2026.05.22 Costantino Vendrame

“ಲೆಬನಾನ್‌ನ ‘ಸ್ಥಾಪಕ ಪಿತೃ’ ಹಾಗೂ 80 ಸ್ಪೇನ್ ಹುತಾತ್ಮರ ಧನ್ಯೀಕರಣಕ್ಕೆ ಜಗದ್ಗುರುಗಳು ಅನುಮೋದನೆ ನೀಡಿದರು.”

ಪವಿತ್ರರ ಕಾರ್ಯಗಳ ಡಿಕಾಸ್ಟರಿಯು ಅನುಮೋದಿಸಿದ ಆರು ಆದೇಶಗಳು, ಪ್ಯಾಟ್ರಿಯಾರ್ಕ್ ಎಲಿಯಾಸ್ ಹೊಯೆಕ್ ಮತ್ತು ಸ್ಪೇನ್ ಗೃಹಯುದ್ಧದ 80 ಹುತಾತ್ಮರ ಧನ್ಯೀಕರಣಕ್ಕೆ ಅನುಮತಿ ನೀಡುವುದರ ಜೊತೆಗೆ, ಭಾರತದಲ್ಲಿ ಸೇವೆ ಸಲ್ಲಿಸಿದ ಒಬ್ಬ ಇಟಾಲಿಯನ್ ಮಿಷನರಿ ಮತ್ತು ಯುವ ಕ್ಯಾಮರೂನಿಯನ್ ಕಾರ್ಮೆಲೈಟ್ ಸೇರಿ ನಾಲ್ವರನ್ನು ಹೊಸ “ವೆನರೇಬಲ್” ಆಗಿ ಗುರುತಿಸಿವೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಗುರುವಾರ ಪವಿತ್ರರ ಕಾರ್ಯಗಳ ಡಿಕಾಸ್ಟರಿಯಿಂದ ಹೊರಡಿಸಲಾದ ಆರು ಆದೇಶಗಳಿಗೆ ಅನುಮೋದನೆ ನೀಡಿದರು. ಇದರಿಂದ ಲೆಬನಾನ್‌ನ ಮರೋನೈಟ್ ಪ್ಯಾಟ್ರಿಯಾರ್ಕ್ ಎಲಿಯಾಸ್ ಹೊಯೆಕ್ ಹಾಗೂ ಸ್ಪೇನ್ ಗೃಹಯುದ್ಧದ 80 ಹುತಾತ್ಮರ ಧನ್ಯೀಕರಣಕ್ಕೆ ದಾರಿ ತೆರೆದಿದೆ. ಇದೇ ವೇಳೆ ಭಾರತದಲ್ಲಿ ಸೇವೆ ಸಲ್ಲಿಸಿದ ಇಟಾಲಿಯನ್ ಮಿಷನರಿ ವಂ.ಸ್ವಾಮಿ ಕಾನ್ಸ್ಟಾಂಟಿನೋ ವೆಂಡ್ರಾಮೆ ಸೇರಿದಂತೆ ನಾಲ್ವರನ್ನು “ವೆನರೇಬಲ್” ಎಂದು ಗುರುತಿಸಲಾಯಿತು.

ಸ್ಪೇನ್ ಗೃಹಯುದ್ಧದ ಸಮಯದಲ್ಲಿ ಕಥೋಲಿಕರ ವಿರೋಧಿ ಹಿಂಸಾಚಾರದಲ್ಲಿ ಬಲಿಯಾದ 80 ಹುತಾತ್ಮರಲ್ಲಿ 67 ಗುರುಗಳು, ಮೂರು ಕಾರ್ಮೆಲೈಟ್ ಧಾರ್ಮಿಕರು, ಮೂರು ಸೆಮಿನಾರಿಯನ್‌ಗಳು ಮತ್ತು ಏಳು ಸಾಮಾನ್ಯ ವಿಶ್ವಾಸಿಗಳು ಸೇರಿದ್ದರು. ಕೆಲವರನ್ನು ಕೈಕಾಲು ಕಟ್ಟಿ ಸಮುದ್ರಕ್ಕೆ ಎಸೆದರೆ, ಕೆಲವರು ಕಾರಾಗೃಹ ಹಡಗಿನಲ್ಲಿ ಕಾಣೆಯಾಗಿದ್ದರು, ಇನ್ನೂ ಕೆಲವರು ಹತ್ಯೆಗೀಡಾದರು ಅಥವಾ ಶಿಬಿರಗಳಲ್ಲಿ ಮೃತಪಟ್ಟರು. ವಂ.ಸ್ವಾಮಿ ಫ್ರಾನ್ಸಿಸ್ಕೊ ಗೋನ್ಸಾಲೆಸ್ ದೆ ಕೋರ್ದೋವಾ ರವರು ತಮ್ಮ ಜನರನ್ನು ಬಿಟ್ಟು ಹೋಗುವುದನ್ನು ನಿರಾಕರಿಸಿ, ಕೊನೆಯ ಕ್ಷಣದವರೆಗೂ ಪಾಪಸ್ವೀಕಾರ ಮತ್ತು ಜಪಮಾಲೆ ಪ್ರಾರ್ಥನೆ ನಡೆಸಿದ ಧೈರ್ಯಶಾಲಿ ಯಾಜಕರಾಗಿದ್ದರು.

ಲೆಬನಾನ್‌ನ “ಸ್ಥಾಪಕ ಪಿತೃ” ಎಂದು ಗೌರವಿಸಲ್ಪಡುವ ಪ್ಯಾಟ್ರಿಯಾರ್ಕ್ ಎಲಿಯಾಸ್ ಹೊಯೆಕ್ ರವರ ಧನ್ಯೀಕರಣಕ್ಕಾಗಿ ಮಾನ್ಯಗೊಂಡ ಅದ್ಭುತವು 1965ರಲ್ಲಿ ಸಂಭವಿಸಿತು. ದೀರ್ಘಕಾಲದ ಬೆನ್ನುಹುರಿ ಕಾಯಿಲೆಯಿಂದ ಬಳಲುತ್ತಿದ್ದ ಲೆಬನಾನ್ ಸೇನೆಯ ಅಧಿಕಾರಿ ನಯೆಫ್ ಅಬೂ ಅಸ್ಸಿ ರವರು, ಪ್ಯಾಟ್ರಿಯಾರ್ಕ್‌ರನ್ನು ಕನಸಿನಲ್ಲಿ ಕಂಡ ನಂತರ ಸಂಪೂರ್ಣವಾಗಿ ಗುಣಮುಖರಾದರೆಂದು ಹೇಳಲಾಗಿದೆ. ಹೊಯೆಕ್ ರವರು ಲೆಬನಾನ್ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿ, ಯುದ್ಧಕಾಲದಲ್ಲಿ ಧರ್ಮಭೇದವಿಲ್ಲದೆ ಹಸಿದವರಿಗೂ ನಿರಾಶ್ರಿತರಿಗೂ ಆಶ್ರಯ ನೀಡಿದ್ದರು.

“ವೆನರೇಬಲ್” ಪಟ್ಟಕ್ಕೆ ಏರಿಸಲ್ಪಟ್ಟವರಲ್ಲಿ ಕ್ಯಾಮರೂನಿನ ಯುವ ಕಾರ್ಮೆಲೈಟ್ ಸಹೋದರ ಜೀನ್-ಥಿಯರಿ ಆಫ್ ದ ಚೈಲ್ಡ್ ಜೀಸಸ್ ಅಂಡ್ ದ ಪ್ಯಾಷನ್ ಕೂಡ ಸೇರಿದ್ದಾರೆ. ಕೇವಲ 23ನೇ ವಯಸ್ಸಿನಲ್ಲಿ ಎಲುಬಿನ ಕ್ಯಾನ್ಸರ್‌ನಿಂದ ಮೃತಪಟ್ಟ ಅವರು, ತಮ್ಮ ನೋವನ್ನು ಧಾರ್ಮಿಕ ಕರೆಗಾಗಿ ಅರ್ಪಿಸಿದರು. ಮರಣಶಯ್ಯೆಯಲ್ಲಿಯೇ ಅವರು ತಮ್ಮ ಧಾರ್ಮಿಕ ಪ್ರತಿಜ್ಞೆಯನ್ನು ನೆರವೇರಿಸಿ, “ಎಷ್ಟು ಬೆಳಕು… ಯೇಸು ಎಷ್ಟು ಸುಂದರ!” ಎಂಬುದು ಅವರ ಕೊನೆಯ ಮಾತುಗಳಾಗಿದ್ದವು ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಬಡವರ ನಡುವೆ ಸೇವೆ ಸಲ್ಲಿಸಿದ ಇಟಾಲಿಯನ್ ಸೇಲೇಶಿಯನ್ ಮಿಷನರಿ ವಂ.ಸ್ವಾಮಿ ಕಾನ್ಸ್ಟಾಂಟಿನೋ ವೆಂಡ್ರಾಮೆ ರವರನ್ನೂ “ವೆನರೇಬಲ್” ಎಂದು ಘೋಷಿಸಲಾಯಿತು. ಅವರು ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಸರಳ ಜೀವನ ನಡೆಸುತ್ತಾ ಬಡವರಿಗಾಗಿ ಸೇವೆ ಸಲ್ಲಿಸಿದರು. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಕಾರಾಗೃಹದಲ್ಲಿದ್ದರೂ, ತಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಆಶಾವಾದದಿಂದ ಇತರ ಕೈದಿಗಳಿಗೆ ಧೈರ್ಯ ತುಂಬಿದರು.

ಇದೇ ವೇಳೆ “ಸಿಹಿತಿಂಡಿಗಳ ಸಂತ” ಎಂದು ಜನಪ್ರಿಯರಾಗಿದ್ದ ಫ್ರಾ ನಜರೇನೋ ದಾ ಪುಲಾ ರವರನ್ನೂ ಗೌರವಿಸಲಾಯಿತು. ಜನರಿಗೆ ಕಿತ್ತಳೆ ಮತ್ತು ನಿಂಬೆ ಸಿಹಿತಿಂಡಿಗಳನ್ನು ಹಂಚುತ್ತಾ “ನಮೋ ಮರಿಯ” ಪ್ರಾರ್ಥನೆ ಮಾಡಲು ಪ್ರೇರೇಪಿಸುತ್ತಿದ್ದ ಅವರು, ಸರಳತೆ ಮತ್ತು ಪ್ರಾರ್ಥನೆಯ ಜೀವನ ನಡೆಸಿದರು. ಅವರ ಪವಿತ್ರ ಜೀವನ ಮತ್ತು ಸೇವಾಭಾವ ಇಂದು ಸಹ ಅನೇಕ ಜನರಿಗೆ ಸ್ಪೂರ್ತಿಯಾಗಿದೆ.

22 ಮೇ 2026, 18:43