ಕಾರ್ಡಿನಲ್ ಪ್ಯಾರೋಲಿನ್ ಕುವೈಟ್‌ನಲ್ಲಿ: ಯಾಜಕರು ಮತ್ತು ವಿಶ್ವಾಸಿಗಳು ಭರವಸೆಯ ಸಾಕ್ಷಿಗಳಾಗಿರಲಿ
ವ್ಯಾಟಿಕನ್ ವರದಿ
ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ರವರು ಜನವರಿ 15–16ರಂದು ನಡೆಯುವ ಪಾಲನಾ ಮತ್ತು ರಾಜತಾಂತ್ರಿಕ ಭೇಟಿಗಾಗಿ ಕುವೈಟ್‌ನಲ್ಲಿ ಇದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅಹ್ಮದಿಯಲ್ಲಿರುವ ಅರೇಬಿಯಾದ ಮಾತೆಯ ದೇವಾಲಯವನ್ನು ಮೈನರ್ ಬಸಿಲಿಕಾ ಸ್ಥಾನಕ್ಕೆ ಉನ್ನತಗೊಳಿಸಲಾಗುತ್ತದೆ. ಭೇಟಿಯ ಮೊದಲ ದಿನವಾದ ಗುರುವಾರ, ಅವರು ಉತ್ತರ ಅರೇಬಿಯಾದ ಪ್ರೇಷಿತರ ಪ್ರಾಂತ್ಯದ ಯಾಜಕರು , ಧಾರ್ಮಿಕ ಸಹೋದರ ಸಹೋದರಿಯರಿಗೆ ಹಾಗೂ ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡಿ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು.
ಕಾರ್ಡಿನಲ್ ಪ್ಯಾರೋಲಿನ್ ರವರು ಪವಿತ್ರ ಕುಟುಂಬ ಸಹ ಪ್ರಧಾನಾಲಯದಲ್ಲಿ ಯಾಜಕರು ಮತ್ತು ಧಾರ್ಮಿಕ ಸಹೋದರ ಸಹೋದರಿಯರನ್ನು ಭೇಟಿಯಾಗಿ, ಜಗದ್ಗುರು XIVನೇ ಲಿಯೋರವರ ಶುಭಾಶಯಗಳು ಮತ್ತು ಪ್ರೋತ್ಸಾಹವನ್ನು ತಿಳಿಸಿದರು. ತಮ್ಮ ಸೇವೆಯನ್ನು ಸ್ವದೇಶಗಳಿಂದ ದೂರವಾಗಿ, ಸವಾಲಿನ ಪರಿಸ್ಥಿತಿಗಳಲ್ಲಿ ನಿರ್ವಹಿಸುತ್ತಿರುವುದಕ್ಕಾಗಿ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಯಾಜಕತ್ವ ಮತ್ತು ಅರ್ಪಿತ ಜೀವನದ ಮೂಲ ಕ್ರಿಸ್ತನೊಂದಿಗೆ ಇರುವ ಆಳವಾದ ಸಂಬಂಧದಲ್ಲಿದೆ ಎಂದು ಅವರು ನೆನಪಿಸಿದರು.
ಯಾಜಕರನ್ನು ಉದ್ದೇಶಿಸಿ ಮಾತನಾಡಿದ ಕಾರ್ಡಿನಲ್ ಗಳು, ಪ್ರಭು ಪರಿಪೂರ್ಣ ಯಾಜಕರನ್ನು ಅಲ್ಲ, ವಿನಯಶೀಲ ಹೃದಯಗಳನ್ನು ಹುಡುಕುತ್ತಾನೆ ಎಂದು ಹೇಳಿ, ಪ್ರೀತಿಯ ಯಾಜಕರಾಗುವಂತೆ ಪ್ರೋತ್ಸಾಹಿಸಿದರು. ಧಾರ್ಮಿಕ ಸಹೋದರ ಸಹೋದರಿಯರಿಗೆ ಮಾತನಾಡುತ್ತಾ, “ಕೇಳಿ, ಹುಡುಕಿ, ತಟ್ಟಿರಿ” ಎಂಬ ಸುವಾರ್ತೆಯ ಮನೋಭಾವಗಳ ಮೂಲಕ ಅರ್ಪಿತ ಜೀವನವನ್ನು ಬದುಕುವಂತೆ ಜಗದ್ಗುರುಗಳು ನೀಡಿದ ಆಹ್ವಾನವನ್ನು ಸ್ಮರಿಸಿದರು. ಈ ಪದಗಳು ದೇವರ ಮೇಲೆ ಅವಲಂಬನೆ, ಆತನ ಇಚ್ಛೆಯನ್ನು ಹುಡುಕುವಿಕೆ ಮತ್ತು ಆತನಲ್ಲೇ ಪೂರ್ಣತೆಯನ್ನು ಕಂಡುಕೊಳ್ಳುವ ಕರೆಯನ್ನು ಸೂಚಿಸುತ್ತವೆ ಎಂದು ಹೇಳಿದರು.
ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಯಿಂದ ಕೂಡಿದ ಈ ಪ್ರದೇಶದಲ್ಲಿ, ಎಲ್ಲರೂ “ಶಾಂತಿ ಮತ್ತು ಏಕತೆಯ ಪ್ರವಾದಿಗಳಾಗಬೇಕು” ಎಂದು ಅವರು ಕರೆ ನೀಡಿದರು. ಕ್ರಿಸ್ತನಲ್ಲಿ ನಿಜವಾದ ಸಹೋದರತ್ವ ಮತ್ತು ಏಕತೆಯನ್ನು ದೃಶ್ಯವಾಗಿಸುವ ಜವಾಬ್ದಾರಿ ನಿಮಗಿದೆ ಎಂದು ಅವರು ತಿಳಿಸಿದರು.
ನಂತರ ನಡೆದ ಪವಿತ್ರ ಬಲಿ ಪೂಜೆಯಲ್ಲಿ, ಪವಿತ್ರ ಕುಟುಂಬ ಸಹ ಪ್ರಥನಾಲಯದ ಪ್ರತಿಷ್ಠಾಪನೆಯ 65ನೇ ವಾರ್ಷಿಕೋತ್ಸವವನ್ನು ಅವರು ಆಚರಿಸಿದರು. ಕುವೈಟ್‌ನ ಕಥೋಲಿಕ ಸಮುದಾಯ ಹಾಗೂ ಪ್ರದೇಶದ ಎಲ್ಲ ಕ್ರೈಸ್ತರೊಂದಿಗೆ ಜಗದ್ಗುರುಗಳ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದ ಅವರು, ದೇವರ ನಿಜವಾದ ಮಂದಿರವು ಕಲ್ಲಿನ ಗೋಡೆಗಳಲ್ಲಿ ಅಲ್ಲ, ಬದಲಾಗಿ ವಿಶ್ವಾಸಿಗಳ ಜೀವನದಲ್ಲೇ ಅಡಗಿದೆ ಎಂದು ನೆನಪಿಸಿದರು. ಪರಸ್ಪರ ಸ್ವಾಗತ ಮತ್ತು ಗೌರವದೊಂದಿಗೆ ಕ್ರೈಸ್ತರು ಜೊತೆಯಾಗಿ ಬದುಕುವ ರೀತಿ ಸಮಾಜಕ್ಕೆ ಮಾದರಿಯಾಗಲಿ ಎಂಬ ಆಶೆಯನ್ನು ಅವರು ವ್ಯಕ್ತಪಡಿಸಿದರು.