MYANMAR-INTERNET-COMMUNICATION

ಜಗದ್ಗುರು XIVನೇ ಲಿಯೋರವರು: ಸಂವಹನವು ಮಾನವ ವ್ಯಕ್ತಿಯ ಸತ್ಯತೆಯನ್ನು ಗೌರವಿಸಬೇಕು.

ಧರ್ಮ ಸಭೆಯ 60ನೇ ವಿಶ್ವ ಸಾಮಾಜಿಕ ಸಂವಹನ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ತಾಂತ್ರಿಕ ಆವಿಷ್ಕಾರಗಳನ್ನು ಮಾನವ ವ್ಯಕ್ತಿಯ ಸತ್ಯತೆಯತ್ತ ದಾರಿತೋರಿಸಲು ಕಥೋಲಿಕ ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದ್ದಾರೆ.

ವ್ಯಾಟಿಕನ್ ವರದಿ

ಕಥೋಲಿಕ ಧರ್ಮ ಸಭೆ ಮೇ 17ರ ಭಾನುವಾರ 60ನೇ ವಿಶ್ವ ಸಾಮಾಜಿಕ ಸಂವಹನ ದಿನವನ್ನು ಆಚರಿಸಿತು.

ರೆಜಿನಾ ಚೇಲಿ ಪ್ರಾರ್ಥನೆಯ ವೇಳೆ ಮಾತನಾಡಿದ ಜಗದ್ಗುರು ಲಿಯೋರವರು ಈ ವಿಶ್ವ ದಿನವನ್ನು ಸ್ಮರಿಸಿ, ಮಾನವ ವ್ಯಕ್ತಿಯ ಸತ್ಯತೆಯನ್ನು ಯಾವಾಗಲೂ ಗೌರವಿಸುವ ಸಂವಹನದ ರೂಪಗಳನ್ನು ಉತ್ತೇಜಿಸಲು ಎಲ್ಲರನ್ನೂ ಪ್ರೋತ್ಸಾಹಿಸಿದರು.

ಇತ್ತೀಚಿನ ವರ್ಷಗಳಲ್ಲಿ ಸಂವಹನ ಕ್ಷೇತ್ರದಲ್ಲಿ ಸಂಭವಿಸಿರುವ ಅಪಾರ ತಾಂತ್ರಿಕ ಪ್ರಗತಿಯನ್ನು ಅವರು ಉಲ್ಲೇಖಿಸಿ, ತಾಂತ್ರಿಕ ಆವಿಷ್ಕಾರಗಳನ್ನು ಮಾನವಕುಲದ ಹಿತದತ್ತ ದಾರಿತೋರಿಸಬೇಕೆಂದು ಕರೆ ನೀಡಿದರು.

“ಮಾನವ ವ್ಯಕ್ತಿಯ ಸತ್ಯತೆಯನ್ನು ಯಾವಾಗಲೂ ಗೌರವಿಸುವ ಸಂವಹನದ ರೂಪಗಳನ್ನು ಉತ್ತೇಜಿಸಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ನಾನು ಪ್ರೋತ್ಸಾಹಿಸುತ್ತೇನೆ. ಪ್ರತಿಯೊಂದು ತಾಂತ್ರಿಕ ಆವಿಷ್ಕಾರವೂ ಇದೇ ದಿಕ್ಕಿನಲ್ಲಿ ಸಾಗಬೇಕು,” ಎಂದು ಅವರು ಹೇಳಿದರು.

60ನೇ ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ಜಗದ್ಗುರುಗಳ ಸಂದೇಶ

ಜಗದ್ಗುರು XIVನೇ ಲಿಯೋರವರು ಜನವರಿ 24ರಂದು 60ನೇ ವಿಶ್ವ ಸಾಮಾಜಿಕ ಸಂವಹನ ದಿನಕ್ಕಾಗಿ ತಮ್ಮ ಸಂದೇಶವನ್ನು ಬಿಡುಗಡೆ ಮಾಡಿದರು. ಅದರ ವಿಷಯವಾಗಿದ್ದು, “ಮಾನವ ಧ್ವನಿಗಳು ಮತ್ತು ಮುಖಗಳನ್ನು ಸಂರಕ್ಷಿಸುವುದು.”

ತಮ್ಮ ಸಂದೇಶದಲ್ಲಿ, ದೇವರು ಮಾನವರನ್ನು ತನ್ನ ಸ್ವರೂಪ ಮತ್ತು ಸಾದೃಶ್ಯದಲ್ಲಿ ಸೃಷ್ಟಿಸಿರುವುದರಿಂದ, ಮಾನವರ ಮುಖಗಳು ಮತ್ತು ಧ್ವನಿಗಳು ಪವಿತ್ರವಾಗಿವೆ ಎಂದು ಜಗದ್ಗುರುಗಳು ಹೇಳಿದರು.

“ನಮ್ಮಲ್ಲಿ ಪ್ರತಿಯೊಬ್ಬರೂ ಬದಲಿಸಲಾಗದ ಮತ್ತು ಅನುಕರಿಸಲಾಗದ ಕರೆಯನ್ನು ಹೊಂದಿದ್ದೇವೆ. ಅದು ನಮ್ಮ ಜೀವನಾನುಭವದಿಂದ ಹುಟ್ಟಿಕೊಂಡಿದ್ದು, ಇತರರೊಂದಿಗೆ ಹೊಂದುವ ಸಂಬಂಧಗಳ ಮೂಲಕ ವ್ಯಕ್ತವಾಗುತ್ತದೆ,” ಎಂದು ಅವರು ಹೇಳಿದರು.

ಆದರೆ, ಹೊಸ ಡಿಜಿಟಲ್ ತಂತ್ರಜ್ಞಾನಗಳು ಧ್ವನಿಗಳು, ಮುಖಗಳು ಮತ್ತು ಭಾವನೆಗಳನ್ನು ಅನುಕರಿಸುವ ಮೂಲಕ ನಮ್ಮ ವೈಶಿಷ್ಟ್ಯತೆಯನ್ನು ಅಪಾಯಕ್ಕೆ ಒಳಪಡಿಸುತ್ತಿವೆ ಎಂದು ಅವರು ಎಚ್ಚರಿಸಿದರು.

“ಮಾನವ ಧ್ವನಿಗಳು ಮತ್ತು ಮುಖಗಳು, ಜ್ಞಾನ ಮತ್ತು ತಿಳುವಳಿಕೆ, ಅರಿವು ಮತ್ತು ಹೊಣೆಗಾರಿಕೆ, ಸಹಾನುಭೂತಿ ಮತ್ತು ಸ್ನೇಹವನ್ನು ಅನುಕರಿಸುವ ಮೂಲಕ, ಕೃತಕ ಬುದ್ಧಿಮತ್ತೆ ಎಂದು ಕರೆಯಲಾಗುವ ವ್ಯವಸ್ಥೆಗಳು ಮಾಹಿತಿ ಪರಿಸರಗಳಲ್ಲಷ್ಟೇ ಅಲ್ಲ, ಮಾನವ ಸಂಬಂಧಗಳೆಂಬ ಸಂವಹನದ ಅತ್ಯಂತ ಆಳವಾದ ಮಟ್ಟದಲ್ಲಿಯೂ ಹಸ್ತಕ್ಷೇಪ ಮಾಡುತ್ತಿವೆ,” ಎಂದು ಅವರು ಹೇಳಿದರು.

ಮಾನವಕುಲಕ್ಕೆ ನಿಜವಾದ ಅಪಾಯವೆಂದರೆ, ಕೇಳುವ ಮತ್ತು ವಿಮರ್ಶಾತ್ಮಕವಾಗಿ ಚಿಂತಿಸುವ ನಮ್ಮ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮಗಳ ಅಲ್ಗೋರಿದಮ್‌ಗಳಿಗೆ ಒಪ್ಪಿಸಿಬಿಡುವ ನಮ್ಮ ಸಿದ್ಧತೆಯೇ ಎಂದು ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

“ಇದರಿಂದ ನಾವು ನಮಗಿಂತ ಭಿನ್ನರಾಗಿರುವ ಇತರರನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೇವೆ. ಅವರೊಂದಿಗೆ ನಾವು ಸಂಬಂಧ ಬೆಳೆಸಬೇಕು ಮತ್ತು ಕಲಿಯಬೇಕು,” ಎಂದು ಅವರು ಹೇಳಿದರು. “ಇತರರನ್ನು ಸ್ವೀಕರಿಸದೆ ಯಾವುದೇ ಸಂಬಂಧಗಳು ಅಥವಾ ಸ್ನೇಹಗಳು ಸಾಧ್ಯವಿಲ್ಲ.”

ಇದಕ್ಕೆ ಪ್ರತಿಕ್ರಿಯೆಯಾಗಿ, ಜಗದ್ಗುರು XIVನೇ ಲಿಯೋರವರು ಕೃತಕ ಬುದ್ಧಿಮತ್ತೆಯೊಂದಿಗೆ ಮತ್ತು ಪರಸ್ಪರ ಸಂಬಂಧಗಳಲ್ಲಿ ಹೊಣೆಗಾರಿಕೆ, ಸಹಕಾರ ಮತ್ತು ಶಿಕ್ಷಣವನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸಿದರು.

“ಡಿಜಿಟಲ್ ಕ್ರಾಂತಿಗೆ ಡಿಜಿಟಲ್ ಸಾಕ್ಷರತೆ ಅಗತ್ಯವಿದೆ ಜೊತೆಗೆ ಮಾನವೀಯ ಮತ್ತು ಸಾಂಸ್ಕೃತಿಕ ಶಿಕ್ಷಣವೂ ಅಗತ್ಯ,” ಎಂದು ಅವರು ಹೇಳಿದರು. “ಅಲ್ಗೋರಿದಮ್‌ಗಳು ನಮ್ಮ ವಾಸ್ತವಿಕತೆಯ ಗ್ರಹಿಕೆಯನ್ನು ಹೇಗೆ ರೂಪಿಸುತ್ತವೆ, ಎಐಯಲ್ಲಿನ ಪೂರ್ವಾಗ್ರಹಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ನಮ್ಮ ಫೀಡ್‌ಗಳಲ್ಲಿ ಕೆಲವು ವಿಷಯಗಳ ಕಾಣಿಸಿಕೊಳ್ಳುವಿಕೆಯನ್ನು ಯಾವ ವ್ಯವಸ್ಥೆಗಳು ನಿರ್ಧರಿಸುತ್ತವೆ, ಎಐ ಆರ್ಥಿಕತೆಯ ತತ್ವಗಳು ಮತ್ತು ಮಾದರಿಗಳು ಯಾವುವು ಹಾಗೂ ಅವು ಹೇಗೆ ಬದಲಾಗಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು.”

“ಜನರ ಪರವಾಗಿ ಮಾತನಾಡಲು ನಮಗೆ ಮತ್ತೆ ಮುಖಗಳು ಮತ್ತು ಧ್ವನಿಗಳು ಅಗತ್ಯವಿವೆ,” ಎಂದು ಜಗದ್ಗುರು ಲಿಯೋರವರ ಸಂದೇಶ ಕೊನೆಗೊಳಿಸಿತು. “ಸಂವಹನ ಎಂಬ ವರವನ್ನು ಮಾನವತೆಯ ಅತ್ಯಂತ ಆಳವಾದ ಸತ್ಯವೆಂದು ನಾವು ಕಾಪಾಡಿಕೊಳ್ಳಬೇಕು ಎಲ್ಲಾ ತಾಂತ್ರಿಕ ಆವಿಷ್ಕಾರಗಳೂ ಅದೇ ದಿಕ್ಕಿನಲ್ಲಿ ರೂಪುಗೊಳ್ಳಬೇಕು.”

17 ಮೇ 2026, 15:43