲಿಯೋರವರಿಗೆ ಕಾರ್ಡಿನಲ್ ಟ್ಷೆರ್ರಿಗ್ ಹಾಗೂ ಅವರ ಧರ್ಮ ಸಭೆಯ ಮೇಲಿನ ಅಪಾರ ಪ್ರೀತಿ ನೆನಪಾಗಿದೆ.
ವ್ಯಾಟಿಕನ್ ವರದಿ
ಸ್ವಿಟ್ಜರ್‌ಲ್ಯಾಂಡ್‌ನ ಕಾರ್ಡಿನಲ್ ಪೌಲ್ ಎಮಿಲ್ ಟ್ಷೆರ್ರಿಗ್ ರವರ ನಿಧನದ ಸುದ್ದಿಯನ್ನು ತಿಳಿದು ಜಗದ್ಗುರು XIVನೇ ಲಿಯೋರವರು “ಆಳವಾದ ಸಂತಾಪ” ವ್ಯಕ್ತಪಡಿಸಿದ್ದಾರೆ. ಇಟಲಿ ಮತ್ತು ಸಾನ್ ಮರಿನೋ ಗಣರಾಜ್ಯಕ್ಕೆ ಮಾಜಿ ಪ್ರೇಷಿತರ ರಾಯಭಾರಿಯಾಗಿದ್ದ ಅವರು, ಮೇ 12 ಮಂಗಳವಾರ 79ನೇ ವಯಸ್ಸಿನಲ್ಲಿ ವಿಧಿವಶರಾದರು.
ಒಂದು ಟೆಲಿಗ್ರಾಂ ಸಂದೇಶದಲ್ಲಿ, ಜಗದ್ಗುರುಗಳು ಕಾರ್ಡಿನಲ್ ರವರ ಕುಟುಂಬದವರಿಗೆ ಹಾಗೂ ಟ್ಷೆರ್ರಿಗ್ ಅವರು ಸೇವೆ ಸಲ್ಲಿಸಿದ್ದ ಸಿಯೋನ್ ಧರ್ಮಪ್ರಾಂತ್ಯದ ಸಮುದಾಯಕ್ಕೆ ತಮ್ಮ ಸಂತಾಪವನ್ನು ತಿಳಿಸಿದರು. ವಿವಿಧ ದೇಶಗಳಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ಹಾಗೂ ಬಳಿಕ ಜಗದ್ಗುರುಗಳ ಅಧಿಕಾರ ಸ್ಥಳದ ಹಲವು ಡಿಕಾಸ್ಟರಿಗಳ ಸದಸ್ಯರಾಗಿ ಅವರು ಸಲ್ಲಿಸಿದ “ನಿಷ್ಠಾವಂತ ಸೇವೆ”ಯನ್ನು ಜಗದ್ಗುರುಗಳು ಕೃತಜ್ಞತೆಯಿಂದ ಸ್ಮರಿಸಿದರು.
ಕಾರ್ಡಿನಲ್ ರವರು “ಉದಾರ ಮನೋಭಾವದಿಂದ ಸೇವೆ ಸಲ್ಲಿಸಿದರು” ಹಾಗೂ “ಧಮ೯ಸಭೆ ಮತ್ತು ಪೇತ್ರನ ಉತ್ತರಾಧಿಕಾರಿಯ ಮೇಲಿನ ಪ್ರೀತಿಗೆ ಸಾಕ್ಷಿಯಾದರು” ಎಂದು ಜಗದ್ಗುರುಗಳು ನೆನಪಿಸಿದರು.
ಕೊನೆಯಲ್ಲಿ, “ಈ ಸುವಾರ್ತೆಯ ಸೇವಕನ ಆತ್ಮವನ್ನು” ದೇವರಿಗೆ ಒಪ್ಪಿಸುತ್ತಿರುವುದಾಗಿ ಜಗದ್ಗುರು ಲಿಯೋರವರ ಸಂದೇಶದಲ್ಲಿ ತಿಳಿಸಿದ್ದಾರೆ. “ಅಸ್ತಂಗತವಾಗದ ಬೆಳಕಿನ ಲೋಕಕ್ಕೆ ದೇವರು ಅವರನ್ನು ಬರಮಾಡಿಕೊಳ್ಳಲಿ” ಎಂದು ಪ್ರಾರ್ಥಿಸಿ, ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಕೋರಿದರು. ಇದೇ ವೇಳೆ, “ಈ ಅಕಸ್ಮಾತ್ ನಷ್ಟದಿಂದ ದುಃಖಿತಗೊಂಡಿರುವ ಎಲ್ಲರಿಗೂ” ಪ್ರೇಷಿತರ ಆಶೀರ್ವಾದವನ್ನು ಕಳುಹಿಸಿದರು.
ರಾಯಭಾರಿಗಳ ಸೇವೆಯಲ್ಲಿ ದೀರ್ಘ ಪಯಣ
ಕಾರ್ಡಿನಲ್ ಪೌಲ್ ಎಮಿಲ್ ಟ್ಷೆರ್ರಿಗ್ ರವರು 1947ರ ಫೆಬ್ರವರಿ 3ರಂದು ಸ್ವಿಟ್ಜರ್‌ಲ್ಯಾಂಡ್‌ನ ಉಂಟರ್‌ಎಮ್ಸ್‌ನಲ್ಲಿ ಜನಿಸಿದರು.
1974ರಲ್ಲಿ ಅವರು ಯಾಜಕರಾಗಿ ಅಭಿಷೇಕಿತರಾದರು. ನಂತರ ಪೊಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಕಾನನ್ ಕಾನೂನಿನಲ್ಲಿ ಡಾಕ್ಟರೇಟ್ ಪದವಿ ಪಡೆದರು.
1978ರಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಅವರನ್ನು ಜಗದ್ಗುರುಗಳ ಅಧಿಕಾರ ಸ್ಥಳದ ರಾಜತಾಂತ್ರಿಕ ಸೇವೆಗೆ ಪ್ರೇಷಿತರ ರಾಯಭಾರಿ ಕಾರ್ಯದರ್ಶಿಯಾಗಿ ನೇಮಿಸಿದರು. ಅವರು ಉಗಾಂಡಾ, ದಕ್ಷಿಣ ಕೊರಿಯಾ, ಮಂಗೋಲಿಯಾ ಮತ್ತು ಬಾಂಗ್ಲಾದೇಶಗಳಲ್ಲಿ ಸೇವೆ ಸಲ್ಲಿಸಿದರು.
1996ರಲ್ಲಿ ಅವರನ್ನು ವೋಲಿ ಎಂಬ ಟಿಟ್ಯುಲರ್ ಮಹಾಧರ್ಮಾಧ್ಯಕ್ಷರಾಗಿ ಹಾಗೂ ಬುರುಂಡಿಗೆ ಪ್ರೇಷಿತರ ರಾಯಭಾರಿಯಾಗಿ ನೇಮಿಸಲಾಯಿತು. ಅದೇ ವರ್ಷದ ಜೂನ್ 27ರಂದು ಕಾರ್ಡಿನಲ್ ಕಾರ್ಯದರ್ಶಿ ಆಫ್ ಸ್ಟೇಟ್ ಏಂಜೆಲೋ ಸೋಡಾನೋ ರವರ ಅಧ್ಯಕ್ಷತೆಯಲ್ಲಿ ಅವರ ಮಹಾಧರ್ಮಾಧ್ಯಕ್ಷರ ಅಭಿಷೇಕ ನಡೆಯಿತು.
ನಂತರ ಧರ್ಮ ಸಭೆಯಲ್ಲಿನ ಅವರ ಸೇವೆಯ ಫಲವಾಗಿ, 2000ರಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ, ಡೊಮಿನಿಕನ್ ರಿಪಬ್ಲಿಕ್, ಜಮೈಕಾ, ಗ್ರೆನೇಡಾ, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನೇಡೈನ್ಸ್ ಹಾಗೂ ಬಹಾಮಾಸ್ ದೇಶಗಳಿಗೆ ರಾಯಭಾರಿಯಾಗಿ ನೇಮಕಗೊಂಡರು.
2001ರಿಂದ ಅವರು ಬಾರ್ಬಡೋಸ್, ಆಂಟಿಗುವಾ ಮತ್ತು ಬಾರ್ಬುಡಾ, ಸುರಿನಾಮ್ ಹಾಗೂ ಸಂತ ಕಿಟ್ಸ್ ಮತ್ತು ನೆವಿಸ್ ದೇಶಗಳಲ್ಲಿಯೂ ಸೇವೆ ಸಲ್ಲಿಸಿದರು.
2004ರಲ್ಲಿ ಅವರು ದಕ್ಷಿಣ ಕೊರಿಯಾ ಮತ್ತು ಮಂಗೋಲಿಯಾದ ರಾಯಭಾರಿಗಳ ಜವಾಬ್ದಾರಿಯನ್ನು ವಹಿಸಿಕೊಂಡರು. ಬಳಿಕ ನಾರ್ಡಿಕ್ ದೇಶಗಳು, ಅರ್ಜೆಂಟಿನಾ ಮತ್ತು ಕೊನೆಯಲ್ಲಿ 2024ರವರೆಗೆ ಇಟಲಿ ಹಾಗೂ ಸಾನ್ ಮರಿನೋಗೆ ನುಂಚಿಯೋ ಆಗಿ ಸೇವೆ ಸಲ್ಲಿಸಿದರು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಇಟಾಲಿಯನೇತರ ವ್ಯಕ್ತಿ ಇವರಾಗಿದ್ದರು.
2023ರ ಸೆಪ್ಟೆಂಬರ್ 30ರಂದು ನಡೆದ ಕನ್ಸಿಸ್ಟರಿಯಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಅವರನ್ನು ಕಾರ್ಡಿನಲ್ ಆಗಿ ಘೋಷಿಸಿದರು.
