Il Papa, 'la comunicazione sia sempre rispettosa della verit�'

ಜಗದ್ಗುರು XIVನೇ ಲಿಯೋರವರು: ಪ್ರಭುವಿನ ಸ್ವರ್ಗಾರೋಹಣವು ನಮ್ಮನ್ನು ಪರಲೋಕದ ತಂದೆಯತ್ತ ಆಕರ್ಷಿಸಿ, ಐಕ್ಯತೆ ಮತ್ತು ಶಾಂತಿಯನ್ನು ನಿರ್ಮಿಸುತ್ತದೆ.

ಭಾನುವಾರದ ರೆಜಿನಾ ಚೇಲಿ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಪ್ರಭುವಿನ ಸ್ವರ್ಗಾರೋಹಣದ ಕುರಿತು ಚಿಂತನೆ ನಡೆಸಿ, ಕ್ರಿಸ್ತನ ಸಂಪೂರ್ಣ ಜೀವನವೇ ಮೇಲೇರಿಕೆಯ ಚಲನೆಯಾಗಿದೆ ಎಂದು ಹೇಳಿದರು. ಜೊತೆಗೆ, ಕ್ರಿಸ್ತನ ಮಾನವ ಸ್ವಭಾವವು ಸಂಪೂರ್ಣ ಜಗತ್ತನ್ನು ಅಪ್ಪಿಕೊಂಡು ಅದರೊಳಗೆ ಒಳಗೊಳ್ಳುತ್ತದೆ ಹಾಗೂ ನಮ್ಮನ್ನು ಉದ್ಧರಿಸಿ ವಿಮೋಚಿಸುತ್ತದೆ ಎಂದು ಅವರು ಸೂಚಿಸಿದರು.

ವ್ಯಾಟಿಕನ್ ವರದಿ

ಭಾನುವಾರ ಸಂತ ಪೇತ್ರರ ಚೌಕದಲ್ಲಿ ಕೂಡಿದ್ದ ಸುಮಾರು ಇಪ್ಪತ್ತು ಸಾವಿರ ಯಾತ್ರಿಕರು ಮತ್ತು ಭೇಟಿಕೋರರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಜಗತ್ತಿನ ಅನೇಕ ದೇಶಗಳಲ್ಲಿ ಇಂದು ಪ್ರಭುವಿನ ಸ್ವರ್ಗಾರೋಹಣದ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಈ ಮಹೋತ್ಸವದ ಕುರಿತು ಚಿಂತನೆ ನಡೆಸಿದ ಜಗದ್ಗುರುಗಳು, ಯೇಸು ಭೂಮಿಯಿಂದ ಮೇಲಕ್ಕೆತ್ತಲ್ಪಟ್ಟು ಸ್ವರ್ಗದತ್ತ ಏರಿದ ಘಟನೆ ದೂರದ ಭೂತಕಾಲದಲ್ಲಿ ನಡೆದ ರಹಸ್ಯವೆಂದು ನಮಗೆ ತೋರುವ ಸಾಧ್ಯತೆ ಇದೆ ಎಂದು ಹೇಳಿದರು. ಆದರೆ ಅದರ ವಾಸ್ತವಿಕತೆ ಇಂದು ಸಹ ಅತ್ಯಂತ ಸಮಕಾಲೀನವಾಗಿದೆ, ಏಕೆಂದರೆ “ನಾವು ಯೇಸುವಿನೊಂದಿಗೆ ಒಂದೇ ದೇಹದ ಅಂಗಗಳಾಗಿ ತಲೆಯೊಂದಿಗೆ ಒಂದಾಗಿದ್ದೇವೆ” ಮತ್ತು ಪ್ರಭು “ನಮ್ಮನ್ನು ತನ್ನೊಂದಿಗೇ ತಂದೆಯೊಂದಿಗೆ ಸಂಪೂರ್ಣ ಐಕ್ಯತೆಯತ್ತ ಆಕರ್ಷಿಸುತ್ತಾನೆ” ಎಂದು ಅವರು ವಿವರಿಸಿದರು.

ಮೇಲೇರಿಕೆಯ ಚಲನೆ

ಕ್ರಿಸ್ತನ ಸಂಪೂರ್ಣ ಜೀವನವೇ “ಮೇಲೇರಿಕೆಯ ಚಲನೆ” ಎಂದು ಜಗದ್ಗುರುಗಳು ವಿವರಿಸಿದರು. ತಮ್ಮ ಮಾನವ ಸ್ವಭಾವದ ಮೂಲಕ ಪ್ರಭು “ಸಂಪೂರ್ಣ ಜಗತ್ತನ್ನು ಅಪ್ಪಿಕೊಂಡು ಅದರೊಳಗೆ ಸೇರಿಸಿಕೊಂಡು, ಮಾನವರನ್ನು ಅವರ ಪಾಪಪೂರ್ಣ ಸ್ಥಿತಿಯಿಂದ ಉದ್ಧರಿಸಿ ವಿಮೋಚಿಸುತ್ತಾನೆ” ಎಂದು ಅವರು ಹೇಳಿದರು.

ಈಸ್ಟರ್ ಪ್ರೀಫೇಸ್-I ಯಲ್ಲಿರುವಂತೆ, ಪ್ರಭು “ಹಿಂದೆ ಅಂಧಕಾರ, ಅನ್ಯಾಯ ಮತ್ತು ನಿರಾಶೆ ಇದ್ದ ಸ್ಥಳಗಳಿಗೆ ಬೆಳಕು, ಕ್ಷಮೆ ಮತ್ತು ನಿರೀಕ್ಷೆಯನ್ನು ತಂದನು” ಎಂದು ಜಗದ್ಗುರುಗಳು ಹೇಳಿದರು. ಇದರಿಂದ ಮಹಿಳೆಯರು ಮತ್ತು ಪುರುಷರು ಅಂತಿಮ ಪಾಸ್ಕಾ ವಿಜಯವನ್ನು ಹೊಂದಲು ಸಾಧ್ಯವಾಗುತ್ತದೆ ಏಕೆಂದರೆ ದೇವರ ಪುತ್ರನು ಮರಣದ ಮೂಲಕ “ನಮ್ಮ ಮರಣವನ್ನು ನಾಶಮಾಡಿ, ತನ್ನ ಪುನರುತ್ಥಾನದ ಮೂಲಕ ನಮ್ಮ ಜೀವನವನ್ನು ಮರುಸ್ಥಾಪಿಸಿದ್ದಾರೆ.”

ಸ್ವರ್ಗೀಯ ಮಹಿಮೆಯತ್ತ ಆಕರ್ಷಣೆ

ಸ್ವರ್ಗಾರೋಹಣವು “ಜೀವಂತ ಬಂಧ”ದ ಕುರಿತು ನಮಗೆ ಹೇಳುತ್ತದೆ ಎಂದು ಜಗದ್ಗುರುಗಳು ಹೇಳಿದರು. ಅದು ನಮ್ಮನ್ನೂ “ಸ್ವರ್ಗೀಯ ಮಹಿಮೆಯತ್ತ ಆಕರ್ಷಿಸುತ್ತದೆ ಈಗಲೇ ಈ ಜೀವನದಲ್ಲೇ ನಮ್ಮ ದೃಷ್ಟಿಕೋನವನ್ನು ಎತ್ತಿ ವಿಸ್ತರಿಸಿ, ನಮ್ಮ ಚಿಂತನೆ, ಭಾವನೆ ಮತ್ತು ನಡೆ-ನುಡಿಗಳನ್ನು ದೇವರ ಹೃದಯದ ಅಳತೆಯತ್ತ ಹತ್ತಿರಗೊಳಿಸುತ್ತದೆ” ಎಂದು ಅವರು ವಿವರಿಸಿದರು.

ಈ ಮೇಲೇರಿಕೆಯ ಮಾರ್ಗದಲ್ಲಿ, ಯೇಸು ನಮಗೆ ತನ್ನ ಜೀವನ, ಮಾದರಿ ಮತ್ತು ಬೋಧನೆಗಳನ್ನು ನೀಡುವ ಮೂಲಕ ದಾರಿಯನ್ನು ತೋರಿಸಿದ್ದಾನೆ ಎಂದು ಜಗದ್ಗುರುಗಳು ಹೇಳಿದರು.

ಸ್ವರ್ಗದತ್ತ ಸಾಗುವ ಈ ಮೇಲೇರಿಕೆಯ ಮಾರ್ಗವು ಧನ್ಯ ಕನ್ಯಾ ಮರಿಯಮ್ಮನವರ ಜೀವನದಲ್ಲಿಯೂ ಮತ್ತು ಸಂತರ ಜೀವನದಲ್ಲಿಯೂ ಪ್ರತಿಬಿಂಬಿತವಾಗಿರುವುದನ್ನು ನಾವು ಕಾಣಬಹುದು ಎಂದು ಅವರು ಹೇಳಿದರು. “ಧಮ೯ಸಭೆಯ ವಿಶ್ವವ್ಯಾಪಿ ಮಾದರಿಗಳಾಗಿ ನೀಡುವವರು ಅವರೇ” ಎಂದು ಅವರು ನೆನಪಿಸಿದರು.

ಅದೇ ರೀತಿ, ಜಗದ್ಗುರು ಫ್ರಾನ್ಸಿಸ್ ರವರು ಆಗಾಗ ಹೇಳುತ್ತಿದ್ದಂತೆ, ನಮ್ಮ “ಪಕ್ಕದ ಮನೆ ಸಂತರಲ್ಲಿ” ಕೂಡ ಈ ಮಾದರಿಯನ್ನು ಕಾಣಬಹುದು ಎಂದು ಜಗದ್ಗುರು ಲಿಯೋರವರು ಹೇಳಿದರು. “ತಂದೆಯರು, ತಾಯಂದಿರು, ಅಜ್ಜ-ಅಜ್ಜಿಯರು ಮತ್ತು ಎಲ್ಲ ವಯಸ್ಸಿನ ಹಾಗೂ ಪರಿಸ್ಥಿತಿಯ ಜನರು, ಸಂತೋಷ ಮತ್ತು ಸಮರ್ಪಣೆಯೊಂದಿಗೆ ಸುವಾರ್ತೆಯ ಪ್ರಕಾರ ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸುವವರು” ಈ ಉದಾಹರಣೆಯ ಭಾಗವಾಗಿದ್ದಾರೆ ಎಂದು ಅವರು ಹೇಳಿದರು.

ಐಕ್ಯತೆ ಮತ್ತು ಶಾಂತಿಯ ಫಲಗಳು

ಒಬ್ಬರೊಬ್ಬರ ಬೆಂಬಲ ಮತ್ತು ಪ್ರಾರ್ಥನೆಗಳ ಮೂಲಕ “ನಾವೂ ದಿನದಿಂದ ದಿನಕ್ಕೆ ಸ್ವರ್ಗದತ್ತ ಮೇಲೇರಲು ಕಲಿಯಬಹುದು” ಎಂದು ಜಗದ್ಗುರುಗಳು ಕೊನೆಯಲ್ಲಿ ಹೇಳಿದರು. ಸಂತ ಪೌಲರ ಮಾತಿನಂತೆ, ಸತ್ಯವಾದ, ನ್ಯಾಯವಾದ ಮತ್ತು ಪ್ರೀತಿಗೆ ಪಾತ್ರವಾದ ವಿಷಯಗಳ ಮೇಲೆ ಮನಸ್ಸು ಕೇಂದ್ರೀಕರಿಸಬೇಕು ಎಂದು ಅವರು ಸೂಚಿಸಿದರು.

ದೀಕ್ಷಾಸ್ನಾನದ ಮೂಲಕ ನಮಗೆ ದೊರೆತ ದೈವಿಕ ಜೀವನವು “ನಮ್ಮನ್ನು ನಿರಂತರವಾಗಿ ತಂದೆಯತ್ತ ಆಕರ್ಷಿಸುತ್ತದೆ ಅದು ನಮ್ಮೊಳಗೂ ನಮ್ಮ ಸುತ್ತಲೂ ಬೆಳೆಯುತ್ತಾ, ಜಗತ್ತಿನಲ್ಲಿ ಐಕ್ಯತೆ ಮತ್ತು ಶಾಂತಿಯ ಅಮೂಲ್ಯ ಫಲಗಳನ್ನು ಹರಡಬಲ್ಲದು” ಎಂದು ಅವರು ಹೇಳಿದರು.

17 ಮೇ 2026, 15:52