ರೆಜಿನಾ ಚೇಲಿ ಪ್ರಾರ್ಥನೆಯಲ್ಲಿ ಜಗದ್ಗುರುಗಳು ರೆಜಿನಾ ಚೇಲಿ ಪ್ರಾರ್ಥನೆಯಲ್ಲಿ ಜಗದ್ಗುರುಗಳು 

ರೆಜಿನಾ ಚೇಲಿ ಪ್ರಾರ್ಥನೆಯಲ್ಲಿ ಜಗದ್ಗುರುಗಳು: “ನಮ್ಮೊಳಗೆ ಪ್ರೀತಿಯನ್ನು ಹುಟ್ಟಿಸುವುದು ಯೇಸುವಿನ ಪ್ರೀತಿಯೇ”

ವ್ಯಾಟಿಕನ್‌ನಲ್ಲಿ ನಡೆದ ರೆಜಿನಾ ಚೇಲಿ ಸಂದೇಶದ ವೇಳೆ, ಜಗದ್ಗುರು XIVನೇ ಲಿಯೋರವರು ಯೇಸು ನಮ್ಮನ್ನು ಸದಾಕಾಲವೂ ಮತ್ತು ಯಾವುದೇ ಷರತ್ತಿಲ್ಲದೆ ಪ್ರೀತಿಸುತ್ತಾರೆ ಎಂದು ಭಕ್ತರಿಗೆ ನೆನಪಿಸಿದರು. ಹಾಗೆಯೇ, ನಮ್ಮ ಮೇಲಿರುವ ಅವರ ಪ್ರೀತಿಯೇ ಇತರರನ್ನು ಪ್ರೀತಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

“ಜೀವನದ ಸಂಕಟಗಳ ನಡುವೆ ಪ್ರಭು ನಮ್ಮನ್ನು ಎಂದಿಗೂ ಒಂಟಿಯಾಗಿಯೇ ಬಿಡುವುದಿಲ್ಲ,” ಎಂದು ಭಾನುವಾರ ವ್ಯಾಟಿಕನ್‌ನಲ್ಲಿ ನಡೆದ ರೆಜಿನಾ ಚೇಲಿ ಸಂದೇಶದ ವೇಳೆ ಜಗದ್ಗುರು XIVನೇ ಲಿಯೋರವರು ಭಕ್ತರಿಗೆ ಧೈರ್ಯ ತುಂಬಿದರು.

ಪಾಸ್ಖ ಕಾಲದ ಮಧ್ಯಾಹ್ನ ಮರಿಯಮ್ಮನವರ ಪ್ರಾರ್ಥನೆಯನ್ನು ಪಠಿಸುವ ಮೊದಲು, ಜಗದ್ಗುರುಗಳು ಆ ದಿನದ ಸಂತ ಯೋಹಾನನ ಸುವಾರ್ತೆಯ ಕುರಿತು ಚಿಂತನೆ ನಡೆಸಿದರು. ಆ ಸುವಾರ್ತೆಯಲ್ಲಿ, ಕೊನೆಯ ಭೋಜನದ ಸಮಯದಲ್ಲಿ ಯೇಸು ತಮ್ಮ ಶಿಷ್ಯರಿಗೆ, “ನೀವು ನನ್ನನ್ನು ಪ್ರೀತಿಸಿದರೆ, ನನ್ನ ಆಜ್ಞೆಗಳನ್ನು ಪಾಲಿಸುವಿರಿ” ಎಂದು ಹೇಳುತ್ತಾರೆ.

“ಈ ಮಾತು,” ಎಂದು ಜಗದ್ಗುರು ಲಿಯೋರವರು ಹೇಳಿದರು, “ನಾವು ಆಜ್ಞೆಗಳನ್ನು ಪಾಲಿಸುವುದರಿಂದಲೇ ದೇವರು ನಮ್ಮನ್ನು ಪ್ರೀತಿಸುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.ಅಂದರೆ, ನಮ್ಮ ನೀತಿವಂತಿಕೆಯೇ ದೇವರ ಪ್ರೀತಿಗೆ ಪೂರ್ವಶರ್ತ ಎನ್ನುವ ಭ್ರಮೆಯಿಂದ”ಎಂದರು.

ಅದರ ವಿರುದ್ಧವಾಗಿ, “ದೇವರ ಪ್ರೀತಿಯೇ ನಮ್ಮ ನೀತಿವಂತಿಕೆಯ ಮೂಲಭೂತ ಆಧಾರ” ಎಂದು ಅವರು ಹೇಳಿದರು.

ಕ್ರಿಸ್ತನು ಲೋಕಕ್ಕೆ ತೋರಿಸಿದಂತೆ ದೇವರು ನಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ನಾವು ಅರಿತಾಗ ಮಾತ್ರ, ದೇವರ ಇಚ್ಛೆಯಂತೆ ಆಜ್ಞೆಗಳನ್ನು ನಿಜವಾಗಿ ಪಾಲಿಸಲು ಸಾಧ್ಯವಾಗುತ್ತದೆ, ಎಂದು ಅವರು ವಿವರಿಸಿದರು. ಆದ್ದರಿಂದ ಯೇಸುವಿನ ಈ ಮಾತುಗಳು ಒಂದು ಸಂಬಂಧದೊಳಗೆ ಪ್ರವೇಶಿಸಲು ನೀಡಿದ ಆಹ್ವಾನವಾಗಿದ್ದು, ಬೆದರಿಕೆ ಅಥವಾ ಅನುಮಾನಭರಿತ ಅಂತಿಮ ಎಚ್ಚರಿಕೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

ಯೇಸುವಿನ ಪ್ರೀತಿಯೇ ನಮ್ಮೊಳಗೆ ಪ್ರೀತಿಯನ್ನು ಹುಟ್ಟಿಸುತ್ತದೆ

ಈ ಕಾರಣಕ್ಕಾಗಿಯೇ, ಪ್ರಭು ನಮ್ಮನ್ನು ತಾನು ಪ್ರೀತಿಸಿದಂತೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಆಜ್ಞಾಪಿಸುತ್ತಾರೆ ಎಂದು ಜಗದ್ಗುರು ಲಿಯೋರವರು ಹೇಳಿದರು.

ನಮ್ಮೊಳಗೆ ಪ್ರೀತಿಯನ್ನು ಹುಟ್ಟಿಸುವುದು ಯೇಸುವಿನ ಪ್ರೀತಿಯೇ,ಎಂದು ಜಗದ್ಗುರುಗಳು ಒತ್ತಿಹೇಳಿದರು. ನಿಜವಾದ ಪ್ರೀತಿಗೆ ಕ್ರಿಸ್ತನೇ ಮಾನದಂಡ ಮತ್ತು ಅಳತೆ ಸದಾಕಾಲವೂ ನಿಷ್ಠಾವಂತ, ಶುದ್ಧ ಮತ್ತು ನಿರ್ವ್ಯಾಜ ಪ್ರೀತಿ”ಎಂದು ಹೇಳಿದರು.

ದೇವರು ಮೊದಲು ನಮ್ಮನ್ನು ಪ್ರೀತಿಸುತ್ತಾರೆ ಆದ್ದರಿಂದ ನಾವೂ ಪ್ರೀತಿಸಲು ಸಾಧ್ಯವಾಗುತ್ತದೆ, ಎಂದು ಅವರು ಹೇಳಿದರು. ನಾವು ದೇವರನ್ನು ನಿಜವಾಗಿ ಪ್ರೀತಿಸಿದಾಗ, ಪರಸ್ಪರವೂ ನಿಜವಾದ ಪ್ರೀತಿಯಿಂದ ಪ್ರೀತಿಸುತ್ತೇವೆ.

ಜಗದ್ಗುರು ಲಿಯೋರವರು ಇದೇ ಸತ್ಯ ಜೀವನಕ್ಕೂ ಅನ್ವಯಿಸುತ್ತದೆ ಎಂದು ತಿಳಿಸಿದರು. ಜೀವನವನ್ನು ಪಡೆದವರು ಮಾತ್ರ ಬದುಕಬಲ್ಲರು ಅದೇ ರೀತಿ, ಪ್ರೀತಿಯನ್ನು ಪಡೆದವರು ಮಾತ್ರ ಪ್ರೀತಿಸಬಲ್ಲರು ಎಂದರು.

ಆದ್ದರಿಂದ ಪ್ರಭುವಿನ ಆಜ್ಞೆಗಳನ್ನು ಅವರು ಸುಳ್ಳು ಪ್ರೀತಿಗಳಿಂದ ನಮ್ಮನ್ನು ಗುಣಪಡಿಸುವ ಜೀವನ ಮಾರ್ಗ ಮತ್ತು ರಕ್ಷಣೆಯತ್ತ ಕರೆದೊಯ್ಯುವ ಆತ್ಮಿಕ ಜೀವನಶೈಲಿ ಎಂದು ವಿವರಿಸಿದರು.

ಪ್ರಭು ನಮ್ಮೊಂದಿಗೇ ಉಳಿಯುವ ಭರವಸೆ ನೀಡುತ್ತಾರೆ

ಕ್ರಿಸ್ತನು ನಮ್ಮನ್ನು ಪ್ರೀತಿಸುವುದರಿಂದಲೇ, ಜೀವನದ ಸಂಕಟಗಳಲ್ಲಿ ಆತ ನಮ್ಮನ್ನು ಒಂಟಿಯಾಗಿಯೇ ಬಿಡುವುದಿಲ್ಲ ಎಂದು ಜಗದ್ಗುರುಗಳು ಹೇಳಿದರು. ಬದಲಾಗಿ, ಅವರು ನಮಗೆ ಪ್ಯಾರಾಕ್ಲೀಟ್ ಅನ್ನು  ಅಂದರೆ ಸಹಾಯಕನಾದ, ಸತ್ಯದ ಆತ್ಮನನ್ನು ವಾಗ್ದಾನ ಮಾಡುತ್ತಾನೆ ಎಂದರು.

ಲೋಕದಲ್ಲಿ ಅನೇಕ ಕೆಡುಕುಗಳಿದ್ದರೂ, ಎಲ್ಲೆಡೆ ಮತ್ತು ಯಾವಾಗಲೂ ಪ್ರೀತಿಯೇ ಆಗಿರುವ ದೇವರಿಗೆ ಸಾಕ್ಷಿಯಾಗಲು ನಾವು ಕರೆಯಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.

ಪ್ರೀತಿಸುವ ನಮ್ಮ ಧ್ಯೇಯದ ಮಧ್ಯೆ, ನಮ್ಮ ಉತ್ತಮ ಪ್ರಯತ್ನಗಳನ್ನೇ ತಡೆಯಲು ಪ್ರಯತ್ನಿಸುವ ಶಕ್ತಿಗಳ ಬಗ್ಗೆ ಜಗದ್ಗುರುಗಳು ಎಚ್ಚರಿಕೆ ನೀಡಿದರು.

ಪವಿತ್ರಾತ್ಮನು ಸತ್ಯದ ಶಕ್ತಿಯಾಗಿದ್ದರೆ, “ಆರೋಪಗಾರ” ಮತ್ತು “ಸುಳ್ಳಿನ ತಂದೆ” ದೇವರಿಗೆ ವಿರೋಧವಾಗಿ ನಿಂತು, ಜನರನ್ನು ಪರಸ್ಪರ ವಿರೋಧಿಗಳಾಗಿಸಲು ಪ್ರಯತ್ನಿಸುತ್ತಾರೆ ಎಂದು ಅವರು ಎಚ್ಚರಿಸಿದರು.

ಕೊನೆಯಲ್ಲಿ, ಜಗದ್ಗುರು ಲಿಯೋರವರು ಪ್ರಭುವಿನ ನಿರ್ವ್ಯಾಜ ಮತ್ತು ಶಾಶ್ವತ ಪ್ರೀತಿಗೆ ಕೃತಜ್ಞರಾಗಿರಲು ಹಾಗೂ ಅವರ ತಾಯಿ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ನಮ್ಮನ್ನು ಸಮರ್ಪಿಸಿಕೊಳ್ಳಲು ಭಕ್ತರನ್ನು ಆಹ್ವಾನಿಸಿದರು.

10 ಮೇ 2026, 16:38