ಜಗದ್ಗುರು ಲಿಯೋರವರು ಕನ್ಸಿಸ್ಟರಿಗೆ ಚಾಲನೆ ನೀಡಿ, ಕಾರ್ಡಿನಲ್‌ಗಳಿಗೆ ಮುಕ್ತತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ವ್ಯಾಟಿಕನ್ ವರದಿ
“ನಿಮ್ಮ ಸ್ವಾತಂತ್ರ್ಯ, ನಿಮ್ಮ ನಿಷ್ಕಪಟತೆ ಮತ್ತು ನಿಮ್ಮ ನಿಷ್ಠೆ ನನಗೆ ಅಗತ್ಯವಾಗಿದೆ. ಪ್ರಾಮಾಣಿಕ ಸಲಹೆಯು ಯಾವಾಗಲೂ ಧರ್ಮ ಸಭೆಯ ಐಕ್ಯತೆಯ ಅಭಿವ್ಯಕ್ತಿಯಾಗಿದೆ.”
ಈ ಆಹ್ವಾನದೊಂದಿಗೆ ಜಗದ್ಗುರು XIVನೇ ಲಿಯೋರವರು ಶುಕ್ರವಾರ ತಮ್ಮ ಸಹೋದರ ಕಾರ್ಡಿನಲ್‌ಗಳ ಸಮ್ಮುಖದಲ್ಲಿ ಅಸಾಧಾರಣ ಕನ್ಸಿಸ್ಟರಿಗೆ ಚಾಲನೆ ನೀಡಿದರು.
VIನೇ ಪಾಲ್ ಸಭಾಂಗಣದಲ್ಲಿ ನಡೆಯುತ್ತಿರುವ ಈ ಕನ್ಸಿಸ್ಟರಿಯು ಶನಿವಾರ ಸಂಜೆವರೆಗೆ ನಡೆಯಲಿದ್ದು, ಜಗದ್ಗುರುಗಳೊಂದಿಗೆ ಸೇರಿ ವಿವೇಚನೆ ನಡೆಸಲು ಕಾರ್ಡಿನಲ್‌ಗಳಿಗೆ ಇದು ಒಂದು ಮಹತ್ವದ ಅವಕಾಶವಾಗಿದೆ.
ಜನವರಿಯಲ್ಲಿ ತಾವು ವ್ಯಕ್ತಪಡಿಸಿದ್ದ ಆಶಯವನ್ನು ಪುನರುಚ್ಚರಿಸಿದ ಜಗದ್ಗುರುಗಳು, ಈ ಸಭೆಗಳು ಕಾರ್ಡಿನಲ್‌ಗಳಿಗೂ ಹಾಗೂ ಜಗದ್ಗುರುಗಳಿಗೂ "ಧರ್ಮ ಸಭೆಯ ಸೇವೆಯಲ್ಲಿ ಒಟ್ಟಾಗಿ ಹೇಗೆ ಕಾರ್ಯನಿರ್ವಹಿಸಬೇಕು" ಎಂಬುದನ್ನು ಇನ್ನಷ್ಟು ಉತ್ತಮವಾಗಿ ಕಲಿಯಲು ಹಾಗೂ "ನನ್ನ ಧರ್ಮಸೇವೆಯ ಮತ್ತು ಇಡೀ ಧರ್ಮ ಸಭೆಯ ಧ್ಯೇಯದ ಸೇವೆಯಲ್ಲಿ ನನಗೆ ನೆರವಾಗುವ ಸಂವಾದವನ್ನು ಮುಂದುವರಿಸಲು" ಸಹಕಾರಿಯಾಗಲಿ ಎಂದು ಆಶಿಸಿದರು.
ಜಗದ್ಗುರುಗಳ ಪ್ರಕಾರ, ಧರ್ಮ ಸಭೆಯ ಐಕ್ಯತೆಯು ಒಮ್ಮೆ ಸಾಧಿಸಿದರೆ ಸಾಕಾಗುವಂತಹದ್ದಲ್ಲ. ಅದು ಪ್ರತಿದಿನದ ಮನಪರಿವರ್ತನೆ, ಪ್ರಾರ್ಥನೆ, ಪರಸ್ಪರ ವಿಶ್ವಾಸಭರಿತ ಸಂಬಂಧಗಳು ಮತ್ತು ಒಬ್ಬರನ್ನೊಬ್ಬರು ಆಲಿಸಲು ಇರುವ ಸಿದ್ಧತೆಯನ್ನು ನಿರಂತರವಾಗಿ ಬೇಡಿಕೊಳ್ಳುತ್ತದೆ.
ಕಳೆದ ಕೆಲವು ತಿಂಗಳುಗಳಲ್ಲಿ ಸಿನೋಡಾಲಿಟಿಯ ಮೂಲಕ ಧರ್ಮ ಸಭೆಯಲ್ಲಿ ಐಕ್ಯತೆಯನ್ನು ಬೆಳೆಸುವಂತೆ ತಾವು ನೀಡಿದ ಆಹ್ವಾನವನ್ನು ಜಗದ್ಗುರುಗಳು ಮತ್ತೊಮ್ಮೆ ನೆನಪಿಸಿದರು. ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ ವರದಾನ ಮತ್ತು ಸೇವೆಯ ಅನುಸಾರ ಧರ್ಮ ಸಭೆಯ ಧ್ಯೇಯದಲ್ಲಿ ಸಹಕರಿಸಬೇಕೆಂದು ಅವರು ಹೇಳಿದರು.
ನಂತರ, ಮುಂದಿನ ಎರಡು ದಿನಗಳಲ್ಲಿ ಕಾರ್ಡಿನಲ್‌ಗಳು ಚರ್ಚಿಸಲಿರುವ ನಾಲ್ಕು ಪ್ರಮುಖ ವಿಷಯಗಳನ್ನು ಅವರು ವಿವರಿಸಿದರು.
ಮೊದಲನೆಯದಾಗಿ, ಧರ್ಮ ಸಭೆ ಸುವಾರ್ತೆಯನ್ನು ಸಾರಲು ಕರೆಯಲ್ಪಟ್ಟಿರುವ ಇಂದಿನ ಜಗತ್ತಿನ ಕುರಿತು ಅವರು ಚಿಂತನೆ ನಡೆಸಲಿದ್ದಾರೆ. ಈ ವಾಸ್ತವ ಪರಿಸ್ಥಿತಿಯ ಅರಿವು, ಜಗತ್ತಿನ ಬೀದಿಗಳಲ್ಲಿ ನಡೆಯುತ್ತಾ ಇತಿಹಾಸದಲ್ಲಿ ನಮ್ಮ ಮುಂದೆ ಸಾಗುವ ಯೇಸು ಕ್ರಿಸ್ತರನ್ನು ಗುರುತಿಸಲು ಅವರಿಗೆ ಸಹಾಯ ಮಾಡುತ್ತದೆ.
ಎರಡನೆಯದಾಗಿ, ಅಧಿಕಾರದ ಸಂಸ್ಕೃತಿ ಮತ್ತು ಪ್ರೀತಿಯ ನಾಗರಿಕತೆ ಎಂಬ ಪರಿಕಲ್ಪನೆಗಳ ಪರಿಣಾಮಗಳ ಕುರಿತು ಕಾರ್ಡಿನಲ್‌ಗಳು ಚರ್ಚಿಸಲಿದ್ದಾರೆ.
ಕಾರ್ಡಿನಲ್‌ಗಳಲ್ಲಿ ಅನೇಕರು ಯುದ್ಧಪೀಡಿತ ರಾಷ್ಟ್ರಗಳಿಂದ ಬಂದವರಾಗಿದ್ದಾರೆ ಎಂದು ಜಗದ್ಗುರುಗಳು ಗಮನಸೆಳೆದರು. ಆದಾಗ್ಯೂ, ಜಗತ್ತಿನ ಯಾವ ಸಮಾಜವೂ ಸಂಘರ್ಷ, ಪ್ರಾಬಲ್ಯ ಮತ್ತು ವಿಭಜನೆಯ ವಿವಿಧ ರೂಪಗಳಿಂದ ಮುಕ್ತವಾಗಿಲ್ಲ ಎಂದು ಅವರು ನೆನಪಿಸಿದರು.
ತಮ್ಮ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ವಿಶ್ವಪತ್ರಿಕೆಯನ್ನು ತಮ್ಮ ತಮ್ಮ ಸ್ಥಳೀಯ ಧರ್ಮ ಸಭೆಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಮಾರ್ಗದರ್ಶಿಯಾಗಿ ಬಳಸುವಂತೆ ಜಗದ್ಗುರುಗಳು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು.
ಮೂರನೆಯ ಅಧಿವೇಶನದಲ್ಲಿ, ಮಾನವಕುಲದ ಸಾಮಾನ್ಯ ಹಿತಕ್ಕಾಗಿ ಧರ್ಮ ಸಭೆ ನೀಡಬಹುದಾದ ಕೊಡುಗೆಯ ಕುರಿತು ಅವರು ಪರಿಶೀಲಿಸಲಿದ್ದಾರೆ.
"ಧರ್ಮ ಸಭೆಯ ಸಾಮಾಜಿಕ ಬೋಧನೆಯು ಸಾಮಾನ್ಯ ಹಿತವು ಸ್ವಯಂಸ್ಫೂರ್ತಿಯಾಗಿ ಉದ್ಭವಿಸುವುದಿಲ್ಲ, ಅದು ಎಲ್ಲರ ಹಂಚಿಕೊಂಡ ಜವಾಬ್ದಾರಿಯನ್ನು ಅಗತ್ಯಪಡಿಸುತ್ತದೆ ಎಂದು ನಮಗೆ ನೆನಪಿಸುತ್ತದೆ," ಎಂದು ಜಗದ್ಗುರುಗಳು ಹೇಳಿದರು. "ಧರ್ಮ ಸಭೆಯ ದೃಷ್ಟಿಯಲ್ಲಿ ಇದಕ್ಕೆ ಒಂದು ಸ್ಪಷ್ಟ ರೂಪವಿದೆ ದೇವರ ರಾಜ್ಯದ ಧ್ಯೇಯದ ಸೇವೆಯಲ್ಲಿ ಇರುವ ಸಿನೋಡಲ್ ಶೈಲಿ."
ನಾಲ್ಕನೆಯ ಅಧಿವೇಶನದಲ್ಲಿ, ಸಿನೋಡಾಲಿಟಿಯ ಕುರಿತ ಸಿನೋಡ್‌ನ ನಿರಂತರ ಅನುಷ್ಠಾನದ ಬಗ್ಗೆ ಕಾರ್ಡಿನಲ್‌ಗಳು ಚಿಂತನೆ ನಡೆಸಲಿದ್ದಾರೆ.
ಈ ಅಂತಿಮ ಅಧಿವೇಶನವು ಮೊದಲ ಮೂರು ಅಧಿವೇಶನಗಳ ಚಿಂತನೆಗಳನ್ನು "ಒಂದು ಮನೋಭಾವ, ಮುಕ್ತತೆ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ಸಿದ್ಧತೆ" ಎಂಬ ಸಿನೋಡಾಲಿಟಿಯ ದೃಷ್ಟಿಕೋನದಲ್ಲಿ ಒಗ್ಗೂಡಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
ಧರ್ಮ ಸಭೆಯ ಆಂತರಿಕ ಜೀವನದ ಮೇಲಷ್ಟೇ ಗಮನಹರಿಸುವುದಕ್ಕಿಂತ, ಇಡೀ ಜಗತ್ತಿನತ್ತ ದೃಷ್ಟಿ ಹರಿಸಿ, "ಇಂದು ನಮ್ಮ ಧರ್ಮ ಸಭೆಗಳು ಇನ್ನಷ್ಟು ನಿಷ್ಠೆಯಿಂದ, ಸ್ವಾತಂತ್ರ್ಯದಿಂದ ಮತ್ತು ವಿಶ್ವಾಸಾರ್ಹತೆಯಿಂದ ಸುವಾರ್ತೆಯನ್ನು ಸಾರಲು ನಾವು ಹೇಗೆ ಸಹಾಯ ಮಾಡಬಹುದು?" ಎಂಬ ಒಂದೇ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಅವರು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು.
ಧರ್ಮ ಸಭೆಯ ಧ್ಯೇಯ ಎನ್ನುವುದು ಅನೇಕ ಕಾರ್ಯಗಳಲ್ಲಿ ಒಂದಲ್ಲ ಅದುವೇ ಧರ್ಮ ಸಭೆಯ ಅಸ್ತಿತ್ವದ ಮೂಲ ಕಾರಣವಾಗಿದೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಆದ್ದರಿಂದ ಕಾರ್ಡಿನಲ್‌ಗಳು ಪರಸ್ಪರ ಆಲಿಸಬೇಕು, ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಹಾಗೂ ಪವಿತ್ರಾತ್ಮನ ಕಾರ್ಯವನ್ನು ಒಟ್ಟಾಗಿ ವಿವೇಚಿಸಬೇಕು ಎಂದು ಅವರು ಕರೆ ನೀಡಿದರು.
ಅಸಾಧಾರಣ ಕನ್ಸಿಸ್ಟರಿಯ ಉದ್ಘಾಟನಾ ಭಾಷಣದ ಕೊನೆಯಲ್ಲಿ, ಕಾರ್ಡಿನಲ್‌ಗಳ ಸಹಕಾರಕ್ಕಾಗಿ ಜಗದ್ಗುರು XIVನೇ ಲಿಯೋರವರು ಕೃತಜ್ಞತೆ ಸಲ್ಲಿಸಿದರು.
"ಇಂದು ಪವಿತ್ರಾತ್ಮನು ಧರ್ಮ ಸಭೆಗೆ ಏನು ಹೇಳುತ್ತಿದ್ದಾನೆ ಎಂಬುದನ್ನು ವಿವೇಚಿಸಲು ನೀವು ನನಗೆ ನೆರವಾಗುವಿರಿ ಎಂಬ ವಿಶ್ವಾಸ ನನಗಿದೆ. ನಿಮ್ಮ ಬಲವಾದ, ಸ್ಪಷ್ಟ ಮತ್ತು ಬಹಿರಂಗ ಬೆಂಬಲ ನನಗೆ ಅಗತ್ಯವಾಗಿದೆ," ಎಂದು ಅವರು ಹೇಳಿದರು. "ನೀವು ನನ್ನ ಸಹೋದರರಾಗಿ ನನ್ನೊಂದಿಗೆ ಇದ್ದೀರಿ ಎಂಬ ಭರವಸೆ ನನಗೆ ಬೇಕಾಗಿದೆ."
