SPAIN-VATICAN-POPE-RELIGION-DIPLOMACY

ಅಮೆರಿಕಾದಲ್ಲಿ ಸುವಾರ್ತಾ ಪ್ರಚಾರವನ್ನು ಮುಂದುವರಿಸಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದ ಜಗದ್ಗುರುಗಳು.

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆದ ರಾಷ್ಟ್ರೀಯ ಪವಿತ್ರ ಪ್ರಸಾದ ಯಾತ್ರೆಯ ಸಮಾರೋಪದ ಅಂಗವಾಗಿ ಜಗದ್ಗುರು XIVನೇ ಲಿಯೋರವರು ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ಪವಿತ್ರ ಪ್ರಸಾದದಿಂದ ಆತ್ಮೀಕ ನವೀಕರಣ ಮತ್ತು ಏಕತೆಯ ಚೈತನ್ಯವನ್ನು ಪಡೆದುಕೊಳ್ಳುವಂತೆ ಭಾಗವಹಿಸಿದವರಿಗೆ ಉತ್ತೇಜನ ನೀಡಿದ್ದಾರೆ.

ವ್ಯಾಟಿಕನ್ ವರದಿ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆದ ರಾಷ್ಟ್ರೀಯ ಪವಿತ್ರ ಪ್ರಸಾದ ಯಾತ್ರೆಯ ಸಮಾರೋಪದ ಅಂಗವಾಗಿ ಕಳುಹಿಸಿದ ವೀಡಿಯೊ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು, ಪವಿತ್ರ ಪ್ರಸಾದವು ಅಮೆರಿಕಕ್ಕೆ ನಿರಂತರವಾಗಿ ನವೀಕರಣ ಮತ್ತು ಏಕತೆಯ ಮೂಲವಾಗಿರಲಿ ಹಾಗೂ ಅಲ್ಲಿನ ಧರ್ಮ ಸಭೆಗೆ ಸುವಾರ್ತೆಯನ್ನು ಸಾರುತ್ತಾ ಸಮಾಜಸೇವೆಯನ್ನು ಮುಂದುವರಿಸಲು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

2026ರ ಜುಲೈ 5ರಂದು ಬಿಡುಗಡೆಗೊಂಡ ತಮ್ಮ ಸಂದೇಶದಲ್ಲಿ ಅವರು, "ಈ ದೇಶದ ಪವಿತ್ರ ಪ್ರಸಾದದ ಪರಂಪರೆಯನ್ನು ಮರೆಯಬಾರದು ಅದು ನವೀಕರಣ ಮತ್ತು ಏಕತೆಯ ಚೈತನ್ಯವನ್ನು ನೀಡುವ ಮೂಲವಾಗಿ ಮುಂದುವರಿಯಬೇಕು" ಎಂದು ಹೇಳಿದರು.

"ಪವಿತ್ರ ಪ್ರಸಾದ ಎಂಬ ದೇವರ ಅಮೂಲ್ಯ ವರದ ಮೂಲಕ ಅಮೆರಿಕದ ಧರ್ಮ ಸಭೆಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಮೂಲಭೂತ ಸಾಮಾಜಿಕ ಸೇವೆಗಳಂತಹ ಕ್ಷೇತ್ರಗಳಲ್ಲಿ ತನ್ನ ದಾನಧರ್ಮದ ಸೇವೆಯನ್ನು ಇನ್ನಷ್ಟು ಬಲಪಡಿಸುವ ಶಕ್ತಿಯನ್ನು ಪಡೆಯಲಿದೆ. ಅದೇ ಸಮಯದಲ್ಲಿ ಸುವಾರ್ತೆಯನ್ನು ಸಾರುವ ತನ್ನ ಧ್ಯೇಯವನ್ನೂ ದೃಢವಾಗಿ ಮುಂದುವರಿಸಲಿದೆ" ಎಂದು ಅವರು ತಿಳಿಸಿದರು.

ಏಕತೆ, ನವೀಕರಣ ಮತ್ತು ಗುಣಪಡಿಸುವಿಕೆ ಜಗದ್ಗುರುಗಳ ಹೃದಯಕ್ಕೆ ಹತ್ತಿರವಾದ ಆಶಯಗಳು

ರಾಷ್ಟ್ರೀಯ ಪವಿತ್ರ ಪ್ರಸಾದ ಯಾತ್ರೆಯು ಅಮೆರಿಕದಾದ್ಯಂತ ನಡೆಯುವ ಆಧ್ಯಾತ್ಮಿಕ ಯಾತ್ರೆಯಾಗಿದ್ದು, ಇದರಲ್ಲಿ ಪವಿತ್ರ ಬಲಿ, ಮೆರವಣಿಗೆಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ ಆರಂಭಿಸಿದ ರಾಷ್ಟ್ರೀಯ ಪವಿತ್ರ ಪ್ರಸಾದ ಪುನರುಜ್ಜೀವನ ಕಾರ್ಯಕ್ರಮದ ಅಂಗವಾಗಿ 2024ರಲ್ಲಿ ಈ ಯಾತ್ರೆ ಮೊದಲ ಬಾರಿಗೆ ಆಯೋಜಿಸಲಾಯಿತು. ಇದರ ಉದ್ದೇಶ ಕ್ರಿಸ್ತನ ಮತ್ತು ಪವಿತ್ರ ಪ್ರಸಾದದ ಮೇಲಿನ ಭಕ್ತಿಯನ್ನು ಪುನರುಜ್ಜೀವನಗೊಳಿಸುವುದಾಗಿದೆ.

ಈ ಯಾತ್ರೆಯನ್ನು 2025ರಲ್ಲಿಯೂ ನಡೆಸಲಾಯಿತು. ಇದೀಗ 2026ರ ಯಾತ್ರೆಯು ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗಿರುವುದು ವಿಶೇಷವಾಗಿದೆ.

"ನೀವು ಅಮೆರಿಕದ ಮೂಲದ ಹದಿಮೂರು ವಸಾಹತು ಪ್ರದೇಶಗಳ ಅನೇಕ ಸ್ಥಳಗಳ ಮೂಲಕ ಸಾಗುವಾಗ, 'ದೇವರ ಅಧೀನದಲ್ಲಿರುವ ಒಂದು ರಾಷ್ಟ್ರ' ಎಂಬ ಧ್ಯೇಯವಾಕ್ಯದೊಂದಿಗೆ ದೇಶದಲ್ಲಿ ಏಕತೆ, ನವೀಕರಣ ಮತ್ತು ಗುಣಪಡಿಸುವಿಕೆಗಾಗಿ ಪ್ರಾರ್ಥಿಸಿದ್ದೀರಿ. ಈ ಉದ್ದೇಶಗಳು ನನ್ನ ಹೃದಯಕ್ಕೂ ಅತ್ಯಂತ ಹತ್ತಿರವಾಗಿವೆ" ಎಂದು ಜಗದ್ಗುರುಗಳು ಹೇಳಿದರು.

ಈ ವರ್ಷದ ಧ್ಯೇಯವಾಕ್ಯವನ್ನು ಉಲ್ಲೇಖಿಸಿದ ಅವರು, "ಪ್ರಭುವನ್ನು ಕೇಂದ್ರವಾಗಿಟ್ಟುಕೊಂಡ ಈ ಯಾತ್ರೆಯು ದೇಶದ ವಾರ್ಷಿಕೋತ್ಸವವನ್ನು ಆಚರಿಸಲು ಅತ್ಯುತ್ತಮ ಮಾರ್ಗವಾಗಿದೆ" ಎಂದು ಹೇಳಿದರು. ಈ ಯಾತ್ರೆಯನ್ನು ಆಯೋಜಿಸಿದ ಅಮೆರಿಕದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನ ಹಾಗೂ ಎಲ್ಲ ಸಂಘಟಕರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

"ದೇಶವು ತನ್ನ ಭೌತಿಕ ತಾಯ್ನಾಡಿನ ಸ್ಥಾಪನೆಯ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಯಾತ್ರಿಕರಾಗಿ ನೀವು ಪಡೆದ ಈ ಅನುಭವವು ನಿಮ್ಮ ದೃಷ್ಟಿಯನ್ನು ಸ್ವರ್ಗೀಯ ತಾಯ್ನಾಡಿನತ್ತ ನೆಟ್ಟಗಿರಿಸಲು ನೆರವಾಗಲಿ. ಪವಿತ್ರ ಪ್ರಸಾದವು ಅಮೂಲ್ಯ ವರವಾಗಿದ್ದು, ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಅನಿವಾರ್ಯ ಆಹಾರವಾಗಿದೆ ಎಂಬುದನ್ನು ಇದು ಸದಾ ನೆನಪಿಸಲಿ" ಎಂದು ಅವರು ಆಶಿಸಿದರು.

ಅಮೆರಿಕದ ಮಹತ್ವದ ಪವಿತ್ರ ಪ್ರಸಾದ ಪರಂಪರೆ

ಅಮೆರಿಕ ತನ್ನ ಸ್ಥಾಪನೆಯ ಮೊದಲೇ "ದೇವರ ಅಧೀನದಲ್ಲಿರುವ ರಾಷ್ಟ್ರ" ಎಂಬ ನಂಬಿಕೆಯನ್ನು ಬೆಳೆಸಿಕೊಂಡಿತ್ತು ಎಂದು ಜಗದ್ಗುರು ಲಿಯೋರವರು ನೆನಪಿಸಿದರು.

1583ರ ಸೆಪ್ಟೆಂಬರ್ 8ರಂದು, ಧನ್ಯ ಕನ್ಯಾ ಮರಿಯಮ್ಮನ ಜನನ ಹಬ್ಬದಂದು, ಸ್ಪ್ಯಾನಿಷ್ ಪರಿಶೋಧಕರು ಮತ್ತು ವಸಾಹತುಗಾರರು ಫ್ಲೋರಿಡಾದ ಸೇಂಟ್ ಆಗಸ್ಟಿನ್‌ನಲ್ಲಿ ತಲುಪಿದ ಬಳಿಕ ಕೃತಜ್ಞತಾ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ನಂತರ ಸ್ಥಳೀಯ ಸೆಲೊಯ್  ಜನಾಂಗದವರೊಂದಿಗೆ ಹಬ್ಬವನ್ನೂ ಆಚರಿಸಿದರು. ಈ ವರ್ಷದ ರಾಷ್ಟ್ರೀಯ ಪವಿತ್ರ ಪ್ರಸಾದ ಯಾತ್ರೆಯು ಇದೇ ಐತಿಹಾಸಿಕ ಸ್ಥಳದಿಂದ ಆರಂಭಗೊಂಡಿರುವುದನ್ನು ಅವರು ನೆನಪಿಸಿದರು.

"ಈ ಐತಿಹಾಸಿಕ ಘಟನೆಯೂ ಸೇರಿದಂತೆ ಅನೇಕ ಘಟನೆಗಳು ಅಮೆರಿಕದ ಬಲವಾದ, ಆದರೆ ಬಹುತೇಕ ಜನರಿಗೆ ತಿಳಿಯದಿರುವ ಪವಿತ್ರ ಪ್ರಸಾದದ ಪರಂಪರೆಗೆ ಸಾಕ್ಷಿಯಾಗಿವೆ" ಎಂದು ಅವರು ಹೇಳಿದರು. ಈ ಪರಂಪರೆಯು ಮುಂದೆಯೂ ದೇಶಕ್ಕೆ ನವೀಕರಣ ಮತ್ತು ಏಕತೆಯ ಚೈತನ್ಯವನ್ನು ನೀಡುತ್ತಿರಬೇಕು ಎಂದು ಅವರು ಒತ್ತಿಹೇಳಿದರು.

ಅಮೆರಿಕದ ಪವಿತ್ರ ಪುರುಷರು ಮತ್ತು ಮಹಿಳೆಯರ ಸಾಕ್ಷ್ಯ

ಈ ಪವಿತ್ರ ಪ್ರಸಾದದ ಪರಂಪರೆಯು ಅನೇಕ ಶತಮಾನಗಳಿಂದಲೂ ಫಲ ನೀಡುತ್ತಲೇ ಬಂದಿದೆ ಎಂದು ಜಗದ್ಗುರುಗಳು ಹೇಳಿದರು. ಅಮೆರಿಕದ ಹಲವಾರು ಸಂತರು ತಮ್ಮ ಜೀವನದ ಮೂಲಕ ಸುವಾರ್ತೆಗೆ ಸಂಪೂರ್ಣ ಸಮರ್ಪಣೆಯ ಸಾಕ್ಷಿಯಾಗಿದ್ದಾರೆ ಎಂದು ಅವರು ನೆನಪಿಸಿದರು.

ಅವರು ನ್ಯೂಯಾರ್ಕ್ ಮತ್ತು ಜಾರ್ಜಿಯಾದ ಹುತಾತ್ಮರನ್ನು, ಸಂತ ಕತೆರಿ ಟೆಕಕ್ವಿತಾ, ಸಂತ ಎಲಿಜಬೆತ್ ಆನ್ ಸೆಟನ್, ಸಂತ ಕ್ಯಾಥರಿನ್ ಡ್ರೆಕ್ಸೆಲ್, ಸಂತ ಜಾನ್ ನ್ಯೂಮನ್ ಹಾಗೂ ಶೀಘ್ರದಲ್ಲೇ ಧನ್ಯರೆಂದು ಘೋಷಿಸಲ್ಪಡುವ ವೆನರೇಬಲ್ ಫುಲ್ಟನ್ ಶೀನ್ ರವರನ್ನು ವಿಶೇಷವಾಗಿ ಉಲ್ಲೇಖಿಸಿದರು.

ಯಾತ್ರೆಯ ಮಾರ್ಗಕ್ಕೆ ಹೆಸರು ನೀಡಲಾಗಿರುವ ಸಂತ ಫ್ರಾನ್ಸಿಸ್ ಜೇವಿಯರ್ ಕಾಬ್ರಿನಿ ರವರನ್ನೂ ಅವರು ಸ್ಮರಿಸಿದರು. ಇಟಲಿಯಲ್ಲಿ ಜನಿಸಿ ಅಮೆರಿಕದಲ್ಲಿ ಸೇವೆ ಸಲ್ಲಿಸಿದ ಈ ಧಾರ್ಮಿಕ ಸಹೋದರಿ ಬಡ ವಲಸಿಗರ ಆಧ್ಯಾತ್ಮಿಕ ಹಾಗೂ ಭೌತಿಕ ಅಗತ್ಯಗಳಿಗೆ ತಮ್ಮ ಜೀವನವನ್ನು ಅರ್ಪಿಸಿದ್ದರು. ಅಮೆರಿಕದಲ್ಲಿ ಸಂತರೆಂದು ಘೋಷಿಸಲ್ಪಟ್ಟ ಮೊದಲ ವ್ಯಕ್ತಿಯೂ ಅವರೇ ಆಗಿದ್ದಾರೆ.

"ಈ ಪವಿತ್ರ ಪುರುಷರು ಮತ್ತು ಮಹಿಳೆಯರು ಹಾಗೂ ಅವರಂತೆಯೇ ಬದುಕಿದ ಅನೇಕರು ಪ್ರತಿದಿನವೂ ಪವಿತ್ರ ಪ್ರಸಾದದ ಸನ್ನಿಧಿಯಲ್ಲಿ ಮೌನ ಪ್ರಾರ್ಥನೆ ಮಾಡುವ ಮೂಲಕ ಶಕ್ತಿಯನ್ನು ಪಡೆದಿರಲಿಲ್ಲದಿದ್ದರೆ ಅವರ ಅಪಾರ ಪ್ರೇಷಿತರ ಸೇವೆ ಸಾಧ್ಯವಾಗುತ್ತಿರಲಿಲ್ಲ" ಎಂದು ಜಗದ್ಗುರುಗಳು ಹೇಳಿದರು.

ದೃಢವಾದ ಪವಿತ್ರ ಪ್ರಸಾದದ ಜೀವನವನ್ನು ಬೆಳೆಸಿಕೊಳ್ಳಿ

ರಾಷ್ಟ್ರೀಯ ಪವಿತ್ರ ಪ್ರಸಾದ ಯಾತ್ರೆಯಲ್ಲಿ ಭಾಗವಹಿಸಿದವರು ಈ ಮಹಾನ್ ಸಾಕ್ಷಿದಾರರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದು, ನಂಬಿಕೆಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಜಗದ್ಗುರುಗಳು ತಿಳಿಸಿದರು.

"ನಿಮ್ಮ ಯಾತ್ರೆಯುದ್ದಕ್ಕೂ ಪವಿತ್ರ ಬಲಿಪೂಜೆ, ಪವಿತ್ರ ಪ್ರಸಾದದ ಮೆರವಣಿಗೆಗಳು ಮತ್ತು ಪರಮಪವಿತ್ರ ಸಂಸ್ಕಾರದ ಆರಾಧನೆ ನಿರಂತರವಾಗಿ ನಡೆಯಿತು. ಇವೆಲ್ಲವೂ ನಿಮ್ಮ ಯಾತ್ರೆಯನ್ನು ಮುಂದುವರಿಸಲು ಅಗತ್ಯವಾದ ಶಕ್ತಿ ಮತ್ತು ಆಧ್ಯಾತ್ಮಿಕ ಪೋಷಣೆಯನ್ನು ನೀಡಿವೆ" ಎಂದು ಅವರು ಹೇಳಿದರು.

ಕ್ರಿಸ್ತನ ದೇಹ ಮತ್ತು ರಕ್ತವೇ ಭೂಮಿಯ ಮೇಲಿನ ಧಮ೯ ಸಭೆಯ ಜೀವವಾಗಿದ್ದು, ಧರ್ಮ ಸಭೆಯ ಅತ್ಯಮೂಲ್ಯ ಸಂಪತ್ತಾಗಿದೆ ಎಂದು ಅವರು ಒತ್ತಿ ಹೇಳಿದರು.

ಕೊನೆಯಲ್ಲಿ, ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಜೀವನವನ್ನು "ದೇವರ ಪ್ರೀತಿಪೂರ್ಣ ದೈವಾನುಗ್ರಹದ ರಕ್ಷಣೆಯ ಅಡಿಯಲ್ಲಿ" ಇರಿಸಿಕೊಳ್ಳಲಿ ಹಾಗೂ ತಮ್ಮ ತಮ್ಮ ಸಮುದಾಯಗಳಲ್ಲಿ ದೃಢವಾದ ಪವಿತ್ರ ಪ್ರಸಾದದ ಜೀವನವನ್ನು ನಿರಂತರವಾಗಿ ಬೆಳೆಸಿಕೊಳ್ಳಲಿ ಎಂದು ಜಗದ್ಗುರು XIVನೇ ಲಿಯೋರವರು ಹಾರೈಸಿದರು.

05 ಜುಲೈ 2026, 20:54