Il Papa, 'Pietro e Paolo diversi ma non avversari'

ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ ಜಗದ್ಗುರುಗಳು: ಸಂತ ಪೇತ್ರ ಮತ್ತು ಸಂತ ಪೌಲರು ವೈವಿಧ್ಯತೆಯಲ್ಲಿನ ಧರ್ಮ ಸಭೆಯ ಐಕ್ಯತೆಯ ಜೀವಂತ ಪ್ರತಿರೂಪಗಳು.

ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ ನಡೆದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು, ಈ ಇಬ್ಬರು ಪ್ರೇಷಿತರ ಸ್ವಭಾವ ಮತ್ತು ಹಿನ್ನೆಲೆಯ ದೃಷ್ಟಿಯಿಂದ ಪರಸ್ಪರ ಬಹಳ ಭಿನ್ನರಾಗಿದ್ದರೂ, ಪವಿತ್ರಾತ್ಮನು ಅವರನ್ನು ಧರ್ಮ ಸಭೆಯ ಹಿತಕ್ಕಾಗಿ ಐಕ್ಯತೆಯಲ್ಲಿ ಒಂದಾಗಿಸಿದನು ಎಂದು ಹೇಳಿದರು.

ವ್ಯಾಟಿಕನ್ ವರದಿ

ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಅಂಗವಾಗಿ, ಜಗದ್ಗುರು XIVನೇ ಲಿಯೋರವರು ಸೋಮವಾರ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಯಾತ್ರಿಕರೊಂದಿಗೆ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಮಹೋತ್ಸವವು ರೋಮಿನ ಧರ್ಮ ಸಭೆಯನ್ನು ವಿಶ್ವದ ಎಲ್ಲ ಸ್ಥಳೀಯ ಧರ್ಮಸಭೆಗಳೊಂದಿಗೆ ನಂಬಿಕೆ ಮತ್ತು ಪ್ರೀತಿಯ ಐಕ್ಯತೆಯಲ್ಲಿ ಬಂಧಿಸುವ ವಿಶೇಷ ಸಂಬಂಧವನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು. ಸಂತ ಪೇತ್ರ ಮತ್ತು ಸಂತ ಪೌಲರು ರೋಮಿನಲ್ಲಿ ಹುತಾತ್ಮರಾದದ್ದು, ಯೇಸು ಕ್ರಿಸ್ತನಲ್ಲಿ ವ್ಯಕ್ತವಾದ ದೇವರ ಅಪಾರ ಪ್ರೀತಿಗೆ ಹೊಸ ಒಡಂಬಡಿಕೆಯ ಮೇಲೆ ಅಚ್ಚೊತ್ತಿದ ಮುದ್ರೆಯಂತಿದೆ ಎಂದು ಅವರು ತಿಳಿಸಿದರು.

“ಈ ಇಬ್ಬರು ಪ್ರೇಷಿತರ ವಾಕ್ಸಾಕ್ಷಿ ಮತ್ತು ಹುತಾತ್ಮತ್ವದ ಮೂಲಕ ಕ್ರಿಸ್ತನ ಸುವಾರ್ತೆ ರೋಮಿನಲ್ಲಿ ಆಳವಾಗಿ ಬೇರುಬಿಟ್ಟಿತು. ಸಾಮ್ರಾಜ್ಯದ ರಾಜಧಾನಿಯಲ್ಲಿಯೇ ಅದು ದೇವರ ಹೊಸ ಅರಿವಿನ ಮೂಲಕ ಹಾಗೂ ಪ್ರತಿಯೊಬ್ಬ ಮಾನವನ ಅನಂತ ಘನತೆಯನ್ನು ಪ್ರಕಟಿಸುವ ಮೂಲಕ ಲೋಕವನ್ನು ನವೀಕರಿಸುವ ತನ್ನ ಶಕ್ತಿಯನ್ನು ತೋರಿಸಿತು. ಅಧಿಕಾರವು ಪ್ರಭುತ್ವ ಸಾಧಿಸುವ ಸಾಧನವಲ್ಲ, ಮಾನವ ಜೀವನಕ್ಕೆ ಸೇವೆ ಸಲ್ಲಿಸುವ ಮಾರ್ಗ ಎಂಬ ಹೊಸ ದೃಷ್ಟಿಕೋನವನ್ನೂ ಅದು ಲೋಕಕ್ಕೆ ನೀಡಿತು” ಎಂದು ಜಗದ್ಗುರುಗಳು ಹೇಳಿದರು. ಯೇಸುವಿನ ಕರೆಗೆ ಸ್ಪಂದಿಸಿದವರ ಮೂಲಕ, ವಿಶ್ವದ ಮಹಾನಗರಗಳಿಂದ ಹಿಡಿದು ಅತಿ ದೂರದ ಪ್ರದೇಶಗಳವರೆಗೂ ಅವರ ಕರೆಯ ಪ್ರತಿಧ್ವನಿ ಇಂದಿಗೂ ಕೇಳಿಸುತ್ತಿದೆ ಎಂದರು.

ಸಂತ ಪೇತ್ರ ಮತ್ತು ಸಂತ ಪೌಲರನ್ನು ಸ್ಮರಿಸುವ ಮೂಲಕ ನಾವೂ ಕ್ರಿಸ್ತನ ಕಾರ್ಯದಲ್ಲಿ ಪಾಲುಗಾರರಾಗುತ್ತೇವೆ ಎಂದು ಜಗದ್ಗುರುಗಳು ಹೇಳಿದರು. ದೇವರ ಕೃಪೆಯು ನಮ್ಮ ಜೀವನದಲ್ಲಿಯೂ ಪ್ರಕಾಶಿಸುತ್ತದೆ, ಏಕೆಂದರೆ ನಾವು ಪರಿಪೂರ್ಣರಲ್ಲದಿದ್ದರೂ ದೇವರಿಂದ ಕ್ಷಮಿಸಲ್ಪಟ್ಟ ಪಾಪಿಗಳಾಗಿ ಬದುಕುತ್ತಿದ್ದೇವೆ. ಪೇತ್ರ ಮತ್ತು ಪೌಲರು ಹಿನ್ನೆಲೆ, ಶಿಕ್ಷಣ ಮತ್ತು ಸ್ವಭಾವದಲ್ಲಿ ಬಹಳ ಭಿನ್ನರಾಗಿದ್ದರು. ಆದರೆ ಒಂದೇ ಪ್ರಭು ಅವರನ್ನು ಒಂದೇ ಮಾದರಿಯಲ್ಲಿ ರೂಪಿಸಲಿಲ್ಲ, ಅವರ ವೈವಿಧ್ಯತೆಯನ್ನೇ ಪವಿತ್ರಾತ್ಮನು ಧರ್ಮ ಸಭೆಯ ಹಿತಕ್ಕಾಗಿ ಐಕ್ಯತೆಯಾಗಿ ಪರಿವರ್ತಿಸಿದನು ಎಂದು ಅವರು ವಿವರಿಸಿದರು.

“ಪ್ರೇಷಿತರ ಬಳಗದಲ್ಲಿ ಪೇತ್ರ ಮತ್ತು ಪೌಲರು ಪರಸ್ಪರ ವಿರೋಧಿಗಳಾಗಿರಲಿಲ್ಲ, ಬದಲಾಗಿ, ಒಬ್ಬನೇ ಪವಿತ್ರಾತ್ಮನು ಅನೇಕ ವೈವಿಧ್ಯತೆಗಳನ್ನು ಒಂದೇ ಐಕ್ಯತೆಯಲ್ಲಿ ಒಗ್ಗೂಡಿಸುವ ಸಂಕೇತಗಳಾದರು” ಎಂದು ಜಗದ್ಗುರುಗಳು ಹೇಳಿದರು. ರೋಮಿನ ಈ ಇಬ್ಬರು ಪೋಷಕ ಸಂತರು ಸಹಭಾಗಿತ್ವದ ಸವಾಲುಗಳನ್ನು ಅನುಭವಿಸಿದರೂ, ದೈವಿಕ ಜೀವದ ಸಂಸ್ಕಾರವಾದ ಐಕ್ಯತೆಯನ್ನು ನಿಷ್ಠೆಯಿಂದ ಬದುಕಿ ಸಾರಿದರು. ಅವರ ಸಾಕ್ಷಿಯು ಕ್ರೈಸ್ತಧರ್ಮವನ್ನು ಅಧಿಕಾರದ ಪ್ರಾಬಲ್ಯದತ್ತವಲ್ಲ, ಸೇವೆ, ಐಕ್ಯತೆ ಮತ್ತು ಸೌಹಾರ್ದತೆಯತ್ತ ಮುನ್ನಡೆಸಿತು ಎಂದು ಅವರು ಹೇಳಿದರು.

ಕೊನೆಯಲ್ಲಿ, ಸಂತ ಪೇತ್ರ ಮತ್ತು ಸಂತ ಪೌಲರ ಮಧ್ಯಸ್ಥಿಕೆಯಿಂದ ಧರ್ಮ ಸಭೆಯು ತನ್ನ “ಕಥೋಲಿಕತೆ”ಯನ್ನು  ಅಂದರೆ ವೈವಿಧ್ಯತೆಯಲ್ಲಿರುವ ವಿಶ್ವವ್ಯಾಪಿ ಐಕ್ಯತೆಯನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ವ್ಯಕ್ತಿಗಳು ಮತ್ತು ಜನಾಂಗಗಳ ನಡುವೆ ಸಹೋದರತ್ವವನ್ನು ಬೆಳೆಸುವ ತನ್ನ ಅಮೂಲ್ಯ ಧ್ಯೇಯವನ್ನು ಧರ್ಮ ಸಭೆಯು ಗುರುತಿಸಲಿ ಐಕ್ಯತೆಗೆ ಧಕ್ಕೆಯುಂಟುಮಾಡುವ ಎಲ್ಲವನ್ನೂ ದೂರವಿಟ್ಟು, ಕ್ರೈಸ್ತ ಐಕ್ಯತಾ ಪಯಣದಲ್ಲಿ ಹಾಗೂ ಎಲ್ಲರೊಂದಿಗೆ ಪ್ರಾಮಾಣಿಕ ಮತ್ತು ಗೌರವಯುತ ಸಂವಾದದಲ್ಲಿ ದೃಢವಾಗಿ ಮುಂದುವರಿಯಲಿ ಎಂದು ಅವರು ಆಶಿಸಿದರು.

29 ಜೂನ್ 2026, 16:38