ಸಂತ ಜೆರೋಮ್ ವಿಶ್ವವಿದ್ಯಾಲಯದ ಬಾಹ್ಯ ಛಾಯಾಚಿತ್ರ. ಸಂತ ಜೆರೋಮ್ ವಿಶ್ವವಿದ್ಯಾಲಯದ ಬಾಹ್ಯ ಛಾಯಾಚಿತ್ರ. 

ಕೆನಡಾದ ವಿಶ್ವವಿದ್ಯಾಲಯವು ಜಗದ್ಗುರು ಫ್ರಾನ್ಸಿಸ್ ರವರಿಗೆ ಸಮರ್ಪಿತವಾದ ಹೊಸ ಸಂಸ್ಥೆಯನ್ನು ಆರಂಭಿಸಿದೆ.

ಕೆನಡಾದ ಒಂಟಾರಿಯೊದಲ್ಲಿರುವ ಸಂತ ಜೆರೋಮ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಪೀಟರ್ ಮೀಹಾನ್ ರವರು, ಪರಲೋಕಸ್ಥ ಜಗದ್ಗುರು ಫ್ರಾನ್ಸಿಸ್ ರವರ ಧರ್ಮಾಧ್ಯಕ್ಷೀಯ ಹಾಗೂ ಬೌದ್ಧಿಕ ಪರಂಪರೆಯನ್ನು ಜೀವಂತವಾಗಿರಿಸುವ ಉದ್ದೇಶದಿಂದ ಸ್ಥಾಪಿಸಲಾದ ಹೊಸ “ಜಗದ್ಗುರು ಫ್ರಾನ್ಸಿಸ್ ಇನ್‌ಸ್ಟಿಟ್ಯೂಟ್” ಕುರಿತು ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದರು.

ವ್ಯಾಟಿಕನ್ ವರದಿ

ಕೆನಡಾದ ಸಂತ ಜೆರೋಮ್ ವಿಶ್ವವಿದ್ಯಾಲಯವು “ಜಗದ್ಗುರು ಫ್ರಾನ್ಸಿಸ್ ಇನ್‌ಸ್ಟಿಟ್ಯೂಟ್” ಎಂಬ ಹೊಸ ಸಂಸ್ಥೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಈ ಸಂಸ್ಥೆಯ ಉದ್ದೇಶ, ಪರಲೋಕಸ್ಥ ಜಗದ್ಗುರು ಫ್ರಾನ್ಸಿಸ್ ರವರ ಆತ್ಮೀಯ, ಬೌದ್ಧಿಕ ಮತ್ತು ಸಾಮಾಜಿಕ ಪರಂಪರೆಯನ್ನು ಕೆನಡಾ ಮಾತ್ರವಲ್ಲದೆ ಜಗತ್ತಿನಾದ್ಯಂತ ಜೀವಂತವಾಗಿಡುವುದಾಗಿದೆ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆಯಾಗುತ್ತಿರುವ ಈ ರೀತಿಯ ಸಂಸ್ಥೆಯೆಂದು ತಿಳಿದುಬಂದಿದೆ.

ಈ ಸಂಸ್ಥೆಯಲ್ಲಿ ಜಗದ್ಗುರು ಫ್ರಾನ್ಸಿಸ್ ರವರ ಬೋಧನೆಗಳು ಮತ್ತು ಚಿಂತನೆಗಳನ್ನು ಆಧರಿಸಿದ ಪಠ್ಯಕ್ರಮಗಳು, ಉಪನ್ಯಾಸಗಳು ಮತ್ತು ರೂಪಣಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸಂತ ಜೆರೋಮ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಪೀಟರ್ ಮೀಹಾನ್ ರವರ ಮಾತಿನಂತೆ, ಜಗದ್ಗುರು ಫ್ರಾನ್ಸಿಸ್ ರವರಿಗೆ ಜನರ ಜೀವನದ ನೋವು ಮತ್ತು ಸವಾಲುಗಳ ಬಗ್ಗೆ ಆಳವಾದ ಅರಿವು ಇತ್ತು. ವಿಶೇಷವಾಗಿ ವಲಸೆ, ಪರಿಸರ ಸಂರಕ್ಷಣೆ ಹಾಗೂ ಎಲ್ಲ ವರ್ಗದ ಜನರೊಂದಿಗೆ ಕೈಜೋಡಿಸುವ ಅವರ ದೃಷ್ಟಿಕೋನವು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಸಂದೇಶವನ್ನು ಪ್ರತಿಬಿಂಬಿಸಿತು ಎಂದು ಅವರು ಹೇಳಿದರು.

ಡಾ. ಮೀಹಾನ್ ರವರ ಪ್ರಕಾರ, ಜಗದ್ಗುರು ಫ್ರಾನ್ಸಿಸ್ ರವರ ಸಂದೇಶವು ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವಾದದ್ದು. ಆದ್ದರಿಂದ ಅವರ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಈ ಹೊಸ ಸಂಸ್ಥೆ ಹೊತ್ತುಕೊಳ್ಳಲಿದೆ. ಸಂಸ್ಥೆಯು ಕೇವಲ ಧರ್ಮ ಸಭೆ ಒಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ.

ಈ ವರ್ಷ ಅಧಿಕೃತವಾಗಿ ಆರಂಭವಾಗಲಿರುವ ಜಗದ್ಗುರು ಫ್ರಾನ್ಸಿಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಂವಾದಗಳು, ಸಮ್ಮೇಳನಗಳು, ಆತ್ಮೀಯ ಶಿಬಿರಗಳು ಹಾಗೂ “ಕ್ಯಾಥೋಲಿಕ್ ಲೀಡರ್‌ಶಿಪ್” ಪ್ರಮಾಣಪತ್ರ ಕೋರ್ಸ್‌ಗಳನ್ನೂ ನಡೆಸಲಾಗುತ್ತದೆ. ಭವಿಷ್ಯದಲ್ಲಿ ಪೂರ್ಣಕಾಲಿಕ ಸಂಶೋಧಕರನ್ನು ನೇಮಕ ಮಾಡುವ ಯೋಜನೆಯೂ ಇದೆ. ಕಥೋಲಿಕ ವಿಶ್ವವಿದ್ಯಾಲಯದ ಕರ್ತವ್ಯವು ಸಮಾಜದ ಹೊರಗಿನ ಜನರಿಗೂ ಸೇವೆ ಸಲ್ಲಿಸುವುದಾಗಿದೆ ಎಂದು ಡಾ. ಮೀಹಾನ್ ಅಭಿಪ್ರಾಯಪಟ್ಟರು.

ಡಾ. ಮೀಹಾನ್ ರವರು ಹೇಳುವಂತೆ, ಈ ಸಂಸ್ಥೆ ಕೇವಲ ಕಥೋಲಿಕ್ ಸಮುದಾಯಕ್ಕಷ್ಟೇ ಅಲ್ಲದೆ, ಇತರ ಧರ್ಮ ಮತ್ತು ಹಿನ್ನೆಲೆಯ ಜನರನ್ನೂ ಆಕರ್ಷಿಸುವ ಪ್ರಯತ್ನ ಮಾಡಲಿದೆ. ಜನರ ಒಳಿತಿಗಾಗಿ ಕೆಲಸ ಮಾಡುವ ಮೂಲಕ ಜಗದ್ಗುರು ಫ್ರಾನ್ಸಿಸ್ ರವರ ಮಾನವೀಯ ಸಂದೇಶವನ್ನು ಮುಂದುವರಿಸುವುದೇ ಇದರ ಮುಖ್ಯ ಗುರಿಯಾಗಿದೆ.

ಇದಲ್ಲದೆ, ಜಗದ್ಗುರುಗಳ ಅಧಿಕಾರ ಅವಧಿಯೂ ಈ ಸಂಸ್ಥೆಗೆ ಹೊಸ ಚೈತನ್ಯ ನೀಡಿದಂತಾಗಿದೆ. ಸಿನೋಡಾಲಿಟಿ ಮತ್ತು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಬೋಧನೆಗಳನ್ನು ಅನುಷ್ಠಾನಗೊಳಿಸುವುದು ಜಗದ್ಗುರು XIVನೇ ಲಿಯೋರವರ ಪ್ರಮುಖ ಆದ್ಯತೆಯಾಗಿದ್ದು, ಇದೇ ವಿಷಯಗಳು ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾರ ಅವಧಿಯ ಕೇಂದ್ರಬಿಂದುವಾಗಿದ್ದವು. ಈ ತತ್ವಗಳು ಹೊಸ ಸಂಸ್ಥೆಯ ಕಾರ್ಯಚಟುವಟಿಕೆಗಳ ಹೃದಯವಾಗಿರಲಿವೆ.

18 ಮೇ 2026, 19:54