ಜಗದ್ಗುರುಗಳಿಂದ ಕಾನ್ಸಿಸ್ಟರಿಯ ಸಮಾರೋಪ: "ಧರ್ಮಪ್ರಚಾರದ ಸೇವೆಗಾಗಿ ಐಕ್ಯತೆಯ ಅನುಭವ".
ವ್ಯಾಟಿಕನ್ ವರದಿ
ಅಸಾಧಾರಣ ಕಾರ್ಡಿನಲ್ ಸಭೆ ಸಮಾರೋಪದಲ್ಲಿ ಜಗದ್ಗುರು XIVನೇಲ ಲಿಯೋರವರು"ಸಿನೋಡಾಲಿಟಿ ಎಂದರೆ ಸಭೆಗಳ ಸರಣಿಯಲ್ಲ, ಅದು ಧರ್ಮ ಸಭೆ ಜೀವನಶೈಲಿ"
2026ರ ಜೂನ್ 26ರಿಂದ 27ರವರೆಗೆ ವ್ಯಾಟಿಕನ್‌ನಲ್ಲಿ ನಡೆದ ಅಸಾಧಾರಣ ಕಾರ್ಡಿನಲ್ ಸಭೆಯ ಸಮಾರೋಪದ ಚಿಂತನೆಗಳನ್ನು ಹಂಚಿಕೊಳ್ಳುವ ಮೊದಲು, ಜಗದ್ಗುರು ಲಿಯೋರವರು ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ತೀವ್ರವಾಗಿ ತತ್ತರಿಸಿರುವ ವೆನೆಜುವೆಲಾ ದೇಶದ ಜನರೊಂದಿಗೆ, ಇಡೀ ಕಾರ್ಡಿನಲ್‌ಗಳ ಮಹಾವಿದ್ಯಾಲಯದ ಪರವಾಗಿ ತಮ್ಮ ಆತ್ಮೀಯ ಸಾಮೀಪ್ಯವನ್ನು ವ್ಯಕ್ತಪಡಿಸಿದರು.
"ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ, ಅವರ ಕುಟುಂಬಗಳಿಗಾಗಿ ಹಾಗೂ ಈ ದುರಂತದ ಪರಿಣಾಮಗಳಿಂದ ಬಳಲುತ್ತಿರುವ ಎಲ್ಲರಿಗಾಗಿ ನಾವು ಪ್ರಾರ್ಥಿಸುತ್ತೇವೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನು ಕರ್ತನಿಗೆ ಸಮರ್ಪಿಸುತ್ತೇವೆ. ಪ್ರೀತಿಯ ಆ ರಾಷ್ಟ್ರದತ್ತ ಅಂತರರಾಷ್ಟ್ರೀಯ ಸಮುದಾಯದ ಐಕ್ಯತೆ ಮತ್ತು ಸಹಕಾರ ಕುಂದದಿರಲೆಂದು ನಾವು ಪ್ರಾರ್ಥಿಸುತ್ತೇವೆ," ಎಂದು ಜಗದ್ಗುರುಗಳು ಹೇಳಿದರು.
ಜೂನ್ 27ರ ಶನಿವಾರ, ಹೊಸ ಸಿನೋಡ್ ಸಭಾಂಗಣದಲ್ಲಿ ಮಾತನಾಡಿದ ಜಗದ್ಗುರು ಲಿಯೋರವರು ತಮ್ಮ ವಿಶಾಲ ಭಾಷಣವನ್ನು ಹೀಗೆ ಆರಂಭಿಸಿದರು:
"ಈ ದಿನಗಳ ಕೊನೆಯಲ್ಲಿ ನಾವು ಆಳವಾದ ಕೃತಜ್ಞತೆಯ ಮನೋಭಾವದೊಂದಿಗೆ ಒಂದಾಗಿದ್ದೇವೆ. ನಮ್ಮ ಕಾರ್ಯಗಳಲ್ಲಿ ನೀವು ತೋರಿದ ಸ್ವಾತಂತ್ರ್ಯ, ಸಹೋದರತ್ವ ಹಾಗೂ ಧರ್ಮ ಸಭೆಯ ಮನೋಭಾವಕ್ಕಾಗಿ ನಾನು ನಿಮಗೆಲ್ಲ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಚಿಂತನೆಗಳ ವಿಷಯವಷ್ಟೇ ಅಲ್ಲ, ಅವುಗಳನ್ನು ಸಾಧ್ಯವಾಗಿಸಿದ ಅನುಭವವನ್ನೂ ನಾನು ನನ್ನೊಂದಿಗೆ ಕೊಂಡೊಯ್ಯುತ್ತಿದ್ದೇನೆ."
ಮುಂದುವರಿದು ಅವರು ಹೇಳಿದರು:
"ನಾವೆಲ್ಲರೂ ಒಟ್ಟಾಗಿ ಪ್ರಭುವಿನ ಚಿತ್ತವನ್ನು ಅರಸಲು ಪ್ರಯತ್ನಿಸಿದ್ದೇವೆ. ಕ್ರಿಸ್ತನು ತನ್ನ ಧರ್ಮ ಸಭೆಯಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ದೃಢ ವಿಶ್ವಾಸ ನಮಗಿದೆ. ಆತನೇ ನಮ್ಮ ಮುಂದೆ ನಡೆಯುತ್ತಾನೆ, ನಮ್ಮನ್ನು ಒಟ್ಟುಗೂಡಿಸುತ್ತಾನೆ, ನಮ್ಮ ಸಹೋದರರ ಮೂಲಕ ಮಾತನಾಡುತ್ತಾನೆ ಮತ್ತು ನಮ್ಮನ್ನು ಧರ್ಮಪ್ರಚಾರದ ಕಾರ್ಯದಲ್ಲಿ ಮುನ್ನಡೆಸುತ್ತಾನೆ. ಎಲ್ಲವೂ ಆತನಿಂದಲೇ ಬರುತ್ತದೆ, ಎಲ್ಲವೂ ಅಂತಿಮವಾಗಿ ಆತನಲ್ಲಿಯೇ ಪೂರ್ಣಗೊಳ್ಳುತ್ತದೆ."
"ವಿಭಿನ್ನ ಸ್ಥಳೀಯ ಧರ್ಮ ಸಭೆಗಳಿಂದ, ಸಂಸ್ಕೃತಿಗಳಿಂದ ಮತ್ತು ಜೀವನದ ವೈವಿಧ್ಯಮಯ ಪರಿಸ್ಥಿತಿಗಳಿಂದ ಬಂದಿರುವ ಕಾರ್ಡಿನಲ್‌ಗಳು ಪರಸ್ಪರ ಆಲಿಸುತ್ತಾ, ಸುವಾರ್ತೆಗೆ ಅತ್ಯುತ್ತಮವಾದುದನ್ನು ಒಟ್ಟಾಗಿ ಹುಡುಕುತ್ತಿರುವುದನ್ನು ನೋಡುವುದು ನನಗೆ ಸಾಂತ್ವನ ಮತ್ತು ಭರವಸೆಯ ಮೂಲವಾಗಿದೆ," ಎಂದು ಅವರು ಹೇಳಿದರು.
ಸಿನೋಡಾಲಿಟಿ: ಧರ್ಮ ಸಭೆಯ ಜೀವನಶೈಲಿ
ತಮ್ಮ ಚಿಂತನೆಯ ಕೇಂದ್ರಬಿಂದುವಿನಲ್ಲಿ, ಜಗದ್ಗುರುಗಳ ಸಿನೋಡಾಲಿಟಿಯನ್ನು ಕೇವಲ ಒಂದು ಆಡಳಿತಾತ್ಮಕ ವಿಧಾನವಾಗಿಯೂ ಅಥವಾ ಸಭೆಗಳ ಸರಣಿಯಾಗಿಯೂ ಅರ್ಥಮಾಡಿಕೊಳ್ಳಬಾರದು ಎಂದು ಒತ್ತಿಹೇಳಿದರು. ಅದು ಧರ್ಮ ಸಭೆಯು ತನ್ನ ಅಸ್ತಿತ್ವವನ್ನು ಬದುಕುವ ಮೂಲಭೂತ ಜೀವನಶೈಲಿಯಾಗಿದೆ ಎಂದು ಅವರು ವಿವರಿಸಿದರು.
"ಸಿನೋಡಾಲಿಟಿಯ ನಿಜವಾದ ಪ್ರಶ್ನೆ ಎಂದರೆ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾರಿಗಿದೆ? ಎಂಬುದಲ್ಲ,ಬದಲಾಗಿ, ಪ್ರಭು ತನ್ನ ಧರ್ಮ ಸಭೆಗೆ ಒಪ್ಪಿಸಿದ ವರವನ್ನು ನಾವು ಒಟ್ಟಾಗಿ ಹೇಗೆ ಸಂರಕ್ಷಿಸಬಹುದು? ಎಂಬುದಾಗಿದೆ," ಎಂದು ಅವರು ಹೇಳಿದರು.
ಈ ಪಯಣವು ಪರಸ್ಪರ ಭೇಟಿಯಿಂದ ಆರಂಭವಾಗಿ, ಆಲಿಸುವ ಮನೋಭಾವದಿಂದ ಬೆಳೆಯುತ್ತದೆ ಮತ್ತು ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ವಿವೇಚನೆಯ ಮೂಲಕ ಪರಿಪಕ್ವಗೊಳ್ಳುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.
ಆದ್ದರಿಂದ, ಪ್ರತಿಯೊಬ್ಬ ಕಾರ್ಡಿನಲ್ ತಮ್ಮ ತಮ್ಮ ಸ್ಥಳೀಯ ಧರ್ಮ ಸಭೆಗಳಲ್ಲಿ ಸಿನೋಡಲ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಅದರ ನೈಜ ಅರ್ಥವನ್ನು ಬೆಳೆಸುವಂತೆ ಅವರು ಮನವಿ ಮಾಡಿದರು.
ಜಗತ್ತಿನ ಗಾಯಗಳು
ಕಾರ್ಡಿನಲ್‌ಗಳು ಸಭೆಯಲ್ಲಿ ಯುದ್ಧಗಳು, ಬಡತನ, ಅನ್ಯಾಯ ಹಾಗೂ ವಿಶ್ವದ ಅನೇಕ ಜನಾಂಗಗಳನ್ನು ಕಾಡುತ್ತಿರುವ ಹಿಂಸಾಚಾರಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರೆಂದು ಜಗದ್ಗುರುಗಳು ನೆನಪಿಸಿದರು.
ಆದರೆ ಈ ಎಲ್ಲ ದುರಂತಗಳ ಹಿಂದೆ ಇನ್ನೂ ಆಳವಾದ ಒಂದು ಬಿಕ್ಕಟ್ಟು ಅಡಗಿದೆ ಎಂದು ಅವರು ಹೇಳಿದರು
"ಏಕಾಂತ, ಸಂಬಂಧಗಳ ಬಿಕ್ಕಟ್ಟು, ಭರವಸೆಯ ಕಳೆತ ಮತ್ತು ಪರಸ್ಪರರನ್ನು ಸಹೋದರ-ಸಹೋದರಿಯರಾಗಿ ಗುರುತಿಸುವ ಸಾಮರ್ಥ್ಯದ ಕುಗ್ಗುವಿಕೆ."
ವಿಶೇಷವಾಗಿ ಯುವಜನರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಜೀವನದ ಅರ್ಥ ಮತ್ತು ನೈಜತೆಯ ಹುಡುಕಾಟದಲ್ಲಿ ಅನೇಕರು ತೀವ್ರ ಸಂಕಟಗಳನ್ನು ಅನುಭವಿಸುತ್ತಿದ್ದಾರೆ, ಕೆಲವರು ಆತ್ಮಹತ್ಯೆಯಂತಹ ದುಃಖಕರ ನಿರ್ಧಾರಕ್ಕೂ ತಲುಪುತ್ತಿದ್ದಾರೆ. ಇದು "ನಮ್ಮ ಕಾಲದ ಅತ್ಯಂತ ಆಳವಾದ ಗಾಯಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು.
ಕುಟುಂಬವು ಸಂಬಂಧಗಳನ್ನು ಬೆಳೆಸುವ, ಐಕ್ಯತೆಯನ್ನು ಕಲಿಸುವ ಮತ್ತು ಭರವಸೆಯನ್ನು ನೀಡುವ ಮೊದಲ ಶಾಲೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.
ಈ ಹಿನ್ನೆಲೆಯಲ್ಲಿ, ಪೂರ್ವದ ಧರ್ಮ ಸಭೆಗಳ ಮುಖ್ಯಸ್ಥರು ಹಾಗೂ ವಿಶ್ವದ ಬಿಷಪ್‌ಗಳ ಸಮ್ಮೇಳನಗಳ ಅಧ್ಯಕ್ಷರೊಂದಿಗೆ ಮುಂದಿನ ಅಕ್ಟೋಬರ್‌ನಲ್ಲಿ ವಿಶೇಷ ಸಭೆ ನಡೆಸಲಾಗುವುದು ಎಂದು ಅವರು ಘೋಷಿಸಿದರು. ಅಮೋರಿಸ್ ಲೇಟಿಟಿಯಾ ದಸ್ತಾವೇಜಿನ ಸ್ವೀಕಾರ ಮತ್ತು ಅನುಷ್ಠಾನವನ್ನು ಪರಿಶೀಲಿಸುವ ಈ ಸಭೆಯಲ್ಲಿ ಕುಟುಂಬಗಳೂ ಸಹ ಭಾಗವಹಿಸಲಿವೆ.
ಯುದ್ಧದ ಸಂಸ್ಕೃತಿಗೆ ವಿರುದ್ಧವಾಗಿ ಸಂವಾದದ ಸಂಸ್ಕೃತಿ
ತಮ್ಮ ಭಾಷಣದಲ್ಲಿ ಶಾಂತಿಯ ವಿಷಯಕ್ಕೂ ವಿಶೇಷ ಸ್ಥಾನ ನೀಡಿದ ಜಗದ್ಗುರು XIVನೇ ಲಿಯೋರವರು, ಕಾರ್ಡಿನಲ್‌ಗಳು ತಮ್ಮ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆಯ ಒಂದು ಪ್ರಮುಖ ಒಳನೋಟವನ್ನು ಸ್ಪಷ್ಟವಾಗಿ ಗ್ರಹಿಸಿದ್ದಾರೆ ಎಂದು ಹೇಳಿದರು.
ಯುದ್ಧವು ಕೇವಲ ರಾಷ್ಟ್ರಗಳ ನಡುವಿನ ಸಂಘರ್ಷಗಳಿಂದ ಮಾತ್ರ ಹುಟ್ಟುವುದಿಲ್ಲ ಅದು ಮಾನವ ಸಂಬಂಧಗಳು, ಆರ್ಥಿಕ ವ್ಯವಸ್ಥೆ, ರಾಜಕೀಯ, ತಂತ್ರಜ್ಞಾನ ಮತ್ತು ಧರ್ಮದೊಳಗೂ ವ್ಯಾಪಿಸಿರುವ "ಅಧಿಕಾರದ ಸಂಸ್ಕೃತಿ"ಯಿಂದ ಹುಟ್ಟುತ್ತದೆ ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಸಹಕಾರ ಮತ್ತು ಸಂವಾದದ ಸಂಸ್ಕೃತಿಯನ್ನು ಪುನರ್‌ನಿರ್ಮಿಸಬೇಕು, ಬಹುಪಕ್ಷೀಯ ಸಹಕಾರವನ್ನು ಬಲಪಡಿಸಬೇಕು ಹಾಗೂ ಧರ್ಮ ಸಭೆಯ ಸಾಮಾಜಿಕ ಬೋಧನೆಯಿಂದ ಪ್ರೇರಿತರಾದ ಸಾಮಾನ್ಯ ವಿಶ್ವಾಸಿಗಳ ಸಾರ್ವಜನಿಕ ಜೀವನದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂದು ಅವರು ಕರೆ ನೀಡಿದರು.
ಅಹಿಂಸಾತ್ಮಕ ಪ್ರತಿಕ್ರಿಯೆಯು ಆಳವಾದ ಸುವಾರ್ತಾತ್ಮಕ ಆಯ್ಕೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಅದು ನಿಷ್ಕ್ರಿಯತೆಯಲ್ಲ,ದ್ವೇಷದ ತರ್ಕವನ್ನು ಅನುಕರಿಸದೆ ಸಂಘರ್ಷಗಳನ್ನು ಎದುರಿಸುವ ಮಾರ್ಗವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ, ಇಂದಿನ ಯುದ್ಧಗಳ ಬದಲಾಗುತ್ತಿರುವ ಸ್ವರೂಪದ ಬೆಳಕಿನಲ್ಲಿ "ನ್ಯಾಯಸಮ್ಮತ ಆತ್ಮರಕ್ಷಣೆ" ಕುರಿತಾಗಿ ಇನ್ನಷ್ಟು ಆಳವಾದ ಧರ್ಮಶಾಸ್ತ್ರೀಯ ಹಾಗೂ ಧರ್ಮಾಧ್ಯಕ್ಷೀಯ ಅಧ್ಯಯನ ನಡೆಸುವಂತೆ ಹಲವಾರು ಕಾರ್ಯಪಡೆಗಳು ಮನವಿ ಮಾಡಿರುವುದನ್ನೂ ಅವರು ಬಹಿರಂಗಪಡಿಸಿದರು.
ಸಂಘಟನೆಗಿಂತ ಮೊದಲು ಸಾಕ್ಷಿಯಾಗುವ ಧರ್ಮ ಸಭೆ
ಧರ್ಮ ಸಭೆಯ ನವೀಕರಣವು ಕೇವಲ ರಚನಾತ್ಮಕ ಸುಧಾರಣೆಗಳಿಂದ ಸಾಧ್ಯವಾಗುವುದಿಲ್ಲ ಎಂದು ಜಗದ್ಗುರುಗಳು ಪುನರುಚ್ಚರಿಸಿದರು. ಬದಲಾಗಿ, ಸುವಾರ್ತೆಯನ್ನು ವಿಶ್ವಾಸಾರ್ಹವಾಗಿ ಬದುಕುವ ಸಮುದಾಯಗಳ ಸಾಕ್ಷ್ಯವೇ ಅದರ ನಿಜವಾದ ಆಧಾರವಾಗಿದೆ.
"ಧರ್ಮ ಸಭೆಯು ತಾನು ಸಾರುವ ಸಂದೇಶದಂತೆಯೇ ಇನ್ನಷ್ಟು ಸಂಪೂರ್ಣವಾಗಿ ರೂಪುಗೊಳ್ಳುವ ಕರೆಯನ್ನು ಹೊಂದಿದೆ," ಎಂದು ಅವರು ಹೇಳಿದರು.
ಕ್ರಿಸ್ತನೊಂದಿಗಿನ ಆಳವಾದ ಭೇಟಿಯಿಂದ ಹಾಗೂ ಸಂಸ್ಕಾರಗಳ ಜೀವನದಿಂದ ಉದ್ಭವಿಸುವ ಸುಧಾರಣೆಗಳೇ ಶಾಶ್ವತ ಫಲವನ್ನು ನೀಡುತ್ತವೆ ಎಂದು ಅವರು ಒತ್ತಿಹೇಳಿದರು.
ಮುಂದಿನ ವರ್ಷದಿಂದ ಈ ವಾರ್ಷಿಕ ಕಾರ್ಡಿನಲ್ ಸಭೆಯನ್ನು ಮುಂದುವರಿಸುವ ಉದ್ದೇಶವಿದೆ ಎಂದು ಜಗದ್ಗುರುಗಳು ತಿಳಿಸಿದರು. ದಿನಾಂಕ ಇನ್ನೂ ನಿಗದಿಯಾಗಿಲ್ಲವಾದರೂ, ಈ ವರ್ಷದ ಅಂತ್ಯದೊಳಗೆ ಅದನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದರು.
ಶಾಂತಿಗಾಗಿ ಅಂತಿಮ ಮನವಿ
ತಮ್ಮ ಭಾಷಣದ ಕೊನೆಯಲ್ಲಿ, ಕಾರ್ಡಿನಲ್ ಸಭೆಯಿಂದ ಏಕಮತದಿಂದ ಹೊರಬಂದ ಶಾಂತಿಯ ಮನವಿಯನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡ ಜಗದ್ಗುರು XIVನೇ ಲಿಯೋರವರು, ಅದನ್ನು ವಿಶ್ವದ ಎಲ್ಲಾ ಧರ್ಮ ಸಭೆಗಳು ಮತ್ತು ಜನರಿಗೆ ತಲುಪಿಸುವಂತೆ ಕಾರ್ಡಿನಲ್‌ಗಳಿಗೆ ಕರೆ ನೀಡಿದರು.
"ಇತಿಹಾಸದ ಮಧ್ಯೆ ದೇವರು ಇನ್ನೂ ಸಮನ್ವಯ ಮತ್ತು ಶಾಂತಿಯ ಹೊಸ ಮಾರ್ಗಗಳನ್ನು ತೆರೆಯುತ್ತಲೇ ಇದ್ದಾನೆ. ಆ ಮಾರ್ಗಗಳಲ್ಲಿ ಧೈರ್ಯದಿಂದ ನಡೆಯುವುದು ಮತ್ತು ಜಗತ್ತಿಗೆ ಅವುಗಳನ್ನು ಗುರುತಿಸಲು ನೆರವಾಗುವುದು ನಮ್ಮ ಹೊಣೆಗಾರಿಕೆಯಾಗಿದೆ," ಎಂದು ಅವರು ಹೇಳಿದರು.
ಈ ದಿನಗಳ ಕಾರ್ಯಗಳು ಮತ್ತು ಸಹೋದರತ್ವದ ವಾತಾವರಣ ಯಶಸ್ವಿಯಾಗಲು ಉದಾರತೆ ಮತ್ತು ವಿವೇಕದಿಂದ ಶ್ರಮಿಸಿದ ವರದಿಗಾರರು, ಸಂಯೋಜಕರು ಹಾಗೂ ಎಲ್ಲರಿಗೂ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
"ಕ್ರಿಸ್ತನು ತನ್ನ ಜನರ ಮಧ್ಯೆ ಮತ್ತು ಜಗತ್ತಿನಲ್ಲಿ ನಿರಂತರವಾಗಿ ಮಾಡುತ್ತಿರುವ ಕಾರ್ಯವನ್ನು ಮತ್ತೊಮ್ಮೆ ಗುರುತಿಸಲು ನನಗೆ ನೆರವಾದಕ್ಕಾಗಿ ನಿಮಗೆಲ್ಲ ಧನ್ಯವಾದಗಳು. ಈ ಕಾರ್ಡಿನಲ್ ಸಭೆಯ ಫಲಗಳನ್ನು ಧರ್ಮ ಸಭೆಯ ತಾಯಿಯಾದ ಪವಿತ್ರ ಕನ್ಯೆ ಮರಿಯಮ್ಮನ ಮಧ್ಯಸ್ಥಿಕೆಗೆ ನಾವು ಸಮರ್ಪಿಸುತ್ತೇವೆ. ವೈವಿಧ್ಯತೆಯ ನಡುವೆ ಏಕತೆಯನ್ನು ಕಾಪಾಡುವುದನ್ನೂ, ವಿನಯ, ಧೈರ್ಯ ಮತ್ತು ಭರವಸೆಯೊಂದಿಗೆ ಶಾಂತಿಯ ಸುವಾರ್ತೆಗೆ ಸೇವೆ ಸಲ್ಲಿಸುವುದನ್ನೂ ಅವರು ನಮಗೆ ಕಲಿಸಲಿ," ಎಂದು ಜಗದ್ಗುರು ಲಿಯೋರವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
