ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್ ವೀಕ್ಷಣಾಲಯಕ್ಕೆ: ಸೃಷ್ಟಿಯಲ್ಲಿ ದೇವರನ್ನು ಕಂಡುಹಿಡಿಯಲು ಧರ್ಮ ಸಭೆ ವಿಜ್ಞಾನವನ್ನು ಅಪ್ಪಿಕೊಳ್ಳುತ್ತದೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಸೋಮವಾರ ವ್ಯಾಟಿಕನ್ ವೀಕ್ಷಣಾಲಯ ಪ್ರತಿಷ್ಠಾನದ ನಿರ್ದೇಶಕ ಮಂಡಳಿಯ ಸದಸ್ಯರನ್ನು ಭೇಟಿಯಾಗಿ ವಿಶೇಷ ಸಭೆ ನಡೆಸಿದರು.
ತಮ್ಮ ಭಾಷಣದಲ್ಲಿ, 1891ರಲ್ಲಿ ಜಗದ್ಗುರು XIIIನೇ ಲಿಯೋರವರು ವ್ಯಾಟಿಕನ್ ವೀಕ್ಷಣಾಲಯವನ್ನು ಮರುಸ್ಥಾಪಿಸಿದ ಸಂದರ್ಭವನ್ನು ಜಗದ್ಗುರು XIVನೇ ಲಿಯೋರವರು ಸ್ಮರಿಸಿದರು. ಆ ಕಾಲದಲ್ಲಿ ವಿಜ್ಞಾನವನ್ನು ಧರ್ಮಕ್ಕೆ ವಿರುದ್ಧವಾದ ಸತ್ಯದ ಮೂಲವೆಂದು ಕೆಲವರು ಪ್ರಸ್ತುತಪಡಿಸುತ್ತಿದ್ದರು. ಆದರೆ ಜಗದ್ಗುರು XIIIನೇ ಲಿಯೋರವರು , “ಧಮ೯ಸಭೆ ಮತ್ತು ಅದರ ಧರ್ಮ ಮಾರ್ಗದಶ೯ಕರು ನಿಜವಾದ ಮತ್ತು ದೃಢವಾದ ವಿಜ್ಞಾನಕ್ಕೆ ವಿರೋಧಿಗಳಲ್ಲ, ಮಾನವೀಯವಾಗಿರಲಿ ಅಥವಾ ದೈವಿಕವಾಗಿರಲಿ, ಅವರು ಅದನ್ನು ಅಪ್ಪಿಕೊಳ್ಳುತ್ತಾರೆ, ಉತ್ತೇಜಿಸುತ್ತಾರೆ ಮತ್ತು ಸಂಪೂರ್ಣ ಸಮರ್ಪಣೆಯಿಂದ ಪ್ರೋತ್ಸಾಹಿಸುತ್ತಾರೆ” ಎಂದು ಘೋಷಿಸಿದ್ದರು ಎಂದು ಜಗದ್ಗುರುಗಳು ನೆನಪಿಸಿದರು.
ಇಂದಿನ ಕಾಲದಲ್ಲಿ ನಂಬಿಕೆ ಮತ್ತು ವಿಜ್ಞಾನ ಎರಡಕ್ಕೂ ಮತ್ತಷ್ಟು ಅಪಾಯಕಾರಿ ಸವಾಲು ಎದುರಾಗುತ್ತಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಅಂದರೆ, ವಸ್ತುನಿಷ್ಠ ಸತ್ಯದ ಅಸ್ತಿತ್ವವನ್ನೇ ನಿರಾಕರಿಸುವ ಮನೋಭಾವ. “ನಮ್ಮ ಜಗತ್ತಿನಲ್ಲಿ ಅತಿಯಾಗಿ ಜನರು ವಿಜ್ಞಾನ ಮತ್ತು ಧರ್ಮ ಸಭೆ ಸ್ಪಷ್ಟವಾಗಿ ಬೋಧಿಸುವ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು. “ನಮ್ಮ ಭೂಮಿಯ ರಕ್ಷಣೆಯ ಜವಾಬ್ದಾರಿ ಮತ್ತು ಅದರಲ್ಲಿರುವ ಜನರ, ವಿಶೇಷವಾಗಿ ದುರ್ಬಲರ ಕಲ್ಯಾಣದ ಹೊಣೆಗಾರಿಕೆ ನಮ್ಮ ಮೇಲಿದೆ. ಆದರೆ ಮಾನವರನ್ನೂ ಪ್ರಕೃತಿಯನ್ನೂ ಅಜಾಗರೂಕತೆಯಿಂದ ದುರುಪಯೋಗಪಡಿಸಿಕೊಳ್ಳುವುದರಿಂದ ಅವರ ಜೀವಗಳು ಅಪಾಯಕ್ಕೊಳಗಾಗುತ್ತಿವೆ” ಎಂದು ಹೇಳಿದರು.
ಖಗೋಳಶಾಸ್ತ್ರದ ಮೂಲಕ ಆಕಾಶಮಂಡಲವನ್ನು ಅಧ್ಯಯನ ಮಾಡುವ ಧರ್ಮ ಸಭೆಯ ಬಯಕೆ, ಧರ್ಮ ಸಭೆಯ “ಕಠಿಣ ಮತ್ತು ಪ್ರಾಮಾಣಿಕ ವಿಜ್ಞಾನವನ್ನು” ತನ್ನ ಗುರುತಿನ ಪ್ರಮುಖ ಅಂಶವೆಂದು ಸ್ವೀಕರಿಸಿರುವುದನ್ನು ತೋರಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಆಶ್ಚರ್ಯಭರಿತ ಮನಸ್ಸಿನಿಂದ ನೋಡುವ ಸಾಮರ್ಥ್ಯವು ದೇವರು ಮಾನವರಿಗೆ ನೀಡಿದ ಅಮೂಲ್ಯ ವರವಾಗಿದೆ ಎಂದರು.
ರಾತ್ರಿ ಆಕಾಶವನ್ನು ನೋಡುವಾಗ, ಶ್ರೀಮಂತರಿಗೂ ಬಡವರಿಗೂ ಸಮಾನವಾಗಿ ಲಭ್ಯವಾಗುವ ಅದ್ಭುತ ಸೌಂದರ್ಯದ ಖಜಾನೆಯನ್ನು ನಾವು ಅನುಭವಿಸುತ್ತೇವೆ ಎಂದು ಜಗದ್ಗುರುಗಳು ಹೇಳಿದರು. ವಿಭಜಿತವಾಗಿರುವ ನಮ್ಮ ಜಗತ್ತಿನಲ್ಲಿ ಇದು ಇನ್ನೂ ಎಲ್ಲರಿಗೂ ಸಾಮಾನ್ಯವಾದ ಸಂತೋಷದ ಮೂಲಗಳಲ್ಲಿ ಒಂದಾಗಿದೆ ಎಂದರು. “ಆಕಾಶಮಂಡಲವನ್ನು ಧ್ಯಾನಿಸುವುದು ನಮ್ಮ ಭಯಗಳು ಮತ್ತು ವೈಫಲ್ಯಗಳನ್ನು ದೇವರ ಅಪಾರ ಮಹಿಮೆಯ ಬೆಳಕಿನಲ್ಲಿ ನೋಡುವಂತೆ ಆಹ್ವಾನಿಸುತ್ತದೆ” ಎಂದು ಅವರು ಹೇಳಿದರು.
ಆದರೆ ಮಾನವ ನಿರ್ಮಿತ ಕೃತಕ ಬೆಳಕುಗಳು ದೇವರು ಆಕಾಶದಲ್ಲಿ ಇಟ್ಟಿರುವ ನಕ್ಷತ್ರಗಳ ಪ್ರಕಾಶವನ್ನು ಮಸುಕುಗೊಳಿಸಿವೆ ಎಂದು ಜಗದ್ಗುರುಗಳು ವಿಷಾದಿಸಿದರು. ಈ ಕಾರಣದಿಂದ ವ್ಯಾಟಿಕನ್ ವೀಕ್ಷಣಾಲಯದ ಕಾರ್ಯ ಇಂದು ಇನ್ನಷ್ಟು ಮಹತ್ವ ಪಡೆದಿದೆ ಎಂದರು. ಪ್ರತಿಷ್ಠಾನದ ಕಾರ್ಯಗಳು ಬೇಸಿಗೆ ಶಾಲೆಗಳು ಮತ್ತು ಕಾರ್ಯಾಗಾರಗಳ ಮೂಲಕ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರವನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು. ಈ ಮೂಲಕ ವೀಕ್ಷಣಾಲಯದ ದೂರದರ್ಶಕಗಳು ದೇವರ ಸೃಷ್ಟಿಯ ಮಹಿಮೆಯನ್ನು ಗೌರವ, ಆಳವಾದ ಚಿಂತನೆ ಮತ್ತು ಸಂತೋಷದೊಂದಿಗೆ ಅನುಭವಿಸುವ ಸ್ಥಳಗಳಾಗಿ ಉಳಿಯುತ್ತಿವೆ ಎಂದರು.
ಕೊನೆಯಲ್ಲಿ, ಕ್ರೈಸ್ತ ಧರ್ಮದ ಮೂಲವೇ ಅವತಾರ ರಹಸ್ಯ ಎಂಬುದನ್ನು ನಂಬಿಗಸ್ತರು ಎಂದಿಗೂ ಮರೆಯಬಾರದು ಎಂದು ಜಗದ್ಗುರು ಲಿಯೋರವರು ಹೇಳಿದರು. ದೇವರು ತನ್ನ ಸೃಷ್ಟಿಯ ಮೂಲಕ ತಾನೇ ಪ್ರಕಟಿಸಿಕೊಂಡು, ಅದನ್ನು ವಿಮೋಚಿಸಲು ತನ್ನ ಏಕೈಕ ಪುತ್ರನನ್ನು ಕಳುಹಿಸಿದ್ದಾನೆ ಎಂದು ಅವರು ನೆನಪಿಸಿದರು. ಸೃಷ್ಟಿಯನ್ನು ಇನ್ನಷ್ಟು ಆಳವಾಗಿ ಅರಿಯಬೇಕೆಂಬ ಹಂಬಲವು, ಪ್ರತಿಯೊಬ್ಬ ಮಾನವ ಆತ್ಮದ ಹೃದಯದಲ್ಲಿ ನೆಲೆಸಿರುವ ದೇವರಿಗಾಗಿ ಇರುವ ಅಶಾಂತ ಬಯಕೆಯ ಪ್ರತಿಬಿಂಬವೇ ಆಗಿದೆ ಎಂದು ಅವರು ಹೇಳಿದರು.
