Il papa ad Acerra, messa in cattedrale

ಜಗದ್ಗುರು XIVನೇ ಲಿಯೋರವರು ಅಚೆರ್ರಾದಲ್ಲಿ: “ನಾವು ಜವಾಬ್ದಾರಿಯನ್ನು ಹೊತ್ತುಕೊಂಡು ಜೀವಕ್ಕೆ ಸೇವೆ ಮಾಡೋಣ.”

ಇಟಲಿಯ ಅಚೆರ್ರಾ ಪಟ್ಟಣಕ್ಕೆ ತಮ್ಮ ಧರ್ಮಾಧ್ಯಕ್ಷೀಯ ಭೇಟಿಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು‘ಲ್ಯಾಂಡ್ ಆಫ್ ಫೈರ್ಸ್’ ಎಂದು ಕರೆಯಲ್ಪಡುವ ಆ ಪ್ರದೇಶದ ಮೇಯರ್‌ಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಒಂದಾಗಿ ಸೇರಿ ಸರಿಯಾದ ದಾರಿಗೆ ಮರಳಬೇಕೆಂದು ಅವರು ಕರೆ ನೀಡಿದರು. ಅಲ್ಲದೆ, ತಮ್ಮ ಈ ಭೇಟಿಯ ಮುಖ್ಯ ಉದ್ದೇಶವೆಂದರೆ, “ಜೀವನವು ಮೊಳೆಯುವ ಕ್ಷಣದಲ್ಲೇ ಮರಣದಿಂದ ಬೆದರಿಕೆಗೆ ಒಳಗಾಗುವಾಗ, ಪ್ರತಿಯೊಂದು ಸತ್ಯನಿಷ್ಠ ಹೃದಯದಲ್ಲೂ ಉದಿಸುವ ಗೌರವಭಾವ ಮತ್ತು ಜವಾಬ್ದಾರಿತನದ ಆ ಸ್ಪಂದನೆಯನ್ನು ದೃಢಪಡಿಸಿ ಉತ್ತೇಜಿಸುವುದಾಗಿದೆ” ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಇಟಲಿಯ ಅಚೆರ್ರಾ ಪಟ್ಟಣಕ್ಕೆ ನಡೆಸಿದ ಧರ್ಮಾಧ್ಯಕ್ಷೀಯ ಭೇಟಿಯ ಸಂದರ್ಭದಲ್ಲಿ, ಅಲ್ಲಿನ ಮೇಯರ್‌ಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ಇಂದು ನಾನು ಅಚೆರ್ರಾಗೆ ಬಂದಿರುವ ಮುಖ್ಯ ಉದ್ದೇಶವೆಂದರೆ, ಜೀವನವು ಮೊಳೆಯುವ ಕ್ಷಣದಲ್ಲೇ ಮರಣದ ಬೆದರಿಕೆಗೆ ಒಳಗಾಗುವಾಗ ಪ್ರತಿಯೊಂದು ಸತ್ಯನಿಷ್ಠ ಹೃದಯದಲ್ಲೂ ಉಕ್ಕಿ ಬರುವ ಗೌರವ ಮತ್ತು ಜವಾಬ್ದಾರಿತನದ ಆಂತರಿಕ ಸ್ಪಂದನೆಯನ್ನು ದೃಢಪಡಿಸಿ ಉತ್ತೇಜಿಸುವುದಾಗಿದೆ” ಎಂದು ಹೇಳಿದರು. ಅವರು, “ಯಾವ ಅನ್ಯಾಯವೂ ಅಳಿಸಿಹಾಕಲಾರದ ಸೌಂದರ್ಯವನ್ನು ಹೊಂದಿರುವ ಈ ಪ್ರದೇಶವನ್ನು ಮತ್ತೊಮ್ಮೆ ಭೇಟಿ ಮಾಡುವ ಅವಕಾಶ ನನಗೆ ಸಂತೋಷ ತಂದಿದೆ” ಎಂದರು.

‘ಲ್ಯಾಂಡ್ ಆಫ್ ಫೈರ್ಸ್’ ಎಂದು ಕರೆಯಲ್ಪಡುವ ಈ ಪ್ರದೇಶವು ಕಳೆದ ಹಲವು ದಶಕಗಳಿಂದ ಮಾಲಿನ್ಯ ಮತ್ತು ಅಕ್ರಮ ಚಟುವಟಿಕೆಗಳಿಂದ ಬಹಳ ನೋವನ್ನು ಅನುಭವಿಸಿದೆ. ಕ್ಯಾಥೆಡ್ರಲ್‌ನಲ್ಲಿ ಮಾಲಿನ್ಯದ ಪರಿಣಾಮವಾಗಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರನ್ನು ಭೇಟಿಯಾದ ಕುರಿತು ನೆನಪಿಸಿಕೊಂಡ ಜಗದ್ಗುರುಗಳು, “ಈ ಹೆಸರೇ ಇಲ್ಲಿ ಉಳಿದಿರುವ ಒಳ್ಳೆಯತನವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ. ಆದರೆ ಅಪರಾಧ ಮತ್ತು ನಿರ್ಲಕ್ಷ್ಯದ ಗಂಭೀರತೆಯನ್ನು ಜನರಿಗೆ ಅರಿಯುವಂತೆ ಮಾಡಿದೆ” ಎಂದು ಹೇಳಿದರು.

ಜಗದ್ಗುರು XIVನೇ ಲಿಯೋರವರು, ಜಗದ್ಗುರು ಫ್ರಾನ್ಸಿಸ್ ರವರ ಲೋದಾತೋ ಸಿ ಸಂದೇಶವನ್ನು ಅಳವಡಿಸಿಕೊಂಡು ಪರಿಸರ ಸಂರಕ್ಷಣೆ ಮತ್ತು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಧರ್ಮಗುರುಗಳು, ಧಾರ್ಮಿಕರು ಮತ್ತು ಸಾಮಾನ್ಯ ಜನರನ್ನು ಪ್ರಶಂಸಿಸಿದರು. “ಒಟ್ಟಾಗಿ ನಡೆಯುವುದು, ಸ್ವಾರ್ಥವನ್ನು ಮೀರಿ ಭವಿಷ್ಯಕ್ಕಾಗಿ ಧೈರ್ಯದಿಂದ ನಿಲ್ಲುವುದು ದೇವರು ನಮ್ಮಿಂದ ಬಯಸುವ ಕಾರ್ಯವಾಗಿದೆ” ಎಂದು ಅವರು ಹೇಳಿದರು. ಈ ಪ್ರದೇಶದಲ್ಲಿ “ಜೀವನವು ಮರಣವನ್ನು ಎದುರಿಸುತ್ತಿದೆ,ನ್ಯಾಯವು ಇದೆ ಮತ್ತು ಅದು ಅಂತಿಮವಾಗಿ ಜಯ ಸಾಧಿಸುತ್ತದೆ” ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಜಗದ್ಗುರುಗಳು ಜನರನ್ನು ಎಚ್ಚರಿಸುತ್ತಾ, “ನಿರಾಶೆ, ದೂರಾಟಿಕೆ ಮತ್ತು ತಪ್ಪನ್ನು ಇತರರ ಮೇಲೆ ಹಾಕುವುದು ಅಕ್ರಮಕ್ಕೆ ದಾರಿ ಮಾಡಿಕೊಡುತ್ತದೆ ಮತ್ತು ಮಾನವ ಮನಸ್ಸನ್ನು ಬರಿದಾಗಿಸುತ್ತದೆ” ಎಂದರು. “ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು, ನ್ಯಾಯವನ್ನು ಆಯ್ಕೆ ಮಾಡಬೇಕು, ಜೀವನಕ್ಕೆ ಸೇವೆ ಸಲ್ಲಿಸಬೇಕು. ಕೆಲವರ ವ್ಯವಹಾರ ಹಿತಾಸಕ್ತಿಗಳಿಗಿಂತ ಸಾಮೂಹಿಕ ಹಿತವೇ ಮುಖ್ಯ” ಎಂದು ಅವರು ಮನವಿ ಮಾಡಿದರು. ಈ ನೆಲವು ಅನೇಕ ಮಕ್ಕಳನ್ನು ಕಳೆದುಕೊಂಡಿದ್ದು, ನಿರಪರಾಧಿಗಳ ನೋವನ್ನು ಕಂಡಿದೆ ಎಂದು ಅವರು ದುಃಖ ವ್ಯಕ್ತಪಡಿಸಿದರು.

ಜಗದ್ಗುರು ಲಿಯೋರವರು ಶಿಕ್ಷಣದ ಮಹತ್ವವನ್ನೂ ವಿಶೇಷವಾಗಿ ಒತ್ತಿಹೇಳಿದರು. “ಯುವಕರಷ್ಟೇ ಅಲ್ಲ, ಹಿರಿಯರೂ ಕಲಿಯಬೇಕು, ನಾಗರಿಕರು ಮತ್ತು ನಾಯಕರು, ಕಾರ್ಮಿಕರು ಮತ್ತು ಉದ್ಯೋಗದಾರರು, ವಿಶ್ವಾಸಿಗಳು ಮತ್ತು ಪಾಸ್ತೋರ್‌ಗಳು  ಎಲ್ಲರೂ ಇನ್ನೂ ಏನನ್ನೋ ಕಲಿಯಬೇಕಿದೆ” ಎಂದರು. ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪರಿಸರದ ಬಗ್ಗೆ ಹೊಸ ದೃಷ್ಟಿಕೋನ ಮತ್ತು ನೈತಿಕ ಜವಾಬ್ದಾರಿಯ ಅಗತ್ಯವಿದೆ ಎಂದು ಅವರು ಹೇಳಿದರು. “ನಮ್ಮ ಮಕ್ಕಳಿಗೆ ಉತ್ತಮ ಜಗತ್ತನ್ನು ಬಿಟ್ಟುಕೊಡುವ ಕನಸು ಅಸಾಧ್ಯವಲ್ಲ, ಶಿಕ್ಷಣ ಮತ್ತು ಜವಾಬ್ದಾರಿಯ ಮೂಲಕ ಅದು ಸಾಧ್ಯ” ಎಂದು ಅವರು ಪ್ರೇರೇಪಿಸಿದರು.

ಅಂತಿಮವಾಗಿ, ಜಗದ್ಗುರು ಲಿಯೋರವರು ಜನರನ್ನು ಪರಿಸರವನ್ನು ತಮ್ಮ ಮನೆಯ ಬಾಗಿಲನ್ನು ಕಾಯುವಂತೆ ಕಾಪಾಡುವಂತೆ ಕರೆ ನೀಡಿದರು. “ಭೂಮಿ, ನೀರು, ಗಾಳಿ ಮತ್ತು ಮಾನವ ಸಹಜೀವನವನ್ನು ಹಾಳುಮಾಡುವ ಲಾಭದಾಸೆ ಮತ್ತು ಅಧಿಕಾರದ ಪ್ರಲೋಭನಗಳನ್ನು ತಿರಸ್ಕರಿಸಬೇಕು” ಎಂದು ಹೇಳಿದರು. “ನಮ್ಮ ಸಮಸ್ಯೆಗಳೇ ಈ ನೆಲದ ಸಮಸ್ಯೆಗಳು, ಇದರ ಸೌಂದರ್ಯವೇ ನಮ್ಮ ಸೌಂದರ್ಯ. ನಾವು ರಾತ್ರಿಯ ಕಾವಲುಗಾರರಂತೆ ಜಾಗರೂಕರಾಗಿರಬೇಕು. ಹೊಸ ಪ್ರಭಾತವನ್ನು ಕಾಣುವವರಲ್ಲಿ ನಾವು ಕೂಡ ಇರಬಹುದು” ಎಂದು ಆಶಾಭರವಿನಿಂದ ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

23 ಮೇ 2026, 18:23