ಜೂಬಿಲಿ: ಸಂತ ಪೇತ್ರರ ಮಹಾದೇವಾಲಯದ ಪವಿತ್ರ ಬಾಗಿಲು ಮುಚ್ಚುವ ವಿಧಿ
ವಾಟಿಕನ್ ನ್ಯೂಸ್
ಪ್ರಭುವಿನ ದೈವ ದರ್ಶನದ ಮಹೋತ್ಸವದ ದಿನವಾದ 2026ರ ಜನವರಿ 6ರಂದು, ಜಗದ್ಗುರು XIVನೇ ಲಿಯೋರವರು ರೋಮ್‌ನ ಜಗದ್ಗುರುಗಳ ಮಹಾದೇವಾಲಯಗಳಲ್ಲಿಯೂ ಇನ್ನೂ ತೆರೆದಿದ್ದ ಕೊನೆಯ ಪವಿತ್ರ ಬಾಗಿಲಾದ ಸಂತ ಪೇತ್ರರ ಮಹಾದೇವಾಲಯದ ಪವಿತ್ರ ಬಾಗಿಲನ್ನು ಮುಚ್ಚಲಿದ್ದಾರೆ. ಇದರಿಂದ 2024ರ ಡಿಸೆಂಬರ್ 24ರಂದು ಆರಂಭವಾದ ಪವಿತ್ರ ಜೂಬಿಲಿ ವರ್ಷವು ಅಧಿಕೃತವಾಗಿ ಸಮಾಪ್ತಿಯಾಗಲಿದೆ.
ಪವಿತ್ರ ಬಾಗಿಲಿನ ಎಲೆಗಳನ್ನು ಮುಚ್ಚುವ ವಿಧಿ
1975ರಿಂದ ನಡೆದು ಬಂದ ಪದ್ಧತಿಯ ಅನುಸಾರವಾಗಿ ಮತ್ತು 2000ನೇ ಮಹಾ ಜೂಬಿಲಿಯ ಸಂದರ್ಭದಲ್ಲಿ ಸಂತ ದ್ವಿತೀಯ ಜಾನ್ ಪಾಲ್ ರವರಿಂದ ಸರಳಗೊಳಿಸಲಾದ ಈ ವಿಧಿಯು ಬೆಳಿಗ್ಗೆ 9:30ಕ್ಕೆ ಆರಂಭವಾಗಲಿದೆ. ಈ ಬಾರಿ ಸಾರ್ವಜನಿಕವಾಗಿ ಬಾಗಿಲಿಗೆ ಗೋಡೆ ಕಟ್ಟುವ ಕ್ರಮ ಇರುವುದಿಲ್ಲ ಬದಲಾಗಿ, ಬಾಗಿಲಿನ ಎರಡು ಎಲೆಗಳನ್ನು ಮುಚ್ಚುವ ವಿಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಜಗದ್ಗುರುಗಳು ಸಾಮಾನ್ಯ ಪವಿತ್ರ ವರ್ಷದ ಅಂತ್ಯಕ್ಕಾಗಿ ಕೃತಜ್ಞತಾ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ. ವಿಧಿಯಲ್ಲಿ ಸೂಚಿಸಲಾದ ಪ್ರಾರ್ಥನಾ ವಾಕ್ಯ ಹೀಗಿದೆ
ಈ ಪವಿತ್ರ ಬಾಗಿಲು ಮುಚ್ಚಲ್ಪಟ್ಟಿದೆ ಆದರೆ ನಿಮ್ಮ ಕರುಣೆಯ ಬಾಗಿಲು ಎಂದಿಗೂ ಮುಚ್ಚಲ್ಪಡುವುದಿಲ್ಲ.
ಇದಕ್ಕೆ ಮುಂದುವರಿದಂತೆ, ದೇವರ ಕೃಪೆಯ ಸಂಪತ್ತುಗಳು ಸದಾ ತೆರೆದೆಯೇ ಇರಲೆಂದು ಬೇಡಿಕೊಳ್ಳಲಾಗುತ್ತದೆ,
ನಮ್ಮ ಭೌಮಿಕ ಯಾತ್ರೆಯ ಅಂತ್ಯದಲ್ಲಿ ನಾವು ವಿಶ್ವಾಸದಿಂದ ನಿಮ್ಮ ಮನೆ ಬಾಗಿಲನ್ನು ತಟ್ಟಲು, ಹಾಗೂ ಜೀವವೃಕ್ಷದ ಫಲವನ್ನು ಅನುಭವಿಸಲು ಯೋಗ್ಯರಾಗುವಂತೆ.”
ಅನಂತರ ಓ ಕ್ಲಾವಿಸ್ ದಾವೀದ್ ಎಂಬ ಪ್ರತಿಪದ್ಯ ಹಾಡಲಾಗುತ್ತಿರುವಾಗ, ಜಗದ್ಗುರುಗಳು ಪವಿತ್ರ ಬಾಗಿಲಿನತ್ತ ಸಾಗುತ್ತಾರೆ. ಅವರು ಬಾಗಿಲಿನ ಅಂಚಿನಲ್ಲಿ ನಿಂತು, ಮೊಣಕಾಲೂರಿ, ಕ್ಷಣಮಾತ್ರ ಮೌನ ಪ್ರಾರ್ಥನೆ ಮಾಡಿದ ನಂತರ, ಎರಡು ದೊಡ್ಡ ಕಂಚಿನ ಬಾಗಿಲುಗಳನ್ನು ಸ್ವತಃ ಮುಚ್ಚುತ್ತಾರೆ.
ಈ ಕ್ರಿಯೆಯು ಜೂಬಿಲಿ ಕಾಲಾವಧಿ ಮುಕ್ತಾಯಗೊಂಡಿರುವುದನ್ನು ಸೂಚಿಸಿದರೂ, ದೇವರ ಕರುಣೆ ಸದಾ ತೆರೆದೆಯೇ ಇರುವುದನ್ನು ಸ್ಪಷ್ಟಪಡಿಸುತ್ತದೆ.
ಪವಿತ್ರ ಬಾಗಿಲು ಮುಚ್ಚಿದ ತಕ್ಷಣವೇ, ಜಗದ್ಗುರುಗಳು ಸಂತ ಪೇತ್ರರ ಮಹಾದೇವಾಲಯದೊಳಗೆ ಪ್ರಭುವಿನ ದೈವ ದರ್ಶನೋತ್ಸವದ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಲಿದ್ದಾರೆ.
ಪವಿತ್ರ ಬಾಗಿಲಿಗೆ ಗೋಡೆ ಕಟ್ಟುವ ನಿಜವಾದ ಕಾರ್ಯವು ತಕ್ಷಣ ನಡೆಯುವುದಿಲ್ಲ. ಇದು ಸುಮಾರು ಹತ್ತು ದಿನಗಳ ನಂತರ, ಖಾಸಗಿಯಾಗಿ, ಪವಿತ್ರ ಜಗದ್ಗುರುಗಳ ಆರಾಧನಾ ವಿಧಿಯ ಆಚರಣೆಗಳ ಕಚೇರಿಯ ಮೇಲ್ವಿಚಾರಣೆಯಲ್ಲಿ ನಡೆಯುವ ವಿಶೇಷ ವಿಧಿಯ ಮೂಲಕ ನೆರವೇರಲಿದೆ.
ಸಂತ ಪೇತ್ರರ ಮಹಾದೇವಾಲಯದ ಕಾರ್ಯಾಗಾರದ ತಾಂತ್ರಿಕರು ಸಾಂಪಿಯೇತ್ರಿನಿ ಎಂದು ಕರೆಯಲ್ಪಡುವವರು ಅಂದರೆ ಇತರೆ ಜಗದ್ಗುರುಗಳ ಮಹಾದೇವಾಲಯಗಳಲ್ಲಿ ವಾಟಿಕನ್ ನಗರ ರಾಜ್ಯದ ಗವರ್ನರೇಟ್‌ನ ತಾಂತ್ರಿಕರು ಮಹಾದೇವಾಲಯದ ಒಳಭಾಗದಲ್ಲಿ ಇಟ್ಟಿಗೆ ಗೋಡೆಯನ್ನು ನಿರ್ಮಿಸಿ ಪವಿತ್ರ ಬಾಗಿಲನ್ನು ಮುಚ್ಚಲಿದ್ದಾರೆ.
ಈ ವಿಧಿಯ ವೇಳೆ, ಪರಂಪರೆಯಂತೆ ಲೋಹದ ಕ್ಯಾಪ್ಸ್ ಸ್ ಅನ್ನು ಗೋಡೆಯೊಳಗೆ ಇಡಲಾಗುತ್ತದೆ. ಅದರಲ್ಲಿ
ಪವಿತ್ರ ಬಾಗಿಲು ಮುಚ್ಚಿದ ಅಧಿಕೃತ ದಾಖಲಾತಿ,
ಜೂಬಿಲಿ ವರ್ಷದ ಸಂದರ್ಭದಲ್ಲಿ ಹೊರಡಿಸಲಾದ ನಾಣ್ಯಗಳು,
ಹಾಗೂ ಪವಿತ್ರ ಬಾಗಿಲಿನ ಕೀಲಿಗಳು ಸೇರಿರುತ್ತವೆ.