ಜಗದ್ಗುರುಗಳು: ಕ್ರಿಸ್ತನ ವಿಮೋಚನೆಯ 2033ನೇ ವಾರ್ಷಿಕೋತ್ಸವವನ್ನು ಎಲ್ಲಾ ಕ್ರೈಸ್ತರು ಆಚರಿಸಲು ಕರೆಯಲ್ಪಟ್ಟಿದ್ದಾರೆ.
ವ್ಯಾಟಿಕನ್ ವರದಿ
2033ರಲ್ಲಿ ವಿಮೋಚನೆಯ ದ್ವಿಸಹಸ್ರಮಾನೋತ್ಸವವನ್ನು ವಿಶ್ವದ ಎಲ್ಲ ಕ್ರೈಸ್ತ ಪಂಥಗಳೂ ಒಗ್ಗಟ್ಟಿನಿಂದ ಆಚರಿಸುವಂತೆ ಜಗದ್ಗುರು XIVನೇ ಲಿಯೋರವರ ಕರೆ
"2033ರಲ್ಲಿ ಪ್ರಭುವಿನ ವಿಮೋಚನೆಯ ದ್ವಿಸಹಸ್ರಮಾನೋತ್ಸವದ ಆಚರಣೆಯತ್ತ ಸಾಗುವ ಪಯಣವನ್ನು ವಿಶ್ವದ ಎಲ್ಲ ಕ್ರೈಸ್ತ ಪಂಥಗಳೂ ಒಟ್ಟಾಗಿ ಕೈಗೊಳ್ಳಲಿ. ಪುನರುತ್ಥಾನಗೊಂಡ ಪ್ರಭುವಿಗೆ ಸಾಕ್ಷಿಗಳಾಗಿರಬೇಕೆಂಬ ದೇವರ ವರವನ್ನೂ ಕರೆಯನ್ನೂ ಮರುಶೋಧಿಸುತ್ತಾ ಆ ಪಯಣವನ್ನು ಮುಂದುವರಿಸಲಿ."
ಜಗದ್ಗುರು ಲಿಯೋರವರು ಮಂಗಳವಾರ ವ್ಯಾಟಿಕನ್‌ನಲ್ಲಿ, ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹಾಪರ್ವದ ಸಂದರ್ಭದಲ್ಲಿ ಆಗಮಿಸಿದ್ದ ಕಾನ್‌ಸ್ಟಾಂಟಿನೋಪಲ್‌ನ ಎಕ್ಯುಮೆನಿಕಲ್ ಪೇಟ್ರಿಯಾರ್ಕೆಟ್‌ನ ಪ್ರತಿನಿಧಿ ಮಂಡಳಿಯನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಿದರು.
ಮಹಾಪರ್ವದ ನಂತರ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಜಗದ್ಗುರುಗಳು, "ನಿಮ್ಮ ಉಪಸ್ಥಿತಿಯು ನಮ್ಮ ಸಹೋದರಿ ಚರ್ಚಾದ ಕಾನ್‌ಸ್ಟಾಂಟಿನೋಪಲ್ ಧರ್ಮ ಸಭೆಯ ಹಾಗೂ ಅದರ ಕುರುಬ ಮತ್ತು ಮಾರ್ಗದರ್ಶಕರಾದ ಸರ್ವಪೂಜ್ಯ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಬಾರ್ಥೊಲೊಮೆಯೋಸ್ ರವರ ಸಹೋದರಭಾವದ ಸಾಮೀಪ್ಯವನ್ನು ವ್ಯಕ್ತಪಡಿಸುತ್ತದೆ" ಎಂದು ಹೇಳಿದರು.
ಪೂರ್ಣ ಐಕ್ಯತೆಯತ್ತ ಸಾಗುವ ಸಾಮೂಹಿಕ ಬಯಕೆ
ತಮ್ಮ ತಮ್ಮ ಧರ್ಮ ಸಭೆಗಳ ಆಶ್ರಯದಾತರಾದ ಪವಿತ್ರರ ಮಹಾಪರ್ವಗಳ ಸಂದರ್ಭದಲ್ಲಿ ಪರಸ್ಪರ ಭೇಟಿ ನೀಡುವ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರಿಸುವ ಉದ್ದೇಶದಿಂದ ಪ್ರತಿನಿಧಿ ಮಂಡಳಿಯನ್ನು ರೋಮಿಗೆ ಕಳುಹಿಸಿದ್ದಕ್ಕಾಗಿ ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಹಾಗೂ ಪವಿತ್ರ ಸಿನೋಡ್‌ನ ಎಲ್ಲ ಸದಸ್ಯರಿಗೆ ತಾವು ಹೃತ್ಪೂರ್ವಕ ಕೃತಜ್ಞರಾಗಿರುವುದಾಗಿ ಜಗದ್ಗುರುಗಳು ಹೇಳಿದರು.
ಕಳೆದ ವರ್ಷ ಫಾನಾರ್‌ನಲ್ಲಿರುವ ಸಂತ ಜಾರ್ಜ್ ಪೇಟ್ರಿಯಾರ್ಕಲ್ ದೇವಾಲಯದಲ್ಲಿ ಸಂತ ಆಂದ್ರೇಯರ ಮಹಾಪರ್ವದಲ್ಲಿ ಭಾಗವಹಿಸಿದ್ದನ್ನು ಅವರು ಸಂತೋಷದಿಂದ ಸ್ಮರಿಸಿದರು.
ಅದೇ ರೀತಿ, ಎಕ್ಯುಮೆನಿಕಲ್ ಪೇಟ್ರಿಯಾರ್ಕ್ ಬಾರ್ಥೊಲೊಮೆಯೋಸ್ ರವರೊಂದಿಗೆ ನಡೆದ ಭೇಟಿಗಳನ್ನು ಅವರು ಕೃತಜ್ಞತೆಯಿಂದ ನೆನಪಿಸಿಕೊಂಡರು. ಆ ಭೇಟಿಗಳು ಪರಸ್ಪರ ಸ್ನೇಹವನ್ನು ಮತ್ತಷ್ಟು ಗಾಢಗೊಳಿಸಿದವು ಹಾಗೂ ಅನೇಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದವು. ವಿಶೇಷವಾಗಿ, "ಎಲ್ಲಾ ಕ್ರೈಸ್ತರ ಪೂರ್ಣ ಐಕ್ಯತೆಯತ್ತ ಸಾಗುವ ನಮ್ಮ ಸಾಮಾನ್ಯ ಬಯಕೆಯನ್ನು ಇನ್ನಷ್ಟು ಬಲಪಡಿಸಿದವು" ಎಂದು ಅವರು ಹೇಳಿದರು.
ನೈಸಿಯಾ ಮೊದಲ ಮಹಾಸಭೆಯ 1700ನೇ ವಾರ್ಷಿಕೋತ್ಸವ
ಈ ಸಂದರ್ಭದಲ್ಲಿ, ಇಜ್ನಿಕ್‌ನಲ್ಲಿ ಸಂತ ಆಂದ್ರೇಯರ ಮಹಾಪರ್ವದ ಮುನ್ನಾದಿನ ಆಚರಿಸಲಾದ ನೈಸಿಯಾದ ಮೊದಲ ಮಹಾಸಭೆಯ 1700ನೇ ವಾರ್ಷಿಕೋತ್ಸವವು, "ಸರ್ವರ ತಂದೆಯಾಗಿರುವ ದೇವರಲ್ಲಿ ನಂಬಿಕೆಯಿಟ್ಟು, ಯೇಸು ಕ್ರಿಸ್ತರನ್ನು ಪ್ರಭುವಾಗಿಯೂ ದೇವರ ಪುತ್ರನಾಗಿಯೂ ಅಂಗೀಕರಿಸಿ, ನಮ್ಮನ್ನು ಸತ್ಯದ ಹಾಗೂ ಐಕ್ಯತೆಯ ಪರಿಪೂರ್ಣತೆಯತ್ತ ನಡೆಸುವ ಪವಿತ್ರಾತ್ಮನಲ್ಲಿ ವಿಶ್ವಾಸವಿಡುವವರ ನಡುವೆ ಈಗಾಗಲೇ ಅಸ್ತಿತ್ವದಲ್ಲಿರುವ ಐಕ್ಯತೆಗೆ ಪ್ರಬಲ ಸಾಕ್ಷಿಯಾಗಿದೆ" ಎಂದು ಜಗದ್ಗುರುಗಳು ಹೇಳಿದರು.
"ಆ ಸ್ಮರಣೋತ್ಸವವು," ಎಂದು ಜಗದ್ಗುರು ಲಿಯೋರವರು ಒತ್ತಿಹೇಳುತ್ತಾ, "ನೈಸಿಯಾ ವಿಶ್ವಾಸಪ್ರಮಾಣವು ಈ ಐಕ್ಯತಾ ಪಯಣದ ಅಡಿಪಾಯವೂ ಮಾರ್ಗದರ್ಶಕ ತತ್ತ್ವವೂ ಆಗಿರಬೇಕು ಎಂಬುದನ್ನು ಸ್ಪಷ್ಟಪಡಿಸಿತು. ಅದು ನ್ಯಾಯಸಮ್ಮತ ವೈವಿಧ್ಯತೆಯೊಳಗಿನ ನಿಜವಾದ ಐಕ್ಯತೆಯ ಮಾದರಿಯಾಗಿದೆ ತ್ರಿತ್ವದಲ್ಲಿ ಐಕ್ಯತೆ, ಐಕ್ಯತೆಯಲ್ಲಿ ತ್ರಿತ್ವ."
ಶಾಂತಿಯ ವಿಶ್ವಾಸಾರ್ಹ ಸಂಕೇತವಾಗಲು ಕ್ರೈಸ್ತರಿಗೆ ಕರೆ
"ಯುದ್ಧಗಳು, ಹೆಚ್ಚುತ್ತಿರುವ ಧ್ರುವೀಕರಣ, ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಭಜನೆಗಳಿಂದ ಕೂಡಿದ ಈ ಯುಗದಲ್ಲಿ," ಎಂದು ಜಗದ್ಗುರುಗಳು ಹೇಳಿದರು, "ಪರಸ್ಪರ ಸಮನ್ವಯಗೊಂಡು, ಒಂದೇ ವಿಶ್ವಾಸವನ್ನು ಘೋಷಿಸುವ ಮೂಲಕ ಐಕ್ಯಗೊಂಡಿರುವ ಕ್ರೈಸ್ತರು ಶಾಂತಿಯ ವಿಶ್ವಾಸಾರ್ಹ ಸಂಕೇತರಾಗಲು ಕರೆಯಲ್ಪಟ್ಟಿದ್ದಾರೆ. ಅವರು ಶಾಂತಿ ನಿರ್ಮಾಣಕ್ಕಾಗಿ ಸದ್ಭಾವನೆಯುಳ್ಳ ಎಲ್ಲ ಪುರುಷರು ಮತ್ತು ಮಹಿಳೆಯರ ಪ್ರಯತ್ನಗಳಿಗೆ ನಿರ್ಣಾಯಕ ಕೊಡುಗೆ ನೀಡಬೇಕು."
ಪ್ರಸ್ತುತ ಪರಿಸ್ಥಿತಿಯಲ್ಲಿ, "ಇದು ಕೇವಲ ಕ್ರೈಸ್ತ ಸಂದೇಶದ ವಿಶ್ವಾಸಾರ್ಹತೆಯ ಪ್ರಶ್ನೆಯಲ್ಲ; ಮಾನವಕುಲದ ಭವಿಷ್ಯವೇ ಪಣಕ್ಕೊಡ್ಡಲ್ಪಟ್ಟಿದೆ" ಎಂದು ಅವರು ಎಚ್ಚರಿಸಿದರು.
ಇಂದಿನ ಸವಾಲುಗಳಾದ ಶಾಂತಿ, ಹೊಸ ತಂತ್ರಜ್ಞಾನಗಳ ಸಮರ್ಪಕ ಬಳಕೆ ಹಾಗೂ ಸೃಷ್ಟಿಯ ಸಂರಕ್ಷಣೆ ಮುಂತಾದ ವಿಷಯಗಳಲ್ಲಿ ಕ್ರೈಸ್ತರ ನಡುವೆ ಇನ್ನಷ್ಟು ಸಹಕಾರ ಅಗತ್ಯವಾಗಿದೆ ಎಂದು ಜಗದ್ಗುರುಗಳು ಹೇಳಿದರು. "ಈ ಅಗತ್ಯವು ಯೇಸು ಕ್ರಿಸ್ತನ ಸುವಾರ್ತೆಯಿಂದಲೇ ಉದ್ಭವಿಸಿದೆ" ಎಂದು ಅವರು ಒತ್ತಿ ಹೇಳಿದರು.
ಪ್ರತಿಯೊಬ್ಬ ಮಾನವನ ಜೀವ ಮತ್ತು ಘನತೆಯನ್ನು ಕಾಪಾಡುವ ಹೊಣೆಗಾರಿಕೆ
"ಪ್ರತಿಯೊಬ್ಬ ಮಾನವನ ಜೀವ ಮತ್ತು ಘನತೆಯನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಅದರಲ್ಲೂ ವಿಶೇಷವಾಗಿ ಅತಿ ಕಿರಿಯವರು ಮತ್ತು ಅತ್ಯಂತ ಅಗತ್ಯವಂತರ ಬಗ್ಗೆ ನಾವು ತೋರಿಸುವ ಕಾಳಜಿಯೇ ನಮ್ಮ ಇಂದಿನ ಜೀವನವನ್ನೂ ಶಾಶ್ವತ ಗತಿಯನ್ನು ನಿರ್ಧರಿಸುವ ಮಾನದಂಡವಾಗಲಿದೆ" ಎಂದು ಜಗದ್ಗುರುಗಳು ಹೇಳಿದರು.
ತಮ್ಮ ಭಾಷಣದ ಅಂತ್ಯದಲ್ಲಿ, ಈ ಭೇಟಿಗಾಗಿ ಹಾಗೂ ಕ್ರೈಸ್ತರ ಐಕ್ಯತೆಯನ್ನು ಉತ್ತೇಜಿಸಲು ಪ್ರತಿನಿಧಿ ಮಂಡಳಿ ಮತ್ತು ಎಕ್ಯುಮೆನಿಕಲ್ ಪೇಟ್ರಿಯಾರ್ಕೆಟ್ ತೋರಿಸುತ್ತಿರುವ ವೈಯಕ್ತಿಕ ಬದ್ಧತೆಗಾಗಿ ಜಗದ್ಗುರುಗಳು ಮತ್ತೊಮ್ಮೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
"ನಾನು ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ," ಎಂದು ಅವರು ಹೇಳಿದರು. "ದೇಹದಲ್ಲಿಯೂ ವಿಶ್ವಾಸದಲ್ಲಿಯೂ ಸಹೋದರರಾದ ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಆಂದ್ರೇಯರ ಮಧ್ಯಸ್ಥಿಕೆಯ ಮೂಲಕ ನಮ್ಮ ಪರಲೋಕದ ತಂದೆಯಾದ ದೇವರು ತಮ್ಮ ಆಶೀರ್ವಾದದೊಂದಿಗೆ ಸದಾ ನಮ್ಮೊಂದಿಗಿರಲಿ"ಎಂದರು.
