ಜಗದ್ಗುರುಗಳೊಂದಿಗೆ ಪ್ರಾರ್ಥಿಸೋಣ: ವಿಭಜಿತ ಲೋಕದಲ್ಲಿ ಏಕತೆಯ ನಿಜವಾದ ಸಮಾಗಮ
ವ್ಯಾಟಿಕನ್ ವರದಿ
ವ್ಯಾಟಿಕನ್‌ನ ಸಂತ ಪೆರಿಗ್ರೈನ್ ಚಾಪೆಲ್‌ನಿಂದ ವಿಶ್ವದ ಅಂಚುಗಳವರೆಗೆ, ಜಗದ್ಗುರುಗಳೊಂದಿಗೆ ಪ್ರಾರ್ಥಿಸೋಣ ಎಂಬ ಹೊಸ ಉಪಕ್ರಮವು ಭಕ್ತರನ್ನು ಜಗದ್ಗುರು XIVನೇ ಲಿಯೋರವರೊಂದಿಗೆ ಒಂದೇ ಕ್ಷಣದ ಸಾಮೂಹಿಕ ಪ್ರಾರ್ಥನೆಯಲ್ಲಿ ಸೇರಿಸಿಕೊಳ್ಳಲು ಆಹ್ವಾನಿಸುತ್ತದೆ. ಜನವರಿ 7ರಂದು ಈ ಯೋಜನೆ ಪರಿಚಯಿಸಲ್ಪಟ್ಟಿದ್ದು, 2026ರ ಜನವರಿ ತಿಂಗಳ ಪ್ರಾರ್ಥನಾ ಉದ್ದೇಶವನ್ನು ಜಗದ್ಗುರು ಹಂಚಿಕೊಳ್ಳುವ ಮೊದಲ ವಿಡಿಯೊ ಸಂದೇಶ ಬಿಡುಗಡೆಗೆ ಇದು ಅಧಿಕೃತ ಚಾಲನೆಯಾಗಿದೆ.
ಜನವರಿ ತಿಂಗಳ ಪ್ರಾರ್ಥನಾ ಉದ್ದೇಶದಲ್ಲಿ ದೇವರ ವಾಕ್ಯದೊಂದಿಗೆ ಪ್ರಾರ್ಥನೆಗಾಗಿ ಜಗದ್ಗುರು XIVನೇ ಲಿಯೋ ರವರು ಪ್ರಾರ್ಥನೆಯನ್ನು ಆಶೆಯ ಮೂಲವಾಗಿ ಮರುಕಂಡುಹಿಡಿಯುವಂತೆ ಭಕ್ತರನ್ನು ಆಹ್ವಾನಿಸುತ್ತಾರೆ. ಶಬ್ದ ಮತ್ತು ಗಮನಭಂಗದಿಂದ ತುಂಬಿರುವ ಇಂದಿನ ಯುಗದಲ್ಲಿ, ಭಾಷಣಕ್ಕಿಂತಲೂ ಪ್ರಾರ್ಥನೆಯ ಮೂಲಕವೇ ಈ ಉಪಕ್ರಮವನ್ನು ಆರಂಭಿಸುವ ಮೂಲಕ, ಮೌನ ಮತ್ತು ಧ್ಯಾನಾತ್ಮಕ ಸಂವಹನದ ಮಹತ್ವವನ್ನು ಅವರು ಒತ್ತಿ ಹೇಳುತ್ತಾರೆ.
ಸಂವಹನ ವಿಭಾಗದ ಪ್ರಿಫೆಕ್ಟ್ ಪೌಲೊ ರುಫ್ಫಿನಿರವರ ಪ್ರಕಾರ, ಈ ಉಪಕ್ರಮವು ಜಗದ್ಗುರುಗಳ ಆತ್ಮೀಯವೂ ವಿಶ್ವವ್ಯಾಪಕವೂ ಆದ ಪ್ರಾರ್ಥನೆಯನ್ನು ಹೊಸ, ಸರಳ ಮತ್ತು ಶಕ್ತಿಶಾಲಿ ರೂಪದಲ್ಲಿ ಜನರ ಮುಂದೆ ತರುತ್ತದೆ. ಇದು ಡಿಜಿಟಲ್ ಜಗತ್ತಿನಲ್ಲಿಯೂ ದಿನನಿತ್ಯದ ಬದುಕಿನ ವಾಸ್ತವದಲ್ಲಿಯೂ ಲಕ್ಷಾಂತರ ಜನರನ್ನು ಒಂದೇ ಹೃದಯದಿಂದ ಜೋಡಿಸುವ ಏಕತೆಯ ಹಾಗೂ ಸಮಾಗಮದ ಸ್ಪಷ್ಟ ಸಂಕೇತವಾಗಿದೆ.
2026ರ ಅವಧಿಯಲ್ಲಿ ಪ್ರತಿ ತಿಂಗಳೂ ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯನ್ನು ನಿರ್ದಿಷ್ಟ ಪ್ರಾರ್ಥನಾ ಉದ್ದೇಶಕ್ಕಾಗಿ ಆಹ್ವಾನಿಸಲಿದ್ದಾರೆ. ಶಾಂತಿ, ನಿಶಸ್ತ್ರೀಕರಣದಂತಹ ಜಾಗತಿಕ ಸವಾಲುಗಳ ಜೊತೆಗೆ, ಸುವಾರ್ತಾಪ್ರಚಾರದಂತಹ ಚರ್ಚಿನ ಆಂತರಿಕ ವಿಚಾರಗಳೂ ಇದರಲ್ಲಿ ಸೇರಿವೆ. ಈ ಉಪಕ್ರಮವು ಜಗದ್ಗುರು ಫ್ರಾನ್ಸಿಸ್ ರವರು ಹತ್ತು ವರ್ಷಗಳ ಹಿಂದೆ ಆರಂಭಿಸಿದ “ದಿ ಪೋಪ್ ಸ್ ವಿಡಿಯೋ” ಪರಂಪರೆಯನ್ನು ಮುಂದುವರಿಸುತ್ತದೆ.
ಜಗದ್ಗುರುಗಳೊಂದಿಗೆ ಪ್ರಾರ್ಥಿಸೋಣ ಎಂಬುದು ಲಾಭ ಮತ್ತು ಆಕಾಂಕ್ಷೆಗಳಿಂದ ಚಾಲಿತ ಜಾಲಗಳಿಗಿಂತ ಭಿನ್ನವಾದ, ಪ್ರಾರ್ಥನೆಯ ಮೂಲಕ ಏಕತೆಯನ್ನು ಕಟ್ಟುವ ಜಾಲವಾಗಿದೆ. ವಿಭಜನೆ, ಯುದ್ಧ ಮತ್ತು ಹಿಂಸೆಯಿಂದ ಬಳಲುತ್ತಿರುವ ಲೋಕದಲ್ಲಿಯೂ, ಒಟ್ಟಾಗಿ ಪ್ರಾರ್ಥಿಸುವುದರಿಂದ ಸಂಸ್ಕೃತಿಗಳು ಮತ್ತು ಜನರ ನಡುವೆ ಸೇತುವೆ ನಿರ್ಮಾಣವಾಗುತ್ತದೆ. ನಿರಂತರ ಡಿಜಿಟಲ್ ವ್ಯಸ್ತತೆಯಿಂದ ಕ್ಷಣಕಾಲ ದೂರ ಸರಿದು, ದೇವರ ವಾಕ್ಯಕ್ಕೆ ಹೃದಯದಲ್ಲಿ ಜಾಗ ನೀಡುವಂತೆ ಜಗದ್ಗುರು XIVನೇ ಲಿಯೋರವರು ಈ ಉಪಕ್ರಮದ ಮೂಲಕ ಎಲ್ಲರನ್ನು ಪ್ರೇರೇಪಿಸುತ್ತಾರೆ.