ಜಗದ್ಗುರು XIVನೇ ಲಿಯೋರವರು: ಧರ್ಮ ಸಭೆಯ ಫಲಪ್ರದತೆ ಸಂಖ್ಯೆಗಳ ಆಧಾರದ ಮೇಲೆ ಅಳೆಯಲ್ಪಡಬಾರದು ಎಂದು ಬಿಷಪ್‌ಗಳಿಗೆ ಜಗದ್ಗುರುಗಳ ಕರೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ನಡೆದ ಇಟಾಲಿಯನ್ ಬಿಷಪ್ ಸಮ್ಮೇಳನದ 82ನೇ ಸಾಮಾನ್ಯ ಮಹಾಸಭೆಯಲ್ಲಿ ಭಾಗವಹಿಸಿದ ಬಿಷಪ್‌ಗಳನ್ನು ಭೇಟಿಯಾಗಿ, ಇಟಲಿಯ ಧರ್ಮ ಸಭೆಗಳು, ಯಾಜಕರು, ಉಪ ಯಾಜಕರು, ಸಮರ್ಪಿತ ಜೀವನ ನಡೆಸುವವರು, ಕುಟುಂಬಗಳು ಹಾಗೂ ತಮ್ಮ ಹೃದಯದಲ್ಲಿ ದೇವರಿಗಾಗಿ ದಾಹವನ್ನು ಹೊತ್ತಿರುವ ಎಲ್ಲರಿಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಇಂದಿನ ಸಂಕೀರ್ಣತೆಯಿಂದ ಕೂಡಿದ ಜಗತ್ತಿನಲ್ಲಿಯೂ ದೇವರ ಕೃಪೆಯ ಕಾರ್ಯವನ್ನು ತಾವು ಪೊಂಪೆಯಿ, ನೆಪಲ್ಸ್ ಮತ್ತು ಅಚೆರ್ರಾ ಪ್ರವಾಸಗಳಲ್ಲಿ ನೇರವಾಗಿ ಕಂಡಿರುವುದಾಗಿ ಹೇಳಿದರು.
ಜನರ ಜೀವನದಲ್ಲಿ ಆಯಾಸ, ವಿಭಜನೆ ಮತ್ತು ಏಕಾಂತತೆಯ ಅನೇಕ ಲಕ್ಷಣಗಳು ಕಂಡುಬರುತ್ತಿವೆ ಎಂದು ಜಗದ್ಗುರುಗಳು ಗಮನಿಸಿದರು. ಕೆಲವೊಮ್ಮೆ ಧರ್ಮ ಸಭೆಯ ಸಮುದಾಯಗಳಲ್ಲಿ ನಂಬಿಕೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಮತ್ತು ಯುವಜನರನ್ನು ತೊಡಗಿಸಿಕೊಳ್ಳುವುದು ಸವಾಲಾಗಿ ಕಾಣಬಹುದು. ಆದಾಗ್ಯೂ, “ಸುವಾರ್ತೆ ನಮ್ಮನ್ನು ಎಚ್ಚರಗೊಳಿಸುತ್ತದೆ” ಎಂದು ಅವರು ಒತ್ತಿಹೇಳಿದರು.
ಲೂಕನ ಸುವಾರ್ತೆಯ “ಬೆಳೆ ಬಹಳ ಇದೆ, ಆದರೆ ಕೂಲಿಕಾರರು ಕಡಿಮೆ” ಎಂಬ ವಾಕ್ಯವನ್ನು ಉಲ್ಲೇಖಿಸಿದ ಜಗದ್ಗುರುಗಳು, ದೇವರು ಪ್ರತಿದಿನವೂ ಮಾನವರ ಹೃದಯಗಳಲ್ಲಿ ಅರ್ಥಪೂರ್ಣ ಜೀವನ ಮತ್ತು ಮುಕ್ತಿಯನ್ನು ಹುಡುಕುವ ಆಸೆಯನ್ನು ಬಿತ್ತುತ್ತಿದ್ದಾರೆ ಎಂದು ಹೇಳಿದರು. ಆದ್ದರಿಂದ ಧರ್ಮ ಸಭೆ ಕೇವಲ ಅಂಕಿಅಂಶಗಳ ಬಗ್ಗೆ ಚಿಂತಿಸದೆ, ಜೀವಿತೋದ್ಧಾರ ಹೊಂದಿದ ಕ್ರಿಸ್ತನ ಕಣ್ಣುಗಳಿಂದ ದೇವರು ಸಿದ್ಧಪಡಿಸುತ್ತಿರುವ ಫಲವತ್ತಾದ ಬೆಳೆಯನ್ನು ನೋಡಲು ಕಲಿಯಬೇಕು ಎಂದರು.
ಜಗದ್ಗುರು ಲಿಯೋರವರ ಪ್ರಕಾರ, ಧರ್ಮ ಸಭೆಯ ಕೇಂದ್ರಬಿಂದು ಯಾವಾಗಲೂ ಸುವಾರ್ತೆಯಾಗಿರಬೇಕು. ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರಿಂದ ಹಿಡಿದು ಜಗದ್ಗುರು ಫ್ರಾನ್ಸಿಸ್ ವರೆಗೆ ಧರ್ಮ ಸಭೆಯ ಇತಿಹಾಸದಲ್ಲಿ ಇದೇ ಧಾರೆ ಮುಂದುವರಿದಿದೆ. ನಂಬಿಕೆ ಎಂದರೆ ಕೇವಲ ನಿಯಮವಲ್ಲ, ಅದು ಜೀವಂತನಾದ ಕ್ರಿಸ್ತನೊಂದಿಗೆ ನಡೆಯುವ ವೈಯಕ್ತಿಕ ಭೇಟಿಯಾಗಿದೆ. ಆದ್ದರಿಂದ ಬಿಷಪ್‌ಗಳು ತಮ್ಮ ಬೋಧನೆ, ಆರಾಧನೆ, ಸೇವೆ ಮತ್ತು ಸಮುದಾಯ ಜೀವನದ ಮೂಲಕ ಜನರಿಗೆ ದೇವರ ನಿಜವಾದ ಮುಖವನ್ನು ತೋರಿಸಬೇಕೆಂದು ಜಗದ್ಗುರುಗಳು ಕರೆ ನೀಡಿದರು.
ನಂಬಿಕೆಯನ್ನು ಹಸ್ತಾಂತರಿಸುವಲ್ಲಿ ಸಮುದಾಯಗಳ ಪಾತ್ರ ಅತ್ಯಂತ ಮುಖ್ಯವೆಂದು ಜಗದ್ಗುರುಗಳು ಹೇಳಿದರು. ಪ್ರಾರ್ಥಿಸುವ, ದೇವರ ವಾಕ್ಯವನ್ನು ಆಲಿಸುವ, ಸಂಸ್ಕಾರದ ಜೀವನದ ಕೇಂದ್ರವಾಗಿಟ್ಟುಕೊಳ್ಳುವ ಮತ್ತು ಬಡವರನ್ನು ಸಹೋದರ-ಸಹೋದರಿಯರಂತೆ ಸ್ವೀಕರಿಸುವ ಸಮುದಾಯಗಳಲ್ಲಿಯೇ ನಂಬಿಕೆ ಬೆಳೆಯುತ್ತದೆ. ಇದೇ ಸೀನೋಡಲ್ ಧರ್ಮ ಸಭೆಯ ಅರ್ಥ ಪ್ರತಿಯೊಬ್ಬರೂ ಪವಿತ್ರಾತ್ಮನಿಂದ ಪಡೆದ ವರವನ್ನು ಧರ್ಮ ಸಭೆಯ ಸಾಮೂಹಿಕ ಬೆಳವಣಿಗೆಗಾಗಿ ಹಂಚಿಕೊಳ್ಳುವುದು.
ಕೊನೆಯಲ್ಲಿ, ಧರ್ಮ ಸಭೆಯ ಫಲಪ್ರದತೆಯನ್ನು ಸಂಖ್ಯೆಗಳು, ಜನಪ್ರಿಯತೆ ಅಥವಾ ಪ್ರಭಾವದ ಆಧಾರದ ಮೇಲೆ ಅಳೆಯಬಾರದು ಎಂದು ಜಗದ್ಗುರುಗಳು ಬಿಷಪ್‌ಗಳಿಗೆ ತಿಳಿಸಿದರು. ಬದಲಾಗಿ, ಕ್ರೈಸ್ತ ಜೀವನದ ಆಳವಾದ ರೂಪುಗೊಳಿಸುವಿಕೆ, ಸ್ವಾಗತಿಸುವ ಮತ್ತು ಮಿಷನರಿ ಮನೋಭಾವದ ಧರ್ಮ ಕೇಂದ್ರಗಳು, ಕುಟುಂಬಗಳಿಗೆ ಬೆಂಬಲ ಹಾಗೂ ಯುವಜನರ ಪ್ರಶ್ನೆಗಳನ್ನು ಪ್ರೀತಿಯಿಂದ ಆಲಿಸುವ ಮನೋಭಾವಕ್ಕೆ ಆದ್ಯತೆ ನೀಡಬೇಕು ಎಂದರು. ಇಟಲಿಯ ಬಿಷಪ್‌ಗಳ ಸೇವೆಯನ್ನು ಧರ್ಮ ಸಭೆಯ ತಾಯಿಯಾದ ಮರಿಯಮ್ಮನಿಗೆ ಸಮರ್ಪಿಸಿ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
