ಜಗದ್ಗುರು XIVನೇ ಲಿಯೋರವರು ಐರ್ಲೆಂಡ್ ಪ್ರಧಾನಮಂತ್ರಿ ಮೈಕೇಲ್ ಮಾರ್ಟಿನ್ ರವರನ್ನು ಭೇಟಿಯಾದರು.
ವ್ಯಾಟಿಕನ್ ವರದಿ
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಶುಕ್ರವಾರ ಕೆಳಗಿನ ಪ್ರಕಟಣೆಯನ್ನು ಹೊರಡಿಸಿತು.
“ಇಂದು ಬೆಳಿಗ್ಗೆ, ಪರಮಪೂಜ್ಯ ಜಗದ್ಗುರು XIVನೇ ಲಿಯೋರವರು ಐರ್ಲೆಂಡ್‌ನ ತಾವಿಶಕ್ (ಪ್ರಧಾನಮಂತ್ರಿ) ಮಹಾಮಹಿಮ ಶ್ರೀ ಮೈಕೇಲ್ ಮಾರ್ಟಿನ್ ರವರನ್ನು ವ್ಯಾಟಿಕನ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಅವರು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪಾರೊಲಿನ್ ರವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಾಷ್ಟ್ರಗಳ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಸಹ ಉಪಸ್ಥಿತರಿದ್ದರು.
ರಾಜ್ಯ ಕಾರ್ಯದರ್ಶಿಯಾಲಯದಲ್ಲಿ ನಡೆದ ಆತ್ಮೀಯ ಮಾತುಕತೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಐರ್ಲೆಂಡ್ ನಡುವಿನ ಉತ್ತಮ ಸಂಬಂಧಗಳ ಬಗ್ಗೆ ಸಂತೋಷ ವ್ಯಕ್ತಪಡಿಸಲಾಯಿತು. ನಂತರ ದೇಶದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ಸ್ಥಳೀಯ ಧರ್ಮ ಸಭೆ ಮತ್ತು ರಾಜ್ಯದ ನಡುವಿನ ಸಂಬಂಧಗಳ ಕುರಿತು, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬಗ್ಗೆ ಚರ್ಚೆ ನಡೆಯಿತು.
ಮಾತುಕತೆ ಮುಂದುವರಿದು, ಯುರೋಪ್ ಮತ್ತು ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ರಾಜಕೀಯ ವಿಚಾರಗಳು, ಆ ಪ್ರದೇಶಗಳಲ್ಲಿ ಶಾಂತಿಯ ಸಾಧ್ಯತೆಗಳು ಹಾಗೂ ಬಹುಪಕ್ಷೀಯತೆಯ ಪ್ರಶ್ನೆಗಳ ಕುರಿತೂ ಚರ್ಚಿಸಲಾಯಿತು.”
