ವೆನೆಜುವೆಲಾದಲ್ಲಿನ ವಿನಾಶದ ಚಿತ್ರಗಳು. ವೆನೆಜುವೆಲಾದಲ್ಲಿನ ವಿನಾಶದ ಚಿತ್ರಗಳು.  (AFP or licensors)

ಭೂಕಂಪದಿಂದ ತತ್ತರಿಸಿರುವ ವೆನೆಜುವೆಲಾಗೆ ಜಗದ್ಗುರು ಲಿಯೋರವರು ನೆರವು ಕಳುಹಿಸಿದರು.

ವಿನಾಶಕಾರಿ ಭೂಕಂಪಗಳಿಂದ ಕನಿಷ್ಠ 164 ಮಂದಿ ಸಾವನ್ನಪ್ಪಿ ವ್ಯಾಪಕ ಪ್ರಮಾಣದ ಹಾನಿ ಉಂಟಾಗಿರುವ ವೆನೆಜುವೆಲಾದಲ್ಲಿ ರಕ್ಷಣಾ ಕಾರ್ಯಗಳು ಮುಂದುವರಿದಿರುವ ನಡುವೆಯೇ, ಜಗದ್ಗುರು ಲಿಯೋರವರು ತುರ್ತು ಪರಿಹಾರಕ್ಕಾಗಿ ಆರಂಭಿಕವಾಗಿ €100,000 (ಒಂದು ಲಕ್ಷ ಯುರೋ) ನೆರವನ್ನು ಕಳುಹಿಸಿದ್ದಾರೆ.

ವ್ಯಾಟಿಕನ್ ವರದಿ

ರಾತ್ರೋರಾತ್ರಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳ ಪರಿಣಾಮವಾಗಿ ವೆನೆಜುವೆಲಾದಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಅಸಂಖ್ಯಾತ ಜನರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ.

ರಕ್ಷಣಾ ಕಾರ್ಯಗಳು ನಿರಂತರವಾಗಿ ಸಾಗುತ್ತಿದ್ದು, ದುರಂತದ ನೈಜ ಪ್ರಮಾಣ ನಿಧಾನವಾಗಿ ಹೊರಬರುತ್ತಿರುವ ಈ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಅಲ್ಮೋನರ್ ಕಚೇರಿಯ ಮೂಲಕ ಆರಂಭಿಕ ತುರ್ತು ಪರಿಹಾರವಾಗಿ ಒಂದು ಲಕ್ಷ ಯುರೋಗಳ (€100,000) ನೆರವನ್ನು ಕಳುಹಿಸಿದ್ದಾರೆ.

ಜಗದ್ಗುರುಗಳ ಅಧಿಕಾರ ಸ್ಥಳ ತಿಳಿಸಿರುವಂತೆ, ವೆನೆಜುವೆಲಾದ ಪ್ರೇಷಿತರ  ರಾಯಭಾರಿ ಆರ್ಚ್‌ಬಿಷಪ್ ಅಲ್ಬೆರ್ಟೊ ಒರ್ಟೆಗಾ ಮಾರ್ಟಿನ್ ಹಾಗೂ ಕರಾಕಸ್ ಮಹಾಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ರೌಲ್ ಬಿಯೋರ್ಡ್ ಕ್ಯಾಸ್ಟಿಲೊರವರ ಸಹಯೋಗದಲ್ಲಿ ಈ ನೆರವನ್ನು ಸಮನ್ವಯಗೊಳಿಸಲಾಗಿದೆ. ಇದು ಕೇವಲ ಮೊದಲ ಹಂತದ ನೆರವಾಗಿದ್ದು, ಸ್ಥಳೀಯ ಧರ್ಮ ಸಭೆ ಗುರುತಿಸುವ ಅಗತ್ಯಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ನೆರವನ್ನು ಒದಗಿಸಲಾಗುವುದು.

ಜಗದ್ಗುರುಗಳ ಈ ನೆರವು ದೇಶದಾದ್ಯಂತ ಕಥೋಲಿಕ ಸಮುದಾಯಗಳು ತಮ್ಮ ಧರ್ಮ ಕೇಂದ್ರದ ಕಟ್ಟಡಗಳನ್ನು ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯವಾಗಿ ತೆರೆದಿರುವ ಹಾಗೂ ಸ್ಥಳೀಯ ದಾನ ಸಂಸ್ಥೆಯ ಜಾಲಗಳ ಮೂಲಕ ತುರ್ತು ಪರಿಹಾರ ಕಾರ್ಯಗಳನ್ನು ಸಂಘಟಿಸುತ್ತಿರುವ ಸಂದರ್ಭದಲ್ಲಿ ಬಂದಿದೆ.

ಬುಧವಾರ ಸಂಜೆ ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಎರಡು ಭೂಕಂಪಗಳ ನಂತರ ಕುಸಿದುಬಿದ್ದ ನೂರಾರು ಕಟ್ಟಡಗಳ ಅವಶೇಷಗಳಲ್ಲಿ ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ.

ಕರಾಕಸ್‌ನ ಸಿಮೋನ್ ಬೊಲಿವಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ರಾಜಧಾನಿಯ ಉತ್ತರದಲ್ಲಿರುವ ಕರಾವಳಿ ರಾಜ್ಯ ಲಾ ಗ್ವೈರಾದಲ್ಲಿ ಅತಿ ಹೆಚ್ಚಿನ ಹಾನಿ ಸಂಭವಿಸಿದ್ದು, ಅಲ್ಲಿ ಡಜನ್‌ಗಟ್ಟಲೆ ಕಟ್ಟಡಗಳು ಸಂಪೂರ್ಣವಾಗಿ ಕುಸಿದಿವೆ.

ಅಧಿಕಾರಿಗಳ ಪ್ರಕಾರ, ಕನಿಷ್ಠ 164 ಮಂದಿ ಮೃತಪಟ್ಟಿದ್ದು, ಸುಮಾರು ಒಂದು ಸಾವಿರ ಮಂದಿ ಗಾಯಗೊಂಡಿದ್ದಾರೆ. ಆದರೆ ರಕ್ಷಣಾ ಸಿಬ್ಬಂದಿ ಇನ್ನೂ ಅವಶೇಷಗಳಡಿ ಶೋಧ ಕಾರ್ಯ ಮುಂದುವರಿಸುತ್ತಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ನಡುವೆ 20ಕ್ಕೂ ಹೆಚ್ಚು ಭೂಕಂಪಾನಂತರದ ಕಂಪನಗಳು  ಸಂಭವಿಸಿದ್ದು, ಅವುಗಳ ಕಂಪನಗಳು ಕೊಲಂಬಿಯಾದವರೆಗೂ ಅನುಭವಕ್ಕೆ ಬಂದಿವೆ.

ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ರಾಷ್ಟ್ರೀಯ ವಿಪತ್ತು ಮತ್ತು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಲಾ ಗ್ವೈರಾವನ್ನು "ವಿಪತ್ತು ವಲಯ" ಎಂದು ಘೋಷಿಸಿದ್ದಾರೆ.

ಆಂತರಿಕ ಸಚಿವ ಡಿಯೋಸ್ಡಾಡೊ ಕಬೆಲ್ಲೊ ರವರು ಪ್ರಮುಖ ಮೂಲಸೌಕರ್ಯಗಳ ಸ್ಥಿರತೆಯನ್ನು ಎಂಜಿನಿಯರ್‌ಗಳು ಪರಿಶೀಲಿಸುತ್ತಿರುವ ಹಿನ್ನೆಲೆಯಲ್ಲಿ, ನಿವಾಸಿಗಳು ಹಾನಿಗೊಳಗಾದ ಕಟ್ಟಡಗಳಿಂದ ದೂರವಿದ್ದು, ಸಾಧ್ಯವಾದಷ್ಟು ತೆರೆದ ಪ್ರದೇಶಗಳಲ್ಲೇ ಇರಬೇಕೆಂದು ಮನವಿ ಮಾಡಿದ್ದಾರೆ.

ಹಾನಿಯ ಪ್ರಮಾಣ ವ್ಯಾಪಕವಾಗಿದ್ದು, ಅತ್ಯಂತ ಗಂಭೀರವಾಗಿದೆ. ಕರಾಕಸ್ ಕ್ಯಾಥೆಡ್ರಲ್ ಸೇರಿದಂತೆ ಹಲವು ಧರ್ಮ ಕೇಂದ್ರ ಧರ್ಮ ಸಭೆಗಳು ರಚನಾತ್ಮಕ ಹಾನಿಗೊಳಗಾಗಿವೆ. ಗುರುವಿದ್ಯಾಥಿ೯ಮಂದಿರಗಳು ಹಾಗೂ ಇತರ ಧರ್ಮ ಸಭೆಯ ಕಟ್ಟಡಗಳೂ ಹಾನಿಗೊಳಗಾಗಿವೆ.

ಆದಾಗ್ಯೂ, ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಧರ್ಮ ಸಭೆಯ ನಾಯಕರು ಆಶ್ರಯ, ಆಹಾರ ಹಾಗೂ ಆತ್ಮೀಯ ಮತ್ತು ಧಾರ್ಮಿಕ ಆರೈಕೆಯನ್ನು ನಿರಂತರವಾಗಿ ಒದಗಿಸುತ್ತಿದ್ದಾರೆ.

ಅಮೆರಿಕ ಖಂಡದ ವಿವಿಧ ರಾಷ್ಟ್ರಗಳು ಹಾಗೂ ಇತರ ದೇಶಗಳಿಂದ ಅಂತರರಾಷ್ಟ್ರೀಯ ನೆರವು ಬರಲಾರಂಭಿಸಿದ್ದು, ಅವಶೇಷಗಳಡಿ ಇನ್ನಷ್ಟು ಬದುಕುಳಿದವರನ್ನು ಪತ್ತೆಹಚ್ಚುವ ಆಶಯದೊಂದಿಗೆ ಶೋಧ ಮತ್ತು ರಕ್ಷಣಾ ತಂಡಗಳು ಸಮಯದೊಂದಿಗೆ ಪೈಪೋಟಿ ನಡೆಸುತ್ತಿವೆ.

25 ಜೂನ್ 2026, 19:38