ಜಗದ್ಗುರುಗಳು: ಗಾಜಾದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ನೆರವಾಗಿರಿ ಮತ್ತು ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸಿ.
ವ್ಯಾಟಿಕನ್ ವರದಿ
ಮಂಗಳವಾರ ಸಂಜೆ ಕಾಸ್ಟೆಲ್ ಗಾಂಡೋಲ್ಫೊದಲ್ಲಿರುವ ತಮ್ಮ ನಿವಾಸದ ಹೊರಭಾಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಪೋಪ್ ಲಿಯೋ, ಗಾಜಾದ ಜನರಿಗೆ ನೆರವಾಗುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮತ್ತೊಮ್ಮೆ ಮನವಿ ಮಾಡಿದರು. “ಎಲ್ಲರಿಗೂ” ಮಾನವ ಹಕ್ಕುಗಳನ್ನು ಗೌರವಿಸಬೇಕು ಎಂದು ಅವರು ಒತ್ತಿ ಹೇಳಿದರು.
ಗಾಜಾಕ್ಕೆ ತೆರಳುತ್ತಿದ್ದ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾದ ಕಾರ್ಯಕರ್ತರ ಬಗ್ಗೆ ಕೇಳಲಾದ ಪ್ರಶ್ನೆಗೆ ಕೆಲವರಿಗೆ ಕೈಕಡಿವಾಣ ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಇರಿಸಲಾಗಿದೆ ಎಂಬ ವರದಿಗಳ ಹಿನ್ನೆಲೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಪ್ರತಿಯೊಬ್ಬರ ಮಾನವ ಹಕ್ಕುಗಳನ್ನು ಗೌರವಿಸುವಂತೆ ನಾವು ನಮ್ಮ ಮನವಿಯನ್ನು ಪುನರುಚ್ಚರಿಸಬೇಕು ಎಂದು ಹೇಳಿದರು.
ಮುಂದೆ ಮಾತನಾಡಿದ ಅವರು, ಗಾಜಾದ ನಾಗರಿಕರು ಇನ್ನೂ ಅನುಭವಿಸುತ್ತಿರುವ ದುಃಖದ ಪರಿಸ್ಥಿತಿಯನ್ನು ವಿಷಾದಿಸಿದರು. “ದುರದೃಷ್ಟವಶಾತ್, ಗಾಜಾದ ಜನರಿಗೆ ಇನ್ನೂ ಮಾನವೀಯ ನೆರವು ತಲುಪುತ್ತಿಲ್ಲ” ಎಂದು ಅವರು ಹೇಳಿದರು. ಈ ಪರಿಸ್ಥಿತಿ ಪ್ರತಿಭಟನೆಗಳಿಗೆ ಕಾರಣವಾಗುತ್ತಿದೆ ಮತ್ತು ಅದರ ಪರಿಣಾಮವಾಗಿ ಫ್ಲೋಟಿಲ್ಲಾದಲ್ಲಿ ಭಾಗಿಯಾಗಿದ್ದವರಂತಹವರಿಗೂ ಸಂಕಷ್ಟಗಳು ಎದುರಾಗುತ್ತಿವೆ ಎಂದು ಜಗದ್ಗುರುಗಳು ವಿವರಿಸಿದರು.
“ಇದನ್ನು ಕೇವಲ ಆಹ್ವಾನವಾಗಿ ಮಾತ್ರವಲ್ಲ, ನಿಜವಾದ ಮನವಿಯಾಗಿ ನಾನು ಮತ್ತೊಮ್ಮೆ ಪುನರುಚ್ಚರಿಸಲು ಬಯಸುತ್ತೇನೆ,” ಎಂದು ಅವರು ಮುಂದುವರಿಸಿದರು. ಗಾಜಾದ ಜನರಿಗೆ ನೆರವಾಗಲು, ಅವರೊಂದಿಗೆ ನಿಲ್ಲಲು ಮತ್ತು ಪುನರ್‌ನಿರ್ಮಾಣ ಕಾರ್ಯಗಳನ್ನು ಆರಂಭಿಸಲು ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಕರೆ ನೀಡಿದರು. “ಜನರು ನಿಜವಾಗಿಯೂ ನೋವು ಅನುಭವಿಸುತ್ತಿದ್ದಾರೆ,” ಎಂದು ಜಗದ್ಗುರುಗಳು ಹೇಳಿದರು. “ಅವರು ಇನ್ನೂ ಬಹಳ ಸಂಕಷ್ಟದಲ್ಲೇ ಬದುಕುತ್ತಿದ್ದಾರೆ” ಎಂದು ಕೂಡ ಅವರು ಸೇರಿಸಿದರು.
ನಿರಾಯುಧ ಶಾಂತಿ ಕಾರ್ಯಕರ್ತರನ್ನು ಹಿಂಸೆಯಿಂದ ಎದುರಿಸುವುದರ ಅರ್ಥವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಜಗದ್ಗುರು ಲಿಯೋರವರು, ಇದರಿಂದ ಇನ್ನಷ್ಟು ದ್ವೇಷ ಹೆಚ್ಚುವ ಅಪಾಯವಿದೆ ಎಂದು ಎಚ್ಚರಿಸಿದರು. “ನಾವು ಇನ್ನಷ್ಟು ದ್ವೇಷವನ್ನು ಪ್ರಚೋದಿಸುತ್ತಿದ್ದೇವೆ,” ಎಂದು ಅವರು ಹೇಳಿದರು. “ಯಾವುದೇ ಪಾಳಯದಿಂದ ಬಂದರೂ ಹಿಂಸಾಚಾರ ಸಹಾಯ ಮಾಡುವುದಿಲ್ಲ” ಎಂದೂ ಅವರು ಹೇಳಿದರು. ಬದಲಾಗಿ, ಮಾತುಕತೆಗಳಿಗೆ ಮರಳುವುದು ಮತ್ತು ಸಂವಾದದ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅಗತ್ಯವಾಗಿದೆ ಎಂದು ಅವರು ಒತ್ತಿಹೇಳಿದರು. ಜೊತೆಗೆ “ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು” ಅತ್ಯಂತ ಮುಖ್ಯ ಎಂದು ತಿಳಿಸಿದರು.
“ನಿರಾಯುಧ” ಕೃತಕ ಬುದ್ಧಿಮತ್ತೆ
ಆಧುನಿಕ ಯುದ್ಧಗಳಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಪಾತ್ರದ ಕುರಿತೂ ಜಗದ್ಗುರುಗಳು ಚಿಂತನೆ ವ್ಯಕ್ತಪಡಿಸಿದರು. ಮಾನವ ಜೀವದ ಮೌಲ್ಯವನ್ನು ಕಡೆಗಣಿಸುವ ತಂತ್ರಜ್ಞಾನಗಳ ಬಗ್ಗೆ ಅವರು ಎಚ್ಚರಿಕೆ ನೀಡಿದರು.
ಲೆಬನಾನ್ ಸೇರಿದಂತೆ ಇತ್ತೀಚಿನ ಸಂಘರ್ಷಗಳನ್ನು ಉಲ್ಲೇಖಿಸಿದ ಜಗದ್ಗುರುಗಳು, “ಇಂದಿನ ಯುದ್ಧಗಳು ಕೃತಕ ಬುದ್ಧಿಮತ್ತೆಯ ಮೂಲಕ ನಡೆಯುತ್ತಿವೆ; ಇದರಲ್ಲಿ ಮಾನವ ಜೀವಗಳ ಬಗ್ಗೆ ಯೋಚನೆಯೇ ಇಲ್ಲ. ಆದರೆ ಮಾನವರೇ ಈ ಎಲ್ಲದರ ನಿಜವಾದ ಬಲಿಪಶುಗಳು” ಎಂದು ಹೇಳಿದರು.
ಈ ಹಿನ್ನೆಲೆದಲ್ಲಿ, ಜಗದ್ಗುರುಗಳು ಮತ್ತೊಮ್ಮೆ ಶಾಂತಿಗಾಗಿ ಮನವಿ ಮಾಡಿದರು ಮತ್ತು “ನಿರಾಯುಧ ಕೃತಕ ಬುದ್ಧಿಮತ್ತೆ” ಯನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಆಂಥ್ರೋಪಿಕ್ ಜೊತೆ ಸಂವಾದ
ತಮ್ಮ ಇತ್ತೀಚಿನ ಎನ್ಸೈಕ್ಲಿಕಲ್ ಪ್ರಕಟವಾದ ನಂತರ ವ್ಯಾಟಿಕನ್ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪನಿಗಳೊಂದಿಗೆ ಹೇಗೆ ಸಂವಾದ ಮುಂದುವರಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ಈಗಾಗಲೇ ಸಂವಾದ ನಡೆಯುತ್ತಿದೆ ಎಂದು ಬಹಿರಂಗಪಡಿಸಿದರು.
ಅವರು, ಸಮಗ್ರ ಮಾನವ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಡಿಕಾಸ್ಟರಿ ಮತ್ತು ಎಐ ಸಂಸ್ಥೆಯಾದ ಆಂಥ್ರೊಪಿಕ್ ನಡುವಿನ ಸಹಕಾರದ ಬಗ್ಗೆ ವಿವರಿಸಿದರು. “ಇದು ಒಂದು ರೀತಿಯ ಸಂಯುಕ್ತ ಕಾರ್ಯವಾಗಿತ್ತು,” ಎಂದು ಅವರು ಹೇಳಿದರು. “ನಿನ್ನೆ ಎರಡೂ ಪಾಳಯಗಳಿಂದ ಆಹ್ವಾನವೂ ವ್ಯಕ್ತವಾಯಿತು” ಎಂದರು.
“ಸಂವಾದವನ್ನು ಮುಂದುವರಿಸುವುದು ಮತ್ತು ನಿಜವಾಗಿಯೂ ‘ನಿರಾಯುಧ ಕೃತಕ ಬುದ್ಧಿಮತ್ತೆ’ ಯನ್ನು ಹುಡುಕುವುದು ಅತ್ಯಂತ ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಜಗದ್ಗುರುಗಳು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
