ರಾಟ್ಸಿಂಗರ್ ಫೌಂಡೇಶನ್: ಫಾದರ್ ರೊಬೆರ್ಟೊ ರೆಗೋಲಿ ಹೊಸ ಅಧ್ಯಕ್ಷರಾಗಿ ನೇಮಕ
ವ್ಯಾಟಿಕನ್ ವರದಿ
ಧರ್ಮ ಸಭೆಯ ಖ್ಯಾತ ಇತಿಹಾಸಕಾರರಾದ ಫಾದರ್ ರೊಬೆರ್ಟೊ ರೆಗೋಲಿರವರು ಜೋಸೆಫ್ ರಾಟ್ಸಿಂಗರ್ ಬೆನೆಡಿಕ್ಟ್ XVI ವ್ಯಾಟಿಕನ್ ಫೌಂಡೇಶನ್‌ನ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 2010ರ ಮಾರ್ಚ್ 1ರಂದು ಸ್ಥಾಪಿತವಾದ ಈ ಫೌಂಡೇಶನ್, ಜೋಸೆಫ್ ರಾಟ್ಸಿಂಗರ್ ಹಾಗೂ ಜಗದ್ಗುರು XVI ನೇ ಬೆನೆಡಿಕ್ಟ್ ರವರ ತತ್ವಶಾಸ್ತ್ರ ಮತ್ತು ಸೇವೆಯ ಅಧ್ಯಯನ, ಪ್ರಚಾರ ಮತ್ತು ಪ್ರಸಾರವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಜಗದ್ಗರುಗಳ ಗ್ರೆಗೋರಿಯನ್ ವಿಶ್ವವಿದ್ಯಾಲಯದ ಸಮಕಾಲೀನ ಇತಿಹಾಸದ ಪ್ರಾಧ್ಯಾಪಕರಾಗಿರುವ ಫಾದರ್ ರೆಗೋಲಿರವರು, ಅಲ್ಲಿ ಧರ್ಮ ಸಭೆಯ ಇತಿಹಾಸ ವಿಭಾಗ ಮತ್ತು Archivium Historiae Pontificiae ಪತ್ರಿಕೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜಗದ್ಗರುಗಳ ಸಂಸ್ಥೆ, ರೋಮನ್ ಕುರಿಯಾ ಮತ್ತು 19ರಿಂದ 21ನೇ ಶತಮಾನಗಳ ಜಗದ್ಗುರುಗಳ ರಾಜತಾಂತ್ರಿಕ ಇತಿಹಾಸದ ಕುರಿತು ಅಂತರರಾಷ್ಟ್ರೀಯ ಮಹತ್ವದ ಅಧ್ಯಯನಗಳು ಮತ್ತು ಗ್ರಂಥಗಳ ರಚಿತರಾಗಿರುವ ಅವರು, ಕಳೆದ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿದ್ದ ಫಾದರ್ ಫೆಡೆರಿಕೊ ಲೊಂಬಾರ್ಡಿ ರವರ ಸ್ಥಾನವನ್ನು ಸ್ವೀಕರಿಸಿದ್ದಾರೆ.
ಜನವರಿ 28ರಂದು ಪ್ರಕಟಿಸಿದ ಹೇಳಿಕೆಯಲ್ಲಿ, ಫಾದರ್ ರೆಗೋಲಿ ಅವರು ಫಾದರ್ ಲೊಂಬಾರ್ಡಿ ರವರನ್ನು “ಫೌಂಡೇಶನ್‌ನ ಸಾರ್ವಜನಿಕ ಹಾಗೂ ಶಾಂತ ಮುಖ” ಎಂದು ವರ್ಣಿಸಿ, ಕಳೆದ ದಶಕದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವೇಕ ಮತ್ತು ವಿಶ್ವಾಸದಿಂದ ಮುನ್ನಡೆಸಿದಕ್ಕಾಗಿ ಪ್ರಶಂಸಿಸಿದರು. ಈ ಪ್ರಕಟಣೆಯೊಂದಿಗೆ, ನಿಯಮಾವಳಿಗಳ ಪ್ರಕಾರ ಐದು ವರ್ಷಗಳ ಅವಧಿ ಪೂರ್ಣಗೊಂಡ ಸಂಸ್ಥೆಯ ಆಡಳಿತಾಂಗಗಳ ನವೀಕರಣ ಮತ್ತು ಬದಲಾವಣೆಗಳನ್ನೂ ಘೋಷಿಸಲಾಯಿತು.
ಫೌಂಡೇಶನ್‌ನ ನಿರ್ದೇಶಕ ಮಂಡಳಿ, ವೈಜ್ಞಾನಿಕ ಸಮಿತಿ ಮತ್ತು ಲೆಕ್ಕಪರಿಶೋಧನಾ ಮಂಡಳಿಗಳಲ್ಲಿ ಹಲವಾರು ಹೊಸ ನೇಮಕಗಳು ಮತ್ತು ಅವಧಿ ಪೂರ್ಣಗೊಂಡ ಸದಸ್ಯರ ಸೇವಾ ಅಂತ್ಯಗಳನ್ನು ಈ ಸಂದರ್ಭದಲ್ಲೇ ಪ್ರಕಟಿಸಲಾಯಿತು. ಜಗದ್ಗರುಗಳು ಹಾಗೂ ರಾಜ್ಯ ಕಾರ್ಯದರ್ಶಾಲಯದ ಮಾರ್ಗದರ್ಶನದಲ್ಲಿ ಈ ಬದಲಾವಣೆಗಳು ಸುಗಮವಾಗಿ ಜಾರಿಗೊಂಡಿವೆ ಎಂದು ಫಾದರ್ ರೆಗೋಲಿ ತಿಳಿಸಿದರು.
ಹೊಸ ಅಧ್ಯಕ್ಷರಾದ ಫಾದರ್ ರೆಗೋಲಿರವರು, ಫೌಂಡೇಶನ್‌ಗೆ ಅಮೂಲ್ಯ ಸೇವೆ ಸಲ್ಲಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿ, ವಿಶೇಷವಾಗಿ ಫಾದರ್ ಲೊಂಬಾರ್ಡಿರವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ, ಜಗದ್ಗುರು ಲಿಯೋರವರು ಹಾಗೂ ಕಾರ್ಡಿನಲ್ ಪ್ಯಾರೋಲಿನ್ ರವರು ಸಂಸ್ಥೆಯ ಮೇಲೆ ತೋರಿದ ಕಾಳಜಿ ಮತ್ತು ತಮ್ಮ ಮೇಲೆ ಇಟ್ಟ ವಿಶ್ವಾಸಕ್ಕಾಗಿ ಆಭಾರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ, 1927–2027ರ ಜೋಸೆಫ್ ರಾಟ್ಸಿಂಗರ್ ರವರ ಜನ್ಮಶತಮಾನೋತ್ಸವದ ಆಚರಣೆಗಳೊಂದಿಗೆ ಉತ್ಸಾಹಭರಿತ ಐದು ವರ್ಷದ ಅವಧಿ ಎದುರಾಗಿದೆ ಎಂದು ಫಾದರ್ ರೆಗೋಲಿ ಹೇಳಿದರು. ರಾಟ್ಸಿಂಗರ್ ರವರ ತತ್ವಚಿಂತನೆ ಇಂದು ಕೂಡ ಜೀವಂತವಾಗಿದ್ದು, ಜಗತ್ತಿನಾದ್ಯಂತ ಅನೇಕ ಜನರ ನಂಬಿಕೆಯ ಪಥಗಳಿಗೆ ಪ್ರೇರಣೆಯಾಗುತ್ತಿದೆ ವಿಶೇಷವಾಗಿ ಯುವಜನರಲ್ಲಿ ಕ್ರಿಸ್ತನಲ್ಲಿಯೂ ಧರ್ಮ ಸಭೆಯಲ್ಲಿಯೂ ನಂಬಿಕೆಯ ಸೌಂದರ್ಯವನ್ನು ಪುನಃ ಕಂಡುಕೊಳ್ಳಲು ಫೌಂಡೇಶನ್ ತನ್ನ ಧ್ವನಿಯನ್ನು ಮುಂದುವರಿಸಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.