ಜಗದ್ಗುರು XIV ನೇ ಲಿಯೋರವರಿಗೆ 'ಲಿಬರ್ಟಿ ಮೆಡಲ್' ಪ್ರದಾನ: "ದೇವರು ಅಮೆರಿಕವನ್ನು ಆಶೀರ್ವದಿಸಲಿ".
ವ್ಯಾಟಿಕನ್ ವರದಿ
ಧಾರ್ಮಿಕ ಸ್ವಾತಂತ್ರ್ಯ, ಮನಸ್ಸಾಕ್ಷಿಯ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ವಿಶ್ವದಾದ್ಯಂತ ಉತ್ತೇಜಿಸಲು ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಗೌರವಿಸಿ, ಅಮೆರಿಕದ ನ್ಯಾಷನಲ್ ಕಾನ್ಸ್ಟಿಟ್ಯೂಷನ್ ಸೆಂಟರ್ ವತಿಯಿಂದ ಜಗದ್ಗುರು XIVನೇ ಲಿಯೋರವರು 2026ರ ಪ್ರತಿಷ್ಠಿತ ಲಿಬರ್ಟಿ ಮೆಡಲ್ ಪ್ರದಾನಿಸಲಾಯಿತು. ಅಮೆರಿಕದ ಸ್ವಾತಂತ್ರ್ಯ ಘೋಷಣೆಯ 250ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರೋಮಿನಿಂದ ಫಿಲಡೆಲ್ಫಿಯಾದಲ್ಲಿ ನೆರೆದಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಗೌರವವನ್ನು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸಿದರು.
ತಾವು ಈ ಮಹಾನ್ ರಾಷ್ಟ್ರದ ಪುತ್ರರಾಗಿರುವುದಾಗಿ ಹೇಳಿದ ಜಗದ್ಗುರುಗಳು, ಸ್ವಾತಂತ್ರ್ಯ, ನ್ಯಾಯ ಮತ್ತು ಉತ್ತಮ ಭವಿಷ್ಯದ ಕನಸು ಕಂಡ ಧೈರ್ಯಶಾಲಿ ಸಂಸ್ಥಾಪಕರ ಪರಂಪರೆಯನ್ನು ಸ್ಮರಿಸಿದರು. ಅಮೆರಿಕದ ಸ್ವಾತಂತ್ರ್ಯ ಘೋಷಣೆಯಲ್ಲಿ ಪ್ರತಿಪಾದಿಸಲಾದ ಜೀವಿಸುವ ಹಕ್ಕು, ಸ್ವಾತಂತ್ರ್ಯ ಮತ್ತು ಸಂತೋಷವನ್ನು ಅರಸುವ ಹಕ್ಕು ಎಂಬ ಮೂಲಭೂತ ಹಾಗೂ ಯಾರಿಂದಲೂ ಕಸಿದುಕೊಳ್ಳಲಾಗದ ಹಕ್ಕುಗಳು ಮಾನವ ಘನತೆಯ ಆಧಾರವಾಗಿದ್ದು, ಪ್ರತಿಯೊಬ್ಬರೂ ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದಾರೆ ಎಂಬ ಬೈಬಲ್ ಬೋಧನೆಯಲ್ಲಿ ಅವು ಬೇರುಬಿಟ್ಟಿವೆ ಎಂದು ಅವರು ಹೇಳಿದರು.
ಕಳೆದ 250 ವರ್ಷಗಳಲ್ಲಿ ಅಮೆರಿಕವು ಸ್ವಾತಂತ್ರ್ಯದ ಸಂಕೇತವಾಗಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಜಗದ್ಗುರುಗಳು ಹೇಳಿದರು. ಅನೇಕ ವಲಸಿಗರಿಗೆ ಅವಕಾಶ ಕಲ್ಪಿಸಿ ಅವರ ಕನಸುಗಳಿಗೆ ಆಶ್ರಯ ನೀಡಿದ ಈ ರಾಷ್ಟ್ರವು, ವಿಶ್ವಯುದ್ಧಗಳಂತಹ ಸಂಕಷ್ಟದ ಕಾಲದಲ್ಲಿಯೂ ತನ್ನ ಗಡಿಗಳನ್ನು ಮೀರಿ ಸ್ವಾತಂತ್ರ್ಯ ಮತ್ತು ಶಾಂತಿಯ ಮೌಲ್ಯಗಳನ್ನು ಕಾಪಾಡಲು ತ್ಯಾಗ ಮಾಡಿದೆ. ಆದರೆ ಸ್ವಾತಂತ್ರ್ಯ ಮತ್ತು ನ್ಯಾಯವನ್ನು ಎಲ್ಲರಿಗೂ ತಲುಪಿಸುವ ಕಾರ್ಯವು ಪ್ರತಿಯೊಂದು ತಲೆಮಾರಿನಲ್ಲೂ ಹೊಸ ಸವಾಲುಗಳೊಂದಿಗೆ ಮುಂದುವರಿಯಬೇಕಾದ ಜವಾಬ್ದಾರಿಯಾಗಿದೆ ಎಂದು ಅವರು ನೆನಪಿಸಿದರು.
ತಮ್ಮ ಭಾಷಣದಲ್ಲಿ ಜಗದ್ಗುರುಗಳು ವಿಶೇಷವಾಗಿ ಜೀವಿಸುವ ಹಕ್ಕಿನ ಮಹತ್ವವನ್ನು ಒತ್ತಿಹೇಳಿದರು. ಗರ್ಭಧಾರಣೆಯ ಮೊದಲ ಕ್ಷಣದಿಂದ ಸಹಜ ಮರಣದವರೆಗೆ ಪ್ರತಿಯೊಂದು ಮಾನವ ಜೀವವೂ ದೇವರ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ರಕ್ಷಿಸುವುದು ಸಮಾಜ ಮತ್ತು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂದರು. ಒಂದು ರಾಷ್ಟ್ರದ ನೈತಿಕ ಶ್ರೇಷ್ಠತೆ ಅದರಲ್ಲಿರುವ ಅತೀ ದುರ್ಬಲರು, ನಿರ್ಗತಿಕರು ಹಾಗೂ ಮೌಲ್ಯ ಪ್ರಶ್ನೆಗೆ ಒಳಗಾಗುವವರ ಜೀವನವನ್ನು ಎಷ್ಟರ ಮಟ್ಟಿಗೆ ಕಾಪಾಡುತ್ತದೆ ಎಂಬುದರ ಮೂಲಕ ಅಳೆಯಲ್ಪಡುತ್ತದೆ ಎಂದು ಅವರು ಹೇಳಿದರು.
ಧಾರ್ಮಿಕ ಸ್ವಾತಂತ್ರ್ಯವು ಅಮೆರಿಕದ ಶ್ರೇಷ್ಠ ಪರಂಪರೆಗಳಲ್ಲಿ ಒಂದಾಗಿದೆ ಎಂದು ಹೇಳಿದ ಜಗದ್ಗುರುಗಳು, ಅದು ಪ್ರತಿಯೊಬ್ಬರಿಗೂ ತಮ್ಮ ಮನಸ್ಸಾಕ್ಷಿಯಂತೆ ದೇವರನ್ನು ಆರಾಧಿಸುವ, ತಮ್ಮ ನಂಬಿಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ ಹಾಗೂ ಭಿನ್ನ ಧರ್ಮಗಳ ನಡುವೆ ಸಂವಾದ ಮತ್ತು ಸಹಕಾರವನ್ನು ಬೆಳೆಸುವ ಅವಕಾಶ ನೀಡಿದೆ ಎಂದು ಶ್ಲಾಘಿಸಿದರು. ಇದೇ ಪರಂಪರೆ ಮುಂದೆಯೂ ಶಾಂತಿ, ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲಿ ಎಂದು ಅವರು ಆಶಿಸಿದರು.
ಕೊನೆಯಲ್ಲಿ, ಅಮೆರಿಕದ 250ನೇ ವಾರ್ಷಿಕೋತ್ಸವವು ದೇಶದ ಸಂಸ್ಥಾಪಕರು ಪ್ರತಿಪಾದಿಸಿದ ಮಾನವ ಘನತೆ, ಸಮಾನತೆ, ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಆದರ್ಶಗಳಿಗೆ ಪುನಃ ಬದ್ಧರಾಗುವ ಪವಿತ್ರ ಸಂದರ್ಭವಾಗಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಶಾಶ್ವತ ಶಾಂತಿ ಮತ್ತು ನಿಜವಾದ ಸ್ವಾತಂತ್ರ್ಯದ ಮೂಲವಾಗಿರುವ ದೇವರಿಗೆ ಅಮೆರಿಕದ ಭವಿಷ್ಯವನ್ನು ಸಮರ್ಪಿಸಿ, "ದೇವರು ಅಮೆರಿಕವನ್ನು ಆಶೀರ್ವದಿಸಲಿ" ಎಂದು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
