ಕನ್ಸಿಸ್ಟರಿ ಉದ್ಘಾಟನಾ ಬಲಿಪೂಜೆಯಲ್ಲಿ ಜಗದ್ಗುರು ಲಿಯೋರವರು: "ಯುದ್ಧವನ್ನು ದೇವರು ಎಂದಿಗೂ ಆಶೀರ್ವದಿಸುವುದಿಲ್ಲ."
ವ್ಯಾಟಿಕನ್ ವರದಿ
ಜಗದ್ಗುರು ಲಿಯೋರವರು ಕರೆದ ಅಸಾಧಾರಣ ಕನ್ಸಿಸ್ಟರಿಗೆ ಶುಕ್ರವಾರ, ಜೂನ್ 26ರಂದು ಸಂತ ಪೇತ್ರರ ಮಹಾಬಸಿಲಿಕಾದಲ್ಲಿ ಪವಿತ್ರ ಯೂಕರಿಸ್ಟ್ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಚಾಲನೆ ದೊರೆಯಿತು.
ಜೂನ್ 26 ಮತ್ತು 27ರಂದು ಕಾರ್ಡಿನಲ್‌ಗಳು ವ್ಯಾಟಿಕನ್‌ನಲ್ಲಿ ಸಭೆ ಸೇರಿ, ಇಂದಿನ ಧರ್ಮ ಸಭೆ ಮತ್ತು ಜಗತ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಸಂತ ಪೇತ್ರರ ಮಹಾಬಸಿಲಿಕಾದಲ್ಲಿ ನಡೆದ ಪವಿತ್ರ ಬಲಿಪೂಜೆಯೊಂದಿಗೆ ಸಭೆಯು ಆರಂಭಗೊಂಡಿದ್ದು, ಕನ್ಸಿಸ್ಟರಿಯ ಕಾರ್ಯಗಳನ್ನು ದೇವರಿಗೆ ಸಮರ್ಪಿಸಲಾಯಿತು. ಈ ಸಭೆಯು ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದೊಂದಿಗೆ ಮುಕ್ತಾಯಗೊಳ್ಳಲಿದೆ.
ತಮ್ಮ ಪ್ರಭೊಧನೆಯಲ್ಲಿ ಜಗದ್ಗುರುಗಳು, ಕನ್ಸಿಸ್ಟರಿಯ ಜೀವದಾಯಕ ಮೂಲವೇ ಕ್ರಿಸ್ತನೆಂದು ಕಾರ್ಡಿನಲ್‌ಗಳಿಗೆ ನೆನಪಿಸಿದರು. ಸುವಾರ್ತೆಯಲ್ಲಿ ಯೇಸು ಹೇಳುವಂತೆ, "ನಾನೇ ನಿಜವಾದ ದ್ರಾಕ್ಷಾಲತೆ" (ಯೋಹಾನ 15:1).
"ಈ ಕನ್ಸಿಸ್ಟರಿಯು ಫಲ ನೀಡಲು ಸುವಾರ್ತೆಯೇ ಅಡಿಪಾಯ ಹಾಕುತ್ತದೆ: 'ನೀವು ನನ್ನಲ್ಲಿ ನೆಲೆಗೊಂಡಿರಿ; ನಾನು ನಿಮ್ಮಲ್ಲಿ ನೆಲೆಗೊಳ್ಳುವೆನು' (ಯೋಹಾನ 15:4)" ಎಂದು ಅವರು ಹೇಳಿದರು.
ಈ ದಿನಗಳ ಚಿಂತನೆ ಮತ್ತು ವಿವೇಚನೆಗೆ ಮಾರ್ಗದರ್ಶಕವಾಗುವ ಮೂರು ಮೂಲಭೂತ ತತ್ವಗಳನ್ನು ಅವರು ಪ್ರಸ್ತಾಪಿಸಿದರು ನಂಬಿಕೆಯ ನಿಜವಾದ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುವುದು, ಏಕತೆಯಲ್ಲಿ ಶಾಂತಿಯ ವರವನ್ನು ಬೇಡುವುದು ಹಾಗೂ ವಿಧೇಯತೆಯ ಮೂಲಕ ಸಾಮರಸ್ಯವನ್ನು ಅಳವಡಿಸಿಕೊಳ್ಳುವುದು.
"ದೇವರು ನಮಗೆ ಶಕ್ತಿ ಮತ್ತು ಜ್ಞಾನವನ್ನು ನೀಡಲೆಂದು ನಾವು ಪ್ರಾರ್ಥಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಕನ್ಸಿಸ್ಟರಿಯು ಪವಿತ್ರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಮುನ್ನಾದಿನ ನಡೆಯುತ್ತಿರುವುದು ವಿಶೇಷ ಮಹತ್ವದ್ದಾಗಿದೆ. ರೋಮಿನ ಕಥೋಲಿಕ ಧರ್ಮ ಸಭೆಯ ಈ ಇಬ್ಬರು ಆಧಾರಸ್ತಂಭರನ್ನು, ತಮ್ಮ ಜೀವನವನ್ನೇ ಸಾರುವ ಮೂಲಕ ಪವಿತ್ರ ಗ್ರಂಥದ ಅವಿಭಾಜ್ಯ ಭಾಗವಾಗಿರುವ ಈ ಇಬ್ಬರು ಮಿಷನರಿ ಹುತಾತ್ಮರನ್ನು ನಾವು ಸ್ಮರಿಸೋಣ," ಎಂದು ಜಗದ್ಗುರು ಲಿಯೋರವರು ಹೇಳಿದರು.
ನಂಬಿಕೆಯ ನಿಜವಾದ ಸ್ವಾತಂತ್ರ್ಯ
ಮೊದಲನೆಯದಾಗಿ, ಸಂತ ಪೇತ್ರ ಮತ್ತು ಸಂತ ಪೌಲರ ಮಾದರಿಯನ್ನು ಅನುಸರಿಸಿ, "ನಂಬಿಕೆಯ ನಿಜವಾದ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುವಂತೆ" ಜಗದ್ಗುರುಗಳು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು.
"ಪ್ರಭುವಾದ ಯೇಸು ಕ್ರಿಸ್ತರೊಂದಿಗಿನ ನಮ್ಮ ಸಂಬಂಧವೇ ನಮ್ಮನ್ನು ಪಾಪ ಮತ್ತು ಭಯದಿಂದ ಮುಕ್ತಗೊಳಿಸುತ್ತದೆ. ಅವರು ನಮ್ಮನ್ನು ತಮ್ಮನ್ನು ಅನುಸರಿಸಲು ಕರೆಯುವಾಗ, ಪ್ರೇಷಿತರ ಉತ್ತರಾಧಿಕಾರಿಗಳಾಗಿ ಲೋಕದೊಳಗೆ ನಮ್ಮನ್ನು ಕಳುಹಿಸುತ್ತಾರೆ" ಎಂದು ಅವರು ಹೇಳಿದರು.
"ನಂಬಿಕೆಯು ಎಂದಿಗೂ ಲಘುವಾಗಿ ಪರಿಗಣಿಸಬಾರದ ಸದ್ಗುಣವಾಗಿದೆ. ಅದುವೇ ಧರ್ಮ ಸಭೆಗೆ ಜೀವವನ್ನು ನೀಡುತ್ತದೆ. ಏಕೆಂದರೆ ಅದು ಒಂದೇ ದ್ರಾಕ್ಷಾಲತೆಯ ಕೊಂಬೆಗಳನ್ನು ಪೋಷಿಸುವ ದೇವಕೃಪೆಯಾಗಿದೆ. ಪವಿತ್ರಾತ್ಮನು ನಮ್ಮ ಹೃದಯಗಳಲ್ಲಿ ಸುರಿಯುವ ವರದಾನದ ಮೂಲಕ ನಂಬುವ ಧರ್ಮ ಸಭೆಯೇ ಜೀವಂತ ಧರ್ಮ ಸಭೆಯಾಗಿದೆ. ಅಂತಹ ಧರ್ಮ ಸಭೆ ಸಮೃದ್ಧ ಫಲವನ್ನು ನೀಡುತ್ತದೆ" ಎಂದು ಜಗದ್ಗುರುಗಳು ಹೇಳಿದರು.
ಏಕತೆಯಲ್ಲಿ ಶಾಂತಿಯ ವರ
ಎರಡನೆಯದಾಗಿ, "ಏಕತೆಯಲ್ಲಿ ಶಾಂತಿಯ ವರವನ್ನು ಬೇಡಿಕೊಳ್ಳುವಂತೆ" ಜಗದ್ಗುರುಗಳು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು.
ಮಾನವಕುಲವನ್ನು ಕಾಡುತ್ತಿರುವ ಅನೇಕ ಸಂಘರ್ಷಗಳನ್ನು ಉಲ್ಲೇಖಿಸಿದ ಅವರು, "ಯುದ್ಧವು ಎಂದಿಗೂ ಮಾನವತೆಗೆ ಯೋಗ್ಯವಾದದ್ದಲ್ಲ; ಅದನ್ನು ದೇವರು ಎಂದಿಗೂ ಆಶೀರ್ವದಿಸುವುದಿಲ್ಲ. ಏಕೆಂದರೆ ನಮ್ಮ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೂ, ಸೃಷ್ಟಿಪ್ರಭುವು ಸಂಘರ್ಷಗಳನ್ನು ಮೃಗಗಳಂತೆ ಅಲ್ಲ, ಮಾನವರಂತೆ ಪರಿಹರಿಸಲು ನಮಗೆ ಬುದ್ಧಿಶಕ್ತಿ ಮತ್ತು ಸ್ವತಂತ್ರ ಇಚ್ಛಾಶಕ್ತಿಯನ್ನು ನೀಡಿದ್ದಾರೆ" ಎಂದು ಒತ್ತಿ ಹೇಳಿದರು.
"ನಾವೆಲ್ಲರೂ ಒಂದೇ ಮಾನವ ಕುಟುಂಬವಾಗಿರುವುದರಿಂದ ಶಾಂತಿಯು ನ್ಯಾಯದ ಕರ್ತವ್ಯವಾಗಿದೆ. ಕ್ರಿಸ್ತನಲ್ಲಿ ತನ್ನ ಶಿರೋಮಣಿ ಮತ್ತು ವಿಮೋಚಕನನ್ನು ಕಂಡುಕೊಳ್ಳುವ ಈ ಮಹಾನ್ ಮಾನವ ಕುಟುಂಬವೇ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್," ಎಂದರು.
ತಮ್ಮ ಮೊದಲ ವಿಶ್ವಪತ್ರಿಕೆಯಲ್ಲಿ ನೀಡಿದ ಮಾರ್ಗದರ್ಶನವನ್ನು ಹಾಗೂ ಸಂತ ಜಗದ್ಗುರು VIನೇ ಪೌಲರ ಬೋಧನೆಯನ್ನು ನೆನಪಿಸಿಕೊಂಡ ಜಗದ್ಗುರುಗಳು, ನ್ಯಾಯ ಮತ್ತು ದಾನಧರ್ಮ ಅವಿನಾಭಾವವಾಗಿ ಒಂದಾಗಿರುವ 'ಪ್ರೀತಿಯ ನಾಗರಿಕತೆ'ಯನ್ನು ನಿರ್ಮಿಸುವ ಕಾರ್ಯದಲ್ಲಿ ನಿರಂತರವಾಗಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.
"ಸಂತೋಷದ ಸಂದರ್ಭಗಳಲ್ಲಿಯೂ, ಹಿಂಸೆಯ ಸಂದರ್ಭಗಳಲ್ಲಿಯೂ ಧರ್ಮ ಸಭೆಯ ಸುವಾರ್ತೆಯನ್ನು ಸಾರುತ್ತದೆ. ಧರ್ಮ ಸಭೆ ಎಂದಿಗೂ ಯಾರ ಪರವಾಗಿಯೂ ಪಕ್ಷಪಾತ ಮಾಡುವುದಿಲ್ಲ; ಏಕೆಂದರೆ ಅದು ಎಲ್ಲರಿಗಾಗಿಯೇ ಇದೆ ಮತ್ತು ಪ್ರತಿಯೊಬ್ಬರಿಗೂ ಒಂದೇ ರೀತಿಯ ಪರಿವರ್ತನೆ ಹಾಗೂ ಮೋಕ್ಷದ ಸಂದೇಶವನ್ನು ನೀಡುತ್ತದೆ" ಎಂದು ಅವರು ಹೇಳಿದರು.
ವಿಧೇಯತೆಯ ಮೂಲಕ ಸಾಮರಸ್ಯ
ಕೊನೆಯದಾಗಿ, "ವಿಧೇಯತೆಯ ಮೂಲಕ ಸಾಮರಸ್ಯವನ್ನು" ಅಳವಡಿಸಿಕೊಳ್ಳುವಂತೆ ಜಗದ್ಗುರುಗಳು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು. ಇದನ್ನು ಅವರು "ನಮಗಾಗಿ ಮಾಂಸಧಾರಿಯಾದ ವಾಕ್ಯದ ವರವನ್ನು ಗುರುತಿಸುವ ಶ್ರವಣ" ಎಂದು ವಿವರಿಸಿದರು.
"ಇಂತಹ ಶ್ರದ್ಧಾಪೂರ್ವಕ ಶ್ರವಣದ ಮೂಲಕ ಪವಿತ್ರಾತ್ಮನು ನಮ್ಮನ್ನು ಮಾರ್ಗದರ್ಶಿಸುತ್ತಾನೆ. ಅವರು ಧರ್ಮಾಧ್ಯಕ್ಷೀಯ ಸವಾಲುಗಳು ಮತ್ತು ಅವಕಾಶಗಳನ್ನು ಗುರುತಿಸುತ್ತಾರೆ ನಮ್ಮ ಉದ್ದೇಶಗಳನ್ನು ಶುದ್ಧೀಕರಿಸುತ್ತಾರೆ ಮತ್ತು ನಮ್ಮ ಸಾಮೂಹಿಕ ಪಯಣದಿಂದ ವಿಚಲಿತಗೊಳ್ಳುವ ಎಲ್ಲವನ್ನೂ ಸರಿಪಡಿಸುತ್ತಾರೆ" ಎಂದು ಹೇಳಿದರು.
ವಿಶೇಷವಾಗಿ ನಡೆಯುತ್ತಿರುವ ಸಿನೋಡ್ ಅನುಷ್ಠಾನದ ಕುರಿತು ಮಾತನಾಡಿದ ಅವರು, "ನಂಬಿಕೆಯ ಏಕತೆಯಲ್ಲಿ, ಶಾಂತಿಯನ್ನು ಉತ್ತೇಜಿಸುವಲ್ಲಿ ಮತ್ತು ಜೀವಂತ ವಾಕ್ಯವಾಗಿರುವ ಯೇಸು ಕ್ರಿಸ್ತರಿಗೆ ವಿಧೇಯರಾಗಿರುವಲ್ಲಿ ಎಲ್ಲರೂ ಒಟ್ಟಾಗಿ ಮುಂದೆ ಸಾಗುವಂತೆ ಸಿನೋಡ್ ಆಹ್ವಾನಿಸುತ್ತದೆ" ಎಂದು ಹೇಳಿದರು.
"ನಾವು ಸಹಭಾಗಿತ್ವದ ಮನೋಭಾವದಿಂದ ಒಟ್ಟಾಗಿ ಕಾರ್ಯನಿರ್ವಹಿಸುವುದು, ದೇವರ ಜನರ ಏಕತೆಯಲ್ಲಿ ಎಲ್ಲಾ ದೀಕ್ಷಾಸ್ನಾನ ಪಡೆದವರು ಪಾಲ್ಗೊಳ್ಳುವ ಸಿನೋಡಾಲಿಟಿಯ ಜೀವಂತ ಅಭಿವ್ಯಕ್ತಿಯಾಗಿದೆ. ವಾಸ್ತವವಾಗಿ, ಸಿನೋಡಾಲಿಟಿ ಮತ್ತು ಸಹಭಾಗಿತ್ವ ಇವೆರಡೂ ದೀಕ್ಷಾಸ್ನಾನ ಪಡೆದವರಾಗಿಯೂ, ಬಿಷಪ್‌ಗಳಾಗಿಯೂ ನಮ್ಮನ್ನು ಒಂದಾಗಿಸುವ ಕ್ರೈಸ್ತ ಭ್ರಾತೃತ್ವದ ರೂಪಗಳಾಗಿವೆ" ಎಂದು ಕೊನೆಯಲ್ಲಿ ಜಗದ್ಗುರುಗಳು ಹೇಳಿದರು.
