ಲಾ ಗೈರಾ ರಾಜ್ಯದ ಕ್ಯಾರಬೆಲ್ಲೆಡಾದಲ್ಲಿ ಸಂತ್ರಸ್ತರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿದ್ದಾರೆ. ಲಾ ಗೈರಾ ರಾಜ್ಯದ ಕ್ಯಾರಬೆಲ್ಲೆಡಾದಲ್ಲಿ ಸಂತ್ರಸ್ತರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿದ್ದಾರೆ.  (MAXWELL BRICENO)

ಭೂಕಂಪದಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೆನೆಜುವೆಲಾಕ್ಕಾಗಿ ಜಗದ್ಗುರು ಲಿಯೋರವರು ಪ್ರಾರ್ಥಿಸಿದರು.

ಎರಡು ಭೂಕಂಪಗಳಿಂದ ಮೃತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಗದ್ಗುರು XIVನೇ ಲಿಯೋರವರು ವೆನೆಜುವೆಲಾ ಜನರೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸುವಂತೆ ಎಲ್ಲರನ್ನು ಕೋರಿದರು.

ವ್ಯಾಟಿಕನ್ ವರದಿ

ಭಾನುವಾರದ ತ್ರಿಕಾಲ ಪ್ರಾರ್ಥನೆಯ ವೇಳೆ ಜಗದ್ಗುರುಗಳು, ಈ ವಾರ ಅಲ್ಪಾವಧಿಯ ಅಂತರದಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದ ತೀವ್ರ ಸಂಕಷ್ಟಕ್ಕೊಳಗಾದ ವೆನೆಜುವೆಲಾ ಜನರೊಂದಿಗೆ ತಮ್ಮ ಸಾಂತ್ವನ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಲು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು.

ಭೂಕಂಪದಲ್ಲಿ ಮೃತಪಟ್ಟವರ ಆತ್ಮಶಾಂತಿಗಾಗಿ, ಅವರ ಕುಟುಂಬಗಳಿಗಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಾಗಿ ತಮ್ಮೊಂದಿಗೆ ಸೇರಿ ಪ್ರಾರ್ಥಿಸುವಂತೆ ಅವರು ಎಲ್ಲರನ್ನೂ ಆಹ್ವಾನಿಸಿದರು.

"ಇತ್ತೀಚೆಗೆ ಸಂಭವಿಸಿದ ಭೂಕಂಪಗಳಿಂದ ಅನೇಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದು ಹಾಗೂ ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಈ ದುಃಖಕರ ಘಟನೆಗೆ ಒಳಗಾದ ವೆನೆಜುವೆಲಾದ ಸಹೋದರರು ಮತ್ತು ಸಹೋದರಿಯರೊಂದಿಗೆ ನನ್ನ ಆತ್ಮೀಯ ಸಾನ್ನಿಧ್ಯವನ್ನು ವ್ಯಕ್ತಪಡಿಸುತ್ತೇನೆ," ಎಂದು ಜಗದ್ಗುರುಗಳು ಹೇಳಿದರು.

"ಮೃತರಾದವರ ನಿತ್ಯಶಾಂತಿಗಾಗಿ ನಾವು ಪ್ರಭುವಿಗೆ ಪ್ರಾರ್ಥಿಸುವಾಗ, ಅವರ ಕುಟುಂಬಗಳು, ಗಾಯಗೊಂಡವರು ಹಾಗೂ ಈ ದುರಂತದಿಂದ ಸಂಕಷ್ಟಕ್ಕೊಳಗಾದ ಎಲ್ಲರೊಂದಿಗೆ ನನ್ನ ಆಧ್ಯಾತ್ಮಿಕ ಸಾನ್ನಿಧ್ಯವನ್ನು ಪುನರುಚ್ಚರಿಸುತ್ತೇನೆ. ಅದೇ ಸಮಯದಲ್ಲಿ, ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ ಉದಾರ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುತ್ತೇನೆ," ಎಂದು ಅವರು ಹೇಳಿದರು.

ಶನಿವಾರ ಸಂಜೆ ನಡೆದ ವಿಶೇಷ ಕಾರ್ಡಿನಲ್‌ಗಳ ಮಹಾಸಭೆಯ ಸಮಾರೋಪದ ವೇಳೆಯೂ ಜಗದ್ಗುರು XIVನೇ ಲಿಯೋರವರು, ವೆನೆಜುವೆಲಾ ಜನರೊಂದಿಗೆ ಇಡೀ ಕಾರ್ಡಿನಲ್‌ಗಳ ಮಂಡಳಿಯ ಐಕ್ಯತೆಯನ್ನು ವ್ಯಕ್ತಪಡಿಸಿದ್ದರು.

"ಮೃತರಾದವರಿಗಾಗಿ, ಅವರ ಕುಟುಂಬಗಳಿಗಾಗಿ ಹಾಗೂ ಈ ದುರಂತದ ಪರಿಣಾಮಗಳಿಂದ ನರಳುತ್ತಿರುವ ಎಲ್ಲರಿಗಾಗಿ ನಾವು ಪ್ರಾರ್ಥಿಸುತ್ತೇವೆ," ಎಂದು ಅವರು ಹೇಳಿದರು. "ಆ ಪ್ರಿಯ ರಾಷ್ಟ್ರದ ಕಡೆಗೆ ಅಂತರರಾಷ್ಟ್ರೀಯ ಸಮುದಾಯದ ಐಕ್ಯತೆ ಮತ್ತು ಸಹಾಯವು ಕೊರತೆಯಾಗದಿರಲೆಂದು ನಾವು ಪ್ರಾರ್ಥಿಸುತ್ತೇವೆ."

ಹಗಲಿರುಳು ನಡೆಯುತ್ತಿರುವ ರಕ್ಷಣಾ ಕಾರ್ಯ

ಭೂಕಂಪದಿಂದ ಅತ್ಯಂತ ತೀವ್ರವಾಗಿ ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಲಾ ಗುಯೈರಾದಲ್ಲಿ ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರನ್ನು ಹುಡುಕಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಶನಿವಾರದ ವೇಳೆಗೆ ಮೃತರ ಸಂಖ್ಯೆ ಸುಮಾರು 1,500ಕ್ಕೆ ಏರಿಕೆಯಾಗಿದ್ದು, ಸುಮಾರು 70,000 ಜನರು ಇನ್ನೂ ನಾಪತ್ತೆಯಾಗಿದ್ದಾರೆ.

ಕಳೆದ ಬುಧವಾರ ಈ ಪ್ರದೇಶದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು.

ದುರಂತದ ತಕ್ಷಣವೇ ಜಗದ್ಗುರು XIVನೇ ಲಿಯೋರವರು ಸಂತ್ರಸ್ತರು ಮತ್ತು ಅವರ ಕುಟುಂಬಗಳ ನೆರವಿಗಾಗಿ 1 ಲಕ್ಷ ಯೂರೋಗಳ ಆರಂಭಿಕ ಆರ್ಥಿಕ ನೆರವನ್ನು ಕಳುಹಿಸಿದರು.

ಈ ಮಾನವೀಯ ನೆರವನ್ನು ಪ್ರೇಷಿತರ ಅಲ್ಮೋನರ್ ಕಚೇರಿ ಮೂಲಕ ಕಳುಹಿಸಲಾಗಿದ್ದು, ವೆನೆಜುವೆಲಾದಲ್ಲಿನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ಅಲ್ಬೆರ್ಟೊ ಒರ್ಟೇಗಾ ಮಾರ್ಟಿನ್ ಹಾಗೂ ಕಾರಕಾಸ್ ಮಹಾಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ರೌಲ್ ಬಿಯೊರ್ಡ್ ಕ್ಯಾಸ್ಟಿಲ್ಲೊರವರ ಸಹಯೋಗದಲ್ಲಿ ಅದರ ವಿತರಣೆಯನ್ನು ಸಮನ್ವಯಗೊಳಿಸಲಾಗಿದೆ.

ದೇಶದಾದ್ಯಂತದ ಕಥೋಲಿಕ ಸಮುದಾಯಗಳು ಮತ್ತು ದತ್ತಿ ಸಂಸ್ಥೆಗಳು ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯ ಕಲ್ಪಿಸಲು ತಮ್ಮ ಧರ್ಮ ಕೇಂದ್ರದ ಕಟ್ಟಡಗಳನ್ನು ತೆರೆಯುವುದರೊಂದಿಗೆ, ಸ್ಥಳೀಯ ದಾನ ಸಂಸ್ಥೆಯ ಜಾಲದ ಮೂಲಕ ತುರ್ತು ಮಾನವೀಯ ನೆರವನ್ನು ಒದಗಿಸಲು ಮುಂದಾಗಿವೆ.

28 ಜೂನ್ 2026, 15:32