ಪವಿತ್ರ ಪೀಠಾಧಿಕಾರಿ: ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಲ ಪರಿಹಾರವು 'ನೈತಿಕ ಜವಾಬ್ದಾರಿ'
ಡೆವಿನ್ ವ್ಯಾಟ್ಕಿನ್ಸ್
ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಗೆ ಪವಿತ್ರ ಪೀಠಾಧಿಕಾರಿಯ ಖಾಯಂ ವೀಕ್ಷಕರಾದ ಮಹಾಧರ್ಮಾಧ್ಯಕ್ಷಕರಾದ ಗೇಬ್ರಿಯೆಲ್ ಕ್ಯಾಸಿಯಾರವರು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಅನುಷ್ಠಾನದ ಕುರಿತು ಎರಡು ವಿಶ್ವಸಂಸ್ಥೆಯ ಸಮಿತಿಗಳನ್ನು ಉದ್ದೇಶಿಸಿ ಮಾತನಾಡಿದರು.
ದೇಶಗಳು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಹಾಯ ಮಾಡುವ "ನೈತಿಕ ಮತ್ತು ರಾಜಕೀಯ ಜವಾಬ್ದಾರಿಯು" ಅಂತರರಾಷ್ಟ್ರೀಯ ಸಮುದಾಯದ್ದಾಗಿದೆ ಎಂದು ಮಹಾಧರ್ಮಾಧ್ಯಕ್ಷರು ದೃಢಪಡಿಸಿದರು. ಜುಲೈ 16 ರಂದು ನ್ಯೂಯಾರ್ಕ್‌ನಲ್ಲಿ ಮಾಡಿದ ಎರಡು ಭಾಷಣಗಳಲ್ಲಿ ಅವರು ವಿಶೇಷವಾಗಿ ಸಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳು, ಆಫ್ರಿಕಾದ ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಕೇಂದ್ರೀಕರಿಸಿದರು.
ಬಡತನದ ನಿರಂತರ ಮತ್ತು ವ್ಯಾಪಕವಾದ ವಾಸ್ತವವು ಲಕ್ಷಾಂತರ ಜನರನ್ನು ಬಾಧಿಸುತ್ತಲೇ ಇದೆ, ಅವರ ಭೌತಿಕ ಯೋಗಕ್ಷೇಮವನ್ನು ನಿರಾಕರಿಸುತ್ತಿದೆ ಹಾಗೂ ದೇವರು ನೀಡಿದ ಘನತೆಯನ್ನು ದುರ್ಬಲಗೊಳಿಸುತ್ತಿದೆ. ಅದೇ ಸಮಯದಲ್ಲಿ ಅವರ ಸಮಗ್ರ ಮಾನವ ಅಭಿವೃದ್ಧಿಯನ್ನು ಕುಗ್ಗಿಸುತ್ತಿದೆ ಎಂದು ಮಹಾಧರ್ಮಾಧ್ಯಕ್ಷರಾದ ಕ್ಯಾಸಿಯಾರವರು ಹೇಳಿದರು. ಅಂತರರಾಷ್ಟ್ರೀಯ ಸಮುದಾಯವು ಬಡತನವನ್ನು ನಿರ್ಮೂಲನೆ ಮಾಡುವ ಗುರಿಯ ಮೇಲೆ ಗಮನಹರಿಸಬೇಕು ಎಂದು ಪವಿತ್ರ ಪೀಠಾಧಿಕಾರಿ ದೃಢವಾಗಿ ನಂಬುತ್ತಾರೆ ಎಂದು ಅವರು ಹೇಳಿದರು, ಇದನ್ನು ಅವರು "ನೈತಿಕ ಕಡ್ಡಾಯ" ಎಂದು ಕರೆದರು.
ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಅಸಹನೀಯ ಸಾರ್ವಭೌಮ ಸಾಲಗಳನ್ನು ಮರುಪಾವತಿಸುವ ಹೊರೆಯೊಂದಿಗೆ ಹೋರಾಡುತ್ತಿವೆ ಎಂದು ಅವರು ಹೇಳಿದರು. 3.4 ಶತಕೋಟಿ ಜನರು ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಒಟ್ಟಾರೆ ವೆಚ್ಚಕ್ಕಿಂತ ಬಡ್ಡಿ ಪಾವತಿಗಳಿಗೆ ಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಸಾಲ ಪರಿಹಾರ ನೀಡುವುದು ಉದಾರತೆಯ ಕ್ರಿಯೆಯಲ್ಲ, ಬದಲಿಗೆ ದೇಶಗಳು ಸಮಗ್ರ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ಅಗತ್ಯವಿರುವ ಹಣಕಾಸಿನ ವ್ಯವಸ್ಥೆಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಆದ್ದರಿಂದ ಮಹಾಧರ್ಮಾಧ್ಯಕ್ಷರಾದ ಕ್ಯಾಸಿಯಾರವರು ʼರದ್ದತಿ ಮತ್ತು ಸಾಲ ಪುನರ್ರಚನೆ ಸೇರಿದಂತೆ ತಕ್ಷಣದ ಸಾಲ ಪರಿಹಾರʼ ಮತ್ತು ಸಮರ್ಥನೀಯವಲ್ಲದ ಸಾಲದ ಮಟ್ಟಗಳೊಂದಿಗೆ ಹೋರಾಡುತ್ತಿರುವ ದೇಶಗಳಿಗೆ ಅನುದಾನಗಳನ್ನು ಪ್ರವೇಶಿಸಲು ಕರೆ ನೀಡಿದರು.
ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಕೇಂದ್ರೀಕರಿಸಿದ ಅವರು, ವಿಶ್ವಸಂಸ್ಥೆಯ 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಜಗತ್ತಿಗೆ ಅವುಗಳ ಸಾಲದ ಹೊರೆಗಳು ದೊಡ್ಡ ಅಡೆತಡೆಗಳಲ್ಲಿ ಒಂದಾಗಿ ಉಳಿದಿವೆ ಎಂದು ಹೇಳಿದರು. ಈ ದೇಶಗಳಲ್ಲಿ ಸುಮಾರು 40 ಪ್ರತಿಶತ ದೇಶಗಳು ಸಾಲದ ಸಂಕಷ್ಟದಲ್ಲಿವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅಗಾಧವಾಗಿ ಪರಿಣಾಮ ಬೀರುವ ಪರಿಸರ ಸಾಲ ಮತ್ತು ಪರಿಸರ ವಿಪತ್ತುಗಳಿಂದ ಹೆಚ್ಚಿನ ಹೊರೆಯನ್ನು ಹೊರುತ್ತವೆ.
ಸಾಲ ಪರಿಹಾರ ಮಾತ್ರ ಸರ್ವರೋಗ ನಿವಾರಕವಲ್ಲ ಎಂದು ಮಹಾಧರ್ಮಾಧ್ಯಕ್ಷರಾದ ಕ್ಯಾಸಿಯಾರವರು ಹೇಳಿದರು. ಆದಾಗ್ಯೂ, ಮೂಲಸೌಕರ್ಯ, ಹವಾಮಾನ ಹೊಂದಾಣಿಕೆ, ಆರೋಗ್ಯ ವ್ಯವಸ್ಥೆಗಳು ಮತ್ತು ಶಿಕ್ಷಣದಂತಹ ಅಗತ್ಯ ಸ್ತಂಭಗಳಲ್ಲಿ ಹೂಡಿಕೆ ಮಾಡಲು ಹಣಕಾಸಿನ ಸ್ಥಳವನ್ನು ಒದಗಿಸುವ ಮೂಲಕ ಅಭಿವೃದ್ಧಿ ನಿರೀಕ್ಷೆಗಳನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಕೊನೆಯಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸಾಲದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನವೀಕೃತ ತುರ್ತುಸ್ಥಿತಿಗಾಗಿ ವಿಶ್ವಸಂಸ್ಥೆಯಲ್ಲಿನ ಪವಿತ್ರ ಪೀಠಾಧಿಕಾರಿಯ ಪ್ರತಿನಿಧಿ ಕರೆ ನೀಡಿದರು. ವಿಶ್ವಗುರು ಹದಿನಾಲ್ಕನೇ ಲಿಯೋರವರು ಪ್ರಬಲವಾಗಿ ಹೇಳಿದಂತೆ, ಈ ವರ್ಷ ಕಥೋಲಿಕ ಧರ್ಮಸಭೆಯು ಆಚರಿಸುತ್ತಿರುವ ಜೂಬಿಲಿಯನ್ನು, 'ವೈಯಕ್ತಿಕ ಮತ್ತು ನಾಗರಿಕ ಸಾಮರಸ್ಯಕ್ಕೆ ಒಂದು ಉತ್ತಮ ಮಾರ್ಗವಾಗಿ, ಅಂದರೆ ಅನ್ಯಾಯವಾಗಿ ಸಂಗ್ರಹಿಸಲಾದ ಸಂಪತ್ತಿನ ಮರುಪಾವತಿ ಮತ್ತು ಪುನರ್ವಿತರಣೆಯ ಮೂಲಕ ನೀಡುವಂತೆ ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.