ಜಗದ್ಗುರು ಲಿಯೋರವರು: ಆರಾಧನೆಯು ನಂಬಿಕೆ, ಸಹೋದರತ್ವ ಮತ್ತು ಶಾಂತಿಗೆ ಪೋಷಣೆಯಾಗಬೇಕು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಕ್ಯಾಟಾನಿಯಾ ನಗರದಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಧರ್ಮಾಚರಣಾ ಸಪ್ತಾಹದ ಭಾಗವಹಿಸುವವರಿಗೆ ಶುಭಾಶಯಗಳನ್ನು ಕಳುಹಿಸಿ, ಕ್ರೈಸ್ತ ದೀಕ್ಷಾ ಪ್ರಕ್ರಿಯೆಯು ಜನರನ್ನು ಕ್ರಿಸ್ತನ ಬಳಿಗೆ ಕರೆದೊಯ್ಯುವಂತೆ ಧರ್ಮಶಿಕ್ಷಣ ಮತ್ತು ಧರ್ಮಾಚರಣೆಯ ನಡುವಿನ ಸಂಬಂಧವನ್ನು ಬಲಪಡಿಸುವಂತೆ ಧರ್ಮ ಸಭೆಗೆ ಕರೆ ನೀಡಿದ್ದಾರೆ. ಆಗಸ್ಟ್ 24ರಿಂದ 27ರವರೆಗೆ ನಡೆಯುತ್ತಿರುವ ಈ ಸಪ್ತಾಹದ ವಿಷಯ “ಸೃಷ್ಟಿಸುವ ಧರ್ಮ ಸಭೆಯ: ಧರ್ಮಾಚರಣೆ ಮತ್ತು ಕ್ರೈಸ್ತ ದೀಕ್ಷೆ” ಎಂಬುದಾಗಿದೆ.
ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೆತ್ರೊ ಪರೋಲಿನ್ ರವರು ಸಹಿ ಮಾಡಿದ ಸಂದೇಶದಲ್ಲಿ, ಈ ವಿಷಯವು ಇಂದಿನ ಧರ್ಮ ಸಭೆಗೆ “ವಿಶೇಷ ಮಹತ್ವದ್ದಾಗಿದೆ” ಎಂದು ಜಗದ್ಗುರುಗಳು ತಿಳಿಸಿದ್ದಾರೆ. ಕ್ರೈಸ್ತ ದೀಕ್ಷೆಯನ್ನು ಕೇವಲ “ಸಂಸ್ಕಾರಗಳಿಗೆ ಸಿದ್ಧತೆ” ಎಂದು ಪರಿಗಣಿಸಬಾರದು ಬದಲಾಗಿ, ಅದು ವಿಶ್ವಾಸ ಮತ್ತು ಪ್ರಭುವಿನೊಂದಿಗಿನ ಐಕ್ಯತೆಯಲ್ಲಿ ಸಮುದಾಯವು ಹೊಸ ಜೀವನಕ್ಕೆ ಜನ್ಮ ನೀಡುವ “ಗರ್ಭಸ್ಥಾನ”ವಾಗಿರಬೇಕು ಎಂದು ಅವರು ವಿವರಿಸಿದ್ದಾರೆ.
ಆರಂಭಿಕ ಕ್ರೈಸ್ತ ಸಮುದಾಯದ ಜೀವನವನ್ನು ಉಲ್ಲೇಖಿಸಿದ ಜಗದ್ಗುರುಗಳು, ಧರ್ಮಶಿಕ್ಷಣ ಮತ್ತು ಧರ್ಮಾಚರಣೆಯ ನಡುವಿನ ಏಕತೆ ಧರ್ಮ ಸಭೆಯ ಆರಂಭದಿಂದಲೇ ಅಸ್ತಿತ್ವದಲ್ಲಿತ್ತು ಎಂದು ನೆನಪಿಸಿದರು. ಮೊದಲ ಕ್ರೈಸ್ತರು “ಪ್ರೇಷಿತರ ಬೋಧನೆ, ಸಹಭಾಗಿತ್ವ, ರೊಟ್ಟಿಯನ್ನು ಮುರಿಯುವುದು ಮತ್ತು ಪ್ರಾರ್ಥನೆಗಳಲ್ಲಿ” ತೊಡಗಿಸಿಕೊಂಡಿದ್ದರು. ಆದ್ದರಿಂದ, ಕ್ರೈಸ್ತರ ವಿಶ್ವಾಸ ರೂಪುಗೊಳ್ಳುವಿಕೆಯಲ್ಲಿ ಧರ್ಮಾಚರಣೆಯ ಮಹತ್ವವನ್ನು ಬಲಪಡಿಸುವ ಮೂಲಕ ಧರ್ಮ ಸಭೆ ಈ ಮೂಲ ಅನುಭವಕ್ಕೆ ಮರಳಬೇಕು ಎಂದು ಅವರು ಕರೆ ನೀಡಿದರು.
ಧರ್ಮಾಚರಣೆಯಲ್ಲಿ “ಕ್ರಿಸ್ತನ ರಹಸ್ಯವು ನಮ್ಮನ್ನು ಆವರಿಸಿ, ನಮ್ಮನ್ನು ಪರಿವರ್ತಿಸಿ, ಹೊಸ ಸೃಷ್ಟಿಗಳಾಗಿ ನಮ್ಮನ್ನು ಜನ್ಮ ನೀಡುತ್ತದೆ” ಎಂದು ಜಗದ್ಗುರುಗಳು ಹೇಳಿದರು. ಎರಡನೇ ವ್ಯಾಟಿಕನ್ ಮಹಾಸಭೆಯ ಸ್ಯಾಕ್ರೋಸಾಂಕ್ಟಮ್ ಕಾನ್ಸಿಲಿಯಮ್ ಕುರಿತು ತಮ್ಮ ಬೋಧನೆಗಳನ್ನು ಆಧರಿಸಿ, ಧರ್ಮಾಚರಣೆಯ ವಿಧಿಗಳು ದೇವರ ಅನುಗ್ರಹವು ನಮ್ಮನ್ನು ತಲುಪುವ “ಧಮ೯ಸಭೆಯ ಮಧ್ಯಸ್ಥಿಕೆಯ ಮಾರ್ಗ”ಗಳಾಗಿವೆ ಎಂದು ಅವರು ಒತ್ತಿಹೇಳಿದರು. ಆದ್ದರಿಂದ, ಧರ್ಮಾಚರಣೆಯ ಸಂಕೇತಗಳು ಮತ್ತು ಆಚರಣೆಗಳ ಆಳವಾದ ಅರ್ಥವನ್ನು ಅರಿತು, ವಿಶ್ವಾಸಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಅಗತ್ಯವೆಂದರು.
ಧರ್ಮಾಚರಣೆ ಕ್ರೈಸ್ತರನ್ನು ಸಮುದಾಯದ ಐಕ್ಯತೆಯಲ್ಲಿ ರೂಪಿಸುತ್ತದೆ ಎಂದು ಜಗದ್ಗುರು ಲಿಯೋರವರು ತಿಳಿಸಿದರು. ಆದ್ದರಿಂದ ಧರ್ಮಗುರುಗಳು ಮತ್ತು ಧರ್ಮಶಿಕ್ಷಕರು ಧರ್ಮಾಚರಣೆಯ ವಿಧಿಗಳಲ್ಲಿರುವ “ಸರಳವಾದರೂ ಗಂಭೀರವಾದ ಘನತೆ”ಯನ್ನು ಜನರಿಗೆ ಪರಿಚಯಿಸಿ, ಅವುಗಳ ಆಧ್ಯಾತ್ಮಿಕ ಅರ್ಥವನ್ನು ಅನುಭವಿಸುವಂತೆ ಮಾಡಬೇಕು ಎಂದು ಅವರು ಹೇಳಿದರು. ಪವಿತ್ರ ಗ್ರಂಥದ ಘೋಷಣೆಯ ಮೂಲಕ ಧರ್ಮಾಚರಣೆ “ದೇವರ ವಾಕ್ಯವನ್ನು ಆಲಿಸುವ ವಿಶೇಷ ಸ್ಥಳ”ವಾಗಿದೆ ಎಂದೂ ಅವರು ವಿವರಿಸಿದರು.
ಕೊನೆಯಲ್ಲಿ, ಧರ್ಮ ಸಭೆಯ ಪಶುಪಾಲನಾ ನಾಯಕರಿಗೆ ಸ್ವಾಗತ, ಧರ್ಮಾಚರಣೆಯ ಆಧ್ಯಾತ್ಮಿಕ ಆಳವಾದ ಅರ್ಥದ ಪರಿಚಯ ಮತ್ತು ಜೀವನದ ಸಾಕ್ಷ್ಯವನ್ನು ಬೆಳೆಸುವಂತೆ ಜಗದ್ಗುರು XIVನೇ ಲಿಯೋರವರು ಕರೆ ನೀಡಿದರು. “ಈ ರೀತಿಯಲ್ಲಿ ಮಾತ್ರ ಬಲಿಪೀಠದಿಂದ ಹುಟ್ಟಿದ ವಿಶ್ವಾಸವು ಮಾನವ ಸಮಾಜದ ಬೀದಿಗಳಿಗೂ ತಲುಪಿ, ಸೌಹಾರ್ದ, ಸಮನ್ವಯ ಮತ್ತು ಶಾಂತಿಯ ಫಲಗಳನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
