ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಸ್ಪೇನ್ ಪ್ರಧಾನಮಂತ್ರಿಯನ್ನು ಭೇಟಿಯಾದರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರ ಸ್ಪೇನ್ ದೇಶದ ಪ್ರೇಷಿತರ ಯಾತ್ರೆಗೆ ಇನ್ನೂ ಎರಡು ವಾರಗಳಿಗೂ ಕಡಿಮೆ ಸಮಯ ಬಾಕಿ ಇರುವಾಗ, ಜಗದ್ಗುರುಗಳು ವ್ಯಾಟಿಕನ್‌ನಲ್ಲಿ ಸ್ಪೇನ್ ಪ್ರಧಾನಮಂತ್ರಿಯಾದ ಪೆಡ್ರೊ ಸ್ಯಾಂಚೆಜ್ ರವರನ್ನು ಭೇಟಿಯಾದರು.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆಯ ಪ್ರಕಾರ, ಬುಧವಾರ ಬೆಳಗಿನ ಸಾರ್ವಜನಿಕ ಭೇಟಿಗೆ ಮುನ್ನ ನಡೆದ ಈ ಭೇಟಿಯ ನಂತರ, ಪ್ರಧಾನಮಂತ್ರಿಯವರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೋ ಪ್ಯಾರೋಲಿನ್ ಹಾಗೂ ರಾಜ್ಯಗಳ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ರವರನ್ನು ಭೇಟಿಯಾದರು.
ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಸಂಭಾಷಣೆಯಲ್ಲಿ, ಜಗದ್ಗುರುಗಳ ಮುಂಬರುವ ಯಾತ್ರೆಯ ಬಗ್ಗೆ ಸಂತೋಷ ವ್ಯಕ್ತಪಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ. ಇದನ್ನು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಸ್ಪೇನ್ ನಡುವಿನ “ಉತ್ತಮ ಸಂಬಂಧಗಳ ಸಂಕೇತ” ಎಂದು ವರ್ಣಿಸಲಾಯಿತು.
ಪ್ರಪಂಚದ ವಿವಿಧ ಸಂಘರ್ಷಗಳ ಪರಿಣಾಮಗಳು, ವಲಸೆ ಸಮಸ್ಯೆ, ಬಹುಪಕ್ಷೀಯತೆಯ ಮಹತ್ವ, ಅಂತರರಾಷ್ಟ್ರೀಯ ಕಾನೂನಿನ ಗೌರವ ಹಾಗೂ ಶಾಂತಿಗಾಗಿ ನಿರಂತರ ಬದ್ಧತೆಯ ತುರ್ತು ಅಗತ್ಯ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಪತ್ರಿಕಾ ಕಚೇರಿ ತಿಳಿಸಿದೆ.
ಇದರ ಜೊತೆಗೆ, “ಸ್ಥಳೀಯ ಧರ್ಮ ಸಭೆ ಮತ್ತು ಸರ್ಕಾರದ ಅಧಿಕಾರಿಗಳ ನಡುವಿನ ಫಲಪ್ರದ ಸಂವಾದವನ್ನು ಉತ್ತೇಜಿಸುವ ಅಗತ್ಯ, ಹಾಗೆಯೇ ಪರಸ್ಪರ ಗೌರವದ ಆಧಾರದ ಮೇಲೆ ಸಮಾಜದ ವಿವಿಧ ಘಟಕಗಳ ನಡುವೆ ಸಾಮರಸ್ಯವನ್ನು ಬೆಳೆಸಿ, ಸಾಮಾನ್ಯ ಹಿತವನ್ನು ಪ್ರೋತ್ಸಾಹಿಸುವ” ವಿಷಯಗಳ ಕುರಿತೂ ಉಭಯಪಕ್ಷಗಳು ಚರ್ಚೆ ನಡೆಸಿದವು.
