ಲಿಮಾದ ಸಂತ ರೋಸ್ ಗೆ ಸಮಪಿ೯ತವಾದ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನ ಲಿಮಾದ ಸಂತ ರೋಸ್ ಗೆ ಸಮಪಿ೯ತವಾದ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನ 

ಕಾರ್ಡಿನಲ್ ಟಾಗ್ಲೆ: ಸಂತ ರೋಸ್ ಆಫ್ ಲಿಮಾ ಹೊಸ ಧರ್ಮಪ್ರಚಾರ ಚಳವಳಿಗೆ ಪ್ರೇರಣೆ

ಪೆರುವಿಯನ್ ಸಂತರಾಗಿರುವ ಸಂತ ರೋಸ್ ಆಫ್ ಲಿಮಾರವರ ವ್ಯಕ್ತಿತ್ವದ ಮೇಲೆ ಕೇಂದ್ರೀಕರಿಸಿದ ಒಂದು ಸಮ್ಮೇಳನವು ಜಗದ್ಗುರುಗಳ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಜನವರಿ 31ರಂದು ವ್ಯಾಟಿಕನ್ ತೋಟಗಳಲ್ಲಿ ಸಂತರ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

ವ್ಯಾಟಿಕನ್ ವರದಿ

ರೋಮಿನ ಜಗದ್ಗುರುಗಳ ಗ್ರೆಗೋರಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ಸಮ್ಮೇಳನವು ಪೆರುವಿನ ಸಂತರಾಗಿರುವ ಸಂತ ರೋಸ್ ಆಫ್ ಲಿಮಾರವರ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕ ಪರಂಪರೆಯ ಮೇಲೆ ಕೇಂದ್ರೀಕೃತವಾಗಿತ್ತು. ಜಗದ್ಗರುಗಳ ಅಧಿಕಾರ ಹುದ್ದೆಯ ಪೆರುವಿನ ರಾಯಭಾರ ಕಚೇರಿಯು, ಜಗದ್ಗುರುಗಳ ಹುದ್ದೆಯ ಕಥೋಲಿಕ ವಿಶ್ವವಿದ್ಯಾಲಯ ಆಫ್ ಪೆರುರವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜನವರಿ 31ರಂದು ವ್ಯಾಟಿಕನ್ ತೋಟಗಳಲ್ಲಿ ಸಂತೆಯ ಪ್ರತಿಮೆಯನ್ನು ಸ್ಥಾಪಿಸುವ ಕಾರ್ಯಕ್ರಮಕ್ಕೆ ಇದು ಪೂರ್ವಭಾವಿಯಾಗಿ ನಡೆದಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಪ್ರಚಾರಕ್ಕಾಗಿ ಇರುವ ಧರ್ಮಾಧಿಕಾರ ಮಂಡಳಿಯ ಪ್ರೊ–ಪ್ರಿಫೆಕ್ಟ್ ಕಾರ್ಡಿನಲ್ ಲೂಯಿಸ್ ಆಂಟೋನಿಯೊ ಟಾಗ್ಲೆರವರು, ಪೆರು ಮತ್ತು ಫಿಲಿಪ್ಪೈನ್ಸ್‌ನ ಸಹ ಪೋಷಕಿಯಾಗಿರುವ ಸಂತ ರೋಸ್ ಅವರನ್ನು “ನಿರಂತರ ಧರ್ಮಪ್ರಚಾರಕಿ” ಎಂದು ವರ್ಣಿಸಿದರು. ಅವರ ಪವಿತ್ರತೆಯ ಸುದ್ದಿ ಖಂಡಾಂತರಗಳನ್ನು ದಾಟಿ ತಲೆಮಾರುಗಳವರೆಗೆ ವ್ಯಾಪಿಸಿಕೊಂಡಿದ್ದು, ಇಂದಿನ ಯುವ ಪೀಳಿಗೆಗೆ ಬೋಧನೆಗಿಂತಲೂ ಉದಾಹರಣೆಯ ಮೂಲಕ ಪ್ರೇರಣೆಯಾಗುವ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು. ಈ ಸಮ್ಮೇಳನವು ಹೊಸ ಧರ್ಮಪ್ರಚಾರ ಚಳವಳಿಗೆ ಬೀಜವಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವ್ಯಾಟಿಕನ್ ಸಿಟಿ ರಾಜ್ಯ ಪ್ರಾಂತ್ಯದ ಅಧ್ಯಕ್ಷೆ ಸಿಸ್ಟರ್ ರಾಫ್ಫೆಲ್ಲಾ ಪೆಟ್ರಿನಿ ರವರು, ಸಂತ ರೋಸ್ ಆಫ್ ಲಿಮಾ ರವರನ್ನು ಕಾಲಾತೀತವಾಗಿ ಸಹಾನುಭೂತಿ ಮತ್ತು ಸೌಹಾರ್ದತೆಯನ್ನು ಮೂಡಿಸುವ ವ್ಯಕ್ತಿತ್ವವೆಂದು ವರ್ಣಿಸಿದರು. ಜನವರಿ 31ರಂದು ಜಗದ್ಗುರು XIVನೇ ಲಿಯೋರವರ ಸಮ್ಮುಖದಲ್ಲಿ ವ್ಯಾಟಿಕನ್ ತೋಟಗಳಲ್ಲಿ ಸ್ಥಾಪಿಸಲ್ಪಡುವ ಸಂತ ರೋಸ್ ರವರ ಪ್ರತಿಮೆ ಮತ್ತು ಮರಿಯಮ್ಮನವರ ಶಾಸನ , ಪೆರುವಿನಿಂದ ಬಂದ ವಸ್ತುಗಳಿಂದ ನಿರ್ಮಿಸಲ್ಪಟ್ಟಿದ್ದು, ಕ್ರಿಸ್ತನನ್ನು ಅನುಸರಿಸಿದ ಸಂತೆಯ ಪ್ರಕಾಶಮಾನ ಹಾಗೂ ನಗುಮುಖದ ಪವಿತ್ರತೆಯನ್ನು ಪ್ರತಿಬಿಂಬಿಸುತ್ತದೆ.

ಪೆರುವಿನ  ಎಪಿಸ್ಕೋಪಲ್ ಸಮಾವೇಶದ ಅಧ್ಯಕ್ಷರಾದ ಲಿಮಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಕಾರ್ಲೋಸ್ ಕಾಸ್ಟಿಲ್ಲೊ ಮಾಟಾಸೊಗ್ಲಿಯೋ ರವರು, ಸಂತ ರೋಸ್ ರವರ ಆಧ್ಯಾತ್ಮಿಕ ತತ್ವಶಾಸ್ತ್ರದ ಬಗ್ಗೆ ಮಾತನಾಡಿ, ಆಂತರಿಕ ಜೀವನವೇ ಅವರ ಧರ್ಮಸಾಧನೆಯ ಕೇಂದ್ರವಾಗಿತ್ತು ಎಂದು ಹೇಳಿದರು. ಪ್ರತಿದಿನದ ಕೆಲಸವನ್ನೇ ಕೃಪೆಯ ರೂಪವಾಗಿ ಅವರು ಅನುಭವಿಸಿದ್ದರು. ಆಧ್ಯಾತ್ಮಿಕ ಆಧಾರವಿಲ್ಲದೆ ಕೃಪೆಯನ್ನು ಗಳಿಕೆಯಂತೆ ಕಾಣುವುದು ದುರಂತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಎಚ್ಚರಿಸಿದರು.

ಗ್ರೆಗೋರಿಯನ್ ವಿಶ್ವವಿದ್ಯಾಲಯದ ಕುಲಪತಿ ಫಾದರ್ ಮಾರ್ಕ್ ಆಂಡ್ರ್ಯೂ ಲೂಯಿಸ್ ರವರು, ಸಂತ ರೋಸ್ ರವರನ್ನು ಜಗದ್ಗುರು ಫ್ರಾನ್ಸಿಸ್ ರವರ ಬೋಧನೆಗಳಿಗೆ ಸಂಪರ್ಕಿಸಿ, ಅವರನ್ನು “ಮುಳ್ಳುಗಳ ನಡುವೆ ಅರಳಿದ ಲಿಲ್ಲಿ” ಎಂದು ವರ್ಣಿಸಿದ ಜಗದ್ಗುರುಗಳ ಮಾತುಗಳನ್ನು ಸ್ಮರಿಸಿದರು. ಸಂತ ರೋಸ್ ರವರು ಹೂಗಾರರು ಮತ್ತು ತೋಟಗಾರರ ಪೋಷಕಿಯಾಗಿಯೂ ಇಂದಿಗೂ ಸ್ಮರಿಸಲ್ಪಡುತ್ತಾರೆ ಎಂದು ಹೇಳಿದರು.

ಉಪಸಂಹಾರವಾಗಿ, ಜಗದ್ಗುರುಗಳ ಹುದ್ದೆಗೆ ಪೆರುವಿನ ರಾಯಭಾರಿ ಜಾರ್ಜ್ ಪಾಂಸೆ ಸಾನ್ ರೋಮಾನ್ ರವರು, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿ, “ಉನಾ ರೋಸಾ ಪೆರ್ ಇಲ್ ಮೊಂಡೊ” ಎಂಬ ದಸ್ತಾವೇಜುಚಿತ್ರದ ಪ್ರದರ್ಶನದ ಬಗ್ಗೆ ಉಲ್ಲೇಖಿಸಿದರು. ಇಂಟರ್‌ನೆಟ್ ಯುಗಕ್ಕೂ ಮುನ್ನವೇ ಲಿಮಾದ ಜನಸಂಖ್ಯೆಯ ಬಹುಪಾಲು ಸಂತ ರೋಸ್ ರವರ ಅಂತ್ಯಸಂಸ್ಕಾರ ಯಾತ್ರೆಯಲ್ಲಿ ಭಾಗವಹಿಸಿದ್ದರೆಂಬುದು, ಅವರ ಪವಿತ್ರತೆಯ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

28 ಜನವರಿ 2026, 00:00