ಜ್ಯೂಬಿಲಿ ಪವಿತ್ರ ಬಾಗಿಲುಗಳು ಮುಚ್ಚಲ್ಪಟ್ಟರೂ ‘ಕ್ರಿಸ್ತನ ಹೃದಯವು ಸದಾ ತೆರೆಯಲ್ಪಟ್ಟಿದೆ
ವ್ಯಾಟಿಕನ್ ವರದಿ
ಜನವರಿ 16 ರಂದು, ಸೇಂಟ್ ಪೀಟರ್ ಬಸಿಲಿಕಾದ ಮಹಾಧ್ಯಕ್ಷರಾದ ಕಾರ್ಡಿನಲ್ ಮೌರೋ ಗ್ಯಾಂಬೆಟ್ಟಿ ಮತ್ತು ಜಗದ್ಗುರುಗಳ ಆರಾಧನ ವಿಧಿಯ ಆಚರಣೆಗಳ ಮಹಾಗುರುಗಳಾದ ಆರ್ಚ್‌ಬಿಷಪ್ ಡಿಯೆಗೋ ಜಿಯೋವಾನ್ನಿ ರವೆಲ್ಲಿ ರವರು, ವ್ಯಾಟಿಕನ್ ಬಸಿಲಿಕಾದ ಪವಿತ್ರ ಬಾಗಿಲನ್ನು ಮುಚ್ಚುವ ಭವ್ಯ ವಿಧಿಗೆ ಅಧ್ಯಕ್ಷತೆ ವಹಿಸಿದರು. ಈ ವಿಧಿಯ ಮೂಲಕ 2025ರ ‘ನಿರೀಕ್ಷೆಯ ಜ್ಯೂಬಿಲಿ’ಯ ಪ್ರಮುಖ ಆಚರಣೆಗಳು ಅಂತ್ಯಗೊಂಡವು. ಈ ಸಂದರ್ಭದಲ್ಲಿ, ಜ್ಯೂಬಿಲಿಯ ಅವಧಿಯಲ್ಲಿ ಪವಿತ್ರ ಬಾಗಿಲಿನ ಮೂಲಕ ಹಾದುಹೋದ ಲಕ್ಷಾಂತರ ಯಾತ್ರಿಕರು ದೇವರ ಕೃಪೆ ಮತ್ತು ಸಂಪೂರ್ಣ ಕ್ಷಮೆಯನ್ನು ಪಡೆಯಲಿ ಎಂದು ಪ್ರಾರ್ಥಿಸಲಾಯಿತು.
ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದ ಸೇಂಟ್ ಪೀಟರ್ ಫ್ಯಾಬ್ರಿಕ್‌ನ ಕಾರ್ಯದರ್ಶಿ ಮೊಂಡ್‌ಸೈನಿಯರ್ ಓರಾಜಿಯೋ ಪೆಪೆರವರು, ಈ ವಿಧಿಯ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿದರು. ಪವಿತ್ರ ಬಾಗಿಲನ್ನು ಒಳಗಿನ ಗೋಡೆಯಿಂದ ಮುಚ್ಚುವುದು ಪವಿತ್ರ ವರ್ಷದ ಅಂತಿಮ ಕ್ರಿಯೆಯಾಗಿದ್ದು, ಇದು ಕೇವಲ ತಾಂತ್ರಿಕ ಕಾರ್ಯವಲ್ಲದೆ ಒಂದು ಆಳವಾದ ಆತ್ಮೀಯ ಅನುಭವವೂ ಹೌದು ಎಂದು ಅವರು ಹೇಳಿದರು. ಪವಿತ್ರ ಬಾಗಿಲು ವಿಶ್ವಾಸಿಗಳಿಗೆ ದೇವರ ಅನುಭವವನ್ನು ನೀಡುವ ಒಂದು ಚಿಹ್ನಾತ್ಮಕ ಹಾಗೂ ಆತ್ಮೀಯ ಸ್ಥಳವಾಗಿದೆ ಎಂದು ಅವರು ಒತ್ತಿ ಹೇಳಿದರು.
ತಾಂತ್ರಿಕವಾಗಿ, ಪವಿತ್ರ ಬಾಗಿಲನ್ನು ಮುಚ್ಚಲು ಎರಡು ಗೋಡೆಗಳನ್ನು ನಿರ್ಮಿಸಲಾಗಿದೆ. ಸುಮಾರು 3,200 ಇಟ್ಟಿಗೆಗಳಿಂದ ಮೊದಲ ಒಣಗೋಡೆ ಹಾಗೂ ನಂತರ 620 ಗಟ್ಟಿಯಾದ ಇಟ್ಟಿಗೆಗಳಿಂದ ಸುಣ್ಣದ ಮೋರ್ಟಾರ್ ಬಳಸಿ ಎರಡನೇ ಗೋಡೆಯನ್ನು ನಿರ್ಮಿಸಲಾಯಿತು. ಈ ಗೋಡೆಯೊಳಗೆ ಒಂದು ವಿಶೇಷ ಪೆಟ್ಟಿಗೆಯನ್ನು (ಕಾಪ್ಸಾ) ಮುದ್ರಿಸಿ ಇರಿಸಲಾಯಿತು. ಅದರಲ್ಲಿ ಪವಿತ್ರ ಬಾಗಿಲಿನ ಕೀಲಿಗಳು, ಮುಚ್ಚುವ ದಾಖಲೆ, ಪ್ರಸ್ತುತ ಜಗದ್ಗುರುಗಳ ಪದಕಗಳು, ಜಗದ್ಗುರುಗಳು ಆಶೀರ್ವದಿಸಿದ ಜಪಮಾಲೆಗಳು ಹಾಗೂ ಮುಂದಿನ ಜ್ಯೂಬಿಲಿಗೆ ಮತ್ತೆ ತೆಗೆಯಲಾಗುವ ನಾಲ್ಕು ಬಂಗಾರ ಲೇಪಿತ ಇಟ್ಟಿಗೆಗಳನ್ನು ಇಡಲಾಗಿದೆ.
ಈ ವಿಧಿಯಲ್ಲಿ ‘ಸಾಂಪಿಯೇತ್ರಿನಿ’ ಎಂದು ಕರೆಯಲ್ಪಡುವ ಕರಕುಶಲಕಾರರ ಪಾತ್ರವೂ ಮಹತ್ವದಾಗಿದೆ. ಚರ್ಚಿನ ಇತಿಹಾಸದ ಪ್ರಮುಖ ಕ್ಷಣಗಳಲ್ಲಿ ಸೇವೆ ಸಲ್ಲಿಸುವ ಈ ಕಾರ್ಮಿಕರು, ಪವಿತ್ರ ಬಾಗಿಲನ್ನು ಮುಚ್ಚುವ ಸಂದರ್ಭವನ್ನು ಆಳವಾದ ಭಾವನಾತ್ಮಕತೆ ಮತ್ತು ಆತ್ಮೀಯ ಉತ್ಸಾಹದೊಂದಿಗೆ ಅನುಭವಿಸುತ್ತಾರೆ ಎಂದು ಮೊಂಡ್‌ಸೈನಿಯರ್ ಪೆಪೆ ವಿವರಿಸಿದರು. ಜ್ಯೂಬಿಲಿ ವರ್ಷದಲ್ಲಿ ಲಕ್ಷಾಂತರ ಯಾತ್ರಿಕರನ್ನು ಸ್ವಾಗತಿಸುವ ಮೂಲಕ ಬಸಿಲಿಕಾ ದೇವರ ಸ್ವಾಗತವನ್ನು ಪ್ರತಿಬಿಂಬಿಸಿದೆ ಎಂದು ಅವರು ಹೇಳಿದರು.
ಪವಿತ್ರ ವರ್ಷದ ಪರಂಪರೆಯ ಕುರಿತು ಮಾತನಾಡಿದ ಅವರು, “ಒಂದು ಬಾಗಿಲು ಮುಚ್ಚಿದರೂ, ಕ್ರಿಸ್ತನ ಹೃದಯದ ಬಾಗಿಲು ಸದಾ ತೆರೆಯಲ್ಪಟ್ಟೇ ಇರುತ್ತದೆ” ಎಂದು ಹೇಳಿದರು. ಮುಂದೆಯೂ ಸೇಂಟ್ ಪೀಟರ್ ಬಸಿಲಿಕೆಗೆ ಬರುವ ವಿಶ್ವಾಸಿಗಳು ದೇವರ ಅನುಭವವನ್ನು ಪಡೆಯಲಿ, ಮತ್ತು ಅವರ ಆತ್ಮೀಯ ಅಗತ್ಯಗಳಿಗೆ ಧರ್ಮ ಸಭೆಯು ಸದಾ ತೆರೆದ ಮನಸ್ಸಿನಿಂದ ಸ್ಪಂದಿಸಲಿ ಎಂಬುದು ತಮ್ಮ ಆಶಯವೆಂದು ಅವರು ಹೇಳಿದರು.