‘ರೋಮ್‌ನಲ್ಲಿ ಲಿಯೋರವರು’: ವ್ಯಾಟಿಕನ್ ನ್ಯೂಸ್ ಸಾಕ್ಷ್ಯಚಿತ್ರ ಜುಲೈ 1ರಂದು ಬಿಡುಗಡೆಯಾಗಲಿದೆ.
ವ್ಯಾಟಿಕನ್ ವರದಿ
ಜೂನ್ 2025ರಲ್ಲಿ ಬಿಡುಗಡೆಯಾದ ಲಿಯೊನ್ ಡಿ ಪೆರು ಹಾಗೂ ಬಳಿಕ ಬಿಡುಗಡೆಯಾದ ಚಿಕಾಗೋದಿಂದ ಲಿಯೋರವರು ಸಾಕ್ಷ್ಯಚಿತ್ರಗಳ ನಂತರ, ವ್ಯಾಟಿಕನ್ ನ್ಯೂಸ್ ಇದೀಗ ‘ರೋಮಿನಲ್ಲಿ ಲಿಯೋ’ ಎಂಬ ಹೊಸ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಈ ಚಿತ್ರವು ಈಗ ಜಗದ್ಗುರು XIVನೇ ಲಿಯೋರವರು ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರು ಶಾಶ್ವತ ನಗರವಾದ ರೋಮಿನಲ್ಲಿ ಕಳೆದ ವರ್ಷಗಳನ್ನು ಮರುಕಳಿಸುತ್ತದೆ.
ಸುಮಾರು 20 ವರ್ಷಗಳ ಅವಧಿಯನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರವು, 1981ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಇಟಲಿಗೆ ಅವರ ಆಗಮನದಿಂದ ಆರಂಭವಾಗಿ, ಸಂತ ಆಗಸ್ಟಿನ್ ಸಭೆಯ ಪ್ರಧಾನ ಮೇಲಾಧಿಕಾರಿಯಾಗಿ ಎರಡು ಅವಧಿಗಳ ಕಾಲ ಅವರು ಸಲ್ಲಿಸಿದ ನಾಯಕತ್ವ, ಬಳಿಕ ಬಿಷಪ್‌ಗಳ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿ ನೇಮಕಗೊಂಡದ್ದು ಹಾಗೂ 2023ರಲ್ಲಿ ಕಾರ್ಡಿನಲ್‌ಗಳ ಮಂಡಳಿಗೆ ಸೇರ್ಪಡೆಯಾದ ಸಂದರ್ಭದವರೆಗೆ ಅವರ ಪಯಣವನ್ನು ದಾಖಲಿಸುತ್ತದೆ.
ಸ್ನೇಹ, ಅಧ್ಯಯನ, ಪ್ರವಾಸಗಳು, ವಿಹಾರಯಾತ್ರೆಗಳು, ಭೇಟಿಗಳು, ಸಭೆಗಳು, ತೀರ್ಥಯಾತ್ರೆಗಳು ಮತ್ತು ಸೇವೆಯ ಅನೇಕ ವರ್ಷಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಹಿಂದೆಂದೂ ಪ್ರಕಟವಾಗದ ಚಿತ್ರಗಳು ಹಾಗೂ ವೀಡಿಯೊ ದೃಶ್ಯಗಳ ಮೂಲಕ ನಿರೂಪಿಸಲಾಗಿದೆ. ಜೊತೆಗೆ, ಅವರೊಂದಿಗೆ ಸೇವೆ ಸಲ್ಲಿಸಿದ ಆಗಸ್ಟಿನಿಯನ್ ಧಾರ್ಮಿಕರು, ಹಿಂದಿನ ಸಹಪಾಠಿಗಳು, ಹಳೆಯ ಸ್ನೇಹಿತರು ಹಾಗೂ ಸಂತ ಆಗಸ್ಟಿನ್ ಸಭೆ ಮತ್ತು ಬಿಷಪ್‌ಗಳ ಡಿಕಾಸ್ಟರಿಯ ಸದಸ್ಯರ ಸಾಕ್ಷ್ಯಗಳೂ ಇದರಲ್ಲಿ ಸೇರಿವೆ.
‘ರೋಮಿನಲ್ಲಿ ಲಿಯೋ’ ಸಾಕ್ಷ್ಯಚಿತ್ರವು ಜಗದ್ಗುರುಗಳ ಜೀವನ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುವ ವ್ಯಾಟಿಕನ್ ನ್ಯೂಸ್‌ನ ಸಾಕ್ಷ್ಯಚಿತ್ರ ಸರಣಿಯ ಮೂರನೇ ಭಾಗವಾಗಿದೆ. ಈ ಪಯಣವು ಜೂನ್ 2025ರಲ್ಲಿ ಬಿಡುಗಡೆಯಾದ ಲಿಯೊನ್ ಡಿ ಪೆರು ಮೂಲಕ ಆರಂಭವಾಗಿದ್ದು, ಅದು ದಕ್ಷಿಣ ಅಮೆರಿಕದ ಪೆರು ದೇಶದಲ್ಲಿ ಅವರು ಮಿಷನರಿಯಾಗಿ ಕಳೆದ ವರ್ಷಗಳ ಮೇಲೆ ಕೇಂದ್ರೀಕೃತವಾಗಿತ್ತು. ಬಳಿಕ ನವೆಂಬರ್‌ನಲ್ಲಿ ಬಿಡುಗಡೆಯಾದ ಚಿಕಾಗೋದಿಂದ ಲಿಯೋರವರ ಅಮೆರಿಕದ ಬೇರುಗಳನ್ನು ಪರಿಚಯಿಸಿತು.
ಈ ಸಾಕ್ಷ್ಯಚಿತ್ರವನ್ನು ಸಂವಹನ ಡಿಕಾಸ್ಟರಿಯ ಸಂಪಾದಕೀಯ ನಿರ್ದೇಶನಾಲಯ ನಿರ್ಮಿಸಿದೆ. ಪತ್ರಕರ್ತರಾದ ಫೆಲಿಪೆ ಹೆರೆರಾ-ಎಸ್ಪಾಲಿಯಾತ್, ಸಾಲ್ವತೊರೆ ಚೆರ್ನೂಸಿಯೊ ಹಾಗೂ ತಿಜಿಯಾನಾ ಕ್ಯಾಂಪಿಸಿ ಇದರ ನಿರ್ಮಾಪಕರಾಗಿದ್ದು, ಜೈಮೆ ವಿಸ್ಕೈನೊ ಹಾರೊ ಮತ್ತು ಸ್ಟೆಫಾನೊ ಅನೆಲ್ಲಾರವರು ಸಂಪಾದಿಸಿದ್ದಾರೆ.
ಜುಲೈ 1, ಬುಧವಾರ, ರೋಮಿನ ಸಮಯ ಸಂಜೆ 6 ಗಂಟೆಗೆ ಈ ಸಾಕ್ಷ್ಯಚಿತ್ರವು ವ್ಯಾಟಿಕನ್ ನ್ಯೂಸ್‌ನ ಯೂಟ್ಯೂಬ್ ವಾಹಿನಿಯಲ್ಲಿ ಮೊದಲಿಗೆ ಇಂಗ್ಲಿಷ್, ಇಟಾಲಿಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿನಂತಿಯ ಮೇರೆಗೆ ಇದನ್ನು ವಿಶ್ವದ ವಿವಿಧ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ.
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗಾಗಿ, ಇದೇ ದಿನ ಸಂಜೆ 5 ಗಂಟೆಗೆ ವ್ಯಾಟಿಕನ್ ಫಿಲ್ಮ್ ಲೈಬ್ರರಿಯಲ್ಲಿ ಈ ಸಾಕ್ಷ್ಯಚಿತ್ರದ ವಿಶೇಷ ಪೂರ್ವಾವಲೋಕನ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
