ಯುನೈಟೆಡ್ ಸ್ಟೇಟ್ಸ್ ಸ್ಥಾಪನೆಯ 250 ನೇ ವಾರ್ಷಿಕೋತ್ಸವದ ಮುನ್ನಾದಿನದಂದು 38 ನೇ ಲಿಬರ್ಟಿ ಪದಕವನ್ನು ಪಡೆದ ಫಿಲಡೆಲ್ಫಿಯಾದ ರಾಷ್ಟ್ರೀಯ ಸಂವಿಧಾನ ಕೇಂದ್ರದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಜಗದ್ಗುರು ಲಿಯೋರವರು ಮಾತನಾಡುತ್ತಿರುವ ಚಿತ್ರ. ಯುನೈಟೆಡ್ ಸ್ಟೇಟ್ಸ್ ಸ್ಥಾಪನೆಯ 250 ನೇ ವಾರ್ಷಿಕೋತ್ಸವದ ಮುನ್ನಾದಿನದಂದು 38 ನೇ ಲಿಬರ್ಟಿ ಪದಕವನ್ನು ಪಡೆದ ಫಿಲಡೆಲ್ಫಿಯಾದ ರಾಷ್ಟ್ರೀಯ ಸಂವಿಧಾನ ಕೇಂದ್ರದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಜಗದ್ಗುರು ಲಿಯೋರವರು ಮಾತನಾಡುತ್ತಿರುವ ಚಿತ್ರ.  (ANSA)

ಅಮೆರಿಕ ಸಂಯುಕ್ತ ಸಂಸ್ಥಾನದ 250ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಅಮೆರಿಕದ ಜನತೆಗೆ ತಮ್ಮ ಪ್ರಾರ್ಥನೆಗಳ ಭರವಸೆ ನೀಡಿದರು.

ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪನೆಯ 250ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ಅಮೆರಿಕದ ಜನತೆಗೆ ಪತ್ರ ಬರೆದು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಿದ್ದಾರೆ. 2026ರ ಜುಲೈ 4ರಂದು ಆಚರಿಸಲಾಗುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, "1776ರ ಚೈತನ್ಯವು ಅಮೆರಿಕ ಸಂಯುಕ್ತ ಸಂಸ್ಥಾನವು ಭವಿಷ್ಯದತ್ತ ಸಾಗುತ್ತಿರುವಾಗಲೂ ಭರವಸೆ ಮತ್ತು ಏಕತೆಯನ್ನು ಪ್ರೇರೇಪಿಸುತ್ತಿರಲಿ" ಎಂದು ಅವರು ಹಾರೈಸಿದ್ದಾರೆ.

ವ್ಯಾಟಿಕನ್ ವರದಿ

"ಅಮೆರಿಕ ಸಂಯುಕ್ತ ಸಂಸ್ಥಾನವು ಭವಿಷ್ಯದತ್ತ ಸಾಗುತ್ತಿರುವಾಗಲೂ 1776ರ ಚೈತನ್ಯವು ಭರವಸೆ ಮತ್ತು ಏಕತೆಯನ್ನು ಪ್ರೇರೇಪಿಸುತ್ತಿರಲಿ."

2026ರ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ 250ನೇ ವಾರ್ಷಿಕೋತ್ಸವದ ಅಂಗವಾಗಿ ಕಳುಹಿಸಿದ ಪತ್ರದಲ್ಲಿ ಜಗದ್ಗುರು XIVನೇ ಲಿಯೋರವರು ಈ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಜನಿಸಿದ ಜಗದ್ಗುರುಗಳು, ಕಳೆದ ಎರಡೂವರೆ ಶತಮಾನಗಳಿಂದ ಅಮೆರಿಕವನ್ನು ರೂಪಿಸಿದ ಮೂಲಭೂತ ಮೌಲ್ಯಗಳಾದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಘನತೆ ಕುರಿತು ತಮ್ಮ ಪತ್ರದಲ್ಲಿ ಆಳವಾಗಿ ಚಿಂತನೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರದ ಇತಿಹಾಸದಲ್ಲಿ ಈ 250ನೇ ವಾರ್ಷಿಕೋತ್ಸವವು ಮಹತ್ವದ ಮೈಲಿಗಲ್ಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ವಾತಂತ್ರ್ಯ ಘೋಷಣೆಯು ಸ್ವಾತಂತ್ರ್ಯ, ಸಮಾನತೆ, ಸಂತೋಷದ ಅನ್ವೇಷಣೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಸ್ವ-ಆಡಳಿತ ಎಂಬ ಶಾಶ್ವತ ಆದರ್ಶಗಳಿಗೆ ಧ್ವನಿಯಾಗಿದೆ ಎಂದು ಅವರು ಹೇಳಿದರು. ಕಳೆದ 250 ವರ್ಷಗಳಲ್ಲಿ ಅನೇಕ ತಲೆಮಾರುಗಳ ಅಮೆರಿಕನ್ನರು ತ್ಯಾಗ, ಸೇವೆ, ಹೊಸತನ ಮತ್ತು ನಾಗರಿಕ ಪಾಲ್ಗೊಳ್ಳುವಿಕೆಯ ಮೂಲಕ ಈ ಆದರ್ಶಗಳನ್ನು ಸಾಕಾರಗೊಳಿಸಲು ಶ್ರಮಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.

ಈ ವಾರ್ಷಿಕೋತ್ಸವವು ಕೇವಲ ರಾಷ್ಟ್ರದ ಸಾಧನೆಗಳನ್ನು ಸಂಭ್ರಮಿಸುವ ಸಂದರ್ಭವಲ್ಲ ಪರಸ್ಪರರ ಮೇಲಿನ ಮತ್ತು ಭವಿಷ್ಯದ ತಲೆಮಾರುಗಳ ಮೇಲಿನ ತಮ್ಮ ಜವಾಬ್ದಾರಿಗಳನ್ನು ಮರುಪರಿಶೀಲಿಸುವ ಅವಕಾಶವೂ ಆಗಿದೆ ಎಂದು ಜಗದ್ಗುರುಗಳು ಹೇಳಿದರು. ಈ ಮೌಲ್ಯಗಳಲ್ಲಿ ಅತ್ಯಂತ ಅಮೂಲ್ಯವಾದುದು ಧಾರ್ಮಿಕ ಸ್ವಾತಂತ್ರ್ಯ ಎಂದು ಅವರು ಒತ್ತಿಹೇಳಿದರು. ಪ್ರತಿಯೊಬ್ಬರೂ ತಮ್ಮ ಮನಸ್ಸಾಕ್ಷಿಯಂತೆ ದೇವರನ್ನು ಆರಾಧಿಸುವ ಹಾಗೂ ಭಯ ಅಥವಾ ಬಲವಂತವಿಲ್ಲದೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಅಮೆರಿಕದ ಮಹತ್ತರ ಭರವಸೆಯಾಗಿದೆ. ಇದೇ ತತ್ವವು ಕಥೋಲಿಕ ಧರ್ಮ ಸಭೆ ಅಮೆರಿಕದಲ್ಲಿ ಸಮೃದ್ಧಿಯಾಗಿ ಬೆಳೆಯಲು ಸಹ ಕಾರಣವಾಗಿದೆ ಎಂದರು.

ಸಾರ್ವಜನಿಕ ಜೀವನದಲ್ಲಿ ಕಥೋಲಿಕರ ಪಾತ್ರವನ್ನು ಉಲ್ಲೇಖಿಸಿದ ಜಗದ್ಗುರುಗಳು, ನಂಬಿಕೆಯು ನಾಗರಿಕ ಜವಾಬ್ದಾರಿಯನ್ನು ಕಡಿಮೆ ಮಾಡುವುದಿಲ್ಲ ಬದಲಾಗಿ ಅದನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು. ಕ್ರಿಸ್ತನ ಪ್ರೀತಿಯನ್ನು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಬಿಂಬಿಸುವ ಮೂಲಕ ಕಥೋಲಿಕರು ಸುವಾರ್ತೆಯ ಸಾಕ್ಷಿಗಳಾಗಬೇಕು ಎಂದು ಅವರು ಕರೆ ನೀಡಿದರು. ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಾಮಾನ್ಯ ಹಿತಕ್ಕಾಗಿ ಕಥೋಲಿಕ ಧರ್ಮ ಸಭೆ ನೀಡಿರುವ ಮಹತ್ವದ ಕೊಡುಗೆಗಳನ್ನು ಅವರು ಸ್ಮರಿಸಿದರು. ಜಗದ್ಗುರು ಲಿಯೋರವರು ಸಪಿಯೆಂಟಿಯೇ ಕ್ರಿಸ್ಟಿಯಾನೇ ವಿಶ್ವಪತ್ರಿಕೆಯನ್ನು ಉಲ್ಲೇಖಿಸಿದ ಅವರು, “ತನ್ನ ಕರ್ತವ್ಯವನ್ನು ಅರಿತಿರುವ ಕ್ರೈಸ್ತನಿಗಿಂತ ಉತ್ತಮ ನಾಗರಿಕ ಮತ್ತೊಬ್ಬನಿಲ್ಲ” ಎಂಬ ಮಾತನ್ನು ನೆನಪಿಸಿದರು.

ಪ್ರತಿಯೊಂದು ಮಾನವ ಜೀವವೂ ದೇವರಿಂದ ದೊರೆತ ಅಲಂಘನೀಯ ಮೌಲ್ಯವನ್ನು ಹೊಂದಿದೆ ಎಂದು ಪುನರುಚ್ಚರಿಸಿದ ಜಗದ್ಗುರುಗಳು, ಗರ್ಭಧಾರಣೆಯ ಕ್ಷಣದಿಂದ ಸಹಜ ಮರಣದವರೆಗೆ ಮಾನವ ಜೀವವನ್ನು ರಕ್ಷಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು. ದುರ್ಬಲರು, ಸಂಕಷ್ಟದಲ್ಲಿರುವವರು ಮತ್ತು ಸಮಾಜದಿಂದ ಮರೆಯಲ್ಪಟ್ಟವರನ್ನು ಕರುಣೆ, ಐಕ್ಯತೆ ಮತ್ತು ಪ್ರೀತಿಯಿಂದ ಕಾಣುವ ಸಮಾಜವನ್ನು ನಿರ್ಮಿಸುವಂತೆ ಅವರು ಕರೆ ನೀಡಿದರು.

ಮಾನವ ಜೀವವನ್ನು ಕಾಪಾಡುವುದು ಎಂದರೆ ವಲಸಿಗರನ್ನು ಸ್ವಾಗತಿಸುವುದು, ರಕ್ಷಿಸುವುದು ಮತ್ತು ಅವರೊಂದಿಗೆ ಜೊತೆಯಾಗಿ ನಡೆಯುವುದೂ ಆಗಿದೆ ಎಂದು ಜಗದ್ಗುರುಗಳು ಹೇಳಿದರು. ಪ್ರತಿಯೊಂದು ತಲೆಮಾರಿನಲ್ಲೂ ಸ್ವಾತಂತ್ರ್ಯ, ಅವಕಾಶ ಮತ್ತು ಹೊಸ ಜೀವನಕ್ಕಾಗಿ ಅಮೆರಿಕಕ್ಕೆ ಬಂದ ವಲಸಿಗರು ದೇಶದ ಇತಿಹಾಸ ಮತ್ತು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಅವರು ನೆನಪಿಸಿದರು. ಅವರನ್ನು ಕರುಣೆ ಮತ್ತು ಉದಾರತೆಯಿಂದ ಸ್ವಾಗತಿಸುವುದು ಕೇವಲ ದಾನಧರ್ಮವಲ್ಲ, ಪ್ರತಿಯೊಬ್ಬ ಮಾನವನ ಘನತೆಯನ್ನು ಗೌರವಿಸುವ ಕಾರ್ಯವೂ ಆಗಿದೆ ಎಂದು ಅವರು ಹೇಳಿದರು.

ತಮ್ಮ ವಿಶ್ವಪತ್ರಿಕೆ ಭವ್ಯ ಮಾನವೀಯತೆಯನ್ನು ಉಲ್ಲೇಖಿಸಿದ ಜಗದ್ಗುರುಗಳು, ಇಂದಿನ ಜಾಗತಿಕ ಸವಾಲುಗಳನ್ನು ಎದುರಿಸಲು ಎಲ್ಲ ರಾಷ್ಟ್ರಗಳ ಸಾಮೂಹಿಕ ಜವಾಬ್ದಾರಿ ಮತ್ತು ಸಹಕಾರ ಅತ್ಯಗತ್ಯವಾಗಿದೆ ಎಂದರು. “ಎಲ್ಲರೂ ಅಭಿವೃದ್ಧಿ ಹೊಂದುವ ಜಗತ್ತನ್ನು ನಿರ್ಮಿಸಲು ಧೈರ್ಯ ಮತ್ತು ಹಂಚಿಕೊಂಡ ಜವಾಬ್ದಾರಿ ಅಗತ್ಯ. ಜಗತ್ತು ಎದುರಿಸುತ್ತಿರುವ ಸವಾಲುಗಳ ಭಾರವನ್ನು ಯಾರೊಬ್ಬರೂ ಒಬ್ಬರೇ ಹೊತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಕೊನೆಯಲ್ಲಿ, ಈ 250ನೇ ವಾರ್ಷಿಕೋತ್ಸವವು ಅಮೆರಿಕನ್ನರಲ್ಲಿ ಸ್ವಾತಂತ್ರ್ಯ, ನ್ಯಾಯ, ಅವಕಾಶ ಮತ್ತು ಪ್ರಜಾಪ್ರಭುತ್ವದ ಆದರ್ಶಗಳಿಗೆ ಹೊಸ ಬದ್ಧತೆಯನ್ನು ಮೂಡಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಹಿಂದಿನ ತಲೆಮಾರುಗಳ ಧೈರ್ಯ ಮತ್ತು ದೂರದೃಷ್ಟಿಯನ್ನು ಗೌರವಿಸುತ್ತಾ, ತಮ್ಮ ಸಮುದಾಯಗಳನ್ನು ಬಲಪಡಿಸಿ, ಭಿನ್ನತೆಗಳನ್ನು ಗೌರವಿಸಿ, ಇನ್ನಷ್ಟು ಪರಿಪೂರ್ಣವಾದ ರಾಷ್ಟ್ರ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ ಎಂದು ಅವರು ಹಾರೈಸಿದರು.

ಅಂತಿಮವಾಗಿ, ಅಮೆರಿಕ ಸಂಯುಕ್ತ ಸಂಸ್ಥಾನದ ಪೋಷಕಿಯಾದ ಪವಿತ್ರ ಅಮಲೊದ್ಭವ ಮಾತೆಯ ಮಧ್ಯಸ್ಥಿಕೆಗೆ ಅಮೆರಿಕದ ಜನರನ್ನು ಸಮರ್ಪಿಸಿದ ಜಗದ್ಗುರು XIVನೇ ಲಿಯೋರವರು, ಅವರು ರಾಷ್ಟ್ರವನ್ನೂ ಅದರಲ್ಲಿರುವ ಎಲ್ಲ ಜನರನ್ನೂ ಸದಾ ಕಾಪಾಡಲಿ ಎಂದು ಪ್ರಾರ್ಥಿಸಿದರು.

04 ಜುಲೈ 2026, 16:41