ಜುಬಿಲಿ: ಸ್ವಯಂಸೇವಕರು ಪವಿತ್ರ ಬಾಗಿಲಿನ ಮೂಲಕ ಅಂತಿಮ ಯಾತ್ರೆ ಮಾಡುತ್ತಾರೆ.
ವ್ಯಾಟಿಕನ್ ವರದಿ
ಸೋಮವಾರ ಸಂಜೆ, ಟೈಬರ್ ನದಿಯಿಂದ ಸಂತ ಪೇತ್ರರ ಬಸಿಲಿಕಾಗೆ ಹೋಗುವ ವಿಯಾ ದೆಲ್ಲಾ ಕಾಂಚಿಲಿಯಾಜಿಯೋನೇ ರಸ್ತೆಯಲ್ಲಿದ್ದ ಮಳೆಯ ನೀರಿನ ಕೊಚ್ಚೆಗುಂಡಿಗಳಲ್ಲಿ ಸಂತ ಪೇತ್ರರ ಬಸಿಲಿಕಾದ ಪ್ರತಿಬಿಂಬಗಳು ಕಾಣಿಸಿಕೊಂಡವು. ಒಂದು ವರ್ಷ ನಡೆದ ಭರವಸೆಯ ಜುಬಿಲಿ ಹಾಗೂ ಅದರ ಅಂತಿಮ ಮಳೆಯ ದಿನಗಳನ್ನು ಈ ರಸ್ತೆ ಸಾಕ್ಷಿಯಾಗಿ ನೋಡಿತ್ತು. ಹಸಿರು ಜಾಕೆಟ್‌ಗಳಿಂದ ಗುರುತಿಸಲ್ಪಟ್ಟ ಸ್ವಯಂಸೇವಕರು, ಪವಿತ್ರ ವರ್ಷದ ಅವಧಿಯಲ್ಲಿ ಪವಿತ್ರ ಬಾಗಿಲನ್ನು ದಾಟಿದ ಯಾತ್ರಿಕರ ಅನುಭವಗಳು, ಚಿಂತೆಗಳು ಮತ್ತು ನಿರೀಕ್ಷೆಗಳನ್ನು ತಮ್ಮ ಜೊತೆಗೆ ಹೊತ್ತುಕೊಂಡಿದ್ದರು.
ಒಟ್ಟು 3.3 ಕೋಟಿಗೂ ಹೆಚ್ಚು ಜನರು ಜುಬಿಲಿಯಲ್ಲಿ ಭಾಗವಹಿಸಿದ್ದು, ವಿಭಿನ್ನ ಹಿನ್ನೆಲೆಯ 5,000ಕ್ಕೂ ಹೆಚ್ಚು ಸ್ವಯಂಸೇವಕರು ಅವರ ಸೇವೆಗೆ ನೆರವಾಗಿದ್ದರು. ಜನವರಿ 5ರ ಸಂಜೆ, ಪ್ರಚಾರ ವಿಭಾಗದ ಡಿಕ್ಯಾಸ್ಟರಿ ಫಾರ್ ಎವಾಂಜಲೈಸೇಶನ್ ಸದಸ್ಯರೊಂದಿಗೆ, ಪ್ರೊ-ಪ್ರಿಫೆಕ್ಟ್ ಆರ್ಚ್‌ಬಿಷಪ್ ರಿನೊ ಫಿಸಿಕೇಳ್ಲಾ ರವರ ನೇತೃತ್ವದಲ್ಲಿ, ಸ್ವಯಂಸೇವಕರನ್ನು ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಯಿತು.
ಸ್ವಲ್ಪ ಮಳೆಯ ಮಧ್ಯೆ ನಡೆದ ಈ ಯಾತ್ರೆಗೆ, ಜುಬಿಲಿಯ ಮರದ ಶಿಲುಬೆಯನ್ನು ಮುಂಭಾಗದಲ್ಲಿ ಹಿಡಿದು ಜಗದ್ಗುರುಗಳು ನೇತೃತ್ವ ವಹಿಸಿದ್ದರು. ಸ್ವಯಂಸೇವಕರ ನಡುವೆ ಪರಸ್ಪರ ಏಕಾತ್ಮತೆಯ ಭಾವನೆ ಸ್ಪಷ್ಟವಾಗಿದ್ದು, ಒಂದು ಮಹತ್ವದ ಸೇವೆಯ ಅಂತ್ಯಕ್ಕೆ ಬರುತ್ತಿರುವ ಅನುಭವದ ಭಾವವೂ ಕಂಡುಬಂದಿತು. ಈ ಸೇವೆಯನ್ನು ಭದ್ರತೆ ಮತ್ತು ಸಹೋದರತ್ವದ ವಾತಾವರಣದಲ್ಲಿ ನೆರವೇರಿಸಿದ್ದೇವೆ ಎಂಬ ಸಾಮೂಹಿಕ ಅರಿವು ಅವರಲ್ಲಿತ್ತು.
ಪವಿತ್ರ ಬಾಗಿಲಿನ ಬಳಿಗೆ ಬಂದಾಗ, ಎಲ್ಲರೂ ಧ್ಯಾನಾತ್ಮಕ ಮೌನಕ್ಕೆ ಒಳಗಾದರು. ಮುಂದಿನ ದಿನ ಜಗದ್ಗುರು XIVನೇ ಲಿಯೋರವರು ಮುಚ್ಚಲಿದ್ದ ಬಾಗಿಲಿನತ್ತ ದೃಷ್ಟಿ ನೆಟ್ಟು, ಸ್ವಯಂಸೇವಕರು ಬಾಗಿಲಿನ ಫಲಕಗಳನ್ನು ಸ್ಪರ್ಶಿಸಿ, ಶಿಲುಬೆಯ ಗುರುತು ಹಾಕಿ ವೈಯುಕ್ತಿಕ ಪ್ರಾರ್ಥನೆಗಳನ್ನು ಸಲ್ಲಿಸಿದರು. ವರ್ಷಪೂರ್ತಿ ಯಾತ್ರಿಕರ ಪ್ರವಾಹವನ್ನು ನಿರ್ವಹಿಸಿದ್ದ ಅವರು, ಈ ಬಾರಿ ಭಕ್ತಿಯಿಂದ ಸ್ವತಃ ಪವಿತ್ರ ಬಾಗಿಲನ್ನು ಸಮೀಪಿಸಿದರು.
ಬಸಿಲಿಕಾದ ಮಧ್ಯಭಾಗದಲ್ಲಿ ಯಾತ್ರೆ ಅಂತ್ಯಗೊಂಡಿತು. ಅಲ್ಲಿ ಮಹಾ ಧರ್ಮಾಧ್ಯಕ್ಷ ಫಿಸಿಕೇಳ್ಲಾರವರು ಜಗದ್ಗುರುಗಳ ಉದ್ದೇಶಗಳ ಪ್ರಕಾರ ಪೂರ್ಣ ವಿಮೋಚನೆಗೆ ಅಗತ್ಯವಾದ ಪ್ರಾರ್ಥನೆಗಳು ಮತ್ತು ವಿಶ್ವಾಸಘೋಷಣೆಯನ್ನು ನಡೆಸಿದರು. ಈ ಅನುಭವವನ್ನು ಒಂದು ಸುಂದರ ಸಾಹಸ ಎಂದು ವರ್ಣಿಸಿದ ಅವರು, ಯಾತ್ರೆ ಮುಗಿದರೂ ಆಶೆ ನಿರಾಶೆಗೊಳ್ಳುವುದಿಲ್ಲ ಎಂದು ಹೇಳಿ, ಸ್ವಯಂಸೇವಕರು ಚರ್ಚಿನ ಜೀವಂತ ಕಲ್ಲುಗಳಾಗಿ ಮುಂದುವರಿಯುವಂತೆ ಪ್ರೇರೇಪಿಸಿದರು. ಈ ಮೂಲಕ ಅವರ ಸೇವೆಯೂ ಮತ್ತು ಪವಿತ್ರ ವರ್ಷದ ಪಾಲ್ಗೊಳ್ಳುವಿಕೆಯೂ ಅಂತ್ಯವಾಯಿತು.