ಉಕ್ರೇನ್‌ನ ಬೆರ್ಡಿಚಿವ್‌ನಲ್ಲಿರುವ ಮರಿಯಮ್ಮನವರ ಪುಣ್ಯಕ್ಷೇತ್ರ. ಉಕ್ರೇನ್‌ನ ಬೆರ್ಡಿಚಿವ್‌ನಲ್ಲಿರುವ ಮರಿಯಮ್ಮನವರ ಪುಣ್ಯಕ್ಷೇತ್ರ. 

ಜಗದ್ಗುರು ಲಿಯೋರವರು ಉಕ್ರೇನ್‌ನಲ್ಲಿ ಶಾಂತಿಗಾಗಿ ಪ್ರಾರ್ಥಿಸಲು ಕರೆ ನೀಡಿದರು.

ಉಕ್ರೇನ್‌ನಲ್ಲಿ ಲ್ಯಾಟಿನ್ ವಿಧಿಯ ಕಥೋಲಿಕ ಧರ್ಮ ಸಭೆಯ ರಚನೆಗಳನ್ನು ಮರುಸ್ಥಾಪಿಸಿದ 35ನೇ ವಾರ್ಷಿಕೋತ್ಸವದ ಆಚರಣೆಗೆ ತಮ್ಮ ವಿಶೇಷ ಪ್ರತಿನಿಧಿಯಾಗಿ ತೆರಳಿರುವ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರಿಗೆ ಬರೆದ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು ಇಪ್ಪತ್ತನೇ ಶತಮಾನದಲ್ಲಿ ಧರ್ಮ ಸಭೆ ಅನುಭವಿಸಿದ ಹಿಂಸೆಯನ್ನು ಸ್ಮರಿಸುತ್ತಾರೆ. ಅಲ್ಲದೆ, ಉಕ್ರೇನ್‌ನಲ್ಲಿ ಶಾಂತಿ ನೆಲೆಸಲೆಂದು, ಕುಟುಂಬಗಳಿಗಾಗಿ ಹಾಗೂ ಯುದ್ಧದಿಂದ ಸಂಕಷ್ಟ ಮತ್ತು ನೋವನ್ನು ಅನುಭವಿಸುತ್ತಿರುವ ಎಲ್ಲರಿಗಾಗಿ ಪ್ರಾರ್ಥಿಸಬೇಕೆಂದು ಅವರು ಕರೆ ನೀಡುತ್ತಾರೆ.

ವ್ಯಾಟಿಕನ್ ವರದಿ

ಮೊದಲು, ಜಗದ್ಗುರು XIVನೇ ಲಿಯೋರವರು ಉಕ್ರೇನ್‌ನಲ್ಲಿ ಯುದ್ಧದ "ಕ್ರೌರ್ಯ"ದಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಹಾಗೂ ಅನುಭವಿಸಿದ ಜೀವಂತ ಮತ್ತು ಮೃತ ಎಲ್ಲ ವಿಶ್ವಾಸಿಗಳಿಗಾಗಿ ಪ್ರಾರ್ಥಿಸಲು ಕರೆ ನೀಡಿದ್ದಾರೆ. ಅಲ್ಲದೆ, ಜಗತ್ತಿನಲ್ಲಿ ಮತ್ತು ಕುಟುಂಬಗಳಲ್ಲಿ ಶಾಂತಿ ನೆಲೆಸಲೆಂದು ದೇವರಲ್ಲಿ ಬೇಡಿಕೊಳ್ಳುವಂತೆ ಅವರು ವಿಶ್ವಾಸಿಗಳನ್ನು ಪ್ರೋತ್ಸಾಹಿಸಿದ್ದಾರೆ.

ಈ ಸಂದೇಶವು ಉಕ್ರೇನ್‌ನಲ್ಲಿರುವ ಲ್ಯಾಟಿನ್ ವಿಧಿಯ ಕಥೋಲಿಕ ಧರ್ಮ ಸಭೆ ರಚನೆಗಳನ್ನು ಮರುಸ್ಥಾಪಿಸಿದ 35ನೇ ವಾರ್ಷಿಕೋತ್ಸವದ ಆಚರಣೆಗಾಗಿ ತಮ್ಮ ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡಿರುವ ರಾಜ್ಯಗಳ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರಿಗೆ ಜಗದ್ಗುರುಗಳು ಬರೆದ ಪತ್ರದ ಪ್ರಮುಖ ಆಶಯವಾಗಿದೆ.

ಜುಲೈ 19, 2026ರಂದು ಬೆರ್ಡಿಚಿವ್‌ನಲ್ಲಿರುವ ಅವರ್ ಲೇಡಿ ಆಫ್ ಮೌಂಟ್ ಕಾರ್ಮೆಲ್ ರಾಷ್ಟ್ರೀಯ ಪುಣ್ಯಕ್ಷೇತ್ರದಲ್ಲಿ ಈ ಸಂಭ್ರಮಾಚರಣೆ ನಡೆಯಲಿದೆ. ಈ ನೇಮಕಾತಿಯನ್ನು 2026ರ ಜೂನ್ 20ರಂದು ಎಲ್'ಒಸ್ಸೆರ್ವಾತೊರೆ ರೊಮಾನೊ ಪತ್ರಿಕೆ ಪ್ರಕಟಿಸಿತ್ತು. ಪಾಪಲ್ ನಿಯೋಗದಲ್ಲಿ ಲ್ವಿವ್ ಮಹಾಧರ್ಮಪ್ರಾಂತ್ಯದ ಆರ್ಚ್‌ಬಿಷಪ್ ರವರ ಖಾಸಗಿ ಕಾರ್ಯದರ್ಶಿ ಮಾನ್ಯ ಧರ್ಮಗುರು ಆಂದ್ರೇಜ್ ಲೆಗೊವಿಚ್ ಹಾಗೂ ಲುಟ್ಸ್ಕ್ ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ವಾಮಿ ಪಾವ್ಲೊ ಖೋಮಿಯಾಕ್ ಸಹ ಭಾಗಿಯಾಗಲಿದ್ದಾರೆ.

ಲ್ಯಾಟಿನ್ ಭಾಷೆಯಲ್ಲಿ ಬರೆದಿರುವ ಈ ಪತ್ರದಲ್ಲಿ, ಜಗದ್ಗುರು XIVನೇ ಲಿಯೋರವರು 1234ರಲ್ಲಿ ಜಗದ್ಗುರು  ಒಂಬತ್ತನೇ ಗ್ರೆಗೊರಿರವರು ಇಂದಿನ ಉಕ್ರೇನ್ ಪ್ರದೇಶದಲ್ಲಿದ್ದ ಲ್ಯಾಟಿನ್ ವಿಧಿಯ ಧರ್ಮಗುರುಗಳು ಮತ್ತು ವಿಶ್ವಾಸಿಗಳಿಗೆ ಬರೆದ ಪತ್ರವನ್ನು ಉಲ್ಲೇಖಿಸುತ್ತಾರೆ. ಆ ಪತ್ರದಲ್ಲಿ, ಧರ್ಮ ಸಭೆ ತನ್ನ "ನಿಷ್ಠಾವಂತ ಮತ್ತು ವಿನಮ್ರ ಮಕ್ಕಳ" ಮೇಲೆ ವಿಶೇಷ ಮಮತೆ ಹೊಂದಿದ್ದು, ದುಷ್ಟರ ದಾಳಿಯಿಂದ ಅವರನ್ನು ತನ್ನ ಮಾತೃತ್ವದ ಕಾಳಜಿಯಿಂದ ರಕ್ಷಿಸುತ್ತದೆ ಎಂದು ಹೇಳಲಾಗಿತ್ತು. ದೇವರ ನಾಮದ ಆರಾಧನೆಯನ್ನು ಕಾಪಾಡಲು ಅವರು ಅಪಾರ ಉತ್ಸಾಹದಿಂದ ನಿಂತ ಕಾರಣ, ಕ್ರೈಸ್ತಧರ್ಮದ ವಿರೋಧಿಗಳಿಂದ ಕಿರುಕುಳ, ಹಿಂಸೆ ಮತ್ತು ಲೂಟಿಯನ್ನು ಸಹಿಸಬೇಕಾಯಿತು ಎಂಬುದನ್ನೂ ಆ ಪತ್ರ ಸ್ಮರಿಸುತ್ತದೆ.

ಮುಂದಿನ ಶತಮಾನಗಳಲ್ಲಿಯೂ ಉಕ್ರೇನ್‌ನ ಕಥೋಲಿಕ ಧರ್ಮಗುರುಗಳು ಮತ್ತು ವಿಶ್ವಾಸಿಗಳು ತಮ್ಮ ಅಚಲ ವಿಶ್ವಾಸಕ್ಕೆ ಪ್ರಬಲ ಸಾಕ್ಷಿಯಾಗಿದ್ದರು ಎಂದು ಜಗದ್ಗುರು ಲಿಯೋರವರು ಬರೆಯುತ್ತಾರೆ. ವಿಶೇಷವಾಗಿ ದ್ವಿತೀಯ ಮಹಾಯುದ್ಧದ ನಂತರ ಸೋವಿಯತ್ ಸಿದ್ಧಾಂತದ ಆಡಳಿತದ ಅಡಿಯಲ್ಲಿ ಉಕ್ರೇನ್ ಬಂದಾಗ, ಅಲ್ಲಿನ ಕಥೋಲಿಕ ಧರ್ಮ ಸಭೆ ಸಂಪೂರ್ಣವಾಗಿ ನಿರ್ಮೂಲವಾಗಿಸುವ ಉದ್ದೇಶದಿಂದ ನಾಗರಿಕ ಆಡಳಿತದಿಂದ ಕ್ರೂರ ಹಿಂಸೆಗೆ ಒಳಗಾಯಿತು. ಆದರೂ ನಂತರ ಧರ್ಮ ಸಭೆ ಹೊಸ ಚೈತನ್ಯವನ್ನು ಪಡೆದು ಪುನರುಜ್ಜೀವನಗೊಂಡಿತು. ಇಂದು ಅದು ತನ್ನ ಸಂಸ್ಥೆಗಳ ಮರುಸ್ಥಾಪನೆಯ 35ನೇ ವಾರ್ಷಿಕೋತ್ಸವವನ್ನು ಹಾಗೂ ಸಂತ ದ್ವಿತೀಯ ಜಾನ್ ಪಾಲರ ಉಕ್ರೇನ್ ಪ್ರೇಷಿತರ ಭೇಟಿಯ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

ಈ ವಿಶೇಷ ಸಂದರ್ಭದಲ್ಲಿ ಆರ್ಚ್‌ಬಿಷಪ್ ಗ್ಯಾಲಘರ್ ರವರಿಗೆ ಜಗದ್ಗುರುಗಳ ಪ್ರತಿನಿಧಿಯಾಗಿ ನೇಮಕ ನೀಡಿರುವ ಜಗದ್ಗುರು XIVನೇ ಲಿಯೋರವರು, ಬೆರ್ಡಿಚಿವ್ ರಾಷ್ಟ್ರೀಯ ಪುಣ್ಯಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳಿಗೆ ಅಧ್ಯಕ್ಷತೆ ವಹಿಸುವಂತೆ ಸೂಚಿಸಿದ್ದಾರೆ. ಯುದ್ಧದ ಕ್ರೌರ್ಯದಿಂದ ಆಳವಾಗಿ ಸಂಕಷ್ಟ ಅನುಭವಿಸಿರುವ ಜೀವಂತ ಮತ್ತು ಮೃತ ಎಲ್ಲ ಉಕ್ರೇನಿನ ವಿಶ್ವಾಸಿಗಳಿಗಾಗಿ ಪ್ರಾರ್ಥಿಸುವಂತೆ ಅವರು ಮನವಿ ಮಾಡಿದ್ದಾರೆ. ಜೊತೆಗೆ, ಸಮಾರಂಭದಲ್ಲಿ ಭಾಗವಹಿಸುವ ಎಲ್ಲರನ್ನು ಜಗತ್ತಿನ ಶಾಂತಿಗಾಗಿ, ಕುಟುಂಬಗಳ ಏಕತೆಗಾಗಿ ದೇವರಲ್ಲಿ ಪ್ರಾರ್ಥಿಸಲು ಹಾಗೂ ದೇವರ ಆಜ್ಞೆಗಳಿಗೆ ನಿಷ್ಠೆಯಿಂದ ಬದ್ಧರಾಗಿ ಉಳಿಯಲು ಉತ್ತೇಜಿಸುವಂತೆ ಅವರು ಆರ್ಚ್‌ಬಿಷಪ್ ಗ್ಯಾಲಘರ್ ಅವರಿಗೆ ವಿನಂತಿಸಿದ್ದಾರೆ.

11 ಜುಲೈ 2026, 16:40