ಜಗದ್ಗುರು ಲಿಯೋರವರು ಉತ್ತರ ಅಮೆರಿಕಾದ ಜೆಸ್ಯೂಟ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಭೇಟಿಯಾಗುತ್ತಾರೆ. ಜಗದ್ಗುರು ಲಿಯೋರವರು ಉತ್ತರ ಅಮೆರಿಕಾದ ಜೆಸ್ಯೂಟ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳನ್ನು ಭೇಟಿಯಾಗುತ್ತಾರೆ.  (ANSA)

ಜಗದ್ಗುರುಗಳು: ಐಕ್ಯತೆ ಮತ್ತು ಸಾಮಾನ್ಯ ಹಿತವನ್ನು ಉತ್ತೇಜಿಸಲು ವಿಶ್ವವಿದ್ಯಾಲಯಗಳು ಶಕ್ತಿಶಾಲಿ ಮಾಧ್ಯಮಗಳಾಗಿವೆ.

ಉತ್ತರ ಅಮೆರಿಕಾದ ಜೆಸುಯಿಟ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಕ್ಷರೊಂದಿಗೆ ನಡೆದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು, ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಆದರ್ಶ ವೇದಿಕೆಗಳಾಗಿವೆ ಎಂದು ಹೇಳಿದರು. ವಿಶೇಷವಾಗಿ, ಅಂಚಿನಲ್ಲಿರುವ ಮತ್ತು ಕಡೆಗಣಿಸಲ್ಪಟ್ಟ ಜನರ ಅಗತ್ಯಗಳಿಗೆ ಸ್ಪಂದಿಸುವುದು ಹಾಗೂ ಕೃತಕ ಬುದ್ಧಿಮತ್ತೆಯ ಪರಿಣಾಮಗಳ ಕುರಿತು ಗಂಭೀರವಾಗಿ ಚಿಂತನೆ ನಡೆಸುವುದು ಇಂತಹ ಶಿಕ್ಷಣ ಸಂಸ್ಥೆಗಳ ಪ್ರಮುಖ ಹೊಣೆಗಾರಿಕೆಗಳಾಗಿವೆ ಎಂದು ಅವರು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಜೂನ್ 25ರಂದು ಉತ್ತರ ಅಮೆರಿಕಾದ ಜೆಸುಯಿಟ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳನ್ನು ವ್ಯಾಟಿಕನ್‌ನಲ್ಲಿ ಭೇಟಿಯಾದ ಜಗದ್ಗುರು XIVನೇ ಲಿಯೋರವರು, ಇಂದಿನ ಮಾನವಕುಲ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ವೇದಿಕೆಗಳಾಗಿವೆ ಎಂದು ಹೇಳಿದರು. ಸಮಾಜದ ಅಂಚಿನಲ್ಲಿರುವವರ ನೋವು, ಯುವಜನರ ಭವಿಷ್ಯದ ಆತಂಕ, ಪರಿಸರದ ಸಂಕಷ್ಟ ಮತ್ತು ಕೃತಕ ಬುದ್ಧಿಮತ್ತೆಯ ಪರಿಣಾಮಗಳಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಅವರು ತಿಳಿಸಿದರು.

ಜೆಸುಯಿಟ್‌ಗಳ ನಾಲ್ಕು ಸಾರ್ವತ್ರಿಕ ಪ್ರೇಷಿತರ ಆದ್ಯತೆಗಳಾದ  ದೇವರ ಕಡೆಗೆ ದಾರಿ ತೋರಿಸುವುದು, ತಿರಸ್ಕೃತರೊಂದಿಗೆ ನಡೆಯುವುದು, ಯುವಜನರೊಂದಿಗೆ ಪಯಣಿಸುವುದು ಮತ್ತು ನಮ್ಮ ಸಾಮಾನ್ಯ ಮನೆಯಾದ ಭೂಮಿಯನ್ನು ಕಾಪಾಡುವುದು  ಇವುಗಳು ಇಂದಿನ ಜಗತ್ತಿನ ಸವಾಲುಗಳಿಗೆ ಉತ್ತರ ನೀಡುವ ಮಾರ್ಗಸೂಚಿಗಳಾಗಿವೆ ಎಂದು ಜಗದ್ಗುರುಗಳು ಹೇಳಿದರು. ವಿಶೇಷವಾಗಿ ಬಡವರು, ವಲಸಿಗರು, ನಿರಾಶ್ರಿತರು ಹಾಗೂ ಸಮಾಜದಿಂದ ಕಡೆಗಣಿಸಲ್ಪಟ್ಟವರೊಂದಿಗೆ ನಿಲ್ಲುವುದು ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಯುದ್ಧ, ಧಾರ್ಮಿಕ ಮತ್ತು ರಾಜಕೀಯ ಹಿಂಸೆ, ಹಸಿವು ಹಾಗೂ ಹವಾಮಾನ ಬದಲಾವಣೆಯಿಂದ ಅನೇಕ ಜನರು ತಮ್ಮ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು. ಆದ್ದರಿಂದ ವಿಶ್ವವಿದ್ಯಾಲಯಗಳು ವಲಸಿಗರು, ನಿರಾಶ್ರಿತರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಒದಗಿಸಬೇಕು. ಇದರಿಂದ ಅವರು ಸಮಾಜದಲ್ಲಿ ಉತ್ತಮವಾಗಿ ಬೆರೆತು ಬದುಕುವುದಲ್ಲದೆ, ತಮ್ಮ ವೈವಿಧ್ಯಮಯ ಅನುಭವಗಳ ಮೂಲಕ ಶಿಕ್ಷಣ ಸಮುದಾಯವನ್ನೂ ಶ್ರೀಮಂತಗೊಳಿಸಬಹುದು ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಮಾನವ ಜೀವನದ ಮೇಲೆ ಹೆಚ್ಚುತ್ತಿರುವ ಪ್ರಭಾವದ ಕುರಿತು ಮಾತನಾಡಿದ ಜಗದ್ಗುರುಗಳು, ಅದರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿಶೇಷ ಪಾತ್ರ ವಹಿಸಬಹುದು ಎಂದರು. ಡಿಜಿಟಲ್ ಕ್ರಾಂತಿಯ ಸವಾಲುಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಧರ್ಮ ಸಭೆಯ ಸಾಮಾಜಿಕ ಬೋಧನೆಗಳ ತತ್ವಗಳಿಗೆ ಹೊಸ ಚೈತನ್ಯ ನೀಡಬೇಕೆಂದು ಅವರು ಕರೆ ನೀಡಿದರು.

ಯುವಜನರ ಕುರಿತು ಮಾತನಾಡಿದ ಜಗದ್ಗುರುಗಳು, ವಿಶ್ವವಿದ್ಯಾಲಯಗಳು ಭರವಸೆಯನ್ನು ಬೆಳೆಸುವ ನೈಸರ್ಗಿಕ ಕೇಂದ್ರಗಳಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮತ್ತು ಸಂಬಂಧಗಳ ಮೂಲಕ ಸಮಾಜವನ್ನು ಉತ್ತಮಗೊಳಿಸುವ ಕನಸುಗಳನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ಸಂವಾದ, ಸೇವೆ ಮತ್ತು ಪ್ರಾರ್ಥನೆಯ ಮೂಲಕ ಅವರಲ್ಲಿ ಆಶಾಭಾವನೆಯನ್ನು ಪೋಷಿಸಬೇಕು. ಕ್ರಿಸ್ತನ ಪುನರುತ್ಥಾನವೇ ನಿಜವಾದ ಭರವಸೆಯ ಮೂಲವಾಗಿದೆ ಎಂದು ಅವರು ನೆನಪಿಸಿದರು.

ಕೊನೆಗೆ, ಸತ್ಯದ ಅನ್ವೇಷಣೆಯೇ ದೇವರ ಅನ್ವೇಷಣೆಯಾಗಿದೆ ಎಂದು ಜಗದ್ಗುರುಗಳು ಹೇಳಿದರು. ಸಂಶೋಧನೆ ನಡೆಸುವವರು ಮತ್ತು ಸತ್ಯವನ್ನು ಹುಡುಕುವವರು ಅರಿವಿಲ್ಲದೆಯೇ ದೇವರತ್ತ ಸಾಗುತ್ತಿದ್ದಾರೆ. ಆದ್ದರಿಂದ ಯುವಜನರಲ್ಲಿ ದೇವರಿಗಾಗಿ ಇರುವ ಹಸಿವಿಗೆ ಸ್ಪಂದಿಸುವಂತಹ ಶೈಕ್ಷಣಿಕ ಸಮುದಾಯಗಳನ್ನು ನಿರ್ಮಿಸಬೇಕು. ಸಂತ ಇಗ್ನೇಷಿಯಸ್ ಲೊಯೋಲಾ ಅವರ ಪರಂಪರೆಯನ್ನು ಮುಂದುವರಿಸುತ್ತಾ, ಇತರರಿಗಾಗಿ ಬದುಕುವ ಮಹಿಳೆಯರು ಮತ್ತು ಪುರುಷರನ್ನು ರೂಪಿಸುವ ಜೆಸುಯಿಟ್ ಧ್ಯೇಯವನ್ನು ಮುಂದುವರಿಸಲು ಅವರು ಪ್ರೋತ್ಸಾಹಿಸಿದರು.

25 ಜೂನ್ 2026, 17:40