2026.01.16 Angelo Gugel 2026.01.16 Angelo Gugel 

ಮೂರು ಜಗದ್ಗುರುಗಳ ಖಾಸಗಿ ಸಹಾಯಕ ಆಂಜೆಲೋ ಗುಗೆಲ್ 90ನೇ ವಯಸ್ಸಿನಲ್ಲಿ ನಿಧನ

ಜಗದ್ಗರು ಮೊದಲ ಜಾನ್ ಪಾಲ್ , ಜಗದ್ಗುರು ದ್ವಿತೀಯ ಜಾನ್ ಪಾಲ್ ಮತ್ತು ಜಗದ್ಗುರು ಹದಿನಾರನೇ ಬೆನೆಡಿಕ್ಟ್ ರವರಿಗೆ ಖಾಸಗಿ ಸಹಾಯಕನಾಗಿ ಸೇವೆ ಸಲ್ಲಿಸಿದ್ದ ಆಂಜೆಲೋ ಗುಗೆಲ್ ರವರು, ದಶಕಗಳ ಕಾಲ ಜಗದ್ಗುರುಗಳ ಸೇವೆಯಲ್ಲಿ ತೊಡಗಿಸಿಕೊಂಡ ನಂತರ, ರೋಮ್‌ನಲ್ಲಿ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1981ರ ಮೇ 13ರಂದು ಜಗದ್ಗುರು ದ್ವಿತೀಯ ಜಾನ್ ಪಾಲ್ ರ ಮೇಲೆ ನಡೆದ ಹತ್ಯೆಪ್ರಯತ್ನದ ಸಂದರ್ಭದಲ್ಲಿ ಅವರು ಜಗದ್ಗುರುಗಳ ಪಕ್ಕದಲ್ಲೇ ನಿಂತಿದ್ದರು ಎಂಬುದು ಅವರ ಸೇವೆಯ ಅತ್ಯಂತ ಮಹತ್ವದ ಕ್ಷಣಗಳಲ್ಲಿ ಒಂದಾಗಿತ್ತು.

ವ್ಯಾಟಿಕನ್ ವರದಿ

ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ, ಆಂಜೆಲೋ ಗುಗೆಲ್ ರವರು ಅತ್ಯಂತ ಮೌನ, ಶಿಸ್ತು ಮತ್ತು ನಿಷ್ಠೆಯಿಂದ ಮೂರು ಜಗದ್ಗುರುಗಳಿಗೆ—ಅಂದರೆ ಜಗದ್ಗುರು ಮೊದಲನೇ ಜಾನ್ ಪಾಲ್ , ಜಗದ್ಗುರು ದ್ವಿತೀಯ ಜಾನ್ ಪಾಲ್  ಮತ್ತು ಜಗದ್ಗುರು ಹದಿನಾರನೇ ಬೆನೆಡಿಕ್ಟ್ ರವರು—ಪವಿತ್ರ ಜಗದ್ಗುರುಗಳ ಪ್ರಥಮ ಖಾಸಗಿ ಸಹಾಯಕನಾಗಿ ಸೇವೆ ಸಲ್ಲಿಸಿದರು. 90ನೇ ವಯಸ್ಸಿನಲ್ಲಿ ಅವರು ರೋಮ್‌ನಲ್ಲಿ ತಮ್ಮ ಕುಟುಂಬದ ಸನ್ನಿಧಿಯಲ್ಲಿ ನಿಧನರಾದರು. ಅವರ ಸೇವೆ 20ನೇ ಶತಮಾನಾಂತ್ಯದಿಂದ ಹೊಸ ಸಹಸ್ರಮಾನ ಆರಂಭದವರೆಗೂ ವಿಸ್ತರಿಸಿತ್ತು.

ಮೊದಲನೇ ಜಾನ್ ಪಾಲ್  ಚಿಕ್ಕ ಪಾಂಟಿಫಿಕೇಟ್‌ನೊಂದಿಗೆ ಅವರ ಸೇವೆ ಆರಂಭವಾಯಿತು. ನಂತರ, ಸುಮಾರು 27 ವರ್ಷಗಳ ಕಾಲ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರ ಅತ್ಯಂತ ಹತ್ತಿರದ ಮೌನ ಸಾಕ್ಷಿಯಾಗಿ ಅವರು ಉಳಿದರು. 1981ರ ಮೇ 13ರಂದು ಸಂತ ಪೇತ್ರರ ಚೌಕದಲ್ಲಿ ನಡೆದ ಹತ್ಯೆಪ್ರಯತ್ನದ ಸಂದರ್ಭದಲ್ಲೂ ಅವರು ಜಗದ್ಗುರುಗಳ ಪಕ್ಕದಲ್ಲೇ ಇದ್ದರು. ಬಳಿಕ, ಜಗದ್ಗುರು ಹದಿನಾರನೇ ಬೆನೆಡಿಕ್ಟ್ ರವರ ಪಾಂಟಿಫಿಕೇಟ್‌ನ ಆರಂಭದಲ್ಲಿಯೂ ಸೇವೆ ಸಲ್ಲಿಸಿ, ತಮ್ಮ ಎಪ್ಪತ್ತರ ವಯಸ್ಸಿನಲ್ಲಿ ಕರ್ತವ್ಯವನ್ನು ಮುಕ್ತಾಯಗೊಳಿಸಿದರು.

1935ರ ಏಪ್ರಿಲ್ 27ರಂದು ಇಟಲಿಯ ಟ್ರೆವಿಸೊ ಪ್ರದೇಶದ ಮಿಯಾನೆ ಎಂಬ ಗ್ರಾಮದಲ್ಲಿ ಜನಿಸಿದ ಗುಗೆಲ್, 1964ರಲ್ಲಿ ಮರಿಯಾ ಲೂಯಿಸಾ ದಾಲ್’ಆರ್ಕೆ ಯವರನ್ನು ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳು—ರಾಫೆಲ್ಲಾ, ಫ್ಲಾವಿಯಾನಾ, ಗ್ವಿಡೊ ಮತ್ತು ಕಾರ್ಲಾ ಲೂಸಿಯಾನಾ ಮರಿಯಾ—ಇದ್ದರು. ರೈತ ಕುಟುಂಬದಿಂದ ಬಂದ ಅವರು, ಎರಡು ವರ್ಷ ಸೆಮಿನರಿಯಲ್ಲಿ ಅಧ್ಯಯನ ಮಾಡಿದ ಬಳಿಕ 1955ರಲ್ಲಿ ವ್ಯಾಟಿಕನ್ ಜೆಂಡಾರ್ಮ್ ಆಗಿ ನೇಮಕಗೊಂಡರು.

ತಮ್ಮ ಸೂಕ್ಷ್ಮ ಪಾತ್ರಕ್ಕೆ ತಕ್ಕಂತೆ, ಸದಾ ಸೊಗಸಾಗಿ ವೇಷಧರಿಸಿ, ಗಮನ ಸೆಳೆಯದ ಸರಳ ಶೈಲಿಯಲ್ಲಿ ಬದುಕಿದ ಆಂಜೆಲೋ ಗುಗೆಲ್, ನಿವೃತ್ತಿಯಾದ ನಂತರವೂ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಂಡರು. ಅವರು ಅಪರೂಪವಾಗಿ ಮಾತ್ರ ಸಂದರ್ಶನಗಳನ್ನು ನೀಡಿದರು. ಆದರೆ, ದ್ವಿತೀಯ ಸಂತ ಜಾನ್ ಪಾಲ್ ರವರ  ಜನ್ಮಶತಮಾನೋತ್ಸವದ ಸಂದರ್ಭದಲ್ಲಿ, ಲೊಸ್ಸೆರ್ವಾತೋರೇ ರೊಮಾನೊ ಪತ್ರಿಕೆಯ ವಿಶೇಷ ಸಂಚಿಕೆಗೆ ತಮ್ಮ ಕೆಲವು ನೆನಪುಗಳನ್ನು ಹಂಚಿಕೊಂಡರು.

ಜಗದ್ಗರು ದ್ವಿತೀಯ ಜಾನ್ ಪಾಲ್ ರವರೊಂದಿಗೆ ಕಳೆದ ವರ್ಷಗಳನ್ನು ನೆನಪಿಸಿಕೊಂಡು, ಐದು ಖಂಡಗಳನ್ನು ವ್ಯಾಪಿಸಿದ ಪ್ರೇಷಿತರ ಪ್ರಯಾಣಗಳು, ಹಾಗೆಯೇ ಕುಟುಂಬದ ಜೀವನದ ಆಳವಾದ ಕ್ಷಣಗಳನ್ನು ಅವರು ಸ್ಮರಿಸಿದರು. ವಿಶೇಷವಾಗಿ, ತಮ್ಮ ನಾಲ್ಕನೇ ಮಗು ಗರ್ಭದಲ್ಲಿದ್ದಾಗ ಎದುರಾದ ಗಂಭೀರ ಸಮಸ್ಯೆಗಳ ಸಂದರ್ಭದಲ್ಲಿ ಜಗದ್ಗುರುಗಳು ಸ್ವತಃ ತಮ್ಮ ಪತ್ನಿಗಾಗಿ ಬಲಿ ಪೂಜೆ ಸಲ್ಲಿಸಿದ್ದನ್ನು ಅವರು ಭಕ್ತಿಯಿಂದ ವಿವರಿಸಿದರು. ಆ ಮಗು ಜನಿಸಿದ ಕ್ಷಣವು ಜಗದ್ಗುರುಗಳ ಬೆಳಗಿನ ಬಲಿ ಪೂಜೆಯ ಸ್ಯಾಂಕ್ಟಸ್ ಕ್ಷಣದೊಂದಿಗೆ ತಾಳಮೇಳಗೊಂಡಿದ್ದು, ನಂತರ ಜಗದ್ಗುರುಗಳು ಸ್ವತಃ ಆ ಮಗುವಿಗೆ ದೀಕ್ಷಾಸ್ನಾನ ನೀಡಿದರು ಇದು ಗುಗೆಲ್ ಕುಟುಂಬಕ್ಕೆ ಎಂದೆಂದಿಗೂ ಮರೆಯಲಾಗದ ಆಶೀರ್ವಾದವಾಗಿತ್ತು.

16 ಜನವರಿ 2026, 17:34