ರೋಮ್‌ನ ಸಪಿಯೆಂಜಾ ವಿಶ್ವವಿದ್ಯಾಲಯದ ಪ್ರಾರ್ಥನಾ ಮಂದಿರ. ರೋಮ್‌ನ ಸಪಿಯೆಂಜಾ ವಿಶ್ವವಿದ್ಯಾಲಯದ ಪ್ರಾರ್ಥನಾ ಮಂದಿರ. 

ರೋಮಿನ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಜಗದ್ಗುರು ಲಿಯೋರವರ ಭೇಟಿಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಮೇ 14ರಂದು ಜಗದ್ಗುರುಗಳು ರೋಮಿನ ಸಪಿಯೆಂಜಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯದ ಚಾಪೆಲ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ವಿಶೇಷವಾಗಿ ರೋಮಿನ ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಅದು ಕುಟುಂಬದಂತೆಯೇ ಅನಿಸುವ ಸ್ಥಳವಾಗಿದೆ.

ವ್ಯಾಟಿಕನ್ ವರದಿ

ರೋಮಿನ ಸಪಿಯೆಂಜಾ ವಿಶ್ವವಿದ್ಯಾಲಯದಲ್ಲಿ ಮೇ 14ರಂದು ಜಗದ್ಗುರು XIVನೇ ಲಿಯೋರವರ ಭೇಟಿಗಾಗಿ ವಿದ್ಯಾರ್ಥಿಗಳಲ್ಲಿ ಅಪಾರ ಉತ್ಸಾಹ ಮನೆ ಮಾಡಿದೆ. ಯೂರೋಪಿನ ಅತಿದೊಡ್ಡ ವಿಶ್ವವಿದ್ಯಾಲಯವಾಗಿರುವ ಈ ಕ್ಯಾಂಪಸ್‌ನಲ್ಲಿ ಅಧ್ಯಯನ, ಸಂಶೋಧನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಚರ್ಚೆಗಳು ನಡೆಯುತ್ತವೆ. ವಿಶ್ವವಿದ್ಯಾಲಯದ ಚಾಪ್ಲಿನ್ ವಂ. ಸ್ವಾಮಿ ಗ್ಯಾಬ್ರಿಯೆಲೆ ವೆಕ್ಕಿಯೋನೆರವರ ಪ್ರಕಾರ, ಇದು “ಮಾನವ ಹೃದಯಗಳ ಪ್ರಯೋಗಾಲಯ”ದಂತಿದ್ದು, ವಿಶ್ವದ ವಿವಿಧ ಭಾಗಗಳಿಂದ ಬಂದ 1.25 ಲಕ್ಷ ವಿದ್ಯಾರ್ಥಿಗಳು ಇಲ್ಲಿಂದ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಇಲ್ಲಿ 21ನೇ ಶತಮಾನಕ್ಕೆ ತಕ್ಕ ರೀತಿಯಲ್ಲಿ ನಂಬಿಕೆ ಮತ್ತು ವಿಚಾರಶೀಲತೆಯನ್ನು ಒಟ್ಟಿಗೆ ಬದುಕುವ ಪ್ರಯತ್ನ ನಡೆಯುತ್ತಿದೆ.

ವಿಶ್ವವಿದ್ಯಾಲಯದ ಚಾಪೆಲ್ ಅನೇಕ ವಿದ್ಯಾರ್ಥಿಗಳಿಗೆ ಮನೆಯಂತಾಗಿದೆ. ವಿಶೇಷವಾಗಿ ರೋಮಿನ ಹೊರಗಿನಿಂದ ಬಂದ ವಿದ್ಯಾರ್ಥಿಗಳಿಗೆ ಇದು ಕುಟುಂಬದ ಭಾವನೆಯನ್ನು ನೀಡುತ್ತಿದೆ. ಒಬ್ಬ ವಿದ್ಯಾರ್ಥಿನಿ, ಕಾಲೇಜು ಜೀವನದ ಆರಂಭದಲ್ಲಿ ಅಪಾರ ಏಕಾಂತ ಅನುಭವಿಸಿದ್ದಾಗಿ ಹೇಳುತ್ತಾಳೆ. ಆದರೆ ಚಾಪೆಲ್‌ನಲ್ಲಿ ತನ್ನಂತೆಯೇ ಆಧ್ಯಾತ್ಮಿಕ ಅರ್ಥವನ್ನು ಹುಡುಕುವ ಸ್ನೇಹಿತರನ್ನು ಕಂಡ ನಂತರ ಜೀವನದಲ್ಲಿ ಹೊಸ ಭರವಸೆ ಮೂಡಿದೆ ಎಂದು ಹಂಚಿಕೊಳ್ಳುತ್ತಾಳೆ. ಜಗದ್ಗುರು ಲಿಯೋರವರ ಆಯ್ಕೆಯ ಕ್ಷಣವನ್ನು ತಾನು ನೇರವಾಗಿ ಅನುಭವಿಸಿದ್ದರಿಂದ, ಅವರ ಸಪಿಯೆಂಜಾ ಭೇಟಿ ತನ್ನ ಪಾಲಿಗೆ ವಿಶೇಷ ಹಾಗೂ ಐತಿಹಾಸಿಕ ಕ್ಷಣವಾಗಿದೆ ಎಂದು ಹೇಳಿದ್ದಾಳೆ.

ಚಾಪೆಲ್ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮತ್ತು ಆತ್ಮಪರಿಶೀಲನೆಯ ಸ್ಥಳವಾಗಿಯೂ ಪರಿಣಮಿಸಿದೆ. ಅರ್ಥಶಾಸ್ತ್ರ ವಿದ್ಯಾರ್ಥಿನಿಯಾದ ಬಿಯಾಟ್ರಿಸ್, ಅನೇಕ ಸ್ಥಳಾಂತರಗಳಿಂದ ತನ್ನನ್ನು “ಶಾಶ್ವತ ಅನ್ಯಳು” ಎಂದು ಭಾವಿಸಿದ್ದಾಗಿ ಹೇಳುತ್ತಾಳೆ. ಆದರೆ ಈಗ ಈ ಚಾಪೆಲ್ ತನ್ನ ಜೀವನದ ಆಧಾರವಾಗಿದೆ. ದುಃಖ, ಭಯ, ಸಂತೋಷ ಅಥವಾ ಏಕಾಂತದ ಕ್ಷಣಗಳಲ್ಲಿ ತಾನು ಇಲ್ಲಿಗೆ ಬರುತ್ತೇನೆ ಎಂದು ಹೇಳುತ್ತಾಳೆ. ಇಲ್ಲಿ ತಾನು ಒಂದು ಕುಟುಂಬವನ್ನು ಕಂಡುಕೊಂಡಿದ್ದು, ಜೀವನದ ದಾರಿಯನ್ನು ಮರುಪಡೆಯಲು ಸಹಾಯವಾಗಿದೆ ಎಂದು ಅವಳು ಹಂಚಿಕೊಂಡಿದ್ದಾಳೆ.

ಇನ್ನೊಬ್ಬ ವಿದ್ಯಾರ್ಥಿ, ಧರ್ಮ ಸಭೆಯಿಂದ ದೂರವಾಗಿದ್ದ ತನ್ನ ಜೀವನವು ವಂ.ಸ್ವಾಮಿ ಫ್ಯಾಬಿಯೋ ರೋಸಿನಿ ನಡೆಸಿದ “ಟೆನ್ ಕಮಾಂಡ್‌ಮೆಂಟ್ಸ್” ಕಾರ್ಯಕ್ರಮದ ನಂತರ ಬದಲಾಗತೊಡಗಿತು ಎಂದು ಹೇಳುತ್ತಾನೆ. ಇನ್ನೂ ಸಂಪೂರ್ಣ ಕ್ರೈಸ್ತನಾಗಿಲ್ಲವೆಂದು ಹೇಳಿದರೂ, ಯೇಸುವಿನ ಮಾನವೀಯತೆ ಮತ್ತು ದೈವಿಕತೆ ತನ್ನ ಮನಸ್ಸನ್ನು ಸ್ಪರ್ಶಿಸುತ್ತಿದೆ ಎಂದು ಹೇಳಿದ್ದಾನೆ. ಮತ್ತೊಬ್ಬ ಕಲಾ ಇತಿಹಾಸ ವಿದ್ಯಾರ್ಥಿ, ಅಧ್ಯಯನ ಮತ್ತು ನಂಬಿಕೆ ಬೇರೆಬೇರೆ ಅಲ್ಲ ಎಂದು ಹೇಳುತ್ತಾನೆ. ಬಡ ಮಕ್ಕಳಿಗಾಗಿ ಆಟಿಕೆ ಸಂಗ್ರಹಿಸುವಂತಹ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ, ಸಹಾನುಭೂತಿ ಮತ್ತು ಆತ್ಮೀಯತೆಯ ಸಮುದಾಯ ನಿರ್ಮಾಣವಾಗಿದೆ ಎಂದು ತಿಳಿಸುತ್ತಾನೆ.

ಚಾಪೆಲ್‌ನಲ್ಲಿರುವ ಯಾಜಕರು ಯುವಕರೊಂದಿಗೆ ಸ್ನೇಹಪೂರ್ಣವಾಗಿ ಬೆರೆತು ಅವರ ಚಿಂತೆಗಳನ್ನು ಆಲಿಸುವುದನ್ನು ತಮ್ಮ ಪ್ರಮುಖ ಕಾರ್ಯವೆಂದು ಪರಿಗಣಿಸುತ್ತಾರೆ. ಉಪ-ಚಾಪ್ಲಿನ್ ವಂ.ಸ್ವಾಮಿ ಕ್ಲಾಡಿಯೋ ಟಾಗ್ಲಿಯಾಪಿಯೆತ್ರಾರವರ ಪ್ರಕಾರ, ಯುವಕರನ್ನು ಸೆಳೆಯುವುದಕ್ಕಿಂತ ಅವರ ಜೀವನದ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಕೆಲವೊಮ್ಮೆ ಸಾಮಾನ್ಯ ಮಾತುಕತೆಗಳೇ ಆಳವಾದ ಆಧ್ಯಾತ್ಮಿಕ ಸಂವಾದಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಅವರು ಹೇಳುತ್ತಾರೆ. ಜಗದ್ಗುರು XIVನೇ ಲಿಯೋರವರ ಭೇಟಿ, ದೇವರ ಜ್ಞಾನ ಮತ್ತು ಮಾನವ ಜ್ಞಾನವನ್ನು ಒಂದಾಗಿ ಸೇರಿಸುವ ಅಗತ್ಯವನ್ನು ನೆನಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ಯುವಜನತೆ ಎದುರಿಸುತ್ತಿರುವ ಮಾನಸಿಕ ಒತ್ತಡ, ಸಾಮಾಜಿಕ ಜಾಲತಾಣಗಳ ದುರುಪಯೋಗ ಮತ್ತು ನಿಯಂತ್ರಣವಿಲ್ಲದ ಕೃತಕ ಬುದ್ಧಿಮತ್ತೆಯ ಬಳಕೆ ಕುರಿತು ಫಾ. ವೆಕ್ಕಿಯೋನೆ ಆತಂಕ ವ್ಯಕ್ತಪಡಿಸಿದ್ದಾರೆ. ಯುವಕರು ತಮ್ಮ ನಿಜವಾದ ಗುರಿಗಳನ್ನು ಅರಿತು ಬದುಕಲು ಮಾರ್ಗದರ್ಶನ ನೀಡುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದ್ದಾರೆ. ಸಪಿಯೆಂಜಾ ಚಾಪೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಧಾರ್ಮಿಕ ನೆರವೇ ಅಲ್ಲ, ಆತ್ಮೀಯ ಬೆಂಬಲ, ಸ್ನೇಹ ಮತ್ತು ಜೀವನದ ಅರ್ಥವನ್ನು ಕಂಡುಕೊಳ್ಳುವ ಅವಕಾಶವೂ ದೊರೆಯುತ್ತಿದೆ.

12 ಮೇ 2026, 11:13