A Lampedusa il Papa attraversa da solo la porta d'Europa

ಲಾಂಪೆಡುಸಾದಲ್ಲಿ ಜಗದ್ಗುರುಗಳು: ಅಪಾರ ಮಾನವೀಯ ದುಃಖದ ಎದುರು ನಾವು ಮೂಲಭೂತ ಪ್ರತಿಕ್ರಿಯೆ ನೀಡಬೇಕು.

ಲಾಂಪೆಡುಸಾ ದ್ವೀಪದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ವಲಸಿಗರು ಮತ್ತು ನಿರಾಶ್ರಿತರ ಮೇಲಿನ ಅಮಾನವೀಯ ಹಾಗೂ ಕ್ರೂರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ಸಮುದ್ರದಲ್ಲಿ ಸಂಭವಿಸುತ್ತಿರುವ ಜೀವಹಾನಿಯ ಕುರಿತು ಆಳವಾದ ದುಃಖ ವ್ಯಕ್ತಪಡಿಸಿದ ಅವರು, ಈ "ಅಪಾರ ಮಾನವೀಯ ದುಃಖಕ್ಕೆ" ವಿಶ್ವವು ಕೇವಲ ಮಾತುಗಳಲ್ಲಿ ಅಲ್ಲ, ಸ್ಪಷ್ಟವಾದ ಕಾರ್ಯಗಳ ಮೂಲಕ ಹಾಗೂ ಕರುಣೆಯಿಂದ ಪ್ರತಿಕ್ರಿಯಿಸಬೇಕೆಂದು ಕರೆ ನೀಡಿದರು.

ವ್ಯಾಟಿಕನ್ ವರದಿ

2026ರ ಜುಲೈ 4ರಂದು ಜಗದ್ಗುರು XIVನೇ ಲಿಯೋರವರು ದಕ್ಷಿಣ ಇಟಲಿಯ ಲಾಂಪೆಡುಸಾ ದ್ವೀಪಕ್ಕೆ ಧರ್ಮಾಧ್ಯಕ್ಷೀಯ ಭೇಟಿ ನೀಡಿದರು. ವಲಸಿಗರು ಮತ್ತು ನಿರಾಶ್ರಿತರ ದುಃಸ್ಥಿತಿಯ ಕುರಿತು ಜಗತ್ತಿನ ಗಮನ ಸೆಳೆಯುವ ಉದ್ದೇಶದಿಂದ ಅವರು ಈ ಭೇಟಿಯಲ್ಲಿ ಹಲವು ಅರ್ಥಪೂರ್ಣ ಹಾಗೂ ಸಾಂಕೇತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಬೆಳಿಗ್ಗೆ 8:54ಕ್ಕೆ ಮೆಡಿಟರೇನಿಯನ್ ಸಮುದ್ರದಲ್ಲಿರುವ ಈ ದ್ವೀಪಕ್ಕೆ ಆಗಮಿಸಿದ ಜಗದ್ಗುರುಗಳು, 2013ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಆಯ್ಕೆಯ ಬಳಿಕ ರೋಮಿನ ಹೊರಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ಇದೇ ಸ್ಥಳಕ್ಕೆ ಮತ್ತೊಮ್ಮೆ ವಿಶೇಷ ಮಹತ್ವ ನೀಡಿದರು. ದ್ವೀಪದ ನಿವಾಸಿಗಳೊಂದಿಗೆ ಹಾಗೂ ಲಾಂಪೆಡುಸಾವನ್ನು ತಲುಪಿದ ಸಾವಿರಾರು ವಲಸಿಗರೊಂದಿಗೆ ತಮ್ಮ ಆತ್ಮೀಯತೆ ಮತ್ತು ಐಕ್ಯತೆಯನ್ನು ವ್ಯಕ್ತಪಡಿಸಿದ ಅವರು, ಸಮುದ್ರಯಾನದಲ್ಲೇ ಪ್ರಾಣ ಕಳೆದುಕೊಂಡು ಗಮ್ಯಸ್ಥಾನವನ್ನು ತಲುಪಲಾಗದವರನ್ನೂ ಸ್ಮರಿಸಿದರು.

ಮೊದಲಿಗೆ ಜಗದ್ಗುರುಗಳು ಸ್ಥಳೀಯ ಸ್ಮಶಾನಕ್ಕೆ ಭೇಟಿ ನೀಡಿದರು. ಅಲ್ಲಿ “ಸ್ವಾತಂತ್ರ್ಯದ ಹುಡುಕಾಟದಲ್ಲಿ ಸಮುದ್ರದಲ್ಲಿ ಪ್ರಾಣ ಕಳೆದುಕೊಂಡ ಮುಸ್ಲಿಮರು ಮತ್ತು ಕಥೋಲಿಕರು, ಯುವಕರು ಮತ್ತು ವೃದ್ಧರು, ಕಪ್ಪು ಮತ್ತು ಬಿಳಿಯವರು” ಎಂಬ ವಿಶೇಷ ಸಮಾಧಿ ವಿಭಾಗವಿದೆ. ಬಳಿಕ ಸಮುದ್ರ ಮಾರ್ಗವಾಗಿ ಆಗಮಿಸುವ ವಲಸಿಗರಿಗೆ ಭರವಸೆಯ ಸಂಕೇತವಾಗಿರುವ “ಗೇಟ್‌ವೇ ಟು ಯುರೋಪ್” ಸ್ಮಾರಕಕ್ಕೆ ತೆರಳಿ, ನಂತರ ಈ ಸಂದರ್ಭಕ್ಕಾಗಿ ಜಗದ್ಗುರು ಫ್ರಾನ್ಸಿಸ್ ರವರ ಹೆಸರನ್ನು ನೀಡಲಾಗಿರುವ ಫವಾರೋಲೊ ಬಂದರುದಲ್ಲಿ ಒಂದು ವಲಸಿಗ ಕುಟುಂಬವನ್ನು ಭೇಟಿಯಾದರು. ಬಳಿಕ ಲಾಂಪೆಡುಸಾದ ಕ್ರೀಡಾಂಗಣದಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.

ತಮ್ಮ ಪ್ರಭೊಧನೆಯಲ್ಲಿ ಜಗದ್ಗುರು ಲಿಯೋರವರು, ಒಳ್ಳೆಯ ಸಮಾರ್ಯನ ಸುವಾರ್ತೆಯ ಉಪಮೆಯನ್ನು ಉಲ್ಲೇಖಿಸಿ, ಇಂದು ಲಾಂಪೆಡುಸಾ ಮತ್ತು ಅದರ ನೆರೆಯ ಲಿನೋಸಾ ದ್ವೀಪಗಳು ಜೆರೂಸಲೇಮಿನಿಂದ ಯೆರಿಕೋಗೆ ಸಾಗುವ ಅಪಾಯಕಾರಿ ದಾರಿಯಂತಾಗಿವೆ ಎಂದು ಹೇಳಿದರು. “ಇಲ್ಲಿ ನೀವು ಒಬ್ಬನನ್ನಲ್ಲ, ಸಾವಿರಾರು ಜನರನ್ನು ಕಂಡಿದ್ದೀರಿ. ದರೋಡೆಕೋರರು ಅವರಿಂದ ಎಲ್ಲವನ್ನೂ ಕಸಿದುಕೊಂಡು, ಕ್ರೂರವಾಗಿ ಹಲ್ಲೆ ನಡೆಸಿ, ಅರೆಸತ್ತ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದಾರೆ” ಎಂದು ಅವರು ಹೇಳಿದರು. ಸಮುದ್ರದಲ್ಲಿ ಪ್ರಾಣ ಕಳೆದುಕೊಂಡು ತಮ್ಮ ಕನಸಿನ ಗಮ್ಯಸ್ಥಾನವನ್ನು ತಲುಪದವರೂ ನಮ್ಮ ಮನಸ್ಸಾಕ್ಷಿಯನ್ನು ಸಮಾನವಾಗಿ ಪ್ರಶ್ನಿಸುತ್ತಾರೆ ಎಂದು ಅವರು ನೆನಪಿಸಿದರು.

“ಯಾವುದೇ ಬೌದ್ಧಿಕ ಚರ್ಚೆ ಅಥವಾ ಸೈದ್ಧಾಂತಿಕ ನಿಲುವಿಗಿಂತ ಮೊದಲು, ನಮ್ಮ ಮುಂದೆ ಎಲ್ಲವನ್ನೂ ಕಳೆದುಕೊಂಡು ಬಿದ್ದಿರುವ ವ್ಯಕ್ತಿಯನ್ನು ಭೇಟಿಯಾಗುವುದು ಅವನ ಬಳಿಗೆ ಹೋಗುವಂತೆ ನಮ್ಮನ್ನು ಕರೆಯುತ್ತದೆ” ಎಂದು ಜಗದ್ಗುರುಗಳು ಹೇಳಿದರು. ಲಾಂಪೆಡುಸಾದ ಜನರ ಐಕ್ಯತೆ ಮತ್ತು ಮಾನವೀಯ ಸೇವೆಯನ್ನು ಶ್ಲಾಘಿಸಿದ ಅವರು, “ನಿಮ್ಮಲ್ಲಿ ಅನೇಕರಿಂದ ವ್ಯಕ್ತವಾಗುತ್ತಿರುವ ಕರುಣೆಯ ಅದ್ಭುತಕ್ಕೆ ಧನ್ಯವಾದಗಳು. ಇತರರ ಕಡೆಗೆ ಕೈ ಚಾಚುವುದು ಎಂದಿಗೂ ಸಹಜವಾಗಿ ನಡೆಯುವುದಿಲ್ಲ ಅದಕ್ಕೆ ಜಾಗೃತ ಮನಸ್ಸು ಮತ್ತು ಪ್ರೀತಿಯ ನಿರ್ಧಾರ ಬೇಕಾಗುತ್ತದೆ” ಎಂದು ಹೇಳಿದರು.

ಕರುಣೆ ಮತ್ತು ದಯೆಯ ಮನೋಭಾವವನ್ನು ಅಳವಡಿಸಿಕೊಳ್ಳುವವರು ಹೊಸ ರೀತಿಯಲ್ಲಿ ಬದುಕಲು, ಉತ್ತಮ ನಾಗರಿಕರಾಗಲು ಮತ್ತು ಸಮಾಜವನ್ನು ಬದಲಾಯಿಸಲು ಪ್ರಾರಂಭಿಸುತ್ತಾರೆ ಎಂದು ಜಗದ್ಗುರುಗಳು ತಿಳಿಸಿದರು. ಆಗ ಮಾತ್ರ ಪ್ರೀತಿಯ ನಾಗರಿಕತೆ ಎಂಬ ಕನಸು ಸಾಕಾರಗೊಳ್ಳುತ್ತದೆ ಎಂದ ಅವರು, ಪವಿತ್ರ XXIIIನೇ ಯೋಹಾನ , ಪವಿತ್ರVIನೇ ಪೌಲ ಮತ್ತು ಪವಿತ್ರ ಯೋಹಾನ IIನೇ ಪೌಲರ ಬೋಧನೆಗಳನ್ನು ಸ್ಮರಿಸಿದರು. ಕಳೆದ ಶತಮಾನದ ಅನೇಕ ಪ್ರವಾದಿಗಳು ಮತ್ತು ಹುತಾತ್ಮರಂತೆ, ಮಾನವ ಹೃದಯದ ಆಳವಾದ ನೋವಿಗೂ ಯುದ್ಧದ ಭೀಕರತೆಗೂ ಕರುಣೆಯೊಂದೇ ನಿಜವಾದ ಉತ್ತರ ನೀಡಬಲ್ಲದು ಎಂದು ಅವರು ಹೇಳಿದರು.

“ಈ ಮಹಾನ್ ಪೂರ್ವಜರ ಹೆಗಲ ಮೇಲೆ ನಿಂತಿರುವ ನಾವು, ಪ್ರೀತಿಯ ನಾಗರಿಕತೆಯನ್ನು ಆಧ್ಯಾತ್ಮಿಕ, ಸಾಂಸ್ಕೃತಿಕ, ಕಾನೂನು, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಾಕಾರಗೊಳಿಸಬೇಕಾದ ಹೊಸ ಸಹಸ್ರಮಾನದೊಳಗೆ ಪ್ರವೇಶಿಸಿದ್ದೇವೆ” ಎಂದು ಜಗದ್ಗುರುಗಳು ಹೇಳಿದರು. ಅಂತಿಮವಾಗಿ ಅವರು ಮನವಿ ಮಾಡುತ್ತಾ, “ನಮ್ಮ ಕಣ್ಣೆದುರು ಕಾಣುತ್ತಿರುವ ಈ ಅಪಾರ ಮಾನವೀಯ ದುಃಖವು, ನಾವು ನೀಡಬೇಕಾದ ಮೂಲಭೂತ ಮತ್ತು ದೃಢವಾದ ಪ್ರತಿಕ್ರಿಯೆಯ ಅಗತ್ಯವನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಲಿ” ಎಂದು ಪ್ರಾರ್ಥಿಸಿದರು.

04 ಜುಲೈ 2026, 17:03