ಜಗದ್ಗುರು XIVನೇ ಲಿಯೋರವರು ಶಾಂತಿ ಆಳುವ ಸಹೋದರತ್ವದ ಲೋಕವನ್ನು ನಿರ್ಮಿಸಲು ಪವಿತ್ರಾತ್ಮನು ಸಹಾಯ ಮಾಡಲಿ ಎಂದು ಪ್ರಾರ್ಥಿಸಿದರು.
ವ್ಯಾಟಿಕನ್ ವರದಿ
ಮೇ 24ರಂದು ನಡೆದ ತಮ್ಮ ಅಂತಿಮ ರೆಜಿನಾ ಚೇಲಿ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು “ಪವಿತ್ರಾತ್ಮನು ಯಾವ ಬಾಗಿಲುಗಳನ್ನು ತೆರೆಯುತ್ತಾನೆ?” ಎಂಬ ಪ್ರಶ್ನೆಯನ್ನು ವಿಶ್ವಾಸಿಗಳ ಮುಂದೆ ಇಟ್ಟರು. ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಾರಂಭಿಕ ಧರ್ಮ ಸಭೆಯ ಮೇಲೆ ಸಮೃದ್ಧಿಯಾಗಿ ಸುರಿಸಲ್ಪಟ್ಟ ಹಾಗೂ ಇಂದಿಗೂ ವಿಶ್ವಾಸಿಗಳ ಜೀವನದಲ್ಲಿ ಹೊಸದಾಗಿ ಕಾರ್ಯನಿರ್ವಹಿಸುವ ಪವಿತ್ರಾತ್ಮನ ವರವನ್ನು ಮನನ ಮಾಡಲು ಆಹ್ವಾನಿಸಿದರು. ನಮ್ಮ ದೈನಂದಿನ ಜೀವನಕ್ಕೆ ಬೆಳಕು ಮತ್ತು ಶಕ್ತಿಯನ್ನು ನೀಡುವ ಪವಿತ್ರಾತ್ಮನು ಇನ್ನೂ ಮುಚ್ಚಿರುವ ಎಲ್ಲಾ ಬಾಗಿಲುಗಳನ್ನು ತೆರೆಯಲಿ ಎಂದು ಅವರು ಪ್ರಾರ್ಥಿಸಲು ಕರೆ ನೀಡಿದರು.
ಜಗದ್ಗುರುಗಳು ಮೊದಲನೆಯದಾಗಿ ದೇವರ ಬಾಗಿಲಿನ ಬಗ್ಗೆ ಮಾತನಾಡಿದರು. ಪವಿತ್ರಾತ್ಮನು ನಿಜವಾದ ವಿಶ್ವಾಸವನ್ನು ನೀಡುತ್ತಾನೆ, ಪವಿತ್ರ ಗ್ರಂಥದ ಅರ್ಥವನ್ನು ತಿಳಿಯಲು ಸಹಾಯಮಾಡುತ್ತಾರೆ. ದೇವರನ್ನು ಪ್ರೀತಿಯ ತಂದೆಯಾಗಿ ಅರಿಯುವಂತೆ ಮಾಡುತ್ತಾನೆ ಎಂದು ಅವರು ಹೇಳಿದರು. ಕೇವಲ ನಿಯಮಗಳನ್ನು ಪಾಲಿಸುವುದಲ್ಲ, ಯೇಸುವಿನಲ್ಲಿ ದೇವರನ್ನು ವೈಯಕ್ತಿಕವಾಗಿ ಅನುಭವಿಸುವಂತೆ ಪವಿತ್ರಾತ್ಮನು ನಮ್ಮನ್ನು ಮುನ್ನಡೆಸುತ್ತಾನೆ ಎಂದು ಅವರು ವಿವರಿಸಿದರು.
ಎರಡನೆಯದಾಗಿ, ಧರ್ಮ ಸಭೆಯ ಬಾಗಿಲು ತೆರೆಯಬೇಕು ಎಂದು ಜಗದ್ಗುರುಗಳು ಹೇಳಿದರು. ಪ್ರೇಷಿತರ ಕೃತ್ಯಗಳಲ್ಲಿ ವಿವರಿಸಿದಂತೆ, ಪವಿತ್ರಾತ್ಮನು ಬಲವಾದ ಗಾಳಿಯಂತೆ ಬಂದು ಶಿಷ್ಯರನ್ನು ಹೊರಗೆ ಕಳುಹಿಸಿ ಸುವಾರ್ತೆಯನ್ನು ಸಾರಲು ಪ್ರೇರೇಪಿಸಿದರು. ಅದೇ ರೀತಿ ಇಂದಿಗೂ ಆತನು ಭಯ ಮತ್ತು ಆತಂಕಗಳನ್ನು ದೂರ ಮಾಡಿ, ಧರ್ಮ ಸಭೆಯನ್ನು ಎಲ್ಲರಿಗೂ ತೆರೆದಿರುವ, ಆತಿಥ್ಯಪರ ಮತ್ತು ಸ್ವಾಗತಪರ ಸಮುದಾಯವನ್ನಾಗಿ ರೂಪಿಸುತ್ತಾರೆ ಎಂದರು.
ಜಗದ್ಗುರು XIVನೇ ಲಿಯೋರವರು ಜಗದ್ಗುರು ಫ್ರಾನ್ಸಿಸ್‌ರನ್ನು ಉಲ್ಲೇಖಿಸಿ, “ತೆರೆದ ಬಾಗಿಲುಗಳ ಚಯಧಮ೯ಸಭೆ” ಎಂಬ ದೃಷ್ಟಿಯನ್ನು ನೆನಪಿಸಿದರು. ದೇವರ ಮೇಲೂ, ನೆರೆಯವರ ಮೇಲೂ, ಭರವಸೆಯ ಮೇಲೂ ತಮ್ಮ ಬಾಗಿಲುಗಳನ್ನು ಮುಚ್ಚಿಕೊಂಡವರನ್ನೂ ಸಹ ಧರ್ಮ ಸಭೆ ಪ್ರೀತಿಯಿಂದ ಸ್ವಾಗತಿಸಬೇಕು ಎಂದು ಅವರು ಹೇಳಿದರು. ಪವಿತ್ರಾತ್ಮನು ಧರ್ಮ ಸಭೆಯ ಬಾಗಿಲುಗಳನ್ನು ತೆರೆದು ಎಲ್ಲರಿಗೂ ಸ್ಥಳವಿರುವ ಕುಟುಂಬವನ್ನಾಗಿ ಅದನ್ನು ರೂಪಿಸುತ್ತಾರೆ ಎಂದು ಅವರು ತಿಳಿಸಿದರು.
ಕೊನೆಯಲ್ಲಿ, ಮಾನವ ಹೃದಯದ ಬಾಗಿಲಿನ ಬಗ್ಗೆ ಜಗದ್ಗುರುಗಳು ಮಾತನಾಡಿದರು. ಪವಿತ್ರಾತ್ಮನು ನಮ್ಮ ಹೃದಯಗಳನ್ನು ತೆರೆಯುವುದರ ಮೂಲಕ ಸ್ವಾರ್ಥ, ಅವಿಶ್ವಾಸ, ವಿರೋಧ ಮತ್ತು ಪೂರ್ವಾಗ್ರಹಗಳನ್ನು ಜಯಿಸಲು ಸಹಾಯಮಾಡುತ್ತಾರೆ ಎಂದರು. ಈ ಮೂಲಕ ನಾವು ದೇವರ ಮಕ್ಕಳಾಗಿಯೂ ಪರಸ್ಪರ ಸಹೋದರ ಸಹೋದರಿಯರಾಗಿಯೂ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪವಿತ್ರಾತ್ಮನಿರುವಲ್ಲಿ ಸಹೋದರತ್ವ ಹುಟ್ಟುತ್ತದೆ ಮತ್ತು ಭಿನ್ನತೆಗಳಿದ್ದರೂ ಪ್ರೀತಿಯ ಭಾಷೆಯೇ ಎಲ್ಲರನ್ನು ಒಂದಾಗಿಸುತ್ತದೆ ಎಂದು ಅವರು ಒತ್ತಿಹೇಳಿದರು.
ಅಂತಿಮವಾಗಿ, ಶಾಂತಿ ಆಳುವ ಸಹೋದರತ್ವದ ಲೋಕವನ್ನು ನಿರ್ಮಿಸಲು ಎಲ್ಲರೂ ಪವಿತ್ರಾತ್ಮನ ಸಹಾಯವನ್ನು ಬೇಡಿಕೊಳ್ಳಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ದೇವರನ್ನು ಪ್ರೀತಿಯ ತಂದೆಯಾಗಿ ಪುನಃ ಕಂಡುಕೊಳ್ಳುವ ಮೂಲಕ, ಎಲ್ಲರೂ ಮನೆಯಲ್ಲಿ ಇರುವಂತೆ ಅನುಭವಿಸುವ ಧರ್ಮ ಸಭೆಯನ್ನು ಮತ್ತು ಎಲ್ಲ ಜನಾಂಗಗಳ ನಡುವೆ ಶಾಂತಿ ನೆಲೆಸಿರುವ ಜಗತ್ತನ್ನು ನಿರ್ಮಿಸೋಣ ಎಂದು ಅವರು ವಿಶ್ವಾಸಿಗಳಿಗೆ ಆಹ್ವಾನ ನೀಡಿದರು.
