ಉಕ್ರೇನ್ ನ  ತಾಯಿ ಉಕ್ರೇನ್ ನ ತಾಯಿ 

ಕಾರ್ಡಿನಲ್ ಕ್ರಾಯೆವ್ಸ್ಕಿ: ಕಷ್ಟದಲ್ಲಿರುವ ಉಕ್ರೇನಿಯನ್ನರಿಗೆ ನಾವು ನಿಜವಾಗಿ ಸಹಾಯ ಮಾಡಬೇಕು

ಉಕ್ರೇನಿನಲ್ಲಿ ಮಾನವೀಯ ಸಂಕಷ್ಟವು ಮತ್ತಷ್ಟು ತೀವ್ರವಾಗುತ್ತಿರುವ ಸಂದರ್ಭದಲ್ಲಿ, ದಾನಸೇವೆಯ ದಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೊನ್ರಾಡ್ ಕ್ರಾಯೆವ್ಸ್ಕಿರವರು ರೋಮಿನ ಸಂತ ಸೋಫಿಯಾ ಬಸಿಲಿಕಾ ನಡೆಸುತ್ತಿರುವ ನಿಧಿ ಸಂಗ್ರಹಣಾ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಬಲವಾದ ಮನವಿಯನ್ನು ಆರಂಭಿಸಿದ್ದಾರೆ. ಈ ಕಾರ್ಯದ ಮೂಲಕ ಕಂಬಳಿಗಳು, ಚಳಿಗಾಲದ ಬಟ್ಟೆಗಳು ಹಾಗೂ ಅಗತ್ಯ ಸರಬರಾಜುಗಳನ್ನು ಸಂಗ್ರಹಿಸಲಾಗುತ್ತಿದೆ

ವ್ಯಾಟಿಕನ್ ವರದಿ

ಮೇಣದಬತ್ತಿಯ ಮೃದುವಾದ ಬೆಳಕು, ಅನೇಕ ಹಾಸುಹೊಕ್ಕುಗಳಲ್ಲಿ ಮಗು ತಬ್ಬಿಕೊಂಡಿರುವ ತಾಯಿಯ ಮುಖವನ್ನು ನಿಧಾನವಾಗಿ ಉಜ್ಜ್ವಲಗೊಳಿಸುತ್ತದೆ. ಇದು ಸೌಮ್ಯತೆ ತುಂಬಿದ ದೃಶ್ಯವಾಗಿ ಕಾಣಬಹುದಾದರೂ, ಕಳೆದ ನಾಲ್ಕು ವರ್ಷಗಳಿಂದ ಶಾಂತಿಯನ್ನು ಕಾಣದೆ ಇರುವ ಉಕ್ರೇನಿಯನ್ ಜನರ ದುರಂತವನ್ನು ಇದು ಬಹಿರಂಗಪಡಿಸುತ್ತದೆ. ಇಂದು ಉಕ್ರೇನಿಯನ್ ಜನರು ತೀವ್ರ ಚಳಿಯ ನಡುವೆ, ವಿದ್ಯುತ್ ಮತ್ತು ಹೀಟಿಂಗ್ ಇಲ್ಲದೆ, ಕತ್ತಲೆಯಲ್ಲೇ ಬದುಕುತ್ತಿದ್ದಾರೆ; ಕೀವ್ ನಗರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಷ್ಯನ್ ದಾಳಿಗಳು ಈ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

ಈ ಯುದ್ಧದಿಂದ ಪೀಡಿತವಾಗಿರುವ ದೇಶಕ್ಕಾಗಿ, ದಾನಸೇವೆಯ ದಿಕಾಸ್ಟರಿಯ ಪ್ರಿಫೆಕ್ಟ್ ಹಾಗೂ ಜಗದ್ಗುರುಗಳು ಆಲ್ಮನರ್ ಕಾರ್ಡಿನಲ್ ಕೊನ್ರಾಡ್ ಕ್ರಾಯೆವ್ಸ್ಕಿರವರು ಹೃದಯಸ್ಪರ್ಶಿ ಮನವಿಯನ್ನು ಮಾಡಿದ್ದಾರೆ. ಜಗದ್ಗರುಗಳ ಅಧಿಕಾರಿಗಳು ಹುದ್ದೆಯ ಪ್ರತಿನಿಧಿಯಾಗಿ ಅವರು ಹತ್ತಕ್ಕಿಂತ ಹೆಚ್ಚು ಬಾರಿ ಉಕ್ರೇನ್‌ಗೆ ಭೇಟಿ ನೀಡಿ, ಆಹಾರ, ವಿದ್ಯುತ್ ಜನರೇಟರ್‌ಗಳು, ಆಂಬ್ಯುಲೆನ್ಸ್‌ಗಳನ್ನು ಒದಗಿಸುವ ಮೂಲಕ ಪ್ರಾರ್ಥನೆಯ ಜೊತೆಗೆ ನೈಜ ಸಹಾಯದ ಮೂಲಕ ಧರ್ಮ ಸಭೆಯ ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ.

ನೋವು ಮತ್ತು ದುಃಖದ ಎದುರು ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ ನಾವು ಕಾರ್ಯನಿರ್ವಹಿಸಲೇಬೇಕು, ಎಂದು ಕಾರ್ಡಿನಲ್ ಹೇಳಿದರು. ಜಗದ್ಗುರು ಲಿಯೋರವರ ಮಾತುಗಳನ್ನು ಉಲ್ಲೇಖಿಸಿದ ಅವರು, ನಿರ್ಲಕ್ಷ್ಯದ ಜಾಗತೀಕರಣಕ್ಕಿಂತಲೂ ಅಪಾಯಕಾರಿ ಆಗಿರುವುದು ಅಶಕ್ತತೆಯ ಜಾಗತೀಕರಣ ಎಂದು ಎಚ್ಚರಿಸಿದರು. ಕ್ರೈಸ್ತರಾಗಿ ನಾವು ಉಕ್ರೇನಿಯನ್ ಧರ್ಮ ಸಭೆಯಿಂದ ಬರುವ ಅಗತ್ಯಗಳಿಗೆ ಸ್ಪಂದಿಸಬೇಕು ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ, ರೋಮಿನ ಸಂತ ಸೋಫಿಯಾ ಬಸಿಲಿಕಾದ ಮೂಲಕ ಉಷ್ಣ ಬಟ್ಟೆಗಳು, ಕಂಬಳಿಗಳು, ಥರ್ಮಲ್ ಉಪಕರಣಗಳು, ಆಹಾರ ಪದಾರ್ಥಗಳು ಮತ್ತು ತುರ್ತು ಸರಬರಾಜುಗಳನ್ನು ಸಂಗ್ರಹಿಸಿ ಉಕ್ರೇನ್‌ಗೆ ಕಳುಹಿಸಲಾಗುತ್ತಿದೆ. ಪ್ರತಿ ಕೊಡುಗೆ ಉಷ್ಣ, ಆಹಾರ ಮತ್ತು ಬದುಕುಳಿಯುವ ಭರವಸೆಯನ್ನು ನೀಡುತ್ತದೆ ಎಂದು ಬಸಿಲಿಕಾ ತಿಳಿಸಿದೆ.

ಇನ್ನೊಂದೆಡೆ, ಕಾರಿತಾಸ್–ಸ್ಪೆಸ್ ಉಕ್ರೇನ್ ಸಂಸ್ಥೆಯ ನಿರ್ದೇಶಕ ಫಾದರ್ ವ್ಯಾಚೆಸ್ಲಾವ್ ಹ್ರಿನೆವಿಚ್ ರವರು ಉಕ್ರೇನ್ ಎದುರಿಸುತ್ತಿರುವ ಭಾರೀ ಸವಾಲುಗಳ ಬಗ್ಗೆ ಮಾತನಾಡಿದರು. ಮೂಲಸೌಕರ್ಯಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ತೀವ್ರ ಚಳಿಯ ನಡುವೆಯೂ, ಜನರು ಪರಸ್ಪರ ಬೆಂಬಲ ನೀಡುತ್ತಾ, ಒಟ್ಟಾಗಿ ನಿಲ್ಲುತ್ತಿರುವುದು ಉಕ್ರೇನಿಯನ್ ಜನರ ಧೈರ್ಯ ಮತ್ತು ಏಕತೆಯ ಸಂಕೇತವಾಗಿದೆ.

ಕೀವ್ ಹಾಗೂ ಖಾರ್ಕಿವ್ ನಗರಗಳಲ್ಲಿ ರೆಸಿಲಿಯನ್ಸ್ ಪಾಯಿಂಟ್ ಗಳ ಮೂಲಕ ಜನರಿಗೆ ಬಿಸಿನೀರು, ಬಿಸಿ ಆಹಾರ, ವಿದ್ಯುತ್ ಚಾರ್ಜಿಂಗ್ ಹಾಗೂ ತಾತ್ಕಾಲಿಕ ಆಶ್ರಯ ಒದಗಿಸಲಾಗುತ್ತಿದೆ. ಯುದ್ಧದ ಕತ್ತಲೆಯ ನಡುವೆಯೂ, ಕ್ರಿಸ್ತನ ಬೆಳಕು ಮತ್ತು ಜಗತ್ತಿನಾದ್ಯಂತದಿಂದ ಹರಿದುಬರುವ ಸಹೋದರ ಪ್ರೀತಿಯ ಉಷ್ಣತೆ ನಮಗೆ ಶಕ್ತಿ ನೀಡುತ್ತದೆ ಎಂಬ ವಿಶ್ವಾಸವನ್ನು ಉಕ್ರೇನಿಯನ್ ಧರ್ಮ ಸಭೆ ವ್ಯಕ್ತಪಡಿಸಿದೆ. ನಾವು ಒಂಟಿಯಲ್ಲ ಈ ಕತ್ತಲೆಯನ್ನೂ ದಾಟುತ್ತೇವೆ ಎಂಬುದು ಅವರ ಆಶಾಭರಿತ ಸಂದೇಶವಾಗಿದೆ.

21 ಜನವರಿ 2026, 00:00